More

    ನಾಮಪತ್ರ ಸಲ್ಲಿಕೆಗೆ ಕೊನೇ ದಿನ ನಾಳೆ

    ಕಾರವಾರ: ಕರಾವಳಿಯ 101 ಗ್ರಾಮ ಪಂಚಾಯಿತಿಗಳಿಗೆ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನ. 11ರಂದು ಕೊನೆಯ ದಿನವಾಗಿದ್ದು, ಡೆಡ್​ಲೈನ್​ಗೆ ಕ್ಷಣಗಣನೆ ಪ್ರಾರಂಭವಾಗಿದೆ.

    ಆದರೆ, ಪಕ್ಷಗಳ ಬೆಂಬಲ ಇದುವರೆಗೂ ಖಚಿತವಾಗದೇ ಇರುವುದು ಆಕಾಂಕ್ಷಿಗಳಲ್ಲಿ ಚಡಪಡಿಕೆಗೆ ಕಾರಣವಾಗಿದೆ. ಬಿಜೆಪಿ ಬಳಿ ಆಕಾಂಕ್ಷಿಗಳ ದೊಡ್ಡ ಪಟ್ಟಿ ರಾಶಿ ಬಿದ್ದಿದೆ. ಕಾಂಗ್ರೆಸ್​ನಲ್ಲೂ ಕೆಲವು ಗ್ರಾಪಂಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಇದರಿಂದ ಯಾರ ಹೆಸರನ್ನು ಫೈನಲ್ ಮಾಡಬೇಕು ಎಂಬುದು ಪಕ್ಷಗಳ ಮುಖಂಡರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸ್ಥಳೀಯ ಮುಖಂಡರು ಹೈಕಮಾಂಡ್​ನತ್ತ ಬೆರಳು ತೋರಿಸುತ್ತಿದ್ದಾರೆ.

    ಬೆಂಬಲಿತರ ಪಟ್ಟಿಯನ್ನು ಮೊದಲೇ ಘೊಷಿಸಿದರೆ, ಅಸಮಾಧಾನ ಸ್ಪೋಟಗೊಳ್ಳುವ ಸಾಧ್ಯತೆಯೂ ಇದೆ. ಇನ್ನು ಕೆಲವರು ಎರಡೂ ಮನೆಗಳ ಬಾಗಿಲು ತಟ್ಟಿದ್ದು, ಇಲ್ಲಿಲ್ಲದಿದ್ದರೆ ಅಲ್ಲಿ ಎಂಬ ಮನೋಭಾವದಲ್ಲಿದ್ದಾರೆ. ಇದರಿಂದ ಪಕ್ಷಗಳು ಕಾದು ನೋಡುವ ತಂತ್ರವನ್ನು ಪಾಲಿಸುತ್ತಿವೆ.

    ಉಸ್ತುವಾರಿ ನೇಮಕ: ಕಾಂಗ್ರೆಸ್​ನಲ್ಲಿ ಗ್ರಾಪಂ ಚುನಾವಣೆ ಎದುರಿಸಲು ಕ್ಷೇತ್ರಕ್ಕೆ ಒಬ್ಬ ಉಸ್ತುವಾರಿ ನೇಮಿಸಲಾಗಿದೆ. ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಮಾಜಿ ಎಂಎಲ್​ಎ ಎ.ಎಂ. ಹಿಂಡಸಗೇರಿ, ಹಳಿಯಾಳ, ದಾಂಡೇಲಿ, ಜೊಯಿಡಾ ಹಾಗೂ ಕುಮಟಾ ಕ್ಷೇತ್ರಕ್ಕೆ ಶಾಸಕ ಆರ್.ವಿ. ದೇಶಪಾಂಡೆ, ಯಲ್ಲಾಪುರ-ಮುಂಡಗೋಡಿಗೆ ಎಂಎಲ್​ಸಿ ಶ್ರೀಕಾಂತ ಘೊಟ್ನೇಕರ್, ಕಾರವಾರ-ಅಂಕೋಲಾಕ್ಕೆ ಸತೀಶ ಸೈಲ್, ಭಟ್ಕಳ-ಹೊನ್ನಾವರಕ್ಕೆ ಮಂಕಾಳ ವೈದ್ಯ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಆದೇಶ ಹೊರಡಿಸಿದ್ದಾರೆ.

    ಬಿಜೆಪಿಯಲ್ಲಿ ಪ್ರತಿ ಜಿಪಂ ಕ್ಷೇತ್ರಕ್ಕೆ ಒಬ್ಬ ಉಸ್ತುವಾರಿಯನ್ನು ನೇಮಿಸಲಾಗುತ್ತಿದೆ. ಆಯಾ ಮಂಡಲ ಅಧ್ಯಕ್ಷರ ಜತೆ ಉಸ್ತುವಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಜೆಡಿಎಸ್ ಆಟಕ್ಕಿಲ್ಲ

    ಜಿಲ್ಲೆಯಲ್ಲಿ ಜೆಡಿಎಸ್ ಲೆಕ್ಕಕ್ಕಿಲ್ಲದಂತಾಗಿದೆ. ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಓಡಾಡಿದ್ದ ಆ ಪಕ್ಷದ ನಾಯಕರು ಈಗ ತಟಸ್ಥರಾಗಿದ್ದಾರೆ. ಬೇರೆ ಪಕ್ಷಗಳಿಗೆ ತೆರಳಲು ಕಾದು ಕುಳಿತಿದ್ದಾರೆ. ಹಿಂದೆ ಜೆಡಿಎಸ್​ನಲ್ಲಿ ದುಡಿದ ಬೂತ್ ಮಟ್ಟದ ಕಾರ್ಯಕರ್ತರು ಈಗ ಬೆಂಬಲಕ್ಕಾಗಿ ಬೇರೆ ಪಕ್ಷದ ಮುಖಂಡರತ್ತ ಕೈ ಚಾಚುವ ಪರಿಸ್ಥಿತಿ ನಿರ್ವಣವಾಗಿದೆ.

    ಎಲ್ಲೆಡೆ ದೊಡ್ಡ ಆಕಾಂಕ್ಷಿಗಳ ಪಟ್ಟಿ ಇದೆ. ಆದರೆ, ಈ ಚುನಾವಣೆಯಲ್ಲಿ ಪಕ್ಷದ ‘ಬಿ’ ಫಾಮ್ರ್ ನೀಡಬೇಕು ಎಂದೇನಿಲ್ಲ. ನಮ್ಮ ಬೆಂಬಲಿತ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡುವ ಜವಾಬ್ದಾರಿಯನ್ನು ಆಯಾ ಬ್ಲಾಕ್ ಅಧ್ಯಕ್ಷರ ನೇತೃತ್ವದ ಕೋರ್ ಕಮಿಟಿಗೆ ವಹಿಸಲಾಗಿದೆ. ಅವರು ಪ್ರತಿ ಗ್ರಾಪಂನಲ್ಲಿ ಸಭೆ ಮಾಡಿ ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಣಯ ಕೈಗೊಳ್ಳುತ್ತಿದ್ದಾರೆ.

    | ಭೀಮಣ್ಣ ನಾಯ್ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

    ಆಯಾ ಮಂಡಲಗಳಲ್ಲಿ ರಚಿಸಿರುವ ಸಮಿತಿಯು ಗ್ರಾಪಂಗಳಲ್ಲಿ ಯಾರಿಗೆ ಪಕ್ಷದ ಬೆಂಬಲ ಎಂಬ ಪಟ್ಟಿಯನ್ನು ಅಂತಿಮ ಮಾಡಲಿದೆ. ಈಗಾಗಲೇ ಹಲವರಿಗೆ ನಾಮಪತ್ರ ಸಲ್ಲಿಸಲು ಸೂಚಿಸಲಾಗಿದ್ದು, ಪಟ್ಟಿಯಲ್ಲಿ ಹೆಸರಿಲ್ಲದವರು ನಾಮಪತ್ರ ಹಿಂಪಡೆಯುವರು ಇಲ್ಲವೇ ತಟಸ್ಥರಾಗುವರು.

    | ವೆಂಕಟೇಶ ನಾಯಕ ಜಿಲ್ಲಾ ಬಿಜೆಪಿ ಅಧ್ಯಕ್ಷ

    ಜಿಲ್ಲೆಯಲ್ಲಿ 558 ನಾಮಪತ್ರ ಸಲ್ಲಿಕೆ

    ಕಾರವಾರ: ಜಿಲ್ಲೆಯ ಕರಾವಳಿಯ ವಿವಿಧ ಗ್ರಾಪಂಗಳ ಸದಸ್ಯ ಸ್ಥಾನಕ್ಕೆ ಆಯ್ಕೆ ಬಯಸಿ ಮೂರನೇ ದಿನ ಒಟ್ಟು 558 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾರವಾರದಲ್ಲಿ 67, ಅಂಕೋಲಾ-112, ಕುಮಟಾ-129, ಹೊನ್ನಾವರ-106, ಭಟ್ಕಳ-144 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದುವರೆಗೆ ಒಟ್ಟಾರೆ 784 ನಾಮಪತ್ರಗಳು ಸಲ್ಲಿಕೆಯಾದಂತಾಗಿವೆ. ಒಟ್ಟು 101 ಗ್ರಾಪಂಗಳ 1380 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದುವರೆಗೂ 866 ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ಒಂದೂ ನಾಮಪತ್ರ ಸಲ್ಲಿಕೆಯಾಗದ ಹಲವು ಗ್ರಾಪಂಗಳೂ ಇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts