More

    ಟೊಮ್ಯಾಟೊ ಬೆಳೆಗಾರನಿಗೆ ಶುಭಕಾಲ

    ಕೋಲಾರ/ಬೂದಿಕೋಟೆ: ಜಿಲ್ಲೆಯಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಟೊಮ್ಯಾಟೊ ಬೆಳೆಗಾರರಿಗೆ ವರವಾಗಿದ್ದು, ಬೆಲೆಯೂ ಗಣನೀಯವಾಗಿ ಏರಿಕೆಯಾಗತೊಡಗಿದೆ.

    ಕೋಲಾರ ಜಿಲ್ಲಾದ್ಯಂತ ಮಳೆಯಾಗುತ್ತಿರುವುದರಿಂದ ತೋಟಗಳಲ್ಲಿ ಟೊಮ್ಯಾಟೊ ಬಿಡಿಸಲು ಸಾಧ್ಯವಾಗದೆ ಹಾಗೂ ಬಹಳಷ್ಟು ಟೊಮ್ಯಾಟೊ ನಾಶವಾಗಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

    ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಇತರ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿ ಕಳೆದ ಹಲವು ದಿನಗಳಿಂದ ದರ ಏರಿಳಿತವಾಗುತ್ತಿದೆ.

    ಉತ್ತಮ ಬೆಲೆ: 15 ಕೆಜಿ ನಾಟಿ ಟೊಮ್ಯಾಟೊ ಬಾಕ್ಸ್ ಕನಿಷ್ಠ 450 ರಿಂದ 800 ರೂ. ವರೆಗೆ ಮಾರಾಟವಾಗುತ್ತಿದ್ದು, ಸೀಡ್ಸ್ 350ರಿಂದ 750 ರೂ. ವರೆಗೆ ಮಾರಾಟವಾಗುತ್ತಿದೆ. ಶುಕ್ರವಾರ ನಾಟಿ ಟೊಮ್ಯಾಟೊ 915 ರೂ. ಮಾರಾಟದೊಂದಿಗೆ ದಾಖಲೆಯಾಗಿ, ಮಳೆ ಜಾಸ್ತಿಯಾಗಿ ರಪ್ತು ಮಾಡಲು ಸಾಧ್ಯವಾಗದೆ ಭಾನುವಾರ 800 ರೂ.ಗೆ ಮಾರಾಟವಾಯಿತು.

    ಕರೊನಾ ಹಾಗೂ ಮಳೆಯಿಂದಾಗಿ ಬೆಲೆ ಇಳಿಕೆ: ಕರೊನಾ ಸಮಯದಲ್ಲಿ ಟೊಮ್ಯಾಟೊಗೆ ಬೇಡಿಕೆ ಇಲ್ಲದೆ 15 ಕೆಜಿ ಬಾಕ್ಸ್ 15ರಿಂದ 20 ರೂ.ಗಳಿಗೆ ಮಾರಾಟವಾಗುತ್ತಿತ್ತು. ನಷ್ಟ ತಾಳಲಾಗದೆ ಕಟಾವು ಮಾಡಿದ್ದ ಫಸಲನ್ನು ರೈತರು ಬೀದಿಗೆ ಎಸೆದು ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಿದ್ದರು. ಇತ್ತೀಚೆಗೆ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಿಗೆ ಟೊಮ್ಯಾಟೊ ರಫ್ತು ಮಾಡಲು ಸಾಧ್ಯವಾಗದೆ 600-700 ರೂ. ಇದ್ದ ಟೊಮ್ಯಾಟೊ ಬೆಲೆ ಏಕಾಏಕಿ 150-250 ರೂಪಾಯಿಗೆ ಕುಸಿದ ಕಾರಣ ರೈತರು ಕಂಗಾಲಾಗಿದ್ದರು.

    ಬೂದಿಕೋಟೆಯಿಂದ ಹೆಚ್ಚು ಟೊಮ್ಯಾಟೊ: ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿಯ ಅನೇಕ ರೈತರು ನೂರಾರು ಎಕರೆಯಲ್ಲಿ ಟೊಮ್ಯಾಟೊ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಬೂದಿಕೋಟೆ ಹೋಬಳಿ ಒಂದರಿಂದಲೇ ಪ್ರತಿನಿತ್ಯ ಸುಮಾರು 4000 ಬಾಕ್ಸ್‌ನಷ್ಟು ಟೊಮ್ಯಾಟೊ ಕೋಲಾರದ ಎಪಿಎಂಸಿಗೆ ಸಾಗಣೆಯಾಗುತ್ತಿದ್ದು, ಗುಣಮಟ್ಟದ ಮಾಲು ಎಂಬ ಹಿರಿಮೆ ಇದೆ.

    ಅವಕ ಕಡಿಮೆ- ಬೆಲೆ ಏರಿಕೆ: ಕೋಲಾರ ಎಪಿಎಂಸಿಯಿಂದ ಉತ್ತರ ಹಾಗೂ ದಕ್ಷಿಣ ಭಾರತದ ಉದ್ದಗಲಕ್ಕೂ ಟೊಮ್ಯಾಟೊ ರವಾನೆಯಾಗುತ್ತಿದೆ. ದೇಶಾದ್ಯಂತ ಉತ್ತಮ ಮಳೆ, ಪ್ರವಾಹ ಕಾರಣದಿಂದ ಆ ಭಾಗದಲ್ಲೂ ಫಸಲು ಕಡಿಮೆ. ಆಂಧ್ರದ ಕಡೆಯಿಂದ ಟೊಮ್ಯಾಟೊ ಬರುತ್ತಿಲ್ಲ, ಕೋಲಾರ ಜಿಲ್ಲೆಯಲ್ಲೂ ಇಳುವರಿ ಕಡಿಮೆ. ಈ ವರ್ಷವೂ ಊಜಿ ನೊಣದ ಕಾಟ ಭಾರೀ ಹಾನಿ ಉಂಟು ಮಾಡಿದ್ದು, ಲಭ್ಯವಿರುವ ಟೊಮ್ಯಾಟೊಗೆ ಭಾರಿ ಡಿಮಾಂಡ್. ಭಾನುವಾರ ಕೋಲಾರ ಎಪಿಎಂಸಿಗೆ 15,590 ಕ್ವಿಂಟಾಲ್ ಟೊಮ್ಯಾಟೊ ಅವಕ ಆಗಿದ್ದರೆ, ಮುಳಬಾಗಿಲಿನಲ್ಲಿ 2114 ಕ್ವಿಂಟಾಲ್ ಅವಕ ಆಗಿದೆ. ಅವಕ ಆಗಿದ್ದರಲ್ಲಿ ದೂರದ ಪ್ರಯಾಣ ಕ್ರಮಿಸುವಷ್ಟು ದಿನ ಬಾಳಿಕೆಗೆ ಉಳಿಯಬಲ್ಲ 10ರಿಂದ 12 ತಳಿಗಳಿದ್ದು, ಬಾಂಗ್ಲಾ ದೇಶಕ್ಕೆ 3 ಟನ್‌ನಷ್ಟು ರ‌್ತಾಗಿದೆ. ಉಳಿದ ದರ್ಜೆಯ ಟೊಮ್ಯಾಟೊಗಳು ಗುಜರಾತ್, ರಾಜಸ್ತಾನ, ದೆಹಲಿ, ಪಶ್ಚಿಮ ಬಂಗಾಲ ಇನ್ನಿತರ ರಾಜ್ಯಗಳಿಗೆ ರವಾನೆಯಾಗುತ್ತಿದೆ.

    ಕಳೆದೆರಡು ಬೆಳೆಗಳಿಂದ ಲಕ್ಷಾಂತರ ರೂ. ನಷ್ಟವಾಗಿತ್ತು, ಈಗ ಒಂದು ಎಕರೆಯಲ್ಲಿ ಮಾತ್ರ ಟೊಮ್ಯಾಟೊ ಬೆಳೆದಿದ್ದು, ಪ್ರತಿ ಬಾಕ್ಸ್ 700 ರೂ. ಆಸುಪಾಸಿಗೆ ಮಾರಾಟವಾಗುತ್ತಿದೆ. ಮಳೆಯಿಂದ ಸಾಕಷ್ಟು ಬೆಳೆ ನಾಶವಾಗುತ್ತಿದ್ದು, ಇದೇ ರೀತಿ ಬೆಲೆ ಮುಂದುವರಿದರೆ ಅಸಲಿನ ಜತೆ ಲಾಭವನ್ನೂ ನಿರೀಕ್ಷಿಸಬಹುದು.
    ಕೋಡಪ್ಪ, ರೈತ ಮಾರಂಡಹಳ್ಳಿ

     

    ಮಳೆಯಾದ ಸಂದರ್ಭದಲ್ಲಿ ಬೆಳೆ ನಾಶವಾಗದಂತೆ ಆಸಕ್ತಿವಹಿಸಿ ಕೀಟನಾಶಕ ಮತ್ತು ಶಿಲೀಂದ್ರ ನಾಶಕ ಸಿಂಪಡಿಸಿ ಬೆಳೆ ಆರೈಕೆ ಮಾಡುವುದರಿಂದ ಇಳುವರಿ ಚೆನ್ನಾಗಿ ಬರುತ್ತದೆ. ಇತರ ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯದಿಂದ ಬೆಳೆ ನಾಶವಾಗಿದ್ದು, ಕೋಲಾರ ಜಿಲ್ಲೆಯ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾಗಿ ರ‌್ತಾಗುತ್ತಿರುವ ಕಾರಣ ಬೆಲೆ ಏರಿಕೆ ಕಂಡಿದೆ.
    ಎಂ.ಸಿ ಸಿದ್ದೇಶ್, ಸಹಾಯಕ ತೋಟಗಾರಿಕ ಅಧಿಕಾರಿ, ಬಂಗಾರಪೇಟೆ

     

    ದೇಶದ ವಿವಿಧ ಕಡೆಗಳಲ್ಲಿ ಭಾರಿ ಮಳೆಯಿಂದ ಆ ಭಾಗಗಳಲ್ಲಿ ಟೊಮ್ಯಾಟೊ ಇಳುವರಿ ಕಡಿಮೆಯಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಸ್ಥಳೀಯ ಮಾರುಕಟ್ಟೆಗೂ ಅವಕ ಕಡಿಮೆಯಿದೆ. ಗುಣಮಟ್ಟದ ಟೊಮ್ಯಾಟೊಗೆ ಇನ್ನೂ ಒಂದು ತಿಂಗಳು ಉತ್ತಮ ಬೆಲೆ ಸಿಗಬಹುದು. ಇನ್ನಷ್ಟು ಬೆಲೆ ಏರಿಕೆ ನಿರೀಕ್ಷೆ ಇದೆ.
    ಆರ್.ಎ. ನಾರಾಯಣಸ್ವಾಮಿ, ಅಧ್ಯಕ್ಷ, ಜೈ ಕರ್ನಾಟಕ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts