More

    Tokyo Olympics| ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಸರ್ಕಾರಿ ಉದ್ಯೋಗದ ಜತೆಗೆ 1 ಕೋಟಿ ರೂ. ಬಹುಮಾನ!

    ಇಂಫಾಲ್: ಟೋಕಿಯೋ ಒಲಿಂಪಿಕ್ಸ್​ನ ಮೊದಲ ದಿನವೇ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಮೀರಾಬಾಯಿ ಚಾನುಗೆ ದೇಶಾದ್ಯಂತ ಸಾಕಷ್ಟು ಪ್ರಶಂಸೆಗಳ ಸುರಿಮಳೆ ಹರಿದುಬರುತ್ತಿದೆ. ಪ್ರತಿಯೊಬ್ಬರು ವಾಟ್ಸ್​ಅಪ್​ ಸ್ಟೇಟಸ್​ ಹಾಗೂ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಮೀರಾಬಾಯಿ ಚಾನು ಫೋಟೋ ಶೇರ್​ ಮಾಡಿಕೊಂಡು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    ಇದೀಗ ಮೀರಾಬಾಯಿ ಚಾನು ಸಾಧನೆಗೆ ತಲೆಬಾಗಿರುವ ಮಣಿಪುರ ಸರ್ಕಾರ ಮೀರಾಗೆ ಬಹುಮಾನವಾಗಿ 1 ಕೋಟಿ ರೂಪಾಯಿಗಳನ್ನು ಘೋಷಿಸಿದೆ. ಮೀರಾಬಾಯಿ ಮಣಿಪುರ ಮೂಲದವರು. ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ಗೌರವಪೂರ್ವಕವಾಗಿ ಮಣಿಪುರ ಮುಖ್ಯಮಂತ್ರಿ ಎನ್​. ಬೈರೆನ್​ ಸಿಂಗ್​ ಶನಿವಾರ ಒಂದು ಕೋಟಿ ಬಹುಮಾನ ಘೋಷಣೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ರಾಜ್ಯ ಸರ್ಕಾರವು ಮೀರಾಬಾಯಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಿದೆ. ಪ್ರಸ್ತುತ ಮೀರಾಬಾಯಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಟಿಕೆಟ್​ ಕಲೆಕ್ಟರ್​ ಆಗಿ ಕೆಲಸ ಮಾಡುತ್ತಿದ್ದಾರೆ.

    ಪದಕ ಗೆದ್ದ ಬಳಿಕ ಮೀರಾಬಾಯಿ ಜತೆ ಮಾತನಾಡಿದ ವಿಡಿಯೋವನ್ನು ಸಿಎಂ ಬೈರೆನ್​ ಸಿಂಗ್​ ಶೇರ್​ ಮಾಡಿಕೊಂಡಿದ್ದು, ಇನ್ಮುಂದೆ ರೈಲು ನಿಲ್ದಾಣ ಮತ್ತು ರೈಲಿನಲ್ಲಿ ಟಿಕೆಟ್​ ಸಂಗ್ರಹಿಸಬೇಕಾಗಿಲ್ಲ. ನಿನಗಾಗಿ ವಿಶೇಷ ಉದ್ಯೋಗವೊಂದನ್ನು ಕಾಯ್ದಿರಿಸಿದ್ದೇನೆ. ಆದರೆ, ಆ ಪೋಸ್ಟ್​ ಯಾವುದು ಎಂದು ಹೇಳುವುದಿಲ್ಲ. ಸದ್ಯ ಅದು ರಹಸ್ಯವಾಗಿಯೇ ಇರಲಿದೆ. ಭಾರತಕ್ಕೆ ಬಂದಾಗ ಏನೆಂದು ತಿಳಿಯಲಿದೆ ಎಂದು ಬೈರೆನ್​ ಸಿಂಗ್​ ಹೇಳಿದ್ದಾರೆ.

    26 ವರ್ಷದ ಮೀರಾಬಾಯಿ 49ಕೆಜಿ ಭಾರ ಎತ್ತುವ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಒಟ್ಟು 202 ಕೆಜಿ (87 ಕೆಜಿ + 115 ಕೆಜಿ) ಭಾರ ಎತ್ತಿದರು. 2000ದಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್​ನಲ್ಲಿ ಕರ್ಣಮ್​ ಮಲ್ಲೇಶ್ವರಿ ಅವರು ಕಂಚಿನ ಪದಕವನ್ನು ಬೇಟೆಯಾಡಿದ್ದರು. ಅಂದಿನಿಂದ ಭಾರ ಎತ್ತುವ ಸ್ಪರ್ಧೆಯಲ್ಲಿ ಪದಕವು ಮರೀಚಿಕೆ ಆಗಿತ್ತು. ಆದರೆ, ಟೋಕಿಯೋ ಒಲಿಂಪಿಕ್ಸ್​ನಲ್ಲಿ ಮೊದಲ ದಿನವೇ ಪದಕ ಗೆಲ್ಲುವ ಮೂಲಕ ಮೀರಾಬಾಯಿ ಮಹತ್ತರ ಸಾಧನೆ ಮಾಡಿದ್ದಾರೆ. ಅಲ್ಲದೆ, ಇದುವರೆಗೂ ಭಾರತ ಒಲಿಂಪಿಕ್ಸ್​ನ ಮೊದಲ ದಿನವೇ ಪದಕ ಬೇಟೆ ಆಡಿರಲಿಲ್ಲ. ಆದರೆ, ಮೀರಾಬಾಯಿ ಆ ಕೊರಗನ್ನು ನೀಗಿಸಿದ್ದಾರೆ.

    ಇನ್ನು ಚೀನಾದ ಹೌ ಜಿಹಿ ಒಟ್ಟು 210 ಕೆಜಿ (94ಕೆಜಿ + 116ಕೆಜಿ) ಭಾರ ಎತ್ತುವ ಮೂಲಕ ಚಿನ್ನದ ಪದಕ ಜಯಿಸಿದ್ದಾರೆ. ಇಂಡೋನೇಷ್ಯಾದ ಕ್ಯಾಂಟಿಕಾ ಐಶಾ 194 ಕೆಜಿ (84ಕೆಜಿ + 110ಕೆಜಿ) ಭಾರ ಎತ್ತುವ ಮೂಲಕ ಕಂಚಿನ ಪದಕ ಜಯಿಸಿದರು. ಮೀರಾಬಾಯಿ ಚಾನು ಅವರು ತಮ್ಮ ಗೆಲುವನ್ನು ದೇಶಕ್ಕೆ ಅರ್ಪಿಸಿದ್ದಾರೆ. (ಏಜೆನ್ಸೀಸ್​)

    ಚಾನು ಹೆಸರು ಒಲಿಂಪಿಕ್ಸ್ ಪದಕ ಪಟ್ಟಿಗೆ ಸೇರುತ್ತಿದ್ದಂತೆ ಅಣ್ಣನಿಗೆ ನೆನಪಾಯಿತು ಕಟ್ಟಿಗೆ!

    ಟೋಕಿಯೊ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತೇ?

    ‘ಪದಕ ಗೆಲ್ಲುವ ನನ್ನ ಕನಸು ನನಸಾಗಿದೆ’, ಅದನ್ನು ದೇಶಕ್ಕೆ ಅರ್ಪಿಸುತ್ತೇನೆ: ಮೀರಾಬಾಯಿ ಚಾನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts