More

    ಟಿಂಗರಿಕರ ನಾಟ್ ರೀಚೇಬಲ್ !

    ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್ಸ್​ಪೆಕ್ಟರ್ ಚನ್ನಕೇಶವ ಟಿಂಗರಿಕರ ಅನಾರೋಗ್ಯದ ರಜೆ ಪಡೆದು ನಾಪತ್ತೆಯಾಗಿದ್ದಾರೆ. ಸಿಬಿಐ ಅಧಿಕಾರಿಗಳ ಕೈಗೂ ಸಿಗದೆ, ದೂರವಾಣಿ ಸಂಪರ್ಕಕ್ಕೂ ಸಿಗದೆ ನಾಟ್ ರೀಚೇಬಲ್ ಆಗಿದ್ದಾರೆ.

    ಮೂರು ವಾರದ ಹಿಂದೆ ಅನಾರೋಗ್ಯದ ಕಾರಣ ಹೇಳಿ ರಜೆ ಮೇಲೆ ತೆರಳಿದ್ದ ಟಿಂಗರಿಕರ ಧಾರವಾಡದ ತಮ್ಮ ನಿವಾಸದಲ್ಲಿ ಇಲ್ಲ. ಆಸ್ಪತ್ರೆಗೂ ದಾಖಲಾಗಿರುವ ಮಾಹಿತಿ ಇಲ್ಲ. ಹೀಗಾಗಿ, ತಾಂತ್ರಿಕವಾಗಿ ಅವರು ಕಾಣೆಯಾಗಿದ್ದಾರೆ.

    ಯೋಗೀಶಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಸರಿಯಾಗಿ ಮಾಡಿಲ್ಲ, ರಾಜಕೀಯ ಒತ್ತಡಕ್ಕೆ ಬಾಗಿ ತಪ್ಪು ಮಾಡಿದ್ದಾರೆ ಎನ್ನುವುದು ಅವರ ಮೇಲಿರುವ ದೊಡ್ಡ ಸಂಶಯ, ಆರೋಪ.

    ಯೋಗೀಶಗೌಡ ಪ್ರಕರಣದ ಸಿಬಿಐ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಟಿಂಗರಿಕರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಜಾಮೀನು ಅರ್ಜಿ ತಿರಸ್ಕಾರಗೊಳ್ಳುತ್ತಿದ್ದಂತೆ ನಾಪತ್ತೆಯಾಗಿದ್ದಾರೆ. ವಿಚಾರಣೆಗೆಂದು ಸಿಬಿಐ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಆ ಹಿನ್ನೆಲೆಯಲ್ಲಿ ಟಿಂಗರಿಕರ ನಾಪತ್ತೆಯಾಗಿದ್ದಾರೆಂದು ಇಲಾಖೆ ನೋಟಿಸ್ ತೆಗೆದಿರುವುದಾಗಿ ತಿಳಿದುಬಂದಿದೆ.

    ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿನ ತಮ್ಮದೇ ಒಡೆತನದ ಉದಯ ಜಿಮ್ಲ್ಲಿ 2016ರ ಜೂನ್ 15ರಂದು ಬೆಳಗ್ಗೆ ಯೋಗೀಶಗೌಡ ಹತ್ಯೆ ನಡೆದಿತ್ತು. ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಯಾಗಿದ್ದ ಚನ್ನಕೇಶವ ಟಿಂಗರಿಕರ ನೇತೃತ್ವದ ತಂಡ ಮೂರು ದಿನಗಳಲ್ಲಿ ಬಸವರಾಜ ಮುತ್ತಗಿ, ವಿನಾಯಕ ಕಟಗಿ, ಸಂದೀಪ ಸವದತ್ತಿ, ವಿಕ್ರಂ ಬಳ್ಳಾರಿ, ಕೀರ್ತಿ ಕುರಹಟ್ಟಿ, ಮುದಕಪ್ಪ ಹೊಂಗಲ್​ರನ್ನು ಬಂಧಿಸಿತ್ತು.

    ಪ್ರಕರಣದ ಸಿಬಿಐ ತನಿಖೆಯಾಗಬೇಕು ಎಂದು ಯೋಗೀಶಗೌಡ ಸಹೋದರ ಗುರುನಾಥಗೌಡ ಒತ್ತಾಯಿಸುತ್ತ ಬಂದಿದ್ದರು.

    ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿಬಿಐಗೆ ವಹಿಸಲಾಯಿತು. ತನಿಖೆ ಚುರುಕುಗೊಳಿಸಿದ ಸಿಬಿಐ, ಇನ್ಸ್​ಪೆಕ್ಟರ್ ಚನ್ನಕೇಶವ ಟಿಂಗರಿಕರ ಸೇರಿ ಇತರ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಪಕ್ಷಪಾತ ದೃಷ್ಟಿಯಿಂದ ನೋಡಿ, ತಪ್ಪಾಗಿ ತನಿಖೆ ನಡೆಸಿದ್ದಾರೆ ಎಂದು ರ್ತಸಿದೆ. ಸಿಬಿಐ ಅಧಿಕಾರಿಗಳು ಈ ಹಿಂದೆ ಟಿಂಗರಿಕರ ಸೇರಿ ಇತರ ಅಧಿಕಾರಿಗಳ ವಿಚಾರಣೆ ನಡೆಸಿದ್ದರು.

    ಟಿಂಗರಿಕರ್​ಗೆ ಬಂಧನ ಭೀತಿ ಎದುರಾಗಿದ್ದು, ಇದೇ ಕಾರಣಕ್ಕೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

    ನಿಯಮ ಹೀಗಿದೆ: ಪೊಲೀಸ್ ಇಲಾಖೆಯ ಅಧಿಕಾರಿ ಅಥವಾ ಸಿಬ್ಬಂದಿ ಅನಾರೋಗ್ಯದ ನಿಮಿತ್ತ ರಜೆ ಪಡೆಯುವಾಗ ಇಲಾಖೆಯ ಅನುಮತಿ ಪಡೆಯಬೇಕು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಆರಂಭವಾದ ಕೂಡಲೆ ಅನಾರೋಗ್ಯದ ರಜೆ ಪತ್ರದ ಜತೆ ವೈದ್ಯರ ದೃಢೀಕರಣ ಪತ್ರವನ್ನು ಇಲಾಖೆ ಕಚೇರಿಗೆ ರವಾನಿಸಬೇಕು. ತಿಂಗಳ ನಂತರ ಮತ್ತೆ ಹೆಚ್ಚುವರಿ ರಜೆ ಬೇಕಿದ್ದಲ್ಲಿ ವೈದ್ಯರ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಟಿಂಗರಿಕರ ರಜೆ ತೆಗೆದುಕೊಂಡು ಇನ್ನೂ ತಿಂಗಳಾಗಿಲ್ಲ. ರಜೆ ವಿಸ್ತರಣೆಗೆ ಇನ್ನೂ ಅರ್ಜಿ ಸಲ್ಲಿಸಿಲ್ಲ.

    ಬೆಳಗಾವಿ, ಧಾರವಾಡದಲ್ಲಿ ಕರ್ತವ್ಯ: ಚನ್ನಕೇಶವ ಟಿಂಗರಿಕರ ಮನೆ ಧಾರವಾಡದ ಮಲಪ್ರಭಾ ನಗರದಲ್ಲಿದೆ. ತಂದೆ ನಿವೃತ್ತ ಸರ್ಕಾರಿ ಅಧಿಕಾರಿ. 2016ರಲ್ಲಿ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿದ್ದ ಚನ್ನಕೇಶವ, ಬಳಿಕ ಬೆಳಗಾವಿಯ ಕ್ಯಾಂಪ್ ಕಚೇರಿಗೆ ವರ್ಗಾವಣೆಗೊಂಡಿದ್ದರು. ಸದ್ಯ ಹು-ಧಾ ಕಮಿಷನರೇಟ್​ನ ನಗರ ವಿಶೇಷ ವಿಭಾಗ(ಸಿಎಸ್​ಬಿ)ದ ಇನ್ಸ್​ಪೆಕ್ಟರ್ ಹುದ್ದೆಯಲ್ಲಿದ್ದಾರೆ. ಅವರ ಹೇಳಿಕೆಗಳಿಗೆ ಪ್ರಕರಣ ತನಿಖೆಯಲ್ಲಿ ವಿಶೇಷ ಮಹತ್ವವಿರುತ್ತದೆ ಎಂದು ಭಾವಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts