More

    ರಸ್ತೆ ಬದಿ ಹರಿಯುತ್ತಿದೆ ಶೌಚಗೃಹದ ನೀರು

    ಹರೀಶ್ ಮೋಟುಕಾನ ಮಂಗಳೂರು
    ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅನವಶ್ಯಕ ಕಾಮಗಾರಿಗಳಿಗೆ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿರುವಾಗ ಅತಿ ಅವಶ್ಯಕ ಕೆಲಸಗಳಿಗೆ ಅದನ್ನು ಯಾಕೆ ವಿನಿಯೋಗಿಸುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಯೆಯ್ಯಡಿ ಕೊಂಚಾಡಿ ಶಾಲೆಯ ಎದುರು ಅಪಾರ್ಟ್‌ಮೆಂಟ್‌ನಿಂದ ಐದು ವರ್ಷಗಳಿಂದ ಶೌಚಗೃಹದ ನೀರು ಸೋರಿಕೆಯಾಗಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಹರಿಯುತ್ತಿದೆ. ಪರಿಣಾಮ ಪರಿಸರವಿಡೀ ಗಬ್ಬು ವಾಸನೆಯಿಂದ ಕೂಡಿದ್ದು, ಇಲ್ಲಿನ ಜನ ಆಹಾರ ಸೇವನೆಗೂ ಪರದಾಡುವಂತಾಗಿದೆ. ವಾಹನಗಳಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡೇ ತೆರಳಬೇಕು.

    ಶೌಚಗೃಹದ ನೀರು ಹರಿದುಹೋಗುವಲ್ಲಿ ನೆಲದಡಿ ಕುಡಿಯುವ ನೀರಿನ ಪೈಪ್ ಕೂಡ ಹಾದುಹೋಗಿದೆ. ಹಳೇ ಪೈಪ್ ಆಗಿರುವುದರಿಂದ ಅದು ಕೂಡ ಅಲ್ಲಲ್ಲಿ ಒಡೆದಿದೆ. ಶೌಚಗೃಹದ ನೀರು ಕುಡಿಯುವ ನೀರಿನ ಪೈಪ್‌ಗೆ ಸೇರುವ ಸಾಧ್ಯತೆ ಇದೆ. ಅದನ್ನು ಕುಡಿದ ಜನರಿಗೆ ಜಾಂಡೀಸ್‌ನಂಥ ಗಂಭೀರ ಸ್ವರೂಪದ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಅಪಾರ್ಟ್‌ಮೆಂಟ್‌ಗೆ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಬ್ಯಾನರ್ ಅಳವಡಿಸಿ ಆಕ್ರೋಶ: ‘ಕೆನರಾ ಅಪಾರ್ಟ್‌ಮೆಂಟಿನ ಮಲಮಿಶ್ರತ ಗಲೀಜು ನೀರನ್ನು ಸಾರ್ವಜನಿಕ ರಸ್ತೆಗೆ ಬಿಡಲು ಸಹಕರಿಸುತ್ತಿರುವ ಮಂಗಳೂರು ನಗರ ಪಾಲಿಕೆ ಕಮಿಷನರ್, ಮೇಯರ್, ಕಾರ್ಪೊರೇಟರ್ ಹಾಗೂ ಆರೋಗ್ಯಾಧಿಕಾರಿಗೆ ಧಿಕ್ಕಾರ’ ಎಂದು ಬ್ಯಾನರ್ ಅಳವಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸಿಪಿಎಂ, ಡಿವೈಎಫ್‌ಐ, ದಲಿತ ಹಕ್ಕುಗಳ ಸಮಿತಿ, ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಈ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆದಿದೆ. ಮಹಾನಗರ ಪಾಲಿಕೆಯ ಎಲ್ಲ ಮುಖ್ಯಸ್ಥರಿಗೆ ಮನವಿ ನೀಡಿ ಒತ್ತಾಯಿಸಲಾಗಿದೆ. ಪೊಲೀಸ್ ಠಾಣೆ, ಮಾನವ ಹಕ್ಕು ಆಯೋಗಕ್ಕೂ ಮನವಿ ನೀಡಲಾಗಿದೆ. ಪ್ರಸ್ತುತ ಅಂಚೆ ಕಾರ್ಡ್ ಚಳುವಳಿ ನಡೆಯುತ್ತಿದೆ ಎಂದು ಡಿವೈಎಫ್‌ಐ ಮುಖಂಡ ನವೀನ್ ಕೊಂಚಾಡಿ ತಿಳಿಸಿದ್ದಾರೆ.

    ಯೆಯ್ಯಡಿ ಕೊಂಚಾಡಿಯಲ್ಲಿ ಅಪಾರ್ಟ್‌ಮೆಂಟ್‌ನಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದು ಗಮನಕ್ಕೆ ಬಂದಿದೆ. ಸರಿಪಡಿಸಲು ಈಗಾಗಲೇ ಅನುದಾನ ಮೀಸಲಿಡಲಾಗಿದೆ. ಶೀಘ್ರ ಕಾಮಗಾರಿ ಆರಂಭಗೊಂಡು ಸಮಸ್ಯೆಗೆ ಮುಕ್ತಿ ಸಿಗಲಿದೆ.
    -ದಿವಾಕರ ಪಾಂಡೇಶ್ವರ, ಮಂಗಳೂರು ಮೇಯರ್

    ಅಪಾರ್ಟ್‌ಮೆಂಟ್‌ನ ಶೌಚಗೃಹದ ಗಲೀಜು ನೀರು ಸೋರಿಕೆಯಾಗಿ ರಸ್ತೆಯಲ್ಲಿ ಹರಿಯುತ್ತಿರುವ ಸಮಸ್ಯೆ ಐದು ವರ್ಷದಿಂದ ಇದೆ. ಪಾಲಿಕೆಯ ಸಂಬಂಧಪಟ್ಟವರಿಗೆ ವಿವಿಧ ರೀತಿಯಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇವೆ. ಆದರೆ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ. ಮುಂದಿನ ದಿನಗಳಲ್ಲಿ ಗಲೀಜು ನೀರನ್ನು ಕೊಂಡೊಯ್ದು ಪಾಲಿಕೆ ಎದುರು ಸುರಿದು ಪ್ರತಿಭಟನೆ ನಡೆಸಲಾಗುವುದು.
    -ನವೀನ್ ಕೊಂಚಾಡಿ, ಡಿವೈಎಫ್‌ಐ ನಗರ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts