More

    ಭದ್ರಾ ಅಭಯಾರಣ್ಯದಲ್ಲಿ ಮರಗಳ್ಳತನ

    ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಮರಗಳ್ಳತನ ನಿರಂತರ ನಡೆದಿದೆ. ಆದರೆ ಅರಣ್ಯದೊಳಗೆ ಮರಗಳ್ಳರು ಅಷ್ಟೊಂದು ಸುಲಭವಾಗಿ ಪ್ರವೇಶಿಸಲು ಸಾಧ್ಯವೇ ಇಲ್ಲ. ಹೀಗಿರುವಾಗ ಬೆಲೆಬಾಳುವ ನೂರಾರು ಮರಗಳನ್ನು ಕಡಿತಲೆ ಮಾಡಿ ಸಾಗಿಸಲಾಗುತ್ತಿದೆ. ಹಾಗಿದ್ದರೆ ಇಲಾಖೆ ಸಿಬ್ಬಂದಿ ಮೈಮರೆತು ಕುಳಿತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

    ಭದ್ರಾ ಅಭಯಾರಣ್ಯ ವ್ಯಾಪ್ತಿಯ ಗುರುಪುರ, ಗುಡ್ಡದ ಬೀರನಹಳ್ಳಿ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಮರಗಳನ್ನು ಕಟಾವು ಮಾಡಿ ಸಾಗಿಸಲಾಗಿದೆ. ಆದರೆ ಇದುವರೆಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮರಗಳ್ಳರನ್ನು ಹಿಡಿಯಲು ಸಾಧ್ಯವಾಗಿಲ್ಲ ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
    ಅಭಯಾರಣ್ಯದೊಳಗೆ ಪ್ರವೇಶಿಸುವುದು ಅಷ್ಟು ಸುಲಭವಿಲ್ಲ. ಅರಣ್ಯದೊಳಗೆ ಹೋಗುವ ಎಲ್ಲ ರಸ್ತೆಗಳಿಗೂ ಚೆಕ್‌ಪೋಸ್ಟ್ ಅಳವಡಿಸಲಾಗಿದೆ. ಜತೆಗೆ ಅರಣ್ಯ ಸಿಬ್ಬಂದಿ ಯಾವಾಗಲೂ ಚೆಕ್‌ಪೋಸ್ಟ್ ಬಳಿಯೇ ಇರುತ್ತಾರೆ. ಹೀಗಿರುವಾಗ ಕಾಡಿನಲ್ಲಿ ಮರಗಳನ್ನು ಕಡಿದವರು ಯಾರು? ಕಡಿತಲೆ ಮಾಡಿದ ಮರಗಳನ್ನು ಕಾಡಿನಿಂದ ಸಾಗಿಸಿದವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
    ಮರಗಳ್ಳರು ಬೆಲೆಬಾಳುವ ಬೀಟೆ ಹಾಗೂ ಸಾಗುವಾನಿ ಮರಗಳನ್ನೇ ಕಳ್ಳತನ ಮಾಡಿದ್ದಾರೆ. ಕಳವಾದ 53 ಮರದ ಬುಡಗಳನ್ನು ಪತ್ತೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಆದರೆ 200ಕ್ಕೂ ಹೆಚ್ಚು ಮರಗಳನ್ನು ಕಳ್ಳತನ ಮಾಡಲಾಗಿದೆ ಎಂಬುದು ಸ್ಥಳೀಯರ ಆರೋಪ.
    ಬೇಟೆ ನಿಗ್ರಹ ಶಿಬಿರಗಳಿವೆ: ಭದ್ರಾ ಅಭಯಾರಣ್ಯ ವ್ಯಾಪ್ತಿಯ ಗುರುಪುರ, ಸಿ.ಎನ್.ಕೆರೆ, ಗುಡ್ಡದ ವೀರನಹಳ್ಳಿಯಲ್ಲಿ ಕಳ್ಳ ಬೇಟೆ ನಿಗ್ರಹ ಮೂರು ಶಿಬಿರಗಳಿವೆ. ಶಿಬಿರಗಳಲ್ಲಿ ದಿನದ 24 ಗಂಟೆಯೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಇವರ ಕಣ್ತಪ್ಪಿಸಿ ಮರಗಳನ್ನು ಕಳ್ಳತನ ಮಾಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡಲಾರಂಭಿಸಿದೆ. ಈ ಶಿಬಿರದಲ್ಲಿರುವ ಸಿಬ್ಬಂದಿ ಮೇಲೆ ಒತ್ತಡ ಹೇರಿ ಮರಗಳನ್ನು ಕಳ್ಳತನ ಮಾಡಿರಬೇಕು ಇಲ್ಲವೇ ಶಿಬಿರದ ಸಿಬ್ಬಂದಿಯೂ ಇದರಲ್ಲಿ ಶಾಮೀಲಾಗಿರಬಹುದು ಎಂಬುದು ಸ್ಥಳೀಯರ ವಾದ.
    ಬಡಪಾಯಿಗಳು ಬಲಿಪಶು: ಭದ್ರಾ ಅಭಯಾರಣ್ಯದಲ್ಲಿ ಮರಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಇಬ್ಬರು ಅರಣ್ಯ ರಕ್ಷಕರು ಹಾಗೂ ಓರ್ವ ಡಿಆರ್‌ಎಫ್‌ಒ ಅಮಾನತಾಗಿದ್ದಾರೆ. ಆದರೆ ಮರಗಳ್ಳತನ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳನ್ನು ರಕ್ಷಿಸುವ ಉದ್ದೇಶದಿಂದ ಈ ಮೂವರನ್ನು ಅಮಾನತು ಮಾಡಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಮರಗಳ್ಳತನ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ಕೆಳ ಶ್ರೇಣಿಯ ಸಿಬ್ಬಂದಿ ಇಷ್ಟೊಂದು ಧೈರ್ಯ ಮಾಡಲು ಸಾಧ್ಯವೇ ಇಲ್ಲ. ಮೂವರನ್ನು ಅಮಾನತು ಮಾಡಿ ಅರಣ್ಯ ಇಲಾಖೆ ಕಣ್ಣೊರೆಸುವ ತಂತ್ರ ಮಾಡಿದೆ ಎನ್ನುವುದು ಪರಿಸರವಾದಿಗಳ ಆರೋಪ.
    ಟ್ರ್ಯಾಕ್ಟರ್‌ಗಳು ಓಡಾಡಿದ ಗುರುತು: ಭದ್ರಾ ಅಭಯಾರಣ್ಯ ವ್ಯಾಪ್ತಿಯ ಗುರುಪುರ, ಗುಡ್ಡದ ಬೀರನಹಳ್ಳಿ ಭಾಗದ ಕಾಡಿನಲ್ಲಿ ಎಲ್ಲೆಂದರಲ್ಲಿ ಟ್ರ್ಯಾಕ್ಟರ್‌ಗಳು ಓಡಾಡಿರುವ ಗುರುತುಗಳಿವೆ. ಯಾವ ಉದ್ದೇಶಕ್ಕೆ ಅರಣ್ಯದೊಳಗೆ ಓಡಾಡಿವೆ ಎನ್ನುವುದು ಯಕ್ಷಪ್ರಶ್ನೆ. ಮರಗಳನ್ನಷ್ಟೇ ಕಳವು ಮಾಡಲು ಟ್ರ್ಯಾಕ್ಟರ್‌ಗಳನ್ನು ಬಳಸಲಾಗಿದೆಯೇ ಅಥವಾ ಇನ್ಯಾವುದೋ ಅಕ್ರಮ ಸಾಗಣೆ ನಡೆಸಲಾಗಿದೆಯೇ ಎಂಬುದು ತನಿಖೆಯಿಂದ ಹೊರಬರಬೇಕಿದೆ.
    ಭದ್ರಾ ಅಭಯಾರಣ್ಯ ವ್ಯಾಪ್ತಿಯ ಗುರುಪುರ, ಗುಡ್ಡದ ಬೀರನಹಳ್ಳಿ ಭಾಗದಲ್ಲಿ 53 ಮರಗಳು ಕಳ್ಳತನವಾಗಿರುವ ಬಗ್ಗೆ ಡಿಸಿಎಫ್ ವರದಿ ನೀಡಿದ್ದಾರೆ. ಈ ವರದಿಯನ್ನು ಆಧರಿಸಿ ಈಗಾಗಲೇ ಮೂವರನ್ನು ಅಮಾನತು ಮಾಡಲಾಗಿದೆ. ತನಿಖೆ ಮುಂದುವರಿದಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮರಗಳು ಕಳುವಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಚಿಕ್ಕಮಗಳೂರು ಸಿಸಿಎಫ್ ಯು.ಪಿ.ಸಿಂಗ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts