More

    ಇಂದು ಅಕ್ಷಯ ತೃತೀಯ; ಅಕ್ಷಯ ತದಿಗೆಗೆ ಮಹತ್ವ ಬಂದಿದ್ದು ಹೇಗೆ? ಈ ಕತೆ ಓದಿ…

    | ಮಂಡಗದ್ದೆ ಪ್ರಕಾಶ ಬಾಬು

    ಪಾಂಡವರಿಗೆ ಹನ್ನೆರಡು ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಈ ಸಂದರ್ಭದಲ್ಲಿ ಧರ್ಮರಾಯ, ಅರ್ಜುನ, ನಕುಲ, ಸಹದೇವ ಹಾಗೂ ದ್ರೌಪದಿ ಕಾಡಿನಲ್ಲಿ ಬೆಳೆದಿರುವ ಗೆಡ್ಡೆಗೆಣಸು ಹಣ್ಣು ಹಂಪಲು ತಿಂದುಕೊಂಡು ಕಾಲ ಕಳೆಯುತ್ತಾರೆ. ಆದರೆ ಭೀಮನ ಹಸಿವನ್ನು ಈ ಗೆಡ್ಡೆಗೆಣಸುಗಳಿಂದ ನೀಗಿಸಲು ಸಾಧ್ಯವಾಗಲಿಲ್ಲ. ದ್ರೌಪದಿಗೆ ಭೀಮನ ಕಷ್ಟ ನೋಡಿ ಸಂಕಟವಾಗುತ್ತದೆ. ಆಗ ದ್ರೌಪದಿಯು ನದಿಯ ಮಧ್ಯದಲ್ಲಿ ನಿಂತು ನಿರಂತರವಾಗಿ ಸೂರ್ಯದೇವನನ್ನು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾಳೆ. ಅವಳ ಭಕ್ತಿಗೆ ಭಗವಂತನು ಒಲಿದು ದಿವ್ಯಾನುಗ್ರಹ ಮಾಡುತ್ತಾನೆ. ಪಾಂಡವರ ಆಹಾರದ ಸಮಸ್ಯೆಯನ್ನು ಬಗೆಹರಿಸಲು ಭಗವಂತನು ಅಕ್ಷಯಪಾತ್ರೆಯನ್ನು ಕರುಣಿಸುತ್ತಾನೆ. ಈ ಅಕ್ಷಯ ಪಾತ್ರೆಯಿಂದ ಎಷ್ಟು ಸಾವಿರ ಜನರಿಗೆ ಬೇಕಾದರೂ ಆಹಾರ ತಯಾರಾಗುತ್ತಿತ್ತು. ಹಾಗೆಯೇ ಆಹಾರವೂ ಅಕ್ಷಯವಾಗುತ್ತಿತ್ತು. ದ್ರೌಪದಿಯು ಸೂರ್ಯದೇವನನ್ನು ಪ್ರಾರ್ಥಿಸಿದ ದಿನವೇ ವೈಶಾಖಮಾಸದ ಶುಕ್ಲಪಕ್ಷದ ತದಿಗೆ. ಈ ಕಾರಣದಿಂದಲೇ ಅಕ್ಷಯ ತದಿಗೆಗೆ ಮಹತ್ವ ಬಂದಿದೆ.

    ಐತಿಹಾಸಿಕವಾಗಿಯೂ ಈ ಅಕ್ಷಯ ತದಿಗೆಗೆ ಹಿನ್ನೆಲೆಯಿದೆ. ಶ್ರೀಕೃಷ್ಣದೇವರಾಯ ಮತ್ತು ಚಾಲುಕ್ಯ ದೊರೆಗಳು ಈ ದಿನದಂದು ಚಿನ್ನ, ವಜ್ರ, ಬಂಗಾರ, ಬೆಳ್ಳಿ, ವೈಡೂರ್ಯ ಹಾಗೂ ಹಣಗಳನ್ನು ಶಾಶ್ವತನಿಧಿಗೆ ಹಾಕಿ ವಿಶೇಷವಾಗಿ ವಿಧಿವತ್ತಾಗಿ ಅದಕ್ಕೆ ಪೂಜೆ ಮಾಡುತ್ತಿದ್ದರಂತೆ. ಇದರ ಉದ್ದೇಶ ಪ್ರತಿವರ್ಷ ಶಾಶ್ವತ ನಿಧಿ ಅಕ್ಷಯವಾಗಲಿ ಎಂದು. ಅಂದಿನಿಂದ ಆರಂಭವಾದ ಈ ಅಕ್ಷಯ ತದಿಗೆ ಇಂದಿನವರೆಗೂ ನಡೆದುಕೊಂಡು ಬರುತ್ತಿದೆ. ಅಕ್ಷಯವಾಗುವ ಈ ಪುಣ್ಯದಿನದಂದು ಚಿನ್ನ, ಬೆಳ್ಳಿ, ಆಭರಣಗಳನ್ನು ಕೊಂಡುತಂದು ಧಾರ್ವಿುಕ ವಿಧಾನಗಳೊಂದಿಗೆ ಪೂಜೆ ಮಾಡುತ್ತಾರೆ. ತಾವು ಸಂಪಾದಿಸಿದ ಹಣವನ್ನೂ ಇಟ್ಟು ಲಕ್ಷ್ಮಿಪೂಜೆಯನ್ನು ಸಹ ಮಾಡುತ್ತಾರೆ.

    ಲಕ್ಷ್ಮಿಯಲ್ಲಿ ಎರಡು ವಿಧ. ಸ್ಥಿರಲಕ್ಷ್ಮಿ ಹಾಗೂ ಚರಲಕ್ಷ್ಮಿ. ಎಲ್ಲರೂ ಬಯಸುವುದು ಸ್ಥಿರಲಕ್ಷ್ಮಿಯನ್ನು. ಆದರೆ ಸ್ಥಿರಲಕ್ಷ್ಮಿಯಿಂದ ನೋವುಗಳು ಹೆಚ್ಚು. ನೀರು ಯಾವ ರೀತಿ ಒಂದೇ ಕಡೆ ನಿಂತಿದ್ದರೆ ಅದರಲ್ಲಿ ಕ್ರಿಮಿಕೀಟಗಳು ಉತ್ಪತ್ತಿಯಾಗುವುದೋ ಅದೇ ರೀತಿ ಲಕ್ಷ್ಮಿ ಸ್ಥಿರವಾಗಿ ಒಂದೇ ಕಡೆ ಇದ್ದರೆ ಕಾಯಿಲೆ, ಸಂಕಟಗಳು ಹೆಚ್ಚು. (ಈಗಿನ ಕಾಲಕ್ಕೆ ಅನುಗುಣವಾಗಿ) ನೀರು ಹರಿಯುತ್ತಿದ್ದರೆ ಅದಕ್ಕೆ ಯಾವುದೇ ಜಾಡ್ಯ ಅಂಟದು. ಅದೇ ರೀತಿ ಹಣವು ಚರವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಿಯುತ್ತಿರಬೇಕು. ಆಗ ಅದಕ್ಕೆ ಪರಿಶುದ್ಧತೆ ಬರುವುದು. ಸಂಪತ್ತನ್ನು ಬಯಸುವುದು ತಪ್ಪಲ್ಲ, ಬಂದ ಸಂಪತ್ತಿನ ಸದ್ವಿನಿಯೋಗ ಆಗಬೇಕು. ಆಗ ಅದಕ್ಕೆ ಬೆಲೆ ಬರುತ್ತದೆ. ಕೆಲವು ಸಂಪ್ರದಾಯದವರು ಅಕ್ಷಯತದಿಗೆಯಂದು ಸೂರ್ಯದೇವನನ್ನು ಪೂಜಿಸುವರು.

    ಸತ್ಯಯುಗದಲ್ಲಿ ಅಕ್ಷಯತೃತೀಯ: ಸತ್ಯಯುಗದಲ್ಲೂ ಅಕ್ಷಯ ತೃತೀಯ ದಿನದ ಮಹತ್ವವು ಕಂಡುಬರುವುದು. ವೇದವ್ಯಾಸರು ಮಹಾಗಣಪತಿಯೊಂದಿಗೆ ಮಹಾಭಾರತವನ್ನು ರಚನೆ ಮಾಡಲು ಪ್ರಾರಂಭಿಸಿದ್ದು ಅಕ್ಷಯ ತೃತೀಯ ದಿನ ಎಂದು ಕಂಡುಬರುತ್ತದೆ. ಅಕ್ಷಯ ತೃತೀಯ ದಿನ ಗೋಮಾತೆಯನ್ನು, ಆನೆಯನ್ನು ಹಾಗೂ ಕುದುರೆಯನ್ನು ಪೂಜೆ ಮಾಡುವ ಪದ್ಧತಿ ಕೆಲವು ಕಡೆ ಇರುವುದು. ಗೋವನ್ನು ಪೂಜಿಸುವುದರಿಂದ ನಮಗೆ ಕರುಣೆ, ತಾಳ್ಮೆ, ಪ್ರೇಮ ಕರುಣಿಸುತ್ತದೆ. ಗಜವನ್ನು ಪೂಜಿಸುವುದರಿಂದ ಸಂಪತ್ತು ಸಮೃದ್ಧಿಯುಂಟಾಗುವುದು. ಕುದುರೆಯನ್ನು ಪೂಜಿಸುವುದರಿಂದ ಮನಃಶಾಂತಿ, ಪ್ರಭುತ್ವದ ಶಕ್ತಿ ಹೆಚ್ಚಿಸುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts