More

    ವೈಭವದ ನಾಡಹಬ್ಬಕ್ಕೆ ಇಂದು ರಾಷ್ಟ್ರಪತಿ ಚಾಲನೆ: ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟಿಸಲಿರುವ ದ್ರೌಪದಿ ಮುರ್ಮು

    ಮೈಸೂರು: ಸಾಂಸ್ಕೃತಿಕ ಸಿರಿ ಮತ್ತು ಧಾರ್ವಿುಕ ಐಸಿರಿಯ ಸಮ್ಮಿಲನವಾದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವೊಂದು ಸುಂದರ ದೃಶ್ಯಕಾವ್ಯ. ವರ್ಷಕ್ಕೊಮ್ಮೆ ಬರುವ ಈ ರಮಣೀಯ ಘಳಿಗೆಗೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೋವಿಡ್ ಸಂಕ್ರಮಣದಿಂದ ಕಳೆದ 2 ವರ್ಷ ಸರಳವಾಗಿ ನಡೆದಿದ್ದ ಉತ್ಸವದಲ್ಲಿ ಈ ಬಾರಿ ಸಡಗರ ಮೇಳೈಸಲಿದೆ. ಸೆ. 26ರಂದು ನಾಡಹಬ್ಬದ ಅಂಕದ ಪರದೆ ಗರಿ ಬಿಚ್ಚಲಿದೆ.

    ಮೊದಲ ಬಾರಿಗೆ ರಾಷ್ಟ್ರಪತಿಯಿಂದ ಚಾಲನೆ: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ದಸರೆಗೆ ಸೆ.26ರಂದು ಬೆಳಗ್ಗೆ 9.45ರಿಂದ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿ ದ್ರೌಪದಿ ಮುಮು ವಿಧ್ಯುಕ್ತವಾಗಿ ಚಾಲನೆ ನೀಡಿ ಮುನ್ನುಡಿ ಬರೆಯಲಿದ್ದಾರೆ. ದೇಶದ ಪ್ರಥಮ ಪ್ರಜೆಯಿಂದ ಉದ್ಘಾಟನೆ ಆಗುತ್ತಿರುವುದು ಇದೇ ಮೊದಲು. ಬಳಿಕ ಸಾಲು ಸಾಲು ದಸರಾ ಚಟುವಟಿಕೆಗಳು ಅನಾವರಣಗೊಳ್ಳಲಿದ್ದು, 10 ದಿನಗಳ ಕಾಲ ಹಬ್ಬದ ನವೋಲ್ಲಾಸ ಕಳೆಗಟ್ಟಲಿದೆ.

    ಸಾಂಸ್ಕೃತಿಕ ಕಾರ್ಯಕ್ರಮ ಹಿರಿಮೆ: ದಸರಾದ ವೈಶಿಷ್ಟ್ಯಾದ ಸಾಂಸ್ಕೃತಿಕ ಕಾರ್ಯಕ್ರಮ ಅರಮನೆ ಅಂಗಳದಲ್ಲಿ ನಿತ್ಯ ಸಂಜೆ ಗರಿಗೆದರಲಿದೆ. ಕಲಾವಿದರು 290 ವಿವಿಧ ಬಗೆಯ ಕಾರ್ಯಕ್ರಮಗಳನ್ನು ಉಣಬಡಿಸಲಿದ್ದಾರೆ. ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ, ಕಿರುರಂಗಮಂದಿರ, ಚಿಕ್ಕಗಡಿಯಾರ ಹಾಗೂ ಪುರಭವನ ವೇದಿಕೆಯಲ್ಲೂ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿವೆ. ದೇಸಿ ಕಲಾಸಂಸ್ಕೃತಿ ನೋಡಲು ಸಿಗಲಿದೆ.

    ಯುವ ದಸರಾದಲ್ಲಿ ಮಂಗ್ಲಿ ಮಿಂಚು: ಯುವ ಮನಸ್ಸುಗಳನ್ನು ಹುಚ್ಚೆದ್ದು ಕುಣಿಸುವ ‘ಯುವ ದಸರಾ’ ಸೆ.27ರಿಂದ ಏಳು ದಿನಗಳ ಕಾಲ ವರ್ಣರಂಜಿತವಾಗಿ ನಡೆಯಲಿದೆ. ತೆಲುಗಿನ ಜನಪ್ರಿಯ ಗಾಯಕಿ ಮಂಗ್ಲಿ, ಬಾಲಿವುಡ್ ಗಾಯಕರಾದ ಕನ್ನಿಕಾ ಕಪೂರ್, ಅಮಿತ್ ತ್ರಿವೇದಿ ಮತ್ತು ಸುನಿಧಿ ಚೌಹಾಣ್ ಸಂಗೀತದ ಧೂಳೆಬ್ಬಿಸಲಿದ್ದಾರೆ. ಗಾಯಕ ರಾದ ರಘು ದೀಕ್ಷಿತ್, ಡಾ.ಶಮಿತಾ ಮಲ್ನಾಡ್ ಸಹ ಮೋಡಿ ಮಾಡಲಿದ್ದಾರೆ.

    ಕುಸ್ತಿಗೆ ‘ಸಾಕ್ಷಿ’: ಕುಸ್ತಿ ಕಾಳಗಕ್ಕೆ ಈ ಬಾರಿ ಖ್ಯಾತ ಕುಸ್ತಿಪಟು ಸಾಕ್ಷಿ ಮಲ್ಲಿಕ್ ವಿಶೇಷ ಆಹ್ವಾನಿತರಾಗಿದ್ದು, ಪಂಜಕುಸ್ತಿ ಟೂರ್ನಿಯೂ ಇದೆ.

    ಬಿಗಿ ಭದ್ರತೆ: ದಸರೆಗೆ ಖಾಕಿ ಸರ್ಪಗಾವಲು ಹಾಕಲಾಗಿದೆ. 5,485 ಪೊಲೀಸರನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿದೆ. ಜತೆಗೆ, ಸಿಸಿಟಿವಿ ಕ್ಯಾಮರಾ, ಡ್ರೋನ್ ಕ್ಯಾಮರಾ, ಬಾಡಿ ವೋರ್ನ್ ಕ್ಯಾಮರಾ ಮೂಲಕವೂ ಕಣ್ಗಾವಲು ಇಡಲಾಗಿದೆ.

    ದಸರೆಯಲ್ಲೂ ಅಪ್ಪು ಜೀವಂತ: ಪುನೀತ್ ರಾಜ್​ಕುಮಾರ್​ಗೆ ದಸರೆಯಲ್ಲಿ ವಿಶೇಷ ನಮನ ಸಲ್ಲಿಸಲಾಗುತ್ತಿದೆ. ಚಲನಚಿತ್ರೋತ್ಸವದಲ್ಲೂ ‘ಅಪ್ಪು ದಿನ’ ಆಚರಿಸಲಾಗುತ್ತಿದೆ. ಅವರ ಆರು ಸಿನಿಮಾಗಳನ್ನು ತೋರಿಸಲಾಗುತ್ತಿದೆ. ದೀಪಾಲಂಕಾರದಲ್ಲಿ ಪವರ್​ಸ್ಟಾರ್​ಗೆ ಬೆಳಕಿನ ರೂಪಕ ನೀಡಿದ್ದರೆ, ಫಲಪುಷ್ಪ ಪ್ರದರ್ಶನದಲ್ಲೂ ‘ಯುವರತ್ನ’ನಿಗೆ ಹೂವಿನ ಸಿಂಗಾರ ಮಾಡಲಾಗಿದೆ.

    ಅರಮನೆಯಲ್ಲೂ ಸಡಗರ: ಖಾಸಗಿ ದಸರಾಕ್ಕೂ ಅರಮನೆ ಸಿದ್ಧವಾಗಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ 9ನೇ ಬಾರಿಗೆ ಖಾಸಗಿ ದರ್ಬಾರ್ ಮುನ್ನಡೆಸುವರು. ಆಳರಸರ ಗತಕಾಲದ ವೈಭವವೂ ಗರಿಗೆದರಲಿದೆ.

    ರಾಷ್ಟ್ರಪತಿ ಮುರ್ಮು ರಾಜ್ಯಕ್ಕೆ ಮೊದಲ ಭೇಟಿ

    ಬೆಂಗಳೂರು: ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದ್ರೌಪದಿ ಮುಮು ಕರ್ನಾಟಕಕ್ಕೆ ಮೊದಲ ಬಾರಿಗೆ ಆಗಮಿಸು ತ್ತಿದ್ದು, ದೇಶದ ಮೊದಲ ರಾಜ್ಯವೂ ಹೌದು. ಚಾಮುಂಡಿಬೆಟ್ಟದಲ್ಲಿ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಪೂಜೆ ಸಲ್ಲಿಸಿದ ನಂತರ ನಾಡಹಬ್ಬ ದಸರಾ ಉದ್ಘಾಟಿಸಲಿದ್ದಾರೆ. ಮೂರು ದಿನ (ಸೆ.26 ರಿಂದ 28)ಗಳ ರಾಜ್ಯದಲ್ಲೇ ಇರಲಿದ್ದು, ಮೈಸೂರಿನ ಕಾರ್ಯಕ್ರಮದ ನಂತರ ನೇರವಾಗಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಗರದ ದೇಶಪಾಂಡೆ ನಗರ ಕೆಜಿಎ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪೌರಸನ್ಮಾನ ಸ್ವೀಕರಿಸುವರು.

    ವೈಭವದ ನಾಡಹಬ್ಬಕ್ಕೆ ಇಂದು ರಾಷ್ಟ್ರಪತಿ ಚಾಲನೆ: ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟಿಸಲಿರುವ ದ್ರೌಪದಿ ಮುರ್ಮು
    ದಸರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ದೊರೆಯಲಿರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಭಾನುವಾರ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಸಜ್ಜುಗೊಳಿಸಲಾಯಿತು. ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಇದ್ದಾರೆ.

    ನಂತರ ಧಾರವಾಡದಲ್ಲಿ ಹೊಸದಾಗಿ ನಿರ್ವಿುತ ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ ಕ್ಯಾಂಪಸ್ ಲೋಕಾರ್ಪಣೆ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಎಚ್​ಎಎಲ್​ನಲ್ಲಿ ಸಂಯೋಜಿತ ಕ್ರಯೋಜೆನಿಕ್ ಇಂಜಿನ್ ತಯಾರಿಕಾ ಸೌಲಭ್ಯ ಚಾಲನೆ ನೀಡಲಿದ್ದಾರೆ. ಆನ್​ಲೈನ್ ವೇದಿಕೆ ಮೂಲಕ ದಕ್ಷಿಣ ವಲಯ ವೈರಾಲಜಿ ಸಂಸ್ಥೆಗೆ ಶಿಲಾನ್ಯಾಸ ನೆರವೇರಿಸುವರು. ಅದೇ ದಿನ ಸಂಜೆ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ರಾತ್ರಿ 7ಕ್ಕೆ ವಿಧಾನಸೌಧ ಬ್ಯಾಂಕ್ವೆಟ್ ಹಾಲ್​ನಲ್ಲಿ ರಾಜ್ಯ ಸರ್ಕಾರ ಏರ್ಪಡಿಸಿರುವ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮುಮು ಅವರು ಮಂಗಳವಾರ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಬುಧವಾರ ದೆಹಲಿ ಪ್ರಯಾಣ ಬೆಳೆಸಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ಮಾಹಿತಿ ನೀಡಿವೆ.

    ಹೂವಿನ ರಾಷ್ಟ್ರಪತಿ ಭವನ: ಫಲಪುಷ್ಪ ಪ್ರದರ್ಶನ ಹೂವಿನ ಲೋಕಕ್ಕೆ ಕರೆದೊಯ್ಯಲಿದೆ. 20 ಅಡಿ ಎತ್ತರದ ದೆಹಲಿಯ ರಾಷ್ಟ್ರಪತಿ ಭವನದ ಪ್ರತಿಕೃತಿ ಪ್ರಮುಖ ಆಕರ್ಷಣೆ. ಹೂವಿನಿಂದ ಸಿಂಗಾರಗೊಂಡ ಡಾ.ರಾಜ್​ಕುಮಾರ್ ಅವರ ಗಾಜನೂರಿನ ಮನೆ, ಚಾಮುಂಡಿಬೆಟ್ಟ, ನಂದಿ ವಿಗ್ರಹದ ಮಾದರಿಗಳು ಇಲ್ಲಿವೆ. 7 ಅಡಿ ಉದ್ದದ ಜೇನುಹುಳು, 12 ಅಡಿ ಉದ್ದದ ಜಿರಾಫೆ, 7 ಅಡಿಯ ದಪ್ಪಮೆಣಸಿನಕಾಯಿ ಸೇರಿದಂತೆ ಇನ್ನಿತರ ವಿವಿಧ ಪ್ರಾಣಿ, ಪಕ್ಷಿಗಳ ಗೊಂಬೆ ಚಿಣ್ಣರನ್ನು ಸೆಳೆಯಲಿವೆ. ಚಲನಚಿತ್ರೋತ್ಸವದಲ್ಲಿ 112 ಚಿತ್ರಗಳು ಪ್ರದರ್ಶನವಾಗಲಿವೆ. ಇದೇ ಮೊದಲ ಬಾರಿಗೆ ರೈತ ದಸರಾಕ್ಕೆ ಸಾಕುಪ್ರಾಣಿಗಳು ಆಗಮಿಸಲಿವೆ. ‘ಚಾರ್ಲಿ 777’ ಸಿನಿಮಾ ಖ್ಯಾತಿಯ ಶ್ವಾನ ಗಮನ ಸೆಳೆಯಲಿದೆ.

    ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನ

    ಬೇಲೂರು: ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನದ ಪ್ರಯುಕ್ತ ಭಾನುವಾರ ಬೇಲೂರು ಪಟ್ಟಣಕ್ಕೆ ಆಗಮಿಸಿದ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರá- ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪುರಪ್ರವೇಶ ಸಹಸ್ರಾರು ಭಕ್ತರ ಜೈಕಾರದ ನಡುವೆ ವೈಭವದಿಂದ ಜರುಗಿತು. ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಮೂಲ ಮಠದಿಂದ ಹೊರಟು ಸಾಯಂಕಾಲ ಗೋಧೂಳಿ ಮುಹೂರ್ತದಲ್ಲಿ ಪಟ್ಟಣದ ಹೆಬ್ಬಾಗಿಲಿಗೆ ಪ್ರವೇಶಿಸಿದ ಜಗದ್ಗುರುಗಳನ್ನು 108 ಕಳಸ ಹೊತ್ತ ಮಹಿಳೆಯರು ಮಂಗಳ ವಾದ್ಯದೊಂದಿಗೆ ಸ್ವಾಗತಿಸಿದರೆ, ಸುಮಂಗಲಿಯರು ಆರತಿ ಬೆಳಗಿ ಗೌರವ ಸಮರ್ಪಿಸಿದರು.

    ಶೃಂಗೇರಿಯಲ್ಲಿ ದಸರಾ ದರ್ಬಾರ್

    ಶೃಂಗೇರಿ ಶಾರದೆ ಸನ್ನಿಧಿಯಲ್ಲಿ ನವರಾತ್ರಿಯ ಒಂಬತ್ತು ದಿನವೂ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಪ್ರತಿ ದಿನವೂ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳಿಂದ ದಸರಾ ದರ್ಬಾರ್ ನಡೆಯುತ್ತದೆ. 26ರಂದು ಶ್ರೀ ಶಾರದಾ ಪ್ರತಿಷ್ಠೆ ಮತ್ತು ಹಂಸವಾಹನ ಅಲಂಕಾರವಿದೆ. 27ರಂದು ಬ್ರಾಹ್ಮೀ, 28ರಂದು ಮಾಹೇಶ್ವರಿ, 29ರಂದು ಮಯೂರವಾಹನ, 30ರಂದು ಗರುಡವಾಹನ ಅಲಂಕಾರದಲ್ಲಿ ಕಂಗೊಳಿಸುತ್ತಾಳೆ. ಶತಚಂಡಿ ಯಾಗದ ಪ್ರಯುಕ್ತ ಯಾಗಶಾಲಾ ಪ್ರವೇಶ, ಪುರಶ್ಚರಣಾರಂಭವಾಗುತ್ತದೆ. ಅ.1ರಂದು ಶಾರದೆಗೆ ಮೋಹಿನೀ ಅಲಂಕಾರ, 2ರಂದು ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರ, 3ಕ್ಕೆ ರಾಜರಾಜೇಶ್ವರಿ ಅಲಂಕಾರ, 4ರಂದು ಮಹಾನವಮಿ, ಸಿಂಹವಾಹನಾಲಂಕಾರ, 5ರಂದು ವಿಜಯದಶಮಿ, ಗಜಲಕ್ಷ್ಮೀ ಅಲಂಕಾರ, ಸಂಜೆ ವಿಜಯೋತ್ಸವ ಮತ್ತು ಶಮೀಪೂಜೆ, 6ರಂದು ಗಜಲಕ್ಷ್ಮೀ ಅಲಂಕಾರ, ಶ್ರೀ ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನೆರವೇರಲಿದೆ.

    ಅನ್ನಪೂರ್ಣೆಶ್ವರಿಗೆ ವಿಶೇಷ ಅಲಂಕಾರ

    ಹೊರನಾಡಿನ ಶ್ರೀ ಅನ್ನಪೂರ್ಣೆಶ್ವರಿ ದೇಗುಲದಲ್ಲಿ ಪ್ರತಿ ದಿನವೂ ವಿವಿಧ ಅಲಂಕಾರ ಮಾಡಲಾಗುತ್ತದೆ. ಧರ್ಮಕರ್ತ ಡಾ. ಭೀಮೇಶ್ವರ ಜೋಷಿ ಪಟ್ಟಾಧಿಕಾರ ದಿನ ಚಂಡಿಕಾ ಹೋಮ ನೆರವೇರಿಸಲಾಗುತ್ತದೆ. ಜೀವಭಾವ ಕಾರ್ಯಕ್ರಮದಲ್ಲಿ ‘ಶ್ರೀಮಾತಾ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವಿಶೇಷವಾಗಿ ಸಮಾಜಸೇವೆಯಲ್ಲಿ ತೊಡಗಿದವರಿಗೆ ಅಥವಾ ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ 1 ಲಕ್ಷ ರೂ. ನಗದು ಹೊಂದಿದೆ.

    ವಿಶೇಷ ಪೂಜೆ: 200 ವರ್ಷಗಳ ಇತಿಹಾಸ ಹೊಂದಿರುವ ನಗರದ ಬಳ್ಳಾರಿ ಕನಕ ದುರ್ಗಮ್ಮನ ಮಹಿಮೆ ಅಪಾರ. ಇಲ್ಲಿ ಪ್ರತಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿಯ ಪ್ರಸಿದ್ಧ ಶ್ರೀ ಮಾರಿಕಾಂಬಾ ಮಂದಿರ, ಹೊನ್ನಾವರ ತಾಲೂಕಿನ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯ; ಧಾರವಾಡದ ಶ್ರೀ ಲಕ್ಷ್ಮೀನಾರಾಯಣ ಮಂದಿರ, ನಗರೇಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ 9 ದಿನಗಳ ಕಾಲ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಲಿವೆ. ಧಾರವಾಡದಲ್ಲಿ ದಸರಾ ಜಂಬೂ ಸವಾರಿ ಉತ್ಸವ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts