More

    ನಾಳೆಯಿಂದ ಕೆಲಸಕ್ಕೆ ಬರಬೇಡಿ: ಝೂಮ್​ ಆ್ಯಪ್ ನೋಡಿದ 3700 ಉದ್ಯೋಗಿಗಳು ಕಕ್ಕಾಬಿಕ್ಕಿ!

    ನವದೆಹಲಿ: ಕರೊನಾ ವೈರಸ್​ ಹಾಗೂ ಅದರಿಂದ ಜಾರಿಯಾಗಿರುವ ಲಾಕ್​ಡೌನ್​ ಲಕ್ಷಾಂತರ ಮಂದಿಯನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಮಟ್ಟದ ಹುದ್ದೆಯಲ್ಲಿ ಇರುವವರೂ ಇದಾಗಲೇ ಕೆಲಸ ಕಳೆದುಕೊಂಡಿದ್ದಾರೆ.

    ಇದು ಭಾರತದ ಸಮಸ್ಯೆ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೂ ಇಂಥದ್ದೊಂದು ಸಮಸ್ಯೆ ಉಲ್ಭಣವಾಗುತ್ತಲೇ ಇದೆ. ಈಗ ವಿಶ್ವಾದ್ಯಂತ ಕೆಲವೇ ವರ್ಷಗಳಲ್ಲಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದ ಉಬರ್​ ಸರದಿ.

    ಲಾಕ್​ಡೌನ್​ನಿಂದಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಉಬರ್​ ಸಂಸ್ಥೆ ತನ್ನ 3,700 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಆದರೆ ಇಷ್ಟು ವರ್ಷಗಳವರೆಗೆ ತನ್ನ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ವಜಾ ಮಾಡಲು ಬಳಸಿರುವ ಕ್ರಮ ಮಾತ್ರ ಇದೀಗ ವ್ಯಾಪಕ ಟೀಕೆಗೆ ಒಳಗಾಗಿದೆ.

    ಇದನ್ನೂ ಓದಿ: ಬೆಂಗಳೂರು ಜನರಿಗೆ ನಂ.653 ಸಂಕಟ- ದಕ್ಷಿಣ ಕನ್ನಡ, ಉಡುಪಿಗೆ ದುಬೈ ಕಂಟಕ: ಸಾವಿರದ ಗಡಿ ದಾಟಿದ ಸೋಂಕು!

    ಏಕೆಂದರೆ ಉಬರ್​ ಝೂಮ್​ ಆ್ಯಪ್​ ಮೂಲಕ ಈ ಉದ್ಯೋಗಿಗಳಿಗೆ ಮಾಹಿತಿ ಕಳುಹಿಸಿದೆ. “ಇಂದು ನಿಮ್ಮ ಕೊನೆಯ ದಿನ, ನಾಳೆಯಿಂದ ಕೆಲಸಕ್ಕೆ ಬರಬೇಡಿ, ನಿಮ್ಮ ಇಲ್ಲಿಯವರೆಗಿನ ಕೆಲಸ ನಮ್ಮ ಸಂಸ್ಥೆಯ ಮೇಲೆ ಒಳ್ಳೆಯ ಪ್ರಭಾವ ಬೀರಿದೆ ” ಎಂದು ಆ್ಯಪ್​ನಲ್ಲಿಯೇ ಹೇಳುವ ಮೂಲಕ ಉದ್ಯೋಗಿಗಳಿಗೆ ಏಕಾಏಕಿಯಾಗಿ ಶಾಕ್​ ಕೊಟ್ಟಿದೆ.

    ಈ ಮಾಹಿತಿಯನ್ನು ಉಬರ್‌ನ ಗ್ರಾಹಕ ಸೇವೆಯ ಮುಖ್ಯಸ್ಥ ರಫಿನ್ ಚಾವೆಲಿಯೊ ತನ್ನ ಸಿಬ್ಬಂದಿಗೆ ನೀಡಿದ್ದು, ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಮುನ್ಸೂಚನೆ ನೀಡದೆ ಆ್ಯಪ್​ ಬಳಸಿಕೊಂಡು ತನ್ನ ಸಿಬ್ಬಂದಿಗೆ ಈ ರೀತಿ ಹೇಳಿದರೆ ಅವರ ಪರಿಸ್ಥಿತಿ ಹೇಗಾಗಬೇಡ? ಇಷ್ಟು ವರ್ಷಗಳವರೆಗೆ ಶ್ರದ್ಧೆಯಿಂದ ಕೆಲಸ ನಿರ್ವಹಿಸಿದ ಸಿಬ್ಬಂದಿಯನ್ನು ಈ ರೀತಿ ಕೆಟ್ಟದಾಗಿ ನಡೆಸಿಕೊಂಡಿರುವುದು ಸರಿಯಲ್ಲ ಎಂದು ಅನೇಕ ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಸಂಕಷ್ಟ- ಒಂದು ವರ್ಷ ಶೇ.30ರಷ್ಟು ಸಂಬಳ ಬಿಡಲಿದ್ದಾರೆ ರಾಷ್ಟ್ರಪತಿ: ಇತರ ಖರ್ಚುವೆಚ್ಚಕ್ಕೂ ಬ್ರೇಕ್​

    ಯುಎಸ್‌ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್​ಗೆ (ಎಸ್‌ಇಸಿ) ಇತ್ತೀಚೆಗಷ್ಟೇ ವರದಿ ಸಲ್ಲಿಸಿದ್ದ ಉಬರ್​, ಕರೊನಾ ವೈರಸ್‌ನಿಂದಾಗಿ ಉಂಟಾಗಿರುವ ಬಿಕ್ಕಟ್ಟು ವ್ಯವಹಾರದ ಮೇಲೆ ಅದರ ಪ್ರಭಾವದಿಂದಾಗಿ ಕಂಪನಿಯು ತನ್ನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಯೋಜಿಸಿದೆ ಎಂದು ತಿಳಿಸಿತ್ತು. ಈ ಸಂಬಂಧ ಉದ್ಯೋಗಿಗಳನ್ನು ಕಡಿತಗೊಳಿಸುವ ಸಾಧ್ಯತೆಗಳ ಕುರಿತೂ ಹೇಳಿತ್ತು. ಆದರೆ ಉದ್ಯೋಗಿಗಳನ್ನು ಸೌಜನ್ಯದಿಂದ ನಡೆಸಿಕೊಳ್ಳಬಹುದಿತ್ತು.

    ಆ್ಯಪ್​ ಬಳಸಿಕೊಂಡು ಏಕಾಏಕಿ ಕೆಲಸಕ್ಕೆ ಬರಬೇಡಿ ಎಂದು ಹೇಳಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts