More

    ಕೂಂಬಿಂಗ್ ವೇಳೆ ಹುಲಿ ಹೆಜ್ಜೆ ಗುರುತುಗಳು ಪತ್ತೆ

    ಹನಗೋಡು: ಇಲ್ಲಿಗೆ ಸಮೀಪದ ನೇಗತ್ತೂರು ಪಕ್ಕದ ಶೆಟ್ಟಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶದಲ್ಲಿ ಹುಲಿ ಪತ್ತೆಗಾಗಿ ಸಾಕಾನೆಗಳ ಮೂಲಕ ಮೂರನೇ ದಿನವು ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದ್ದು, ಹುಲಿ ಮಾತ್ರ ಪತ್ತೆಯಾಗಿಲ್ಲ. ಆದರೆ ಅದರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ನೇಗತ್ತೂರಿನ ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಎರಡು ಹಸುಗಳನ್ನು ಕೊಂದ ಹುಲಿ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮೂರು ದಿನಗಳಿಂದ ಕೂಂಬಿಂಗ್ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಶುಕ್ರವಾರ ಎಸಿಎಫ್ ದಯಾನಂದ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಸುಬ್ರಹ್ಮಣ್ಯ ನೇತೃತ್ವದಲ್ಲಿ ಸಾಕಾನೆಗಳಾದ ಗಣೇಶ, ಶ್ರೀರಂಗ, ಡಿಆರ್‌ಎಫ್‌ಒಗಳಾದ ಸಿದ್ದರಾಜು, ವೀರಭದ್ರಯ್ಯ, ಸಿಬ್ಬಂದಿ ಹಾಗೂ ಆರ್.ಆರ್.ಟಿ. ಸಿಬ್ಬಂದಿ ಸಹಾಯದಿಂದ ಕೂಂಬಿಂಗ್ ನಡೆಸಿದರೂ ಹುಲಿ ಪತ್ತೆಯಾಗಲಿಲ್ಲ.

    ಆದರೆ ಅರಣ್ಯದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಗುರುವಾರ ರಾತ್ರಿ ಹುಲಿ ಓಡಾಟ ನಡೆಸಿರುವ ದೃಶ್ಯಾವಳಿ ಸೆರೆಯಾಗಿದೆ. ಇದಲ್ಲದೆ ಸಾಕಾನೆಗಳ ಕೂಂಬಿಂಗ್ ಸಮಯದಲ್ಲಿ ಹುಲಿ ಹೆಜ್ಜೆಯ ಗುರುತುಗಳು ಪತ್ತೆಯಾಗಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕಾಡಂಚಿನ ಜಮೀನುಗಳಲ್ಲಿ ಕೆಲಸ ಮಾಡುತ್ತಿರುವ ರೈತರಿಗೆ ಹುಲಿ ಇರುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಹುಲಿ ಸೆರೆಗೆ ಆಗ್ರಹ: ಶೆಟ್ಟಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶದಲ್ಲಿ ಹುಲಿ ಇರುವಿಕೆ ಖಚಿತವಾಗಿದ್ದು, ಈ ಭಾಗದ ಗ್ರಾಮಸ್ಥರು ಹಾಗೂ ರೈತರು ಆತಂಕದಲ್ಲಿದ್ದೇವೆ. ಅನಾಹುತವಾಗುವ ಮೊದಲೇ ಈ ಹುಲಿಯನ್ನು ಸೆರೆ ಹಿಡಿಯಬೇಕೆಂದು ಯುವ ರೈತ ಮುಖಂಡ ನೇಗತ್ತೂರು ಪ್ರವೀಣ್ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts