More

    ನಾಳೆಯಿಂದ ಜೂ. 1ರವರೆಗೆ ಸಂಪೂರ್ಣ ಲಾಕ್​ಡೌನ್

    ಗದಗ: ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ನಿಯಂತ್ರಿಸಲು ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲು ಮೇ 27ರಿಂದ ಜೂ. 1ರವರೆಗೆ ಸಂಪೂರ್ಣ ಲಾಕ್​ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಘೋಷಿಸಿದರು.
    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 27ರ ಗುರುವಾರ ಬೆಳಗ್ಗೆ 10 ಗಂಟೆಯಿಂದ ಜೂನ್ 1 ಮಂಗಳವಾರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್​ಡೌನ್ ಜಾರಿಗೊಳಿಸಲಾಗುವುದು ಎಂದರು.
    ಲಾಕ್​ಡೌನ್ ಅವಧಿಯಲ್ಲಿ ಸೋಂಕಿತರ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗದಿದ್ದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಜಿಲ್ಲಾಳಿತದ ಕ್ರಮಕ್ಕೆ ಜನರು ಸಹಕಾರ ನೀಡಬೇಕು. ಅಂದಾಗ ಮಾತ್ರ ಕೊರೊನಾ ಸೋಂಕು ನಿಯಂತ್ರಣ ಮಾಡಲು ಸಾಧ್ಯವಾಗಲಿದೆ. ಮಹಾಮಾರಿಯ ಸರಪಳಿ ತುಂಡರಿಸಿ ಹಿಡಿತ ಸಾಧಿಸಲು ಅನುಕೂಲವಾಗುತ್ತದೆ ಎಂದು ಅವರು ವಿವರಿಸಿದರು.
    ಕಠಿಣ ಲಾಕ್​ಡೌನ್ ಸಂದರ್ಭದಲ್ಲಿ ತರಕಾರಿ, ಹಣ್ಣು, ಹೂವು ವ್ಯಾಪಾರಸ್ಥರು ತಳ್ಳುವ ಗಾಡಿಗಳಲ್ಲಿ (ಓಣಿಯಿಂದ ಓಣಿಗೆ) ವ್ಯಾಪಾರ ಮಾಡಬಹುದು. ಎಲ್ಲ ಬಗೆಯ ಮಾರುಕಟ್ಟೆಗಳು ಬಂದ್ ಇರಲಿವೆ ಎಂದು ಸ್ಪಷ್ಟಪಡಿಸಿದರು. ತಳ್ಳುವ ಗಾಡಿಯವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ವ್ಯಾಪಾರ ಮಾಡಬೇಕು. ಜನರೂ ಮಾಸ್ಕ್ ಧರಿಸಿಯೇ ವ್ಯಾಪಾರ ಮಾಡಬೇಕು ಎಂದರು.
    ಹಾಲು ಮಾರಾಟಕ್ಕೆ ಪ್ರತಿದಿನ ಬೆಳಗ್ಗೆ 6ರಿಂದ 8ರವರೆಗೆ ಅವಕಾಶವಿದೆ. ಕಿರಾಣಿ ಸಾಮಗ್ರಿಗಳ ಹೋಂ ಡಿಲಿವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ರೈತರು ಕೃಷಿ ಪೂರಕ ವಸ್ತುಗಳನ್ನು ಖರೀದಿ ಮಾಡಲು ಬೆಳಗ್ಗೆ 6ರಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಅವಕಾಶವಿದೆ ಎಂದು ಹೇಳಿದರು.
    ನಗರ ಹಾಗೂ ಹಳ್ಳಿಗಳಲ್ಲಿ ಹೋಟೆಲ್​ಗಳು ಬಂದ್ ಇರಲಿವೆ. ಹೋಟೆಲ್ ತೆರೆದಿದ್ದರೆ ಗ್ರಾಮಾಂತರ ಪ್ರದೇಶದಲ್ಲಿ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹೊಣೆಯಾಗುತ್ತಾರೆ. ಬಾರ್ ಹಾಗೂ ವೈನ್​ಶಾಪ್, ಮಾಂಸದಂಗಡಿಗಳು ಬಂದ್ ಇರಲಿವೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು. ಸಾರ್ವಜನಿಕರು ಅನಗತ್ಯವಾಗಿ ಸಂಚರಿಸಲು ಮತ್ತು ಹೊರಜಿಲ್ಲೆಗಳಿಂದ ಬರಲು ಮತ್ತು ಹೋಗಲು ಯಾವುದೇ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    • ಏನಿರುತ್ತದೆ?
    • * ಪ್ರತಿ ದಿನ ಬೆಳಗ್ಗೆ 6ರಿಂದ 8ರವರೆಗೆ ಮಾತ್ರ ಹಾಲು ಮಾರಾಟ
    • * ತರಕಾರಿ, ಹಣ್ಣು, ಹೂವು ವ್ಯಾಪಾರಸ್ಥರು ತಳ್ಳುವ ಗಾಡಿಗಳಲ್ಲಿ ವ್ಯಾಪಾರ
    • * ಕಿರಾಣಿ ಸಾಮಗ್ರಿಗಳ ಹೋಂ ಡಿಲಿವರಿ
    • * ಕೈಗಾರಿಕೆ, ರಕ್ಷಣಾ ಇಲಾಖೆಗೆ ಸರಕು ಪೂರೈಸುವ ಕೈಗಾರಿಕೆಗಳು, ನಿರಂತರ ಉಷ್ಣತೆ ಅಗತ್ಯವಿರುವ ಕೈಗಾರಿಕೆಗಳು ಮಾತ್ರ ಕಾರ್ಯನಿರ್ವಹಿಸಬಹುದು.
    • * ಆಂಬುಲೆನ್ಸ್, ಕೋವಿಡ್ ಕರ್ತವ್ಯದಲ್ಲಿರುವ ಅಧಿಕಾರಿ ಸಿಬ್ಬಂದಿಯ ವಾಹನ, ಮಾಧ್ಯಮದವರು, ಬೆಳಗಿನ ವೇಳೆ ಪತ್ರಿಕೆ ವಿತರಕರ ಸಂಚಾರಕ್ಕೆ ಅವಕಾಶ. ಅಧಿಕೃತ ಪಾಸ್ ಮತ್ತು ಅನುಮತಿಸಲಾದ ತುರ್ತು ಕರ್ತವ್ಯದ ಬಗ್ಗೆ ಪೂರಕ ದಾಖಲೆಗಳನ್ನು ಹೊಂದಿರಬೇಕು.
    • * ಅಂಚೆ, ಬ್ಯಾಂಕ್, ವಿಮಾ ಕಚೇರಿಗಳು ತೆರೆಯಲಿದ್ದು, ಗ್ರಾಹಕರೊಂದಿಗೆ ವ್ಯವಹಾರ ಮಾಡುವಂತಿಲ್ಲ. ಕಚೇರಿ ಕೆಲಸ ಮಾಡಿಕೊಳ್ಳಬಹುದು.
    • * ಕಂದಾಯ ಇಲಾಖೆಯ ಕಚೇರಿಗಳು, ಖಜಾನೆ ಕಚೇರಿಗಳು.
    • * ಗದಗ-ಬೆಟಗೇರಿ ನಗರಸಭೆ, ಜಿಲ್ಲೆಯ ಎಲ್ಲ ಪುರಸಭೆ, ಪಟ್ಟಣ ಪಂಚಾಯಿತಿಗಳ ಕಚೇರಿಗಳು.
    • * ಪೆಟ್ರೋಲ್, ಅಡುಗೆ ಅನಿಲ ಸಿಲಿಂಡರ್ ಪೂರೈಕೆ.
    • * ನೀರು, ದೂರ ಸಂಪರ್ಕ, ವಿದ್ಯುತ್ ಕಚೇರಿಗಳು.
    • ಏನಿರುವುದಿಲ್ಲ?
    • * ಸಾರಿಗೆ ಬಸ್, ಖಾಸಗಿ ವಾಹನ ಸಂಚಾರ, ಆಟೋ, ಸಾರ್ವಜನಿಕರ ಅನಗತ್ಯ ಸಂಚಾರ ಸಂಪೂರ್ಣ ನಿಷಿದ್ಧ.
    • * ಮದುವೆ, ಗೃಹಪ್ರವೇಶ, ಜನ್ಮದಿನ, ಸಂತೋಷಕೂಟ, ಜನ ಸೇರುವ ಯಾವುದೇ ಕಾರ್ಯಕ್ರಮ
    • ಆಯೋಜಿಸುವಂತಿಲ್ಲ.
    • * ಹೋಟೆಲ್, ಖಾನಾವಳಿ, ದರ್ಶನಿ, ರೆಸ್ಟೋರೆಂಟ್, ಬೇಕರಿ ತೆರೆಯುವಂತಿಲ್ಲ.
    • * ಮದ್ಯದ ಅಂಗಡಿ, ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಹಾಗೂ ಪಾರ್ಸಲ್​ಗೆ ಅವಕಾಶವಿಲ್ಲ


    ಸಹಾಯವಾಣಿ: ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವುದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ, ಕೋವಿಡ್ ಸಂಬಂಧಿಸಿದ ಕೈಗಾರಿಕೆಗಳು, ಸಂಸ್ಥೆಗಳು ಇತ್ಯಾದಿಗಳ ಕುರಿತು ಮಾಹಿತಿ ಅಗತ್ಯವಿದ್ದರೆ ಜಿಲ್ಲಾಡಳಿತ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯದಲ್ಲಿ ಆರಂಭಿಸಿರುವ ಸಹಾಯವಾಣಿ ದೂರವಾಣಿ ಸಂಖ್ಯೆ 08372 238182 ಸಂರ್ಪಸಬಹುದು.

    ಕೃಷಿ ಚಟುವಟಿಕೆಗೆ ಅವಕಾಶ: ಬೆಳ್ಗಗೆ 6ರಿಂದ ಬೆಳಗ್ಗೆ 10 ಗಂಟೆವರೆಗೆ ಕೃಷಿ ಉಪಕರಣಗಳ ಬಾಡಿಗೆ ಕೇಂದ್ರಗಳು, ಗೋದಾಮುಗಳು ಸೇರಿ ಎಲ್ಲ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಬೀಜ, ಗೊಬ್ಬರ, ಕೀಟನಾಶಕಗಳು, ಹೈನುಗಾರಿಕೆ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ.

    ಸೋಂಕಿತರ ಸಂಖ್ಯೆ ಇಳಿಮುಖ: ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪಾಸಿಟಿವಿಟಿ ರೇಟ್ ನಿಧಾನವಾಗಿ ತಗ್ಗತೊಡಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಸರ್ಕಾರ ವಿಧಿಸಿರುವ ಸೆಮಿ ಲಾಕ್​ಡೌನ್ ಜಿಲ್ಲೆಯಲ್ಲಿ ಕೊಂಚ ಯಶ ಕಂಡಿದೆ. ಆದರೂ, ಸೋಂಕಿನ ಸರಪಳಿಯನ್ನು ತುಂಡರಿಸುವ ಸಲುವಾಗಿ ಜಿಲ್ಲಾಡಳಿತ ಸಂಪೂರ್ಣ ಲಾಕ್​ಡೌನ್ ವಿಧಿಸಿದ್ದನ್ನು ಜಿಲ್ಲೆಯ ಜನರು ಸ್ವಾಗತಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ಪಾಸಿಟಿವಿಟಿ ದರ ಆಧರಿಸಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಸಂಪೂರ್ಣ ಲಾಕ್​ಡೌನ್ ಕುರಿತು ತೀರ್ಮಾನ ಕೈಗೊಳ್ಳಬಹುದು ಎಂದು ಮುಖ್ಯಮಂತ್ರಿ ಅವರು ಅನುಮತಿ ನೀಡಿದ್ದಾರೆ. ವಾರದ ಹಿಂದೆಯೇ ಜಿಲ್ಲೆಯನ್ನು ಸಂಪೂರ್ಣ ಲಾಕ್ ಮಾಡಬೇಕಿತ್ತು. ತಡವಾದರೂ ಚಿಂತೆ ಇಲ್ಲ. ಐದು ದಿನಗಳ ಮಟ್ಟಿಗೆ ಜಿಲ್ಲೆಯನ್ನು ಸಂಪೂರ್ಣ ಸ್ತಬ್ಧಗೊಳಿಸಿ ಹೆಮ್ಮಾರಿ ಅಟ್ಟಹಾಸ ತಡೆಯಲು ಮುಂದಾಗಿರುವುದು ಸಮಯೋಚಿತ ನಿರ್ಧಾರ ಎಂದು ಜನರು ಹೇಳುತ್ತಿದ್ದಾರೆ.

    ಜಿಲ್ಲೆಯಲ್ಲಿ ಕರೊನಾ ಹೆಮ್ಮಾರಿ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಲಾಕ್​ಡೌನ್ ನಿಂದ ಹೋಟೆಲ್ ಉದ್ಯಮ ನಷ್ಟ ಅನುಭವಿಸಬೇಕಾಗುತ್ತದೆ. ಆದರೂ ಪರವಾಗಿಲ್ಲ, ಜೀವಕ್ಕಿಂತ ಯಾವುದೂ ಮುಖ್ಯವಲ್ಲ. ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೇಗನೆ ಕರೊನಾ ಸೋಂಕನ್ನು ನಿಯಂತ್ರಣಕ್ಕೆ ತಂದರೆ ಮುಂದಿನ ದಿನಗಳಲ್ಲಿ ಹೋಟೆಲ್ ನಡೆಸಬಹುದು.
    | ರಾಜೀವ ಶೆಟ್ಟಿ ಅಧ್ಯಕ್ಷ, ಕಾ.ವೆಂ. ಶ್ರೀನಿವಾಸ ಕಾರ್ಯದರ್ಶಿ
    ಜಿಲ್ಲಾ ಹೋಟೆಲ್ ಒಡೆಯರ ಸಂಘ, ಗದಗ

    ಜಿಲ್ಲೆಯಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್ ಮಾಡಿದ್ದು ಉತ್ತಮ ಬೆಳವಣಿಗೆ. ಜಿಲ್ಲಾಡಳಿತ ತೆಗೆದುಕೊಂಡ ನಿರ್ಣಯದಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಲಿದೆ ಎಂಬ ಆಶಯವಿದೆ. ಲಾಕ್​ಡೌನ್​ನಿಂದ ಕೈಗಾರಿಕೆಗಳಿಗೆ ತುಂಬಾ ನಷ್ಟ ಆಗಲಿದೆ. ಆದರೂ ಜೀವ ಮುಖ್ಯ. ಹೀಗಾಗಿ, ಮೊದಲು ಸೋಂಕು ನಿಯಂತ್ರಣಕ್ಕೆ ತರಲು ಎಲ್ಲರೂ ಸಹಕಾರ ನೀಡಬೇಕು.
    | ಆನಂದ ಪೋತ್ನಿಸ್ ಅಧ್ಯಕ್ಷ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಗದಗ









    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts