More

    ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿ ಆಗಿ ಇಂದು ನಿತೀಶ್ ಪ್ರಮಾಣ

    ಪಟನಾ: ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸೋಮವಾರ ಸಂಜೆ 4.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಸತತ ನಾಲ್ಕನೇ ಅವಧಿಗೆ ಸಿಎಂ ಹುದ್ದೆ ಅಲಂಕರಿಸಲಿದ್ದಾರೆ ಮತ್ತು ಸಿಎಂ ಆಗಿ ಇದು ಅವರ ಆರನೇ ಪ್ರಮಾಣವಚನ ಆಗಲಿದೆ. ಉತ್ತರ ಪ್ರದೇಶದ ಮಾದರಿಯಂತೆ ಬಿಹಾರದಲ್ಲಿ ಎರಡು ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಲಾಗುತ್ತಿದ್ದು, ಕತಿಹಾರ್ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಗೆದ್ದಿರುವ ಬಿಜೆಪಿಯ ತಾರಕಿಶೋರ್ ಪ್ರಸಾದ್ ಹಾಗೂ ನಾಲ್ಕನೇ ಬಾರಿಗೆ ಶಾಸಕಿಯಾಗಿರುವ ಬಿಹಾರ ಬಿಜೆಪಿ ಘಟಕದ ಉಪಾಧ್ಯಕ್ಷೆಯೂ ಆದ ಶಾಸಕಿ ರೇಣು ದೇವಿ ಅವರನ್ನು ಆಯ್ಕೆ ಮಾಡಲಾಗಿದೆ. ಹಿರಿಯ ನಾಯಕ, ಮೂರು ಅವಧಿಗೆ ಉಪಮುಖ್ಯಮಂತ್ರಿಯಾಗಿದ್ದ ಸುಶೀಲ್ ಕುಮಾರ್ ಮೋದಿ ಅವರನ್ನು ಕೈಬಿಡಲಾಗಿದೆ.

    ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್​ಡಿಎ)ದ ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್​ರನ್ನು ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಂತರ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಫಾಗು ಚೌಹಾಣ್​ರನ್ನು ಭೇಟಿಯಾಗಿ ಎನ್​ಡಿಎ ಅಂಗಪಕ್ಷಗಳ ಬೆಂಬಲ ಪತ್ರವನ್ನು ಹಸ್ತಾಂತರಿಸಿ, ಸರ್ಕಾರ ರಚಿಸುವ ಹಕ್ಕನ್ನು ಮಂಡಿಸಿದರು. ಎನ್​ಡಿಎ ಸಭೆಗೂ ಮುನ್ನ ಜೆಡಿಯು ಶಾಸಕಾಂಗ ಪಕ್ಷದ ಸಭೆಯಲ್ಲೂ ನಿತೀಶ್ ನಾಯಕರಾಗಿ ಆಯ್ಕೆಯಾದರು.

    ಚುನಾವಣೆಯಲ್ಲಿ ಜೆಡಿಯು ಕಡಿಮೆ ಸ್ಥಾನ ಗಳಿಸಿರುವುದರಿಂದ ನಿತೀಶ್ ಮತ್ತೆ ಸಿಎಂ ಆಗಲು ಒಪ್ಪಿರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಇನ್ನಿತರ ಬಿಜೆಪಿ ನಾಯಕರು ಅವರ ಮನವೊಲಿಸಿದ್ದರು. ಯಾವುದೇ ಹಿಂಜರಿಕೆ ಇಲ್ಲದೆ ಸಿಎಂ ಆಗಿ ಎಂದಿದ್ದರು. ಚುನಾವಣೆಯಲ್ಲಿ ಬಿಜೆಪಿ 74, ಜೆಡಿಯು 43 ಸ್ಥಾನಗಳನ್ನು ಗೆದ್ದಿದೆ. ಎಚ್​ಎಎಂ(ಎಸ್) ಮತ್ತು ವಿಐಪಿ ಪಕ್ಷಗಳು ತಲಾ ಎಂಟು ಸ್ಥಾನಗಳಿಸಿದ್ದು, ಎನ್​ಡಿಎ 125 ಸಂಖ್ಯಾಬಲದ ಮೂಲಕ ಸರಳ ಬಹುಮತಕ್ಕಿಂತ ಮೂರು ಸ್ಥಾನವನ್ನು ಹೆಚ್ಚಿಗೆ ಗಳಿಸಿವೆೆ. ಆರ್​ಜೆಡಿ 75, ಕಾಂಗ್ರೆಸ್ 19, ಎಡಪಕ್ಷಗಳು 16 ಸ್ಥಾನಗಳಿಸಿ ಮಹಾಘಟಬಂಧನ 110 ಸ್ಥಾನಗಳನ್ನು ಗಳಿಸಿದೆ. ಬಿಎಸ್​ಪಿ, ಎಲ್​ಜೆಪಿ, ಎಐಎಂಐಎಂ, ಪಕ್ಷೇತರ ಸೇರಿ 8 ಮಂದಿ ಗೆದ್ದಿದ್ದಾರೆ.

    ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿ ಆಗಿ ಇಂದು ನಿತೀಶ್ ಪ್ರಮಾಣ

    ಇಬ್ಬರು ಉಪ ಮುಖ್ಯಮಂತ್ರಿ

    ಆರ್​ಎಸ್​ಎಸ್ ಮತ್ತು ಎಬಿವಿಪಿ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದ ತಾರಕಿಶೋರ್ ಪ್ರಸಾದ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಆಗಿದ್ದಾರೆ. ಅತ್ಯಂತ ಹಿಂದುಳಿದ ಜಾತಿ ನೋನಿಯಾಗೆ ಸೇರಿರುವ ರೇಣು ದೇವಿ, ಬೆತ್ತಿಯಾದಿಂದ ನಾಲ್ಕನೇ ಬಾರಿಗೆ ಚುನಾಯಿತರಾಗಿದ್ದಾರೆ. ಬಿಜೆಪಿ ಶಾಸಕರ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ರಕ್ಷಣಾ ಸಚಿವ ಮತ್ತು ಬಿಹಾರದ ಎನ್​ಡಿಎ ವೀಕ್ಷಕ ರಾಜನಾಥ ಸಿಂಗ್ ಕೂಡ ಸುಶೀಲ್ ಮತ್ತೆ ಡಿಸಿಎಂ ಆಗುವ ಕುರಿತು ಮಾರ್ವಿುಕವಾಗಿ ಉತ್ತರಿಸಿದರೆ ಹೊರತು ಖಚಿತವಾಗಿ ಹೇಳಿರಲಿಲ್ಲ. ‘ಈ ಬಗ್ಗೆ ಸೂಕ್ತ ಸಮಯದಲ್ಲಿ ನಿಮಗೆ (ಮಾಧ್ಯಮ) ಗೊತ್ತಾಗಲಿದೆ’ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದರು. ಸಭೆಯಲ್ಲಿ ಬಿಹಾರದಲ್ಲಿ ಪಕ್ಷದ ಉಸ್ತುವಾರಿಯಾದ ಭೂಪೇಂದ್ರ ಯಾದವ್, ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಇದ್ದರು.

    ಸುಶೀಲ್ ಕೇಂದ್ರ ಸಂಪುಟಕ್ಕೆ?: ಬಿಹಾರದ ಉಪಮುಖ್ಯ ಮಂತ್ರಿಯಾಗಿದ್ದ ಸುಶೀಲ್ ಕುಮಾರ್ ಮೋದಿಯನ್ನು ಕೇಂದ್ರ ರಾಜಕಾರಣಕ್ಕೆ ಕರೆಯಿಸಿಕೊಳ್ಳಲು ಬಿಜೆಪಿ ವರಿಷ್ಠರು ಬಯಸಿದ್ದು, ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಪಕ್ಷದ ಕಾರ್ಯಕರ್ತನ ಹುದ್ದೆಯಿಂದ ನನ್ನನ್ನು ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರ ನನಗೆ 40 ವರ್ಷದ ರಾಜಕೀಯ ಬದುಕನ್ನು ನೀಡಿದೆ. ನನಗೆ ವಹಿಸಿದ ಹೊಣೆಯನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದೇನೆ. ಮುಂದೆ ಪಕ್ಷ ವಹಿಸುವ ಜವಾಬ್ದಾರಿಯನ್ನೂ ಇದೇ ರೀತಿ ನಿರ್ವಹಿಸುವೆ

    | ಸುಶೀಲ್ ಕುಮಾರ್ ಮೋದಿ ಬಿಹಾರದ ಬಿಜೆಪಿ ನಾಯಕ

    ಜನರು ಅವರನ್ನು (ನಿತೀಶ್ ಕುಮಾರ್) ತಿರಸ್ಕರಿಸಿದ್ದಾರೆ. 43 ಸೀಟುಗಳನ್ನು ಹೊಂದಿರುವ ಮತ್ತು ಈ ಚುನಾವಣೆಯಲ್ಲಿ 3ನೇ ಸ್ಥಾನ ಪಡೆದ ಜೆಡಿಯು ಹೇಗೆ ಸಿಎಂ ಸ್ಥಾನ ಪಡೆಯಲು ಸಾಧ್ಯ? ರಾಜ್ಯಕ್ಕೆ ಬೇರೆ ಪರ್ಯಾಯ ದೊರೆಯಲಿದೆ. ಇದಕ್ಕೆ ವಾರ, ತಿಂಗಳು ಹಿಡಿಯಬಹುದು.

    | ಮನೋಜ್ ಝಾ ಆರ್​ಜೆಡಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts