More

    ಸಾಯಿಸಿಬಿಡುತ್ತಾರೆಂಬ ಭಯಕ್ಕೆ ತನ್ನದೇ ಪ್ರತಿಮೆಗಳನ್ನು ನಿರ್ಮಿಸಿಕೊಂಡ ಶಾಸಕ!

    ಕೊಲ್ಕತ್ತಾ: ದೇವರ ಪ್ರತಿಮೆಗಳನ್ನ ನೋಡಿರುತ್ತೇವೆ. ಕೆಲವು ಕಡೆಗಳಲ್ಲಿ ಆದರ್ಶ ವ್ಯಕ್ತಿಗಳ, ಸ್ಟಾರ್​ ಸೆಲೆಬ್ರಿಟಿಗಳ ಪ್ರತಿಮೆಗಳನ್ನು ಸಹ ನಿಲ್ಲಿಸಿ ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುವುದುಂಟು. ಆದರೆ ಇಲ್ಲೊಬ್ಬ ಶಾಸಕ ತನ್ನ ಪ್ರತಿಮೆಗಳನ್ನೇ ನಿರ್ಮಿಸಿಕೊಂಡಿದ್ದು ನಗೆಪಾಟಲಿಗೀಡಾಗಿದ್ದಾನೆ.

    ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​ನ ಶಾಸಕ ಜಯಂತ್​ ನಾಸ್ಕರ್​ ತಮ್ಮದೇ ಪ್ರತಿಮೆಗಳನ್ನು ನಿರ್ಮಿಸಿಕೊಂಡಿದ್ದಾರೆ. 71 ವರ್ಷ ವಯಸ್ಸಿನ ಈ ಶಾಸಕನನ್ನು ಕೆಲ ವರ್ಷಗಳ ಹಿಂದೆ ಯಾರೋ ಕಿಡಿಗೇಡಿಗಳು ಕೊಲೆ ಮಾಡುವ ಪ್ರಯತ್ನ ಮಾಡಿದ್ದರಂತೆ. ಆಗಿನ ಜಿಲ್ಲಾ ಅಧೀಕ್ಷಕರಿಂದ ಇಂತದ್ದೊಂದು ಮಾಹಿತಿ ಪಡೆದ ಶಾಸಕ ತನ್ನನ್ನು ಒಂದು ವೇಳೆ ಕೊಂದರೂ ಆ ಊರಿನ ಜನರಿಗೆ ತಾನು ನೆನಪಿನಲ್ಲಿರುವಂತೆ ಆಗಬೇಕು ಎಂದುಕೊಂಡನಂತೆ. ಅದೇ ಕಾರಣಕ್ಕೆ ಶಿಲ್ಪಿಯೊಬ್ಬನನ್ನು ಹುಡುಕಿ ಆತನಿಗೆ ತನ್ನ ಮೂರು ಪ್ರತಿಮೆಗಳನ್ನು ನಿರ್ಮಿಸಿಕೊಡುವಂತೆ ಕೇಳಿದನಂತೆ.

    ಸತತ ಐದು ಭೇಟಿಯ ನಂತರ ಶಿಲ್ಪಿ ಶಾಸಕನ ಪ್ರತಿಮೆಗಳನ್ನು ಮಾಡಿಕೊಡಲು ಒಪ್ಪಿದ್ದು ಅದರಂತೆ ಎರಡು ಶಾಸಕನ ಎತ್ತರದಷ್ಟಿರುವ ಪ್ರತಿಮೆ ಮತ್ತೊಂದು ಎದೆ ಭಾಗದವರೆಗಿರುವ ಪ್ರತಿಮೆಯನ್ನು ನಿರ್ಮಿಸಿಕೊಟ್ಟಿದ್ದಾನೆ. ಪ್ರತಿಮೆ ನಿರ್ಮಾಣವಾದ ನಂತರ ಅದರ ಬಗ್ಗೆ ಮುಜುಗರ ಉಂಟಾದ ಕಾರಣ ಶಾಸಕ ಆ ಪ್ರತಿಮೆಯನ್ನು ತನ್ನ ಮನೆಯ ಮೊದಲನೇ ಮಹಡಿಯ ಕೋಣೆಯೊಂದರಲ್ಲಿ ಇಟ್ಟಿದ್ದನಂತೆ. ಇತ್ತೀಚೆಗೆ ರಾಜಕೀಯ ಕಾರ್ಯಕ್ರಮವೊಂದು ಆತನ ಊರಿನಲ್ಲಿ ನಡೆದಿದ್ದು ಆ ಸಮಯದಲ್ಲಿ ಆತನ ಪ್ರತಿಮೆಯನ್ನು ಕಂಡ ಒಂದಿಷ್ಟು ಜನ ಅದರ ಫೋಟೋ ತೆಗೆದು ವೈರಲ್​ ಮಾಡಿದ್ದಾರೆ.

    ನನಗೆ ನನ್ನ ಪಕ್ಷದಲ್ಲೇ ಶತ್ರುಗಳಿದ್ದಾರೆ. ಅವರೆಲ್ಲ ಬೇರೆ ಬೇರೆ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಬಂದವರು. ಬೇರೆ ಪಕ್ಷದಲ್ಲಿದ್ದಾಗಿನಿಂದಲೂ ಅವರು ನನ್ನನ್ನು ದ್ವೇಷಿಸುತ್ತಿದ್ದಾರೆ. ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿಯೇ ಸರ್ಕಾರ ನನಗೆ ವೈ ಸುರಕ್ಷತೆಯನ್ನು ನೀಡಿದೆ ಎಂದು ಶಾಸಕ ಜಯಂತ್​ ನಾಸ್ಕರ್​ ತಿಳಿಸಿದ್ದಾರೆ. ಸದ್ಯ ಶಾಸಕನಿಗೆ 11 ಪೊಲೀಸ್​ ಅಧಿಕಾರಿಗಳಿಂದ ರಕ್ಷಣೆ ನೀಡಲಾಗುತ್ತಿದೆ.

    ಈ ಪ್ರತಿಮೆಗಳನ್ನು ಎಲ್ಲಿ ಸ್ಥಾಪಿಸುತ್ತೀರಿ ಎಂದು ಕೇಳಿದ್ದಕ್ಕೆ, ತಮ್ಮ ಊರಿನ ಶಾಲೆಯ ಪ್ರಾಂಶುಪಾಲರು ಶಾಲೆಯ ಆವರಣದಲ್ಲಿ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಮಾತು ನೀಡಿದ್ದಾರೆ ಎಂದು ತಿಳಿಸಿದ್ದಾರೆ. 1993ರಿಂದ 2016ರವರೆಗೆ ತಾನು ಆ ಶಾಲೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಅದರ ನೆನಪಿಗೆ ಅವರು ಪ್ರತಿಮೆ ಸ್ಥಾಪಿಸಲು ಒಪ್ಪಿದ್ದಾರೆ ಎಂದು ಆತ ಹೇಳಿಕೊಂಡಿದ್ದಾರೆ. ಉಳಿದ ಎರಡು ಪ್ರತಿಮೆಗಳನ್ನು ಊರಿನ ಜನರು ತಮ್ಮ ಸ್ವಇಚ್ಛೆಯಿಂದ ಎಲ್ಲಿ ಬೇಕಾರೂ ಸ್ಥಾಪಿಸಲಿ ಎಂದು ಅವರು ತಿಳಿಸಿದ್ದಾರೆ.

    ಈ ವಿಚಾರವಾಗಿ ಟಿಎಂಸಿ ಪಕ್ಷದ ಜಿಲ್ಲಾಧ್ಯಕ್ಷರಾಗಿರುವ ಶೌಕತ್​ ಮೊಲ್ಲಾ ಪ್ರತಿಕ್ರಿಯಿಸಿದ್ದು, “ಇದುವರೆಗೂ ಇಂತಹದ್ದೊಂದು ವಿಚಾರವನ್ನು ನಾನು ಕೇಳಿರಲಿಲ್ಲ. ಬುದ್ಧಿ ಇಲ್ಲದ ವ್ಯಕ್ತಿಗಳಿಂದ ಮಾತ್ರ ಇಂತಹ ಕೆಲಸ ಸಾಧ್ಯ” ಎಂದು ಟೀಕಿಸಿದ್ದಾರೆ. ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಶಾಸಕರಿಗೆ ಬೆದರಿಕೆ ಇರುವ ಮಾಹಿತಿ ಇಲ್ಲ, ಆದರೆ ಅವರಿಗೆ ಸಾಕಷ್ಟು ಭದ್ರತೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸತ್ತ ತಂದೆಯನ್ನು ವಿಡಿಯೋ ಕಾಲ್​ನಲ್ಲಿ ನೋಡಿ ಕಣ್ಣೀರು ಹಾಕಿದೆ; ಕರೊನಾ ಸೋಂಕಿತನ ಕರುಣಾಜನಕ ಕಥೆ

    ಐಟಿ ದಾಳಿ ಬಳಿಕ ಹೊರಬಿತ್ತು ಸ್ಪೋಟಕ ಮಾಹಿತಿ: ಬಿಗಿಲ್, ಮಾಸ್ಟರ್​ ಚಿತ್ರಕ್ಕೆ ವಿಜಯ್​ ಪಡೆದ ಸಂಭಾವನೆ ಕೇಳಿ ಶಾಕ್​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts