More

  ನಾಳೆಯಿಂದ ಪ್ರಯಾಣಿಕರ ಜೇಬು ಸುಡಲಿದೆ ಟೋಲ್

  ಶಿವಮೊಗ್ಗ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜನರಿಗೆ ಟೋಲ್ ಬಿಸಿ ತಟ್ಟಲಿದೆ. ಮಾ.1ರಿಂದ ಎರಡು ಕಡೆಗಳಲ್ಲಿ ಟೋಲ್ ಸಂಗ್ರಹಕ್ಕೆ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ದುಬಾರಿ ದುನಿಯಾದಲ್ಲಿ ಟೋಲ್ ಶುಲ್ಕ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ.

  ಶಿವಮೊಗ್ಗ-ಶಿಕಾರಿಪುರ ಹಾಗೂ ಶಿಕಾರಿಪುರ-ಹಾನಗಲ್ ನಡುವೆ ಎರಡು ಕಡೆಗಳಲ್ಲಿ ಟೋಲ್ ಗೇಟ್ ನಿರ್ಮಿಸಲಾಗಿದೆ. ಶಿವಮೊಗ್ಗ-ಹಾನಗಲ್ ರಾಜ್ಯ ಹೆದ್ದಾರಿ-57ರಲ್ಲಿ ಸವಳಂಗ ಹಾಗೂ ಸೀಗೆಕಣಿವೆಯಲ್ಲಿ ಟೋಲ್‌ಗೇಟ್‌ಗಳಿವೆ. ವಾಹನ ಸವಾರರಿಂದ ರಸ್ತೆ ಬಳಕೆ ಶುಲ್ಕ ಸಂಗ್ರಹಿಸಲು ಬೆಂಗಳೂರಿನ ವಿನಯ್ ಲಾಡ್ ಎಂಟರ್‌ಪ್ರೈಸಸ್‌ಗೆ ಅವಕಾಶ ನೀಡಲಾಗಿದೆ. ಸ್ಥಳೀಯ ವಾಹನಗಳಿಗೆ ಮಾಸಿಕ ಪಾಸ್ ನೀಡಲಾಗುತ್ತದೆ. ಅದಕ್ಕೆ 220 ರೂ. ನಿಗದಿಪಡಿಸಲಾಗಿದೆ.
  ಟೋಲ್ ಸಂಗ್ರಹ ವಿಷಯ ಕಳೆದ ಮೂರ‌್ನಾಲ್ಕು ತಿಂಗಳಿನಿಂದ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆಯೂ ನಡೆದಿತ್ತು. ಆದರೂ ರಾಜ್ಯ ಸರ್ಕಾರ ಮಣಿದಿಲ್ಲ. ಈಗ ಟೋಲ್ ಪಾವತಿಸುವುದು ವಾಹನ ಸವಾರರಿಗೆ ಅನಿವಾರ್ಯವಾಗಲಿದೆ.
  ಟೋಲ್‌ನಲ್ಲಿ ನಾಲ್ಕು ಪ್ರತ್ಯೇಕ ಗೇಟ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿ ದಿಕ್ಕಿಗೂ ತಲಾ ಎರಡು ಗೇಟ್ ಇದೆ. ಟೋಲ್ ಹಣ ಸಂಗ್ರಹಿಸುವವರಿಗೆ ಚಿಕ್ಕ ಕ್ಯಾಬಿನ್ ನಿರ್ಮಿಸಲಾಗಿದೆ. ಟೋಲ್ ಪ್ಲಾಜಾದಲ್ಲಿ ಬೆಳಕಿಗೆ ಲೈಟ್‌ಗಳು, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿ ಚಿಕ್ಕದಾಗಿ ಕಚೇರಿ ನಿರ್ಮಿಸಲಾಗಿದೆ. ಟೋಲ್ ಗೇಟ್ ಇರುವ ಭಾಗದಲ್ಲಿ ಮಾತ್ರ ರಸ್ತೆ ಅಗಲೀಕರಣ ಮಾಡಲಾಗಿದೆ.
  ಈ ರಸ್ತೆಗಳಲ್ಲಿ ಪ್ರತಿದಿನ ಸಂಚರಿಸುವವರಿಗೆ ಟೋಲ್ ಬಿಸಿ ಕೊಂಚ ಹೆಚ್ಚಾಗಿಯೇ ತಟ್ಟಲಿದೆ. ಇಂಧನ ದರದ ಹೆಚ್ಚಳದ ನಡುವೆ ಟೋಲ್ ದುಬಾರಿಯಾಗಲಿದೆ. ಹೀಗಾಗಿ ಸರ್ಕಾರದ ವಿರುದ್ಧ ಜನರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗ-ಶಿಕಾರಿಪುರ ಹಾಗೂ ಶಿಕಾರಿಪರ-ಶಿರಾಳಕೊಪ್ಪ ನಡುವೆ ಸಂಚರಿಸುವ ವಾಹನಗಳು ಟೋಲ್ ಪಾವತಿಸುವುದು ಅನಿವಾರ್ಯ.
  ಇದೊಂದು ವಿಚಿತ್ರ ಟೋಲ್!: ಸಾಮಾನ್ಯವಾಗಿ ಯಾವುದಾದರೂ ಹೆದ್ದಾರಿ ರಸ್ತೆಗಳನ್ನು ಹೊಸದಾಗಿ ನಿರ್ಮಿಸಿದರೆ ಅದಕ್ಕೆ ತಗುಲಿದ ಖರ್ಚನ್ನು ಟೋಲ್ ಮೂಲಕ ಒಂದಷ್ಟು ವರ್ಷ ಹಣ ಸಂಗ್ರಹ ಮಾಡಲಾಗುತ್ತದೆ. ಆದರೆ ಈ ರಸ್ತೆ ನಿರ್ಮಾಣವಾಗಿ ಬಹಳಷ್ಟು ವರ್ಷಗಳೇ ಕಳೆದಿವೆ. ಈಗ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಜನರಿಗೆ ವಿಚಿತ್ರ ಎನಿಸುತ್ತಿದೆ. 2017ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ರಾಜ್ಯದ 19 ಕಡೆಗಳಲ್ಲಿ ಟೋಲ್ ಸಂಗ್ರಹಕ್ಕೆ ಹಸಿರು ನಿಶಾನೆ ತೋರಿತ್ತು. ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಎರಡು ಟೋಲ್‌ಗಳೂ ಸೇರಿಸಲಾಗಿತ್ತು.
  ಜನರ ಪಾಲಿಗೂ ಹೊರೆ : ಸ್ವಂತ ವಾಹನದಲ್ಲಿ ಸಂಚರಿಸುವವರಿಗಷ್ಟೇ ಅಲ್ಲ, ಬಾಡಿಗೆ ವಾಹನ, ಬಸ್‌ಗಳಲ್ಲಿ ತೆರಳುವವರು, ಸರಕುಗಳನ್ನು ಸಾಗಿಸುವವರು, ತರಕಾರಿ, ಹಣ್ಣುಗಳನ್ನು ಸಾಗಣೆ ಮಾಡುವವರಿಗೂ ಟೋಲ್ ದುಬಾರಿಯಾಗಲಿದೆ. ಪ್ರತಿದಿನ ಮೂರ‌್ನಾಲ್ಕು ಬಾರಿ ಈ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳು ಟಿಕೆಟ್ ಹೆಚ್ಚಳ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸರಕು ಸಾಗಣೆ ವೆಚ್ಚವೂ ದುಬಾರಿಯಾಗಲಿದೆ. ಸಣ್ಣ ಸರಕು ಸಾಗಣೆ ವಾಹನಗಳನ್ನು ಇಟ್ಟುಕೊಂಡು ಅದರಿಂದಲೇ ಜೀವನ ನಿರ್ವಹಣೆ ಮಾಡುತ್ತಿರುವವರು, ಶಿಕಾರಿಪುರ ಭಾಗದಲ್ಲಿ ಜಮೀನು ಹೊಂದಿದ್ದು, ವಾರಕ್ಕೆ ಮೂರ‌್ನಾಲ್ಕು ಬಾರಿ ಅಲ್ಲಿಗೆ ಹೋಗಬೇಕಾದ ಅನಿವಾರ್ಯತೆ ಇರುವ ರೈತರು ಯೋಚಿಸುವಂತಾಗಿದೆ.
  ಭವಿಷ್ಯದ ಆತಂಕ: ಮೊದಲ ಬಾರಿಗೆ ಜಿಲ್ಲೆಯಲ್ಲಿ ಎರಡು ಟೋಲ್ ನಿರ್ಮಾಣವಾಗಿದೆ. ಮುಂದೆ ಇನ್ನಷ್ಟು ಕಡೆಗಳಲ್ಲಿ ಟೋಲ್ ಗೇಟ್‌ಗಳು ನಿರ್ಮಾಣವಾಗುವುದು ನಿಶ್ಚಿತ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ನಿರ್ಮಾಣವಾಗುತ್ತಿವೆ. ಮುಖ್ಯವಾಗಿ ತುಮಕೂರು-ಶಿವಮೊಗ್ಗ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದೆ. ಇದೆಲ್ಲವೂ ಪೂರ್ಣಗೊಂಡ ಬಳಿಕ ಮತ್ತಷ್ಟು ಕಡೆಗಳಲ್ಲಿ ಶುಲ್ಕ ಪಾವತಿಸಬೇಕಾಗುತ್ತದೆ. ಹೀಗಾಗಿ ಭವಿಷ್ಯದಲ್ಲಿ ವಾಹನ ಸವಾರರಿಗೆ ಮತ್ತಷ್ಟು ಸಮಸ್ಯೆಯಾಗಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts