More

    ಧಾರವಾಡ ಶಹರ ಬಸ್ ನಿಲ್ದಾಣದಲ್ಲಿ ಶೌಚ ಅವ್ಯವಸ್ಥೆ

    ಉಪ್ಪಿನಬೆಟಗೇರಿ: ಧಾರವಾಡ ನಗರದ ಮುಖ್ಯ ಬಸ್ ನಿಲ್ದಾಣದಲ್ಲಿರುವ ಪುರುಷರ ಶೌಚಗೃಹಕ್ಕೆ ಸಂಜೆಯಾದೊಡನೆ ಬೀಗ ಹಾಕಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿದೆ. ಈ ಕುರಿತು ಸಾಕಷ್ಟು ಬಾರಿ ನಿಲ್ದಾಣದಲ್ಲಿರುವ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂಬುದು ಪ್ರಯಾಣಿಕರು, ಸಾರಿಗೆ ಚಾಲಕರು ಹಾಗೂ ನಿರ್ವಾಹಕರ ಆರೋಪವಾಗಿದೆ.

    ಪ್ರತಿದಿನ ಸಾವಿರಾರು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸಿ ಬೇರೆ ಗ್ರಾಮಗಳಿಗೆ ತೆರಳುತ್ತಾರೆ. ಇಲ್ಲಿನ ಶೌಚಗೃಹ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಮಾತ್ರ ಬಾಗಿಲು ತೆರೆದಿರುತ್ತದೆ. 8ರ ನಂತರ ಬರುವ ಪ್ರಯಾಣಿಕರು ಶೌಚಕ್ಕೆ ತೆರಳಲು ಪರದಾಡುವಂತಾಗಿದೆ.

    ಪುರುಷರ ಶೌಚಗೃಹವನ್ನು ರಾತ್ರಿ ಬೇಗ ಬಂದ್ ಮಾಡುತ್ತಾರೆ. ಆದರೆ, ಸಾರಿಗೆ ನಿಯಂತ್ರಕರ ಕೊಠಡಿ ಹಿಂಭಾಗದಲ್ಲಿರುವ ಮಹಿಳೆಯರ ಶೌಚಗೃಹ ರಾತ್ರಿವರೆಗೂ ತೆರೆದಿರುತ್ತದೆ. ಇಲ್ಲಿ ಶುಲ್ಕ ಪಾವತಿ ವ್ಯವಸ್ಥೆ ಇದ್ದು, ಪ್ರತಿಯೊಬ್ಬರೂ 5 ರೂ. ನೀಡಿ ಶೌಚಗೃಹ ಉಪಯೋಗಿಸಬೇಕು. ಹೀಗಾಗಿ, ಅದನ್ನು ಬೇಗ ಬಂದ್ ಮಾಡುವುದಿಲ್ಲ ಎಂಬುದು ಪ್ರಯಾಣಿಕರ ಆರೋಪ.

    ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಪುರುಷರ ಶೌಚಗೃಹ ಬಳಕೆಗೆ ಲಭ್ಯವಾಗುವಂತೆ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಉಪ್ಪಿನಬೆಟಗೇರಿ, ಅಮ್ಮಿನಬಾವಿ, ಹೆಬ್ಬಳ್ಳಿ, ಗರಗ, ತಡಕೋಡ, ಮರೇವಾಡ, ಕಬ್ಬೇನೂರ, ಹಾರೋಬೆಳವಡಿ, ಕರಡಿಗುಡ್ಡ, ಯಾದವಾಡ ಗ್ರಾಮದ ಪ್ರಯಾಣಿಕರ ಆಗ್ರಹವಾಗಿದೆ.

    ಹಳ್ಳಿಗಳಿಂದ ನಗರಕ್ಕೆ ನಗರದಿಂದ ಹಳ್ಳಿಗಳಿಗೆ ಪ್ರತಿ ದಿನ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಬಸ್​ಗಳು ಸಂಚರಿಸುತ್ತವೆ. ಈ ಸಮಯದಲ್ಲಾದರೂ ಶೌಚಗೃಹದ ಬಾಗಿಲು ತೆರೆದಿರಬೇಕು. ಬೇಗ ಬಂದ್ ಮಾಡುವುದರಿಂದ ರಾತ್ರಿ 8ರ ನಂತರ ವೃದ್ಧರು ಅನಿವಾರ್ಯವಾಗಿ ನಿಲ್ದಾಣದ ಹೊರಗೆ, ಇಲ್ಲವೇ ಬಸ್​ಗಳ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ.

    | ಕೆಂಚಪ್ಪ ಮಜ್ಜಗಿ ಉಪ್ಪಿನಬೆಟಗೇರಿ ಗ್ರಾಮದ ಪ್ರಯಾಣಿಕ

    ಬಸ್ ನಿಲ್ದಾಣದಲ್ಲಿರುವ ಶೌಚಗೃಹದ ಬಾಗಿಲನ್ನು ರಾತ್ರಿ 8ಗಂಟೆಗೆ ಹಾಕುತ್ತಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ರಾತ್ರಿ 10 ಗಂಟೆಯವರೆಗೂ ಬಳಸಲು ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

    | ಗಿರೀಶ ಗುಡೆಣ್ಣವರ ಸಾರಿಗೆ ಇಲಾಖೆ ಎಟಿಎಸ್ ಅಧಿಕಾರಿ, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts