More

    ಸೈಕ್ಲೋನ್ ಎಫೆಕ್ಟ್: ವಿಮಾನ ಹಾರಾಟ, ರೈಲು ಸಂಚಾರದಲ್ಲಿ ವ್ಯತ್ಯಯ

    ಬೆಂಗಳೂರು: ‘ಮೈಚಾಂಗ್’ ಚಂಡಮಾರುತ ಪರಿಣಾಮದಿಂದ ಸೋಮವಾರ ವಿಮಾನಗಳ ಹಾರಾಟದಲ್ಲಿ ಹಾಗೂ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

    ಮೈಸೂರು, ಬೆಂಗಳೂರು ರೈಲು ನಿಲ್ದಾಣದಿಂದ ಚೆನ್ನೈ ರೈಲು ನಿಲ್ದಾಣಕ್ಕೆ ತೆರಳಬೇಕಿದ್ದ 10ಕ್ಕೂ ಅಧಿಕ ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ಇಲಾಖೆ ರದ್ದುಪಡಿಸಿದೆ.ಚೆನ್ನೈ ರೈಲು ನಿಲ್ದಾಣಕ್ಕೆ ಮಳೆ ನೀರು ನುಗ್ಗಿದೆ. ಹಲವು ರೈಲು ಮಾರ್ಗದಲ್ಲಿ ಗುಡ್ಡ ಕುಸಿತವಾಗಿದೆ. ಹೀಗಾಗಿ, ಸೋಮವಾರ ಹೊರಡಬೇಕಿದ್ದ ರೈಲುಗಳನ್ನು ಸಂಚಾರವನ್ನು ರದ್ದುಪಡಿಸಲಾಗಿದ್ದು,ಪ್ರಯಾಣಿಕರು ಸಹಕರಿಸುವಂತೆ ಇಲಾಖೆ ಮನವಿ ಮಾಡಿದೆ.

    ಅಲ್ಲದೆ, ತಮಿಳುನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದ ಪರಿಣಾಮ ಚೆನ್ನೈ ವಿಮಾನ ನಿಲ್ದಾಣಕ್ಕೂ ಮಳೆ ನೀರು ನುಗ್ಗಿದೆ. ಇದರ ಪರಿಣಾಮ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಚೆನ್ನೈ ವಿಮಾನ ನಿಲ್ದಾಣಕ್ಕೆ ಇಳಿಯಬೇಕಿದ್ದ 33 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ. ಇಂಡಿಗೋ, ಸ್ಪೈಸ್‌ಜೆಟ್, ಗಲ್ಫ್ ಏರ್ ಸೇರಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹಲವು ವಿಮಾನಗಳ ಹಾರಾಟವನ್ನೂ ರದ್ದುಪಡಿಸಲಾಗಿದೆ. ಚೆನ್ನೈನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ 70ಕ್ಕೂ ಅಧಿಕ ವಿಮಾನಗಳ ಲ್ಯಾಂಡ್ ಆಗುವ ಹಾಗೂ ಚೆನ್ನೈ ವಿಮಾನ ನಿಲ್ದಾಣದಿಂದ ಇತರ ಕಡೆಗಳಿಗೆ ಹೊರಡುವ ವಿಮಾನಗಳನ್ನು ರದ್ದುಪಡಿಸಲಾಗಿದೆ. ಚೆನ್ನೈ ಮಾತ್ರವಲ್ಲದೆ ವಿಶಾಖಪಟ್ಟಣ, ತಿರುಪತಿಯಲ್ಲೂ ಪ್ರತಿಕೂಲ ಹವಾಮಾನ ಪರಿಣಾಮದಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಯಾಣಿಕರಿಗೆ ತೊಂದರೆ
    ವಿಮಾನ ಮತ್ತು ರೈಲುಗಳು ಮೂಲಕ ಚೆನ್ನೈನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಚೆನ್ನೈಗೆ ಹೊರಡಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ವಿಮಾನದಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮಾರ್ಗ ಬದಲಾವಣೆಯಿಂದ ತೊಂದರೆ ಸಿಲುಕುವಂತಾಯಿತು. ನಿರ್ಗಮನ ಕೊಠಡಿಯಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ವಿಮಾನ ಸೇವಾ ಸಂಸ್ಥೆಗಳು ಪ್ರಯಾಣಿಕರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಕೆಲವರು ಬಸ್ಸು, ಕಾರುಗಳ ಮೂಲಕ ಚೆನ್ನೈಗೆ ಪ್ರಯಾಣಿಸಿದರು.

    ಥಂಡಿ ವಾತಾವರಣ
    ರಾಜ್ಯದಲ್ಲಿ ಸೋಮವಾರವೂ ಥಂಡಿ ವಾತಾವರಣ ಮುಂದುವರಿದಿದ್ದು, ಹಲವೆಡೆ ಜಿಟಿಜಿಟಿ ಮಳೆ ಸುರಿದಿದೆ.ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಸರಾಸರಿ 2-3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕುಸಿತವಾಗಿದ್ದು,ಜನರಿಗೆ ಚಳಿ ಅನುಭವವಾಗಿದೆ. ರಾತ್ರಿಯಲ್ಲೂ ತಾಪಮಾನ ಇನ್ನಷ್ಟು ಕಡಿಮೆಯಾಗಿ ಥಂಡಿ ಅನುಭವವಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಇದೇ ರೀತಿ ವಾತಾವರಣ ಇರಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಎಲ್ಲ ನಾನ್​ವೆಜ್​ ಹೋಟೆಲ್​ಗಳನ್ನು ಮುಚ್ಚಿ! ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ BJP ಶಾಸಕರಿಂದ ಖಡಕ್​ ಆದೇಶ

    ಎರಡು ದಿನ ಮಳೆ
    ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ವಿಜಯನಗರ, ಬಳ್ಳಾರಿ, ಬಾಗಲಕೋಟೆ, ಬೀದರ್, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು,ವಿಜಯಪುರ ಮತ್ತು ಯಾದಗಿರಿಯಲ್ಲಿ ಡಿ.5 ಮತ್ತು ಡಿ.6ರಂದು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಚಂಡಮಾರುತದಿಂದ ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ ಇರಲಿದೆ. ಡಿ.7ರಿಂದ ರಾಜ್ಯದಲ್ಲಿ ಒಣಹವೆ ಇರಲಿದೆ. ಆದರೆ, ಡಿ.9ರಿಂದ ದಕ್ಷಿಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ಸೈಕ್ಲೋನ್ ತೀವ್ರ
    ‘ಮೈಚಾಂಗ್’ ಚಂಡಮಾರುತ ತೀವ್ರಗೊಂಡ ಪರಿಣಾಮ ತಮಿಳುನಾಡಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಇದರಿಂದಾಗಿ,ಜನಜೀವನ ಸಂೂರ್ಣ ಅಸ್ತವ್ಯಸ್ತಗೊಂಡಿದೆ. ಮಂಗಳವಾರ (ಡಿ.5) ಮುಂಜಾನೆ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಭಾಗದ ನೆಲ್ಲೂರು, ಮಚಲಿಪಟ್ಟಣಂ ನಡುವೆ ಮಾರುತಗಳು ಹಾದುಹೋಗಲಿವೆ. 110 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದೆ. ಚೆನ್ನೈನಿಂದ ಪೂರ್ವ ಈಶಾನ್ಯಕ್ಕೆ 90 ಕಿಮೀ, ನೆಲ್ಲೂರಿನಿಂದ ಅಗ್ನೇಯಕ್ಕೆ 170 ಕಿಮೀ ಹಾಗೂ ಪುದುಚೇರಿಯ ಈಶಾನ್ಯಕ್ಕೆ 200 ಕಿಮೀ, ದೂರದಲ್ಲಿ ಚಂಡಮಾರುತ ಇದೆ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತೆಲಂಗಾಣ, ಒಡಿಶಾದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts