More

    ಮೂರು ದಿನ ಟೊಮ್ಯಾಟೊ ಮಂಡಿ ಸೀಲ್‌ಡೌನ್

    ವಿಜಯವಾಣಿ ಸುದ್ದಿಜಾಲ ಕೋಲಾರ
    ಸಿಎಂಆರ್ ಟೊಮ್ಯಾಟೊ ಮಂಡಿ ಕ್ಯಾಷಿಯರ್‌ಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಡಿಯನ್ನು ಮೂರು ದಿನ ಸೀಲ್‌ಡೌನ್ ಮಾಡಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ವಡಗೂರು ಡಿ.ಎಲ್.ನಾಗರಾಜ್ ಹೇಳಿದರು.
    ನಗರದ ಎಪಿಎಂಸಿ ಮಾರುಕಟ್ಟೆ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂಆರ್ ಮಂಡಿ ಎಪಿಎಂಸಿ ಪ್ರಾಂಗಣದಿಂದ ಹೊರಗಡೆ ಇದೆ. ಇಲ್ಲಿದ್ದ ಕ್ಯಾಷಿಯರ್ ಹಾವೇರಿ, ದಾವಣಗೆರೆ ಜಿಲ್ಲೆಗೆ ಹೋಗಿ ಬಂದಿದ್ದರು. ಇವರಲ್ಲಿ ಕರೊನಾ ದೃಢಪಟ್ಟಿರುವ ಮಾಹಿತಿ ಬುಧವಾರ ಸಂಜೆ ಸಿಕ್ಕಿದ ಕೂಡಲೇ ಸೋಂಕು ನಿವಾರಕ ಸಿಂಪಡಿಸಿ ಮಂಡಿಗೆ ಟೊಮ್ಯಾಟೊ ತರದಂತೆ ಸೂಚನೆ ನೀಡಲಾಗಿದೆ ಎಂದರು.
    ಜಿಲ್ಲಾಡಳಿತದ ಸೂಚನೆ ಮೇರೆಗೆ ಮಂಡಿಯನ್ನು ಸೀಲ್‌ಡೌನ್ ಮಾಡುವ ಸಂಬಂಧ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮಂಡಿ ಸುತ್ತ ಫಿನ್ಸಿಂಗ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬೆಳಗ್ಗೆ ಹರಾಜು ಪ್ರಕ್ರಿಯೆ ನಡೆಸಿರುವುದರಲ್ಲಿ ತಪ್ಪಾಗಿದೆ, ಹರಾಜು ಮಾಡಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ಜಿಲ್ಲಾಡಳಿತದೊಂದಿಗೆ ಈ ಬಗ್ಗೆ ಚರ್ಚಿಸಿ ಅಗತ್ಯವಿದ್ದರೆ ಇನ್ನಷ್ಟು ದಿನ ಸೀಲ್‌ಡೌನ್ ಮುಂದುವರಿಸಲಾಗುವುದು ಎಂದರು.
    ಈಗಾಗಲೆ ಎಪಿಎಂಸಿಯಲ್ಲಿ ಆರೋಗ್ಯ ಇಲಾಖೆಗೆ ಕೊಠಡಿ ನೀಡಲಾಗಿದೆ. ವರ್ತಕರು, ಹಮಾಲಿಗಳು ಸೇರಿ ಎಲ್ಲರೂ ತಪಾಸಣೆ ಮಾಡಿಕೊಂಡರೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲೂ ಕರೊನಾ ಪಾಸಿಟಿವ್ ಪ್ರಕರಣ ದೃಢಪಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲೇ ಪ್ರಯೋಗಾಲಯ ಆರಂಭಿಸುವುದು ಉತ್ತಮ. ಇದರಿಂದ ಶೀಘ್ರ ಪರೀಕ್ಷಾ ವರದಿ ಪಡೆದು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.
    ಎಪಿಎಂಸಿ ಸದಸ್ಯರಾದ ದೇವರಾಜ್, ಅಪ್ಪಯ್ಯಪ್ಪ ಉಪಸ್ಥಿತರಿದ್ದರು.

    ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕರೊನಾ ಸೋಂಕು ದೃಢಪಟ್ಟಿರುವುದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ರೈತರು ಯಾವುದೇ ಕಾರಣಕ್ಕೂ ಎಪಿಎಂಸಿ ಮಾರುಕಟ್ಟೆಗೆ ಬರಬಾರದು. ತರಕಾರಿಗಳನ್ನು ಟೆಂಪೊ, ಟ್ರ್ಯಾಕ್ಟರ್‌ಗಳಲ್ಲಿ ಕಳುಹಿಸಿಕೊಡಬೇಕು, ಆನ್‌ಲೈನ್ ಮೂಲಕ ಹಣ ಪಾವತಿಸಲಾಗುವುದು. ಸಂಕಷ್ಟದ ಪರಿಸ್ಥಿತಿಯಲ್ಲಿ ಕರೊನಾ ಹೋರಾಟದಲ್ಲಿ ಎಲ್ಲರೂ ಸಹಕರಿಸಿ.
    ವಡಗೂರು ಡಿ.ಎಲ್.ನಾಗರಾಜ್, ಎಪಿಎಂಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts