More

    ವೈವಿಧ್ಯಗಳ ದೇಶಕ್ಕೆ ವಿಶಿಷ್ಟ ಸಂವಿಧಾನ; ಇಂದು ಭಾರತ ಗಣರಾಜ್ಯ ದಿನ

    ನಮ್ಮ ದೇಶದ ರಾಜಕಾರಣ, ಆಡಳಿತ, ನ್ಯಾಯಾಂಗ ಎಲ್ಲಕ್ಕೂ ಆಧಾರ ಸಂವಿಧಾನ. ವಿವಿಧ ದೇಶಗಳ ಸಂವಿಧಾನಗಳಲ್ಲಿರುವ ಒಳ್ಳೆಯ ಅಂಶಗಳನ್ನು ಪಡೆದು ರೂಪಿಸಿರುವ ಈ ಸಂವಿಧಾನ ಇಡೀ ಜಗತ್ತಿನಲ್ಲೇ ವಿಶಿಷ್ಟವಾದದ್ದು. ಅತಿ ದೀರ್ಘವಾದ ಲಿಖಿತ ಸಂವಿಧಾನ ಎಂಬ ಹಿರಿಮೆ ಇದಕ್ಕಿದೆ. ಬೇರೆ ದೇಶಗಳ ಸಂವಿಧಾನಗಳಿಗಿಂತ ಇದು ಹೇಗೆ ಭಿನ್ನ ಎಂಬುದರ ಅವಲೋಕನ ಇಲ್ಲಿದೆ.

    ಸಂವಿಧಾನ ಅಥವಾ ಆಡಳಿತ ನೀತಿನಿಯಮಗಳ ವ್ಯವಸ್ಥಿತ ಸಂಕಲನ ಪ್ರಜಾಪ್ರಭುತ್ವೀಯ ವ್ಯವಸ್ಥೆಯ ಮೂಲಭೂತ ಅಗತ್ಯ. ರಾಜಸತ್ತೆ ಅಥವಾ ಸರ್ವಾಧಿಕಾರದಲ್ಲಿ ಅರಸ ಅಥವಾ ಸರ್ವಾಧಿಕಾರಿಯ ಮನದಿಂಗಿತಗಳೇ ಆಡಳಿತಸೂತ್ರಗಳಾಗುವ ಕಾರಣ ಅಲ್ಲಿ ಸಂವಿಧಾನದ ಅಗತ್ಯವಿರುವುದಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಿ ತಮ್ಮ ಪ್ರತಿನಿಧಿಗಳ ಮೂಲಕ ಆಡಳಿತ ನಡೆಸುವ ವ್ಯವಸ್ಥೆ ಇರುವುದರಿಂದ ಆ ಆಡಳಿತ ಹೇಗಿರಬೇಕು, ಕಾಲಕಾಲಕ್ಕೆ ಅದರಲ್ಲಿ ಯಾವ ಅಗತ್ಯ ಮಾರ್ಪಾಡುಗಳಾಗಬೇಕು ಎನ್ನುವುದನ್ನು ಲಿಖಿತವಾಗಿ ದಾಖಲಿಸಿದ ದಸ್ತಾವೇಜೊಂದು ಸಹಜವಾಗಿಯೇ ಸೃಷ್ಟಿಯಾಗುತ್ತದೆ, ಸೃಷ್ಟಿಯಾಗಲೇಬೇಕು. ಪ್ರಜಾಪ್ರಭುತ್ವದ ತೊಟ್ಟಿಲಾದ ಪ್ರಾಚೀನ ಗ್ರೀಸ್​ನಲ್ಲಿ ಅರಿಸ್ಟ್ಟಾ್ಟಲ್​ನ ಕಾಲದವರೆಗೆ ಅಂದರೆ ಕ್ರಿ.ಪೂ. 4ನೇ ಶತಮಾನದವರೆಗೆ 300 ಸಂವಿಧಾನಗಳು ಬಂದುಹೋಗಿದ್ದವಂತೆ! ಅವುಗಳಲ್ಲಿ, ದಂತಕಥೆಯೇ ಆಗಿಹೋಗಿರುವ ಲೈಕರ್ಗಸ್ ಕ್ರಿ.ಪೂ. 8ನೇ ಶತಮಾನದಲ್ಲಿ ಸ್ಪಾರ್ಟಾ ನಗರರಾಜ್ಯಕ್ಕೆ ನೀಡಿದ, ‘ರಾಷ್ಟ್ರಕ್ಕಾಗಿ ವ್ಯಕ್ತಿಯೇ ಹೊರತು ವ್ಯಕ್ತಿಗಾಗಿ ರಾಷ್ಟ್ರ ಅಲ್ಲ’ ಎಂದು ಸಾರಿದ ಸಂವಿಧಾನವೂ ಸೇರಿತ್ತು. ಅಲ್ಲಿಂದೀಚೆಗೆ ಜಗತ್ತಿನಲ್ಲಿ ಅದೆಷ್ಟು ಸಂವಿಧಾನಗಳು ಸೃಷ್ಟಿಯಾದವೋ. ಹಾಗೆ ಸೃಷ್ಟಿಯಾದ ಸಂವಿಧಾನಗಳಲ್ಲಿ ಭಾರತದ ಸಂವಿಧಾನಕ್ಕೆ ಇಂದಿನ ಜಗತ್ತಿನಲ್ಲಿ ವಿಶಿಷ್ಟ ಸ್ಥಾನವಿದೆ.

    22 ಭಾಗಗಳಲ್ಲಿ ಹರಡಿದ 395 ವಿಧಿಗಳನ್ನೂ, 12 ಶೆಡ್ಯೂಲ್​ಗಳನ್ನೂ, 126 ತಿದ್ದುಪಡಿಗಳನ್ನೂ ಹೊಂದಿದ ಭಾರತೀಯ ಸಂವಿಧಾನ ಇಂದಿನವರೆಗೆ ಜಗತ್ತು ಕಂಡಿರುವ ಅತ್ಯಂತ ದೊಡ್ಡ ಲಿಖಿತ ಸಂವಿಧಾನ. ಇದು ಅನುಷ್ಠಾನಗೊಂಡು ಇಂದಿಗೆ ಎಪ್ಪತ್ತು ವರ್ಷಗಳಾಗುತ್ತಿವೆ. ಸ್ವಾತಂತ್ರ್ಯದೊಂದಿಗೆ ರಚನೆಯಾದ ಡಾ. ಬಾಬು ರಾಜೇಂದ್ರ ಪ್ರಸಾದ್ ನೇತೃತ್ವದ ಸಂವಿಧಾನ ಸಭೆ ಆಯ್ಕೆ ಮಾಡಿದ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಂವಿಧಾನರಚನಾ ಸಮಿತಿ ರಚಿಸಿದ ಸಂವಿಧಾನ ನವೆಂಬರ್ 26, 1949ರಂದು ಸಂವಿಧಾನ ಸಭೆಯಲ್ಲಿ ಅನುಮೋದನೆಗೊಂಡಿತು. ಎರಡು ತಿಂಗಳ ನಂತರ ಜನವರಿ 26, 1950ರಂದು ಅನುಷ್ಠಾನಗೊಂಡು, ಅದರಂತೆ ಭಾರತ ಗಣರಾಜ್ಯವಾಗಿ ಉದಯವಾಯಿತು. ಮೂಲ ಸಂವಿಧಾನದಲ್ಲಿ ದೇಶದ ಹೆಸರು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದಿತ್ತು. ಅದನ್ನು 1976ರಲ್ಲಿ ಮಾಡಲಾದ 72ನೇ ತಿದ್ದುಪಡಿಯ ಮೂಲಕ ಸಾರ್ವಭೌಮ ಸಮಾಜವಾದಿ ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ವಿಸ್ತರಿಸಲಾಯಿತು.

    ಸರ್ವರಿಂದೊಂದೊಂದು ನುಡಿ ಕಲಿತು: ನಮ್ಮ ಸಂವಿಧಾನ ಪಿತೃಗಳು ಎರಡು ವರ್ಷಗಳಿಗಿಂತಲೂ ಅಧಿಕ ಕಾಲ ವಿಶ್ವದ ಹಲವು ಸಂವಿಧಾನಗಳನ್ನು ಕೂಲಂಕಷವಾಗಿ ಪರಿಶೀಲಿಸಿ; ಜನಹಿತಕ್ಕೆ ಅತ್ಯಗತ್ಯವಾದ ಅತ್ಯುತ್ತಮ ವಿಚಾರ, ಆಶಯ, ನೀತಿನಿಯಮಗಳನ್ನು ಹುಡುಕಿ ತೆಗೆದು ನಮ್ಮ ಸಂವಿಧಾನದಲ್ಲಿ ಆಳವಡಿಸಿದರು. ಇಷ್ಟಾಗಿಯೂ ಅವರು ಸಂವಿಧಾನಕ್ಕೆ ಮೂಲವಾಗಿ ತೆಗೆದುಕೊಂಡದ್ದು ಬ್ರಿಟಿಷ್ ಪಾರ್ಲಿಮೆಂಟ್ 1935ರಲ್ಲಿ ಅನುಮೋದಿಸಿ ಜಾರಿಗೊಳಿಸಿದ್ದ ಗವರ್ನ್​ವೆುಂಟ್ ಆಫ್ ಇಂಡಿಯಾ ಆಕ್ಟ್. ಆ ಕಾಯಿದೆ ಭಾರತವನ್ನು ಸಂಯುಕ್ತ ವ್ಯವಸ್ಥೆಯಾಗಿ ಅಂದರೆ ಕೇಂದ್ರ ಸರ್ಕಾರದ ಜತೆ ಪ್ರಾಂತೀಯ ಸರ್ಕಾರಗಳೂ ಇರುವಂತೆ ರೂಪಿಸಿತ್ತು. ಆ ಪ್ರಕಾರ ರೂಪಿತವಾದ ಗವರ್ನರ್ ಆಡಳಿತ 11 ಪ್ರಾಂತ್ಯಗಳು ಮತ್ತು ಚೀಫ್ ಕಮಿಷನರ್ ಆಡಳಿತದ 4 ಪ್ರಾಂತ್ಯಗಳ ಜತೆ ಸ್ವಾತಂತ್ರ್ಯಾನಂತರ 562 ಸಣ್ಣ ದೊಡ್ಡ ದೇಶೀಯ ಸಂಸ್ಥಾನಗಳೂ ಸೇರಿ ಇಂದಿನ ಭಾರತ ಸೃಷ್ಟಿಯಾಯಿತು.

    ಬ್ರಿಟಿಷ್ ವಸಾಹತುಶಾಹಿ ಆಡಳಿತದಲ್ಲಿ ಪ್ರಾಂತ್ಯಗಳು ಎಂದು ಕರೆಸಿಕೊಳ್ಳುತ್ತಿದ್ದ ರಾಜಕೀಯ ಘಟಕಗಳು ಸ್ವತಂತ್ರ ಭಾರತದಲ್ಲಿ ಸಂವಿಧಾನದ ಪ್ರಕಾರ ರಾಜ್ಯಗಳು ಎಂದು ಕರೆಸಿಕೊಂಡವು. ಸಂವಿಧಾನದ ಮೊದಲ ವಿಧಿಯೇ ಇಂಡಿಯಾ ಅಂದರೆ ಭಾರತ ಒಂದು ರಾಜ್ಯಗಳ ಒಕ್ಕೂಟ ಎಂದು ಹೇಳುತ್ತದೆ. 1935ರ ಗವರ್ನ್​ವೆುಂಟ್ ಆಫ್ ಇಂಡಿಯಾ ಆಕ್ಟ್ ಅನ್ನು ಮೂಲವಾಗಿ ಇಟ್ಟುಕೊಂಡರೂ ಸ್ವತಂತ್ರ ಭಾರತದಲ್ಲಿ ಭಾರತೀಯರ ಅಭ್ಯುದಯಕ್ಕಾಗಿ ಅಗತ್ಯವಾದ ರಾಜಕೀಯ, ಸಾಮಾಜಿಕ ನೀತಿನಿಯಮಗಳು ಜಗತ್ತಿನ ಇತರ ಸಂವಿಧಾನಗಳಿಂದ ಆಯ್ದು ನಮ್ಮ ಸಂವಿಧಾನಕ್ಕೆ ಸೇರಿಸಲ್ಪಟ್ಟವಷ್ಟೆ. ಈ ಅಂಶಗಳು ಸಂವಿಧಾನದ ಪ್ರಮುಖ ಲಕ್ಷಣಗಳಾಗಿ ಬಣ್ಣಿಸಲ್ಪಡುತ್ತವೆ. ನಮ್ಮ ಸಂವಿಧಾನ ಆಳವಡಿಸಿಕೊಂಡ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬ್ರಿಟನ್​ನಿಂದ ತೆಗೆದುಕೊಂಡದ್ದು. ಅಲ್ಲಿನಂತೆ ನಮ್ಮಲ್ಲಿ ಸಂಸತ್ತು, ಅದರ ಭಾಗವಾದ ಪ್ರಧಾನಮಂತ್ರಿ ನೇತೃತ್ವದ ಮಂತ್ರಿಮಂಡಲ ಇವೆ. ಆದರೆ ಬ್ರಿಟಿಷರಿಂದ ತೆಗೆದುಕೊಂಡ ಅಂಶದಲ್ಲಿ ನಾವು ಮಾಡಿಕೊಂಡಿರುವ ಬದಲಾವಣೆ ಎಂದರೆ ಬ್ರಿಟನ್​ನಲ್ಲಿ ರಾಷ್ಟ್ರದ ನಾಯಕ ಅಂದರೆ ಸಾಂವಿಧಾನಿಕ ಪರಿಭಾಷೆಯಲ್ಲಿ ಹೆಡ್ ಆಫ್ ಸ್ಟೇಟ್ ಆಗಿರುವುದು ರಾಜ (ಅಥವಾ ರಾಣಿ). ಆದರೆ ನಮ್ಮಲ್ಲಿ ರಾಷ್ಟ್ರದ ನಾಯಕ ರಾಷ್ಟ್ರಾಧ್ಯಕ್ಷರಾಗಿರುತ್ತಾರೆ. ಈ ರಾಷ್ಟ್ರಾಧ್ಯಕ್ಷರು ಪ್ರಜೆಗಳ ಪ್ರತಿನಿಧಿಗಳಿಂದ ಆಯ್ಕೆಗೊಳ್ಳುವುದರಿಂದ ಅಂದರೆ ಪ್ರಜೆಗಳಿಂದ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ ಜನರಿಂದ ಆಯ್ಕೆಯಾಗುವುದರಿಂದಲೇ ನಮ್ಮ ಭಾರತ ಒಂದು ಗಣರಾಜ್ಯ ಎಂದು ಕರೆಸಿಕೊಳ್ಳುತ್ತದೆ.

    ಸರಳವೂ ಹೌದು, ಕ್ಲಿಷ್ಟವೂ ಹೌದು: ನಮ್ಮ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳ ಮೂಲ ಅಮೆರಿಕಾದ ಸಂವಿಧಾನ. ಹಾಗೆಯೇ ನಮ್ಮ ಸಂವಿಧಾನದಲ್ಲಿರುವ ರಾಜ್ಯ ನಿರ್ದೇಶಕ ತತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆ. ಭಾರತೀಯ ಸಂವಿಧಾನದಲ್ಲಿ ತಿದ್ದುಪಡಿ ತರುವ ವಿಧಾನಗಳು ಬ್ರಿಟನ್​ನಲ್ಲಿರುವಂತೆ ಸರಳವೂ ಆಗಿವೆ, ಅಮೆರಿಕಾದಲ್ಲಿರುವಂತೆ ಕ್ಲಿಷ್ಟವೂ ಆಗಿವೆ. ಈ ಕಾರಣದಿಂದ ನಮ್ಮ ಸಂವಿಧಾನ ಏಕಕಾಲದಲ್ಲಿ ನಮ್ಯ ಹಾಗೂ ಅನಮ್ಯ ಎಂದು ಪರಿಗಣಿಸಲ್ಪಡುತ್ತದೆ. ಕೆಲವು ತಿದ್ದುಪಡಿಗಳನ್ನು ಸಂಸತ್ತಿನಲ್ಲಿ ಸರಳ ಬಹುಮತದಂತಹ ಸುಲಭ ವಿಧಾನದ ಮೂಲಕ ತರಬಹುದಾದರೆ ಮತ್ತೆ ಕೆಲವು ತಿದ್ದುಪಡಿಗಳಿಗೆ ಸಂಸತ್ತಿನಲ್ಲಿ ಸರಳ ಬಹುಮತದ ಜತೆಗೆ ರಾಜ್ಯಗಳಲ್ಲಿ ಅರ್ಧದಷ್ಟರ ವಿಧಾನಮಂಡಲದಲ್ಲಿಯೂ ಸರಳ ಬಹುಮತದ ಅನುಮೋದನೆಯಂತಹ ಕಠಿಣ ವಿಧಾನ ಅಗತ್ಯವಾಗುತ್ತದೆ.

    ನಮ್ಮ ಸಂವಿಧಾನ ಅಧಿಕಾರ ವಿಕೇಂದ್ರೀಕರಣವನ್ನು ಪ್ರತಿಪಾದಿಸುತ್ತದೆ. ಅದರ ಪ್ರಕಾರ ಶಾಸನ ರಚನೆ ಜನಪ್ರತಿನಿಧಿಗಳಿಂದ ರಚಿತವಾದ ಸಂಸತ್ತಿನ ಹಾಗೂ ರಾಜ್ಯ ವಿಧಾನಮಂಡಲದ ಅಂದರೆ ಶಾಸಕಾಂಗದ ಅಧಿಕಾರವಾದರೆ ಶಾಸನಗಳನ್ನು ಕಾರ್ಯರೂಪಕ್ಕಿಳಿಸುವುದು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ನೇತೃತ್ವದ ಮಂತ್ರಿಮಂಡಲ ಅಂದರೆ ಕಾರ್ಯಾಂಗದ ಜವಾಬ್ದಾರಿಯಾಗಿರುತ್ತದೆ. ತಂತಮ್ಮ ಜವಾಬ್ದಾರಿಗಳನ್ನು ಶಾಸಕಾಂಗ ಮತ್ತು ಕಾರ್ಯಾಂಗ ಸಮರ್ಪಕವಾಗಿ, ಸಂವಿಧಾನಕ್ಕೆ ಅಪಚಾರವಾಗದಂತೆ ನಿರ್ವಹಿಸುತ್ತಿವೆಯೇ ಎಂದು ವಿಮಶಿಸಿ ತೀರ್ವನಿಸುವುದು ನ್ಯಾಯಾಂಗದ ಜವಾಬ್ದಾರಿಯಾಗಿರುತ್ತದೆ.

    ಸಂಸತ್ತಿನ ವಿವೇಕ: ನಮ್ಮ ಸಂವಿಧಾನದ ಬಗ್ಗೆ ಮಾತಾಡುವಾಗ ಅದಕ್ಕೆ ಹಲವು ಒಳ್ಳೆಯ ಅಂಶಗಳನ್ನು ನೀಡಿದ ಜಗತ್ತಿನ ಎರಡು ಪ್ರಮುಖ ಸಂವಿಧಾನಗಳ ಬಗ್ಗೆಯೂ ಮಾತಾಡುವುದು ಉಚಿತವಾಗುತ್ತದೆ. ಮೊದಲಿಗೆ ಬ್ರಿಟಿಷ್ ಸಂವಿಧಾನವನ್ನು ತೆಗೆದುಕೊಳ್ಳೋಣ. ಬ್ರಿಟಿಷ್ ಸಂವಿಧಾನಕ್ಕೆ 800 ವರ್ಷಗಳ ಇತಿಹಾಸವಿದೆ. 1215ರ ಮ್ಯಾಗ್ನಾ ಕಾರ್ಟಾದಿಂದ ಹಂತಹಂತವಾಗಿ ವಿಕಾಸಗೊಳ್ಳುತ್ತಾ ಬಂದ ಬ್ರಿಟಿಷ್ ಸಂವಿಧಾನ ಪ್ರಜಾಪ್ರಭುತ್ವದ ಜತೆಗೆ ರಾಜಸತ್ತೆಯನ್ನೂ ಉಳಿಸಿಕೊಂಡಿದೆ. ಹೀಗಾಗಿ ಬ್ರಿಟನ್​ನಲ್ಲಿ ಏಕಕಾಲದಲ್ಲಿ ಮೂರು ವ್ಯವಸ್ಥೆಗಳು ಒಟ್ಟಿಗೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗುತ್ತದೆ. ರಾಜ/ರಾಣಿ ಪ್ರತಿನಿಧಿಸುವ ರಾಜಸತ್ತೆ ಮತ್ತು ಶ್ರೀಮಂತಸತ್ತೆಯ ಪ್ರತೀಕವಾದ ಹೌಸ್ ಆಫ್ ಲಾರ್ಡ್್ಸ ಜತೆಗೇ ಅಪ್ಪಟ ಪ್ರಜಾಪ್ರಭುತ್ವದ ಪ್ರತೀಕವಾದ ಜನಪ್ರತಿನಿಧಿಗಳಿಂದ ಕೂಡಿದ ಹೌಸ್ ಆಫ್ ಕಾಮನ್ಸ್ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದು ಬ್ರಿಟಿಷ್ ಸಂವಿಧಾನ ವ್ಯವಸ್ಥೆಯ ವೈಶಿಷ್ಟ್ಯ. ಆದರೆ ಯಾವುದೇ ವಿಷಯದಲ್ಲಿ ಸಂಸತ್ತಿನ ತೀರ್ವನವೇ ಅಂತಿಮವಾಗಿದ್ದು ರಾಷ್ಟ್ರದ ನಾಯಕರಾದ ರಾಜ ಅಥವಾ ರಾಣಿ ಅದಕ್ಕೆ ಅಂಗೀಕಾರ ನೀಡಲೇಬೇಕಾಗಿರುತ್ತದೆ. ಈ ಬಗೆಯಾಗಿ, ದೈನಂದಿನ ಆಡಳಿತದಲ್ಲಿ ಬ್ರಿಟಿಷ್ ಸಂವಿಧಾನ ಸಂಸತ್ತಿಗೇ, ಮುಖ್ಯವಾಗಿ ಜನಪ್ರತಿನಿಧಿಗಳಿರುವ ಹೌಸ್ ಆಫ್ ಕಾಮನ್ಸ್​ಗೇ ಅಗ್ರಗಣ್ಯ ಸ್ಥಾನ ನೀಡುತ್ತದೆ. ಹೀಗೆ, ದೇಶದ ಆಡಳಿತ ಹೀಗೇ ನಡೆಯಬೇಕೆಂಬ ನಿಯಮಾವಳಿಗಳಿರುವ ಲಿಖಿತ ದಸ್ತಾವೇಜು ಇಲ್ಲದೆ, ಕಾಲಕಾಲಕ್ಕೆ ಅಗತ್ಯವಾದ ಕಾಯಿದೆ-ಕಾನೂನುಗಳನ್ನು ಸಂಸತ್ತೇ ರಚಿಸುವುದರಿಂದ ಬ್ರಿಟನ್​ನಲ್ಲಿ ಲಿಖಿತ ಸಂವಿಧಾನವೇ ಇಲ್ಲ. ಲಿಖಿತ ರೂಪದಲ್ಲಿ ಸಿಗುವುದು 800 ವರ್ಷಗಳ ಹಿಂದಿನ ಮ್ಯಾಗ್ನಾ ಕಾರ್ಟಾದಿಂದ ಹಿಡಿದು 1949ರ ಸಂಸದೀಯ ಕಾಯಿದೆಯವರೆಗೆ ಸಂಸತ್ತು ಮತ್ತು ರಾಜ/ರಾಣಿಯ ನಡುವೆ ಆದ ಒಪ್ಪಂದಗಳು ಮತ್ತು ಸಂಸತ್ತು ಆಗಾಗ ಜಾರಿಗೊಳಿಸಿ ಲಿಖಿತವಾಗಿ ದಾಖಲಿಸಿಟ್ಟ ಕೆಲವು ದಸ್ತಾವೇಜುಗಳಷ್ಟೇ. ರಾಷ್ಟ್ರದ ಆಡಳಿತ ನಡೆಯುವುದು ರಾಷ್ಟ್ರ ಇದುವರೆಗೆ ರೂಢಿಸಿಕೊಂಡು ಬಂದಿರುವ ರಾಜಕೀಯ ಸಂಪ್ರದಾಯಗಳ ಆಧಾರದ ಮೇಲಷ್ಟೇ. ಹಿಂದಿನ ಯಾವುದೇ ಸಂಪ್ರದಾಯ ಇಂದಿನ ಕಾಲಮಾನಕ್ಕೆ ಹೊಂದುವುದಿಲ್ಲವೆಂದು ಸಂಸತ್ತು ತೀರ್ಮಾನಿಸಿದರೆ ಅದನ್ನು ಸಾರಾಸಗಟಾಗಿ ಬದಲಾಯಿಸಿ ಹೊಚ್ಚಹೊಸ ರಾಜಕೀಯ ಸಂಪ್ರದಾಯವೊಂದನ್ನು ಸೃಷ್ಟಿಸಬಹುದು! ಎಲ್ಲವೂ ನಿರ್ಧಾರವಾಗುವುದು ಸಂಸತ್ತಿನ ವಿವೇಕದ ಮೇಲೆ. ಹೀಗಾಗಿಯೇ ಬ್ರಿಟಿಷ್ ಸಂವಿಧಾನ ಅಂತೇನೂ ಇಲ್ಲ ಎಂದು ಡಿ ಟಾಕ್​ವಿಲ್ ಹೇಳಿದ್ದು.

    ಅತಿ ಪುಟ್ಟ ಸಂವಿಧಾನ: ಬ್ರಿಟನ್​ನೊಂದಿಗೆ ಹೋರಾಡಿ ಸ್ವಾತಂತ್ರ್ಯ ಗಳಿಸಿಕೊಂಡ ಅಮೆರಿಕಾ ರಚಿಸಿಕೊಂಡ ಸಂವಿಧಾನ ವಿಶ್ವದ ಅತ್ಯಂತ ಪುಟ್ಟ ಸಂವಿಧಾನ. ಅದರಲ್ಲಿರುವುದು ಏಳೇ ಏಳು ವಿಧಿಗಳು. ಜುಲೈ 4, 1776ರಲ್ಲಿ ಅಮೆರಿಕನ್ನರು ಏಕಪಕ್ಷೀಯವಾಗಿ ಸ್ವಾತಂತ್ರ್ಯ ಘೊಷಿಸಿಕೊಂಡು ಬ್ರಿಟನ್ ಜತೆ ಯುದ್ಧಕ್ಕೆ ಇಳಿಯುವುದರೊಂದಿಗೆ ಜಾನ್ ಡಿಕನ್​ಸನ್​ನಿಂದ ಆರಂಭವಾದ ಸಂವಿಧಾನ ರಚನೆಯಲ್ಲಿ ಮುಂದೆ ಅತಿಮುಖ್ಯ ಪಾತ್ರ ವಹಿಸಿದ್ದು ಜೇಮ್್ಸ ಮ್ಯಾಡಿಸನ್. ಆತನಿಂದ ರಚಿತವಾದ ಈ ಪುಟ್ಟ ಸಂವಿಧಾನ ಮಾರ್ಚ್ 7, 1789ರಂದು ಜಾರಿಗೆ ಬಂತು. ರಾಷ್ಟ್ರಾಧ್ಯಕ್ಷ ಅಂದರೆ ಕಾರ್ಯಾಂಗ ಜನತೆಯಿಂದ ಆಯ್ಕೆಗೊಳ್ಳುವುದರಿಂದ ಅಮೆರಿಕಾ ಒಂದು ಗಣರಾಜ್ಯ ಎಂದು ಕರೆಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ನಮ್ಮದು ಜಗತ್ತಿನ ಅತಿದೊಡ್ಡ ಗಣರಾಜ್ಯವೆನಿಸಿಕೊಂಡರೆ 231 ವರ್ಷಗಳನ್ನು ಪೂರೈಸುತ್ತಿರುವ ಅಮೆರಿಕಾ ಜಗತ್ತಿನ ಅತಿ ಹಳೆಯ ಗಣರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ರಿಟನ್ ಮತ್ತು ಅದನ್ನನುಸರಿಸಿದ ನಮ್ಮಲ್ಲಿ ಸಂಸದೀಯ ಪ್ರಜಾಪ್ರಭುತ್ವವಿದ್ದರೆ ಅಮೆರಿಕಾದಲ್ಲಿ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವವಿದೆ.

    ಅಮೆರಿಕಾದ ಸಂವಿಧಾನಕ್ಕೆ ತಿದ್ದುಪಡಿ ತರುವುದು ಅತ್ಯಂತ ಪ್ರಯಾಸದ ಪ್ರಕ್ರಿಯೆ. ಯಾವುದೇ ತಿದ್ದುಪಡಿಗೆ ಸಂಸತ್ ಅಂದರೆ ಕಾಂಗ್ರೆಸ್​ನ ಮೂರನೇ ಎರಡರಷ್ಟು ಸದಸ್ಯರು ಅಥವಾ ಮೂರನೇ ಎರಡರಷ್ಟು ರಾಜ್ಯಗಳು ಬೇಡಿಕೆ ಸಲ್ಲಿಸಬೇಕಾಗುತ್ತದೆ. ಸಮಾವೇಶದಲ್ಲಿ ತೀರ್ವನವಾದ ತಿದ್ದುಪಡಿ ಮಾನ್ಯತೆ ಪಡೆದುಕೊಳ್ಳಬೇಕಾದರೆ ಕಾಂಗ್ರೆಸ್​ನ ಮುಕ್ಕಾಲುಪಾಲು ಸದಸ್ಯರು ಮತ್ತು ಮುಕ್ಕಾಲುಪಾಲು ರಾಜ್ಯಗಳು ಸಮ್ಮತಿಸಬೇಕಾಗುತ್ತದೆ. ತಿದ್ದುಪಡಿ ಪ್ರಕ್ರಿಯೆ ಇಷ್ಟು ಕಠಿಣವಾಗಿರುವುದರಿಂದ ಕಳೆದ 231 ವರ್ಷಗಳಲ್ಲಿ ಸಂವಿಧಾನಕ್ಕೆ ಆಗಿರುವುದು ಕೇವಲ 27 ತಿದ್ದುಪಡಿಗಳು!

    ಪಾಕಿಸ್ತಾನ ಸಂವಿಧಾನದ ಏಳುಬೀಳು

    ನಮ್ಮ ಜತೆಗೇ ಸ್ವಾತಂತ್ರ್ಯ ಗಳಿಸಿಕೊಂಡ ಪಾಕಿಸ್ತಾನದಲ್ಲಿ ಸಾಂವಿಧಾನಿಕ ಬೆಳವಣಿಗೆ ಹೇಗಾಗಿದೆಯೆಂದು ನೋಡೋಣ. ಆ ದೇಶ ತನ್ನ ಸಂವಿಧಾನ ಗಳಿಸಿಕೊಂಡದ್ದು 1954ರಲ್ಲಿ. ಅಧ್ಯಕ್ಷ ಇಸ್ಕಂದರ್ ಮಿರ್ಜಾ ನೀಡಿದ ಈ ಸಂವಿಧಾನ ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರ ಎಂದು ಘೊಷಿಸಿತು ಮತ್ತು ಅಧ್ಯಕ್ಷನ ಅಧಿಕಾರಕ್ಕೆ ಹೆಚ್ಚು ಒತ್ತು ನೀಡಿತ್ತು. ಅದನ್ನು ತುಸು ಮಾರ್ಪಡಿಸಿ, ತನ್ನ ಸೇನಾ ಸರ್ವಾಧಿಕಾರಕ್ಕೆ ಅವಕಾಶ ನೀಡುವ ಅಂಶಗಳನ್ನು ಸೇರಿಸಿ 1962ರಲ್ಲಿ ಅಯೂಬ್ ಖಾನ್ ಹೊಸ ಸಂವಿಧಾನವನ್ನು ರಚಿಸಿ ಜಾರಿಗೊಳಿಸಿದ. ಅದನ್ನು ಕಿತ್ತೆಸದ ಝುುಲ್ಪಿಕರ್ ಆಲಿ ಭುಟ್ಟೋ 1973ರಲ್ಲಿ ಸಂಸದೀಯ ಪ್ರಜಾಪ್ರಭುತ್ವವನ್ನು ಮಾನ್ಯ ಮಾಡುವ ಹೊಸ ಸಂವಿಧಾನವೊಂದನ್ನು ರಚಿಸಿ ಜಾರಿಗೊಳಿಸಿದ್ದಷ್ಟೇ ಅಲ್ಲ, ಅದನ್ನು ರದ್ದುಪಡಿಸುವ ಯಾವುದೇ ಕೃತ್ಯ ದೇಶದ್ರೋಹವಾಗುತ್ತದೆ ಎಂಬ ಕಲಮನ್ನು ಆ ಸಂವಿಧಾನದಲ್ಲೇ ಸೇರಿಸಿ ಮುಂದಿನ ಎಲ್ಲ ಸರ್ವಾಧಿಕಾರಿಗಳ ಕೈಗಳನ್ನು ಕಟ್ಟಿಹಾಕಿಬಿಟ್ಟ. ಜಿಯಾ-ಉಲ್-ಹಖ್ ಆಗಲೀ, ಪರ್ವೇಜ್ ಮುಷರ್ರಫ್ ಆಗಲೀ ತಮಗನುಕೂಲವೆನಿಸಿದ ತಿದ್ದುಪಡಿಗಳನ್ನು ಆ ಸಂವಿಧಾನಕ್ಕೆ ಮಾಡಿದರೇ ವಿನಃ ಅದನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಲಿಲ್ಲ. ಅವರ ಅಧಿಕಾರಾವಧಿಯ ನಂತರ ಬಂದ ಚುನಾಯಿತ ಸರಕಾರಗಳು ಆ ಸರ್ವಾಧಿಕಾರಿಗಳು ಮಾಡಿದ್ದ ಅಧ್ಯಕ್ಷೀಯ ಸತ್ತೆಗೆ ಒತ್ತುನೀಡುವ ತಿದ್ದುಪಡಿಗಳನ್ನೆಲ್ಲಾ ಹೊಸ ತಿದ್ದುಪಡಿಗಳ ಮೂಲಕ ರದ್ದುಪಡಿಸಿ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮತ್ತೆಮತ್ತೆ ಜೀವ ನೀಡಿದವು. ಪರಿಣಾಮವಾಗಿ ಜಿಯಾ ನಿಧನಾನಂತರ ಬೆನಝಿರ್ ಭುಟ್ಟೋ ಮತ್ತು ನವಾಜ್ ಶರೀಫ್ ಜನತೆಯಿಂದ ಮತ್ತೆಮತ್ತೆ ಚುನಾಯಿತರಾಗಿ ಆಡಳಿತ ನಡೆಸಿದರು. ನಂತರ ಮುಷರ್ರಫ್ ಮಾಡಿದ ತಿದ್ದುಪಡಿಗಳನ್ನು ಹೊಸ ಚುನಾಯಿತ ಸಂಸತ್ತು 2010ರಲ್ಲಿ 18ನೇ ತಿದ್ದುಪಡಿಯ ಮೂಲಕ ತೊಳೆದುಹಾಕಿ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮರುಜೀವ ನೀಡಿದೆ. ಪರಿಣಾಮವಾಗಿ ಪಾಕಿಸ್ತಾನ ಕಳೆದೊಂದು ದಶಕದಿಂದಲೂ ಸಂಸದೀಯ ಪ್ರಜಾಪ್ರಭುತ್ವವಾಗಿ ಮುಂದುವರಿಯುತ್ತಿದೆ.

    |ಪ್ರೇಮಶೇಖರ

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts