More

    ತಿಪಟೂರು ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ : ಶಕ್ತಿ ಪಡೆದ ಟೂಡಾ ಶಶಿಧರ್ ಬಣ ; ಕೊನೆಯಾಗುತ್ತ ಮುನಿಸು

    ತಿಪಟೂರು : ಜಿಪಂ, ತಾಪಂ ಚುನಾವಣೆಯನ್ನು ಡಿಸೆಂಬರ್ ಅಂತ್ಯದವರೆಗೂ ಮುಂದೂಡಲು ರಾಜ್ಯ ಸರ್ಕಾರ ನಿರ್ಧರಿಸಿದೆಯಾದರೂ ತಾಲೂಕು ಕಾಂಗ್ರೆಸ್ ವಲಯದಲ್ಲಿ ಚಟುವಟಿಕೆ ಬಿರುಸಿನಿಂದ ನಡೆಯಲಾರಂಭಿಸಿದೆ. ಕ್ಷೇತ್ರದಲ್ಲಿ ಬಿಜೆಪಿಗೆ ಸಮಬಲದ ಸ್ಪರ್ಧೆ ನೀಡುವ ಸಾಮರ್ಥ್ಯದ ಕಾಂಗ್ರೆಸ್‌ನಲ್ಲಿ ಒಳ ಜಗಳಕ್ಕೇನು ಕಡಿಮೆ ಇಲ್ಲ.

    ಮಾಜಿ ಶಾಸಕ ಕೆ.ಷಡಕ್ಷರಿ ಹಾಗೂ ಟೂಡಾ ಮಾಜಿ ಅಧ್ಯಕ್ಷ ಸಿ.ಬಿ.ಶಶಿಧರ್ ನಡುವೆ ಪ್ರತ್ಯೇಕ ಬಣಗಳಿರುವುದು ರಹಸ್ಯವೇನಲ್ಲ. ಚುನಾವಣೆ ಯಾರ ನೇತೃತ್ವದಲ್ಲಿ ನಡೆದರೆ ಗೆಲುವು ಸುಲಭ ಎಂಬ ಚರ್ಚೆ ಕೈ ವಲಯದಲ್ಲಿದೆ. ಜಿಪಂ ಟಿಕೆಟ್ ಬಯಸುತ್ತಿರುವ ಘಟಾನುಘಟಿ ನಾಯಕರು ಟೂಟಾ ಶಶಿಧರ್ ಬಣದಲ್ಲಿರುವುದು ಕೂತೂಹಲ ಹೆಚ್ಚಿಸಿದೆ.

    ಮರುವಿಂಗಡಣೆಯಾಗಿರುವ ಹಾಲ್ಕುರಿಕೆ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ಮುಖಂಡ ಹಾಲ್ಕುರಿಕೆ ಗ್ರಾಪಂ ಅಧ್ಯಕ್ಷ ಉಮಾಮಹೇಶ್ ಸ್ಪರ್ಧೆಗೆ ಒಲವು ತೋರಿಸಿದ್ದಾರೆ. ಟೂಡಾ ಶಶಿಧರ್ ಬಣದಲ್ಲಿರುವ ಉಮಾಮಹೇಶ್ ಟಿಕೆಟ್ ಬಯಸಿರುವ ಕ್ಷೇತ್ರದಿಂದಲೇ ಮಾಜಿ ಶಾಸಕ ಕೆ.ಷಡಕ್ಷರಿ ಕುಟುಂಬದ ಕುಡಿ ನಿಖಿಲ್ ಕಣಕ್ಕಿಳಿಯುವುದಾಗಿ ಹೇಳಿರುವುದು ಬಣ ರಾಜಕೀಯ ಕಾವು ಹೆಚ್ಚಿಸಿದೆ.

    ತಿಪಟೂರಿನಲ್ಲಿ ಲಿಂಗಾಯತ ಸಮುದಾಯದ ಸಿ.ಬಿ.ಶಶಿಧರ್ ಪರ ಅಲೆಯಿದೆ. ಅಹಿಂದ ಮುಖಂಡ, ಜಿಪಂ ಮಾಜಿ ಸದಸ್ಯ ಜಿ.ನಾರಾಯಣ ಕೂಡ ಶಶಿಧರ್ ಜತೆಗಿದ್ದು ಪತ್ನಿ ಅನಸೂಯಗೆ ಟಿಕೆಟ್ ಕೊಡಿಸಲು ಬಯಸಿದ್ದಾರೆ. ರಂಗಾಪುರ ಕ್ಷೇತ್ರದಿಂದ ಮಾಜಿ ಸದಸ್ಯ ತ್ರಯಂಬಕ ಕಣಕ್ಕಿಳಿದರೆ ತಿಪಟೂರಿನ ರಾಜಕೀಯ ಸಮೀಕರಣವೇ ಬದಲಾಗಲಿದೆ.

    ಒಂದು ಬಣ ಹಾಲ್ಕುರಿಕೆ ಕ್ಷೇತ್ರದಿಂದ ನಿಖಿಲ್ ಕಣಕ್ಕಿಳಿಸಲು ಬಯಸಿದ್ದರೂ ಈ ಭಾಗದ ಪ್ರಭಾವಿ ಮುಖಂಡ ಉಮಾಮಹೇಶ್‌ಗೆ ಟಿಕೆಟ್ ತಪ್ಪಿಸುವುದು ಅಷ್ಟು ಸುಲಭವಲ್ಲ. ಸವಾಲಿನ ನಡುವೆ ಮಾಜಿ ಶಾಸಕ ಕೆ.ಷಡಕ್ಷರಿ ತಮ್ಮ ಪ್ರಭಾವ ಬಳಸಿ ಕುಟುಂಬದ ಕುಡಿಗೆ ರಾಜಕೀಯ ಶಕ್ತಿ ನೀಡುವರೇ ಎಂಬುದು ಕುತೂಹಲ ಮೂಡಿಸಿದೆ.

    ಜಿಪಂ ಮಾಜಿ ಸದಸ್ಯ ಉಮಾಮಹೇಶ್, ತ್ರಯಂಬಕ, ನಾರಾಯಣ, ಆನಂದರವಿ ಎಲ್ಲರೂ ಟಿಕೆಟ್ ಕೇಳುತ್ತಿದ್ದಾರೆ. ಪ್ರಭಾವಿ ಮುಖಂಡರೆಲ್ಲಾ ಟೂಡಾ ಶಶಿಧರ್ ಜತೆ ಒಗ್ಗಟ್ಟಾಗಿರುವುದು ಕಾಂಗ್ರೆಸ್ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಕೆ.ಷಡಕ್ಷರಿ ಅವರ ಬಣ ಕೂಡ ಪ್ರಬಲವಾಗಿಯೇ ಇದೆ. ಹಾಗಾಗಿ, ಎರಡೂ ಬಣಗಳ ನಡುವೆ ಸಮನ್ವಯ ಸಾಧಿಸಲು ಶಶಿಧರ್‌ಗೆ ಚುನಾವಣೆ ಹೊಣೆ ನೀಡಬೇಕು ಎಂಬ ಕೂಗು ಕೂಡ ಇದೆ.

    ಕೆ.ಷಡಕ್ಷರಿ, ಎಸ್.ಪಿ.ಮುದ್ದಹನುಮೇಗೌಡ, ಡಾ.ಜಿ.ಪರಮೇಶ್ವರ್ ಗರಡಿಯಲ್ಲಿ ಪಳಗಿರುವ ಟೂಡಾ ಶಶಿಧರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ ಎಂದೇ ಗುರುತಿಸಿಕೊಂಡಿದ್ದು, ಸಂಘಟನೆಯಲ್ಲಿಯೂ ಮುಂಚೂಣಿಯಲ್ಲಿ ನಿಲ್ಲುವ ಸಾಮರ್ಥ್ಯ, ಜಾತಿಯ ಶಕ್ತಿ, ಸಕಲ ಸಂಪನ್ಮೂಲ ಹೊಂದಿದ್ದು, ಪಕ್ಷದ ಹಿತದೃಷ್ಟಿಯಿಂದ ಚುನಾವಣೆಯಲ್ಲಿ ಶಕ್ತಿಯಾಗಬಲ್ಲರು ಎಂಬ ಮಾತಿದೆ. ಇನ್ನು ಪಕ್ಷದಿಂದ ಪಕ್ಷಕ್ಕೆ ಎಡತಾಕಿ, ಕಡೆಗೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕೆ.ಟಿ.ಶಾಂತಕುಮಾರ್, ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಜನರಿಗೆ ಪ್ರಿಯವಾಗಿ ಕಂಡರೂ ಚುನಾವಣೆಯಲ್ಲಿ ಮತ ಪಡೆಯುವ ಸಾಮರ್ಥ್ಯ ಪಡೆಯುವಲ್ಲಿ ಮತ್ತಷ್ಟು ಸರ್ಕಸ್ ಮಾಡಲೇಬೇಕು.

    ಜಿಪಂ ಮಾಜಿ ಅಧ್ಯಕ್ಷ ಆನಂದ ರವಿ ಕಾಂಗ್ರೆಸ್‌ಗೆ? : ಜಿಪಂ ಮಾಜಿ ಅಧ್ಯಕ್ಷ, ಒಕ್ಕಲಿಗ ಸಮುದಾಯದ ಮುಖಂಡ ಆನಂದರವಿ ಮುಂಬರುವ ಜಿಪಂ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಕೂಡ ಒಕ್ಕಲಿಗ ಸೇರಿದಂತೆ ಇತರ ಸಮುದಾಯಗಳ ಮುಖಂಡರನ್ನು ಪಕ್ಷಕ್ಕೆ ಸೆಳೆಯಲು ಆಸಕ್ತವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಮತ್ತೆ ಪಡೆಯಲು ಮುಖಂಡರಲ್ಲಿರುವ ಭಿನ್ನಮತ ಶಮನ ಕೂಡ ಪ್ರಮುಖ ಎನಿಸಿದೆ.

    ಷಡಕ್ಷರಿಗೆ ಪಕ್ಷವೇ ಶಕ್ತಿ. ಕಾರ್ಯಕರ್ತರಿಗೆ ಷಡಕ್ಷರಿಯೇ ಶಕ್ತಿ ಎಂಬುದನ್ನು ಯಾರೂ ಅಲ್ಲಗೆಳೆಯಬಾರದು.
    ಕೆ. ಷಡಕ್ಷರಿ, ಮಾಜಿ ಶಾಸಕ ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts