More

    ಮೇಲಧಿಕಾರಿಗಳ ಕಿರುಕುಳ ಖಂಡಿಸಿ ಬಿಬಿಎಂಪಿ ಅಧಿಕಾರಿ,ನೌಕರರ ಸಂಘದಿಂದ ನಾಳೆ ಸಭೆ

    ಬೆಂಗಳೂರು: ಕೆಲಸದ ಒತ್ತಡ, ಮೇಲಧಿಕಾರಿಗಳ ಕಿರುಕುಳ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಸಿಡಿದೆದ್ದಿದ್ದು, ಮಂಗಳವಾರ (ಡಿ.5) ಸಂಜೆ 5 ಗಂಟೆಗೆ ಸಭೆ ಕರೆದಿದೆ. ಸಂಘದ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ಸಂಘವು ನಿರ್ಣಯ ತೆಗೆದುಕೊಳ್ಳಲಿದೆ. 150 ಅಧಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಲಿದ್ದಾರೆ.

    ಕಂದಾಯ ಅಧಿಕಾರಿ, ಸಹ ಕಂದಾಯಧಿಕಾರಿ, ಉಪ ಕಂದಾಯಧಿಕಾರಿ, ಮೌಲ್ಯಮಾಪಕರು, ಕಂದಾಯ ಪರಿವೀಕ್ಷಕರು ಹಾಗೂ ಕಂದಾಯ ವಸೂಲಿಗಾರರು ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಎಲ್ಲ ಕೆಲಸಗಳನ್ನು ಒಟ್ಟಿಗೆ ಹೇರಲಾಗುತ್ತಿದೆ. ಸಿಬ್ಬಂದಿ ಕೊರತೆಯಿಂದ ದಿನೇದಿನೆ ಕೆಲಸದೊತ್ತಡ ಹೆಚ್ಚಾಗುತ್ತಿದೆ. ರಜೆ ದಿನಗಳಲ್ಲೂ ಕೆಲಸ ಮಾಡುವಂತೆ ಹಾಗೂ ಪ್ರತಿನಿತ್ಯ ರಾತ್ರಿ 9.30ವರೆಗೂ ಕೆಲಸ ನಿರ್ವಹಿಸುವಂತೆ ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಕೆಲಸದೊತ್ತದಿಂದ ಅಧಿಕಾರಿಗಳು, ಸಿಬ್ಬಂದಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ಇದರ ಬಗ್ಗೆ ಸರ್ಕಾರದ ಗಮನ ಸೆಳೆಯಲು, ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಭೆ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ಹೇಳಿದ್ದಾರೆ.

    ದೈನಂದಿನ ಕೆಲಸದ ಜತೆಗೆ ಏಕಕಾಲದಲ್ಲಿ ಚುನಾವಣೆ ಕೆಲಸ, ತೆರಿಗೆ ಸಂಗ್ರಹ, ಸರ್ವೇ ನಿರ್ವಹಣೆ, ಅರ್ಜಿಗಳ ವಿಲೇವಾರಿ, ಸ್ವತ್ತುಗಳ ಪರಿಶೀಲನೆ ಸೇರಿ ಅನೇಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಪಾಲಿಕೆಯ ಕಂದಾಯ ಇಲಾಖೆಯಲ್ಲಿ ಪ್ರತ್ಯೇಕ ಚುನಾವಣೆ ಶಾಖೆ ತೆರೆಯಲಾಗುತ್ತಿದೆ. ಚುನಾವಣೆ ವರ್ಷದಲ್ಲಿ ಹೆಚ್ಚು ಕಂದಾಯ ವಸೂಲಿ ಬಗ್ಗೆ ಒತ್ತಡ ಹೇರಲಾಗುತ್ತಿದೆ. ವಿಡಿಯೋ ಸಂವಾದ ನೆಪದಲ್ಲಿ ಬೆಳಗ್ಗೆ 8ರಿಂದ ರಾತ್ರಿ 9 ಗಂಟೆಗೆ ಏಕಾಏಕಿ ಸಭೆ ನಡೆಸಿ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ. ಕಂದಾಯ ಇಲಾಖೆ ಮುಖ್ಯಸ್ಥರು, ವಿಶೇಷ ಆಯಕ್ತರು ಸೇರಿ ಮೇಲಧಿಕಾರಿಗಳು ಒಂದೊಂದು ಕೆಲಸ ಹೇಳುತ್ತಾರೆ. ಒಬ್ಬ ಅಧಿಕಾರಿ ಅಷ್ಟೊಂದು ಕೆಲಸ ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದು ಅಮೃತ್‌ರಾಜ್ ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ:ಸೈಕ್ಲೋನ್ ಎಫೆಕ್ಟ್: ವಿಮಾನ ಹಾರಾಟ, ರೈಲು ಸಂಚಾರದಲ್ಲಿ ವ್ಯತ್ಯಯ

    ಖಾಲಿ ಹುದ್ದೆ ಭರ್ತಿ ಮಾಡಿ:
    ಪಾಲಿಕೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಉಳಿದಿವೆ. ಅನೇಕ ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಸಿಬ್ಬಂದಿ ನೇಮಿಸಿಕೊಂಡರೆ ಕೆಲಸದೊತ್ತಡ ಕಡಿಮೆಯಾಗುತ್ತಿದೆ. ಆದರೆ, ಈ ಬಗ್ಗೆ ಬಿಬಿಎಂಪಿ ಏನು ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು. ಇಲ್ಲವಾದರೆ, ಬೇರೆ ದಾರಿಯಿಲ್ಲದೆ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಅಮೃತ್‌ರಾಜ್ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts