More

    ಆರ್‌ಸಿಯುಗೆ ಮೂಲಸೌಕರ್ಯ ಒದಗಿಸಲು ಒತ್ತಾಯ

    ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ವಿಶ್ವವಿದ್ಯಾಲಯ ಆರಂಭಗೊಂಡು 10 ವರ್ಷ ಕಳೆದರೂ ಸ್ವಂತ ಜಾಗವೂ ಇಲ್ಲ. ಸಮರ್ಪಕವಾದ ಕಟ್ಟಡವೂ ಇಲ್ಲ. ಹೀಗಾಗಿ ವಿಶ್ವವಿದ್ಯಾಲಯಕ್ಕೆ ಜಮೀನು ಮಂಜೂರು ಮಾಡಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.

    ಶೌಚಗೃಹವೂ ಇಲ್ಲ: 2 ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ತರಗತಿ ನಡೆಸಲು ಕೊಠಡಿಗಳಿಲ್ಲ. ಶೌಚಗೃಹ ಸೌಲಭ್ಯವೂ ಇಲ್ಲದ್ದರಿಂದ ವಿದ್ಯಾರ್ಥಿಗಳು ಬಯಲನ್ನೇ ಆಶ್ರಯಿಸುವಂತಾಗಿದೆ.

    ಈ ಬಗ್ಗೆ ವಿವಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸ್ವಂತ ಜಾಗ ಇಲ್ಲದ್ದರಿಂದ ಶೌಚಗೃಹ ಮತ್ತು ಹೆಚ್ಚುವರಿ ತರಗತಿ ಕೊಠಡಿ ನಿರ್ಮಿಸಲಾಗುತ್ತಿಲ್ಲ. ಅರಣ್ಯ ಇಲಾಖೆಯೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹೆಜ್ಜೆ ಹೆಜ್ಜೆಗೂ ಹತ್ತಾರು ಸಂಕಷ್ಟ ತಲೆದೋರಿದ್ದರಿಂದ ಇಲ್ಲಿ ವಿದ್ಯಾಭ್ಯಾಸ ಮಾಡುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ವಿದ್ಯಾರ್ಥಿ ಪ್ರತಿನಿಧಿಗಳಾದ ಅನಿಲ ನಡುವಿನಕೇರಿ, ಕಾವೇರಿ ಕುಂತಕಲ, ಗೋಪಾಲ ದಳವಾಯಿ ಇತರರು ಇದ್ದರು.

    ಸಮಸ್ಯೆ ನಿವಾರಣೆಗೆ 11ರ ಗಡುವು: ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 365ಕ್ಕಿಂತ ಅಧಿಕ ಕಾಲೇಜುಗಳು ವಿವಿ ವ್ಯಾಪ್ತಿಗೆ ಒಳಪಟ್ಟಿವೆ. ಪ್ರಸ್ತುತ 19 ಕೋರ್ಸ್‌ಗಳ ಅಧ್ಯಯನಕ್ಕೆ ಮಾತ್ರ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಕಟ್ಟಡ ಕೊರತೆಯಿಂದ ರಾಜ್ಯಮಟ್ಟದ ಎಲ್ಲ ವಿವಿಗಳಲ್ಲಿರುವಂತೆ ಇಲ್ಲಿ ಹೆಚ್ಚಿನ ಕೋರ್ಸ್ ಲಭ್ಯವಿಲ್ಲ. ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು. ಮಾ. 11ರೊಳಗಾಗಿ ಇಲ್ಲಿರುವ ಸಮಸ್ಯೆ ಪರಿಹರಿಸದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts