More

    ಇಂದು ಬಂಟ್ವಾಳ ತಾಲೂಕಿನ 57 ಗ್ರಾಪಂಗಳಿಗೆ ಚುನಾವಣೆ

    ಬಂಟ್ವಾಳ: ತಾಲೂಕಿನ 57 ಗ್ರಾಪಂಗಳಿಗೆ ಡಿ.22ರಂದು ಚುನಾವಣೆ ನಡೆಯಲಿದ್ದು, ಮೊಡಂಕಾಪುವಿನ ಇನ್ಫೆಂಟ್ ಜೀಸಸ್ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಮಸ್ಟರಿಂಗ್ ಕಾರ್ಯ ನೆರವೇರಿತು.

    155 ವಾಹನಗಳ ಮೂಲಕ ಮತಪೆಟ್ಟಿಗೆಗಳನ್ನು ಆಯಾಯ ಬೂತ್‌ಗಳಿಗೆ ಸಾಗಿಸಲಾಯಿತು. ತಾಲೂಕಿನ 57 ಗ್ರಾಪಂಗಳ 837 ಸ್ಥಾನಗಳಿಗೆ (15 ಸ್ಥಾನಗಳ ಅವಿರೋಧ ಆಯ್ಕೆ) ಚುನಾವಣೆ ನಡೆಯಲಿದ್ದು, 1925 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 46 ಅತಿಸೂಕ್ಷ್ಮ, 86 ಸೂಕ್ಷ್ಮ ಹಾಗೂ 264 ಸಾಮಾನ್ಯ ಮತಗಟ್ಟೆಗಳು ಸೇರಿ ಒಟ್ಟು 396 ಮತಗಟ್ಟೆಗಳಲ್ಲಿ ಮತದಾನ ನೆರವೇರಲಿದೆ. ಪ್ರತಿ ಮತಗಟ್ಟೆಗಳಲ್ಲಿ ತಲಾ 6 ಮಂದಿಯಂತೆ 2 ಸಾವಿರ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

    ತಲಾ 6 ಸಿಬ್ಬಂದಿ: ಪ್ರತಿ ಬೂತ್‌ಗಳಲ್ಲಿ 6 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಓರ್ವ ಪ್ರಿಸೈಡಿಂಗ್ ಆಫೀಸರ್, ಸಹಾಯಕ ಪ್ರಿಸೈಡಿಂಗ್ ಆಫೀಸರ್, ಇಬ್ಬರು ಪೋಲಿಂಗ್ ಪರ್ಸನ್‌ಗಳು, ಓರ್ವ ಡಿ ಗ್ರೂಪ್ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿ ಪ್ರತಿ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

    ಒಟ್ಟು 155 ವಾಹನಗಳು: ಮತಗಟ್ಟೆ ಸಿಬ್ಬಂದಿ ಆಯಾಯ ಮತಗಟ್ಟೆಗಳಿಗೆ ತೆರಳುವ ದೃಷ್ಟಿಯಿಂದ 155 ವಾಹನಗಳನ್ನು ನಿಗದಿಪಡಿಸಲಾಗಿದ್ದು, 55 ಕೆಎಸ್‌ಆರ್‌ಟಿಸಿ ಬಸ್‌ಗಳು ಇವೆ. ಉಳಿದಂತೆ ಜೀಪು, ಖಾಸಗಿ ಮಿನಿ ಬಸ್, ಮ್ಯಾಕ್ಸಿ ಕ್ಯಾಬ್‌ಗಳನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 4 ಮತಗಟ್ಟೆಗಳ ಮತಪೆಟ್ಟಿಗೆಗಳು ಹಾಗೂ ಸಿಬ್ಬಂದಿಯನ್ನು ಕೊಂಡೊಯ್ಯಲಾಗುತ್ತದೆ. ಮಿನಿ ಬಸ್‌ಗಳ ಮೂಲಕ 3 ಮತಗಟ್ಟೆಗಳು, ಮ್ಯಾಕ್ಸಿ ಕ್ಯಾಬ್‌ಗಳಲ್ಲಿ 2 ಮತ್ತು ಜೀಪುಗಳ ಮೂಲಕ ಒಂದು ಮತಗಟ್ಟೆಯ ಅಧಿಕಾರಿಗಳು ಹಾಗೂ ಮತಪೆಟ್ಟಿಗೆ ಇರುತ್ತದೆ.

    ಇಂದು ನಿಷೇಧಾಜ್ಞೆ: ಡಿ.22ರಂದು ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆ ಬಂಟ್ವಾಳ ತಾಲೂಕಿನಲ್ಲಿ ನಡೆಯಲಿದ್ದು, ಅಂದು ಸಾಯಂಕಾಲ 5ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎರಡನೇ ಹಂತದ ಚುನಾವಣೆ ಡಿ.27ರಂದು ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ನಡೆಯಲಿದ್ದು, ಡಿ.25ರಂದು ಸಾಯಂಕಾಲ 5ರಿಂದ 27ರಂದು ಸಾಯಂಕಾಲ 5ರವರೆಗೆ ಮತದಾನ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts