More

    ಯಮಸ್ವರೂಪಿಯಾಗಿವೆ ಟಿಪ್ಪರ್, ಲಾರಿ ಸಂಚಾರ

    ಲಕ್ಷ್ಮೇಶ್ವರ: ತಾಲೂಕಿನಲ್ಲಿ ಎಮ್ ಸ್ಯಾಂಡ್, ಖಡಿ, ಕಲ್ಲಿನ ಪುಡಿಗಳನ್ನು ಸಾಗಿಸುವ ಟಿಪ್ಪರ್, ಲಾರಿಗಳ ಹಾವಳಿಗೆ ತಾಲೂಕಿನ ಜನತೆ ಬೆಚ್ಚಿ ಬೀಳುವಂತಾಗಿದೆ. ದಿನದ 24 ಗಂಟೆಯೂ ಮಿತಿಮೀರಿದ ಭಾರ ಹೇರಿಕೊಂಡು ಎಗ್ಗಿಲ್ಲದೆ ಸಂಚರಿಸುವ ಟಿಪ್ಪರ್​ಗಳು ಯಮರೂಪಿಯಂತೆ ಕಾಣುತ್ತಿವೆ. ಸಾಲುಗಟ್ಟಿದ ಸಂಚಾರ, ತೂರಿ ಬರುವ ಧೂಳು, ಹಾರ್ನ್ ಶಬ್ದಗಳ ಅಬ್ಬರಕ್ಕೆ ವಿದ್ಯಾರ್ಥಿಗಳು, ಪಾಲಕರು, ಇತರ ವಾಹನ ಸವಾರರು ರೋಸಿಹೋಗಿದ್ದಾರೆ.

    ತಾಲೂಕಿನ ಆದ್ರಳ್ಳಿ, ಅಕ್ಕಿಗುಂದ, ನಾದಿಗಟ್ಟಿ, ವಡ್ಡರಪಾಳ್ಯ ಸೇರಿ ಗುಡ್ಡದ ಸೆರಗಿನಲ್ಲಿ ತಲೆ ಎತ್ತಿರುವ ಕ್ರಷರ್​ಗಳಿಂದ ಎಮ್ ಸ್ಯಾಂಡ್, ಖಡಿ ಮತ್ತು ನದಿ ಪಾತ್ರದಿಂದ ಮರಳು ಸಾಗಿಸುವ ಟ್ರಕ್, ಟಿಪ್ಪರ್​ಗಳು ಲಕ್ಷ್ಮೇಶ್ವರ ಮಾರ್ಗವಾಗಿ ಹುಬ್ಬಳ್ಳಿ-ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಸಂಚರಿಸುತ್ತವೆ. ಇವುಗಳ ವಾಹನಗಳ ಮಾಲೀಕರು ಹೆಚ್ಚಿನ ಲಾಭಕ್ಕಾಗಿ ಎಲ್ಲ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

    ನಿಯಮಾವಳಿ ಪ್ರಕಾರ 4 ಚಕ್ರದ ವಾಹನ 12 ಟನ್, 6 ಚಕ್ರದ ವಾಹನ 16.20 ಟನ್, 10 ಚಕ್ರದ ವಾಹನ 25 ಟನ್ ಭಾರ ಮೀರುವಂತಿಲ್ಲ. ಆದರೆ, ಇಲ್ಲಿ ಬಹುತೇಕ 10 ಮತ್ತು 12 ಚಕ್ರದ ವಾಹನಗಳ ಸಂಚಾರ ಮಿತಿಮೀರಿದೆ. ಇವುಗಳು ಕನಿಷ್ಠ 35 ರಿಂದ 40 ಟನ್ ಭಾರ ಹೊತ್ತು ಹಗಲೂ ರಾತ್ರಿ ಸಂಚರಿಸುತ್ತಿವೆ. ಆಗಾಗ್ಗೆ ಅಪಘಾತಗಳು ಸಂಭವಿಸುವುದು ಸರ್ವೆ ಸಾಮಾನ್ಯವಾಗಿದೆ. ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಸಂಬಂಧಿಕರು ಎಲ್ಲ ಅಕ್ರಮಗಳನ್ನು ತೆರೆಮರೆಯಲ್ಲಿ ಮುಚ್ಚಿಹಾಕಿ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದು ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳ ಗಮನಕ್ಕಿದ್ದರೂ ಅವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

    ತಾಲೂಕಿನಲ್ಲಿ ಓವರ್​ಲೋಡ್​ನೊಂದಿಗೆ ಎಮ್ ಸ್ಯಾಂಡ್, ಖಡಿ, ಮರಳು ಸಾಗಿಸುವ ಬಗ್ಗೆ ಮಾಹಿತಿ ಇದೆ. ಆದರೆ, ಸಿಬ್ಬಂದಿ ಕೊರತೆ ಮತ್ತು ಕಾರ್ಯಗಳ ಒತ್ತಡದಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಪ್ರತಿ ತಿಂಗಳು ನಿಯಮ ಮೀರಿ ಸಂಚರಿಸುವ ವಾಹನಗಳನ್ನು ವಶಪಡಿಸಿಕೊಂಡು ದಂಡ ವಿಧಿಸುತ್ತಿದ್ದೇವೆ.
    | ಬಾಲಚಂದ್ರ ಎಚ್.ಟಿ ಪ್ರಾದೇಶಿಕ ಸಾರಿಗೆ ಇಲಾಖೆ ಮೋಟಾರು ವಾಹನ ಜಿಲ್ಲಾ ನಿರೀಕ್ಷಕ

    ಟಿಪ್ಪರ್​ಗಳ ಹಾವಳಿ ನಿಯಂತ್ರಿಸಲು ಜಿಲ್ಲಾಧಿಕಾರಿ, ಎಸ್ಪಿ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇನ್ನೂ ಅದೆಷ್ಟು ಜೀವಗಳು ಬಲಿಯಾಗಲಿವೆಯೋ ಎಂಬ ಆತಂಕ ಜನರನ್ನು ಕಾಡುತ್ತಿದೆ. ಏನಾದರೂ ಅನಾಹುತ ಸಂಭವಿಸಿದರೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ.
    | ಶಂಕರ ಬಾಳಿಕಾಯಿ, ಜೆಡಿಎಸ್ ಮುಖಂಡ

    ಓವರ್​ಲೋಡ್ ಲಾರಿ ಓಡಾಟಕ್ಕಿಲ್ಲ ಬ್ರೇಕ್

    ಮುಳಗುಂದ: ಸಾರಿಗೆ ಇಲಾಖೆ ರೂಪಿಸಿರುವ ನೀತಿ ನಿಯಮಗಳನ್ನೂ ಗಾಳಿಗೆ ತೂರಿ ಟಿಪ್ಪರ್​ಗಳ ಮಾಲೀಕರು ಅವ್ಯಾಹತವಾಗಿ ಖಡಿ, ಎಂ. ಸ್ಯಾಂಡ್ ಓವರ್​ಲೋಡ್ ಮಾಡಿಕೊಂಡು ಬೈಕ್, ಕಾರು ಹಾಗೂ ಇನ್ನಿತರ ವಾಹನಗಳ ಸವಾರರು, ರಸ್ತೆ ಅಕ್ಕ-ಪಕ್ಕದ ಮನೆಯವರು, ವ್ಯಾಪಾರಸ್ಥರಿಗೆ ಧೂಳಿನ ಮಜ್ಜನ ಮಾಡಿಸುತ್ತಿದ್ದಾರೆ. ಧೂಳಿನ ಕಿರಿಕಿರಿಗೆ ಬಸವಳಿದಿರುವ ಸಾರ್ವಜನಿಕರು ಸೂಕ್ತ ಕ್ರಮ ಕೈಗೊಳ್ಳಬೇಕಿದ್ದ ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ನೈಸರ್ಗಿಕ ಮರಳು ದೊರೆಯದ ಹಿನ್ನೆಲೆಯಲ್ಲಿ ಎಮ್ ಸ್ಯಾಂಡ್​ಗೆ ಬೇಡಿಕೆ ಹೆಚ್ಚಾಗಿದೆ. ಸೀತಾಹಲರಿ, ಪರಸಾಪುರ, ಹೊಳಲಾಪೂರ ಹಾಗೂ ಖಾನಾಪೂರ ವ್ಯಾಪ್ತಿಯಲ್ಲಿ ಬರುವ ಗುಡ್ಡದ ಪ್ರದೇಶದಲ್ಲಿ 25ಕ್ಕೂ ಹೆಚ್ಚು ಕ್ರಷರ್​ಗಳಿದ್ದು, ಇಲ್ಲಿ ನಿತ್ಯ ಸಾವಿರಾರು ಟನ್ ಎಮ್ ಸ್ಯಾಂಡ್, ಖಡಿ, ಗಿಲಿಟ್ ಉತ್ಪಾದನೆಯಾಗುತ್ತಿದೆ. ಇವುಗಳನ್ನು ಹುಬ್ಬಳ್ಳಿ ಹಾಗೂ ಗದಗ ಪಟ್ಟಣಕ್ಕೆ ಸಾಗಿಸಲಾಗುತ್ತದೆ. ಇವುಗಳ ಸಂಚಾರದಿಂದ ಮುಳಗುಂದ ಮಾರ್ಗವಾಗಿ ಸಾಕಷ್ಟು ಪ್ರಮಾಣದ ಧೂಳು ಎಳುತ್ತದೆ.

    ಅಧಿಕ ಭಾರ ಹೊತ್ತ ಟಿಪ್ಪರಗಳ ಸಂಚಾರದಿಂದ ರಸ್ತೆ ಹದಗೆಟ್ಟಿದೆ. ಮುಳಗುಂದದಿಂದ ಚಿಂಚಲಿ, ಕೋಳಿವಾಡ, ನೀಲಗುಂದ ರಸ್ತೆ ಕಿತ್ತು ಹೋಗಿದೆ. ಇದರಿಂದ ಇತರೆ ವಾಹನಗಳ ಸಂಚಾರಕ್ಕೆ ಸಂಚಕಾರ ತಂದೊಡಿದ್ದೆ. ಚಿಂಚಲಿ ಕ್ರಾಸ್​ನಲ್ಲಿ ಧೂಳಿನ ಕಿರಿಕಿರಿ ಮಿತಿ ಮೀರಿದೆ. ರಸ್ತೆ ಪಕ್ಕದ ಹೋಟೆಲ್​ಗಳ ತಿಂಡಿ-ತಿನಿಸುಗಳ ಮೇಲೆ ಧೂಳು ಹಿಡಿಯುವಂತಾಗಿದೆ. ಇದು ಜನರ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ.

    ಓವರ್ ಲೋಡ್ ಹೇರಿಕೊಂಡು ಒಳ ಮಾರ್ಗದಲ್ಲಿ ಸಂಚರಿಸುತ್ತಿರುವ ಟಿಪ್ಪರ್, ಲಾರಿಗಳಿಗೆ ಪೊಲೀಸ್, ಸಾರಿಗೆ ಇಲಾಖೆ ಅಧಿಕಾರಿಗಳ ಭಯವೇ ಇಲ್ಲದಾಗಿದೆ. ಇದು ಅಧಿಕಾರಿಗಳಿಗೆ ತಿಳಿದಿಲ್ಲವೇ ಅಥವಾ ತಿಳಿದರೂ ಕ್ರಮ ಕೈಗೊಳ್ಳುತ್ತಿಲ್ಲವೇ? ಉದ್ಯಮಿಗಳ ಲಾಬಿಗೆ ಸುಮ್ಮನಿದ್ದಾರಾ? ಎಂಬ ಅನುಮಾನಗಳು ಸಹಜವಾಗಿ ತಲೆದೋರಿವೆ.

    ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದರೂ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.  

     

    ತುಂಗಭದ್ರಾ ಪ್ರವಾಹ ಸಂತ್ರಸ್ತರ ಸಂಕಷ್ಟ- ಮನೆ ದುರಸ್ತಿಗೂ ಇಲ್ಲ ಹಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts