More

    ತುಂಬೆ ಡ್ಯಾಂ ಒಳಹರಿವು ಕ್ಷೀಣ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಏಳು ಮೀಟರ್ ಎತ್ತರಕ್ಕೆ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಈ ಬಾರಿ ಪೂರ್ಣಪ್ರಮಾಣದಲ್ಲಿ ನೀರು ಸಂಗ್ರಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಸೂಚನೆ ನೀಡಿದರೂ ಆರು ಮೀಟರ್ ಮಾತ್ರ ನೀರು ಸಂಗ್ರಹ ನಡೆಯುತ್ತಿದೆ.

    ಕಳೆದ ವರ್ಷವೂ ಫೆಬ್ರವರಿ 19ಕ್ಕೆ ನೀರಿನ ಮಟ್ಟ 6 ಮೀಟರ್ ಇತ್ತು. ಫೆ.24ಕ್ಕೆ 5.95 ಮೀಟರ್ ಇಳಿಕೆಯಾಗಿ, ಬಳಿಕ ಇದೇ ರೀತಿ ಕಡಿಮೆಯಾಗುತ್ತ ಹೋಗಿ ಮಾರ್ಚ್‌ನಲ್ಲಿ 4.96 ಮೀಟರ್‌ಗೆ ತಲುಪಿತ್ತು. ಮೇ 29ಕ್ಕೆ 2.93 ಮೀಟರ್‌ಗೆ ಕುಸಿದಿತ್ತು. ಜೂನ್ 10ಕ್ಕೆ 2.10 ಮೀಟರ್‌ಗೆ ಇಳಿದಿರುವುದು ಕಳೆದ ವರ್ಷದ ಗರಿಷ್ಠ ಇಳಿಕೆ. ಜೂ.18ರಿಂದ ಮತ್ತೆ 5 ಮೀಟರ್ ನೀರು ಸಂಗ್ರಹಣೆಯಾಗಿತ್ತು.
    ಈ ಬಾರಿ ಆರು ಮೀಟರ್ ಸಂಗ್ರಹಕ್ಕೆ ವರ್ಷಾರಂಭಕ್ಕೂ ಮೊದಲೇ ಗೇಟ್ ಹಾಕಲಾಗಿದ್ದು, ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ನೇತ್ರಾವತಿ ನದಿಯಲ್ಲಿ ನಿಗದಿತ ಸಮಯಕ್ಕಿಂತಲೂ ಮೊದಲೇ ಒಳ ಹರಿವು ಕ್ಷೀಣಗೊಂಡಂತೆ ಕಾಣುತ್ತಿದೆ. ಡ್ಯಾಂ ಇರುವ ಪ್ರದೇಶದಲ್ಲಿ ಮೇಲ್ನೋಟಕ್ಕೆ ನದಿ ನೀರಿನಿಂದ ತುಂಬಿ ತುಳುಕುತ್ತಿದ್ದರೂ ಒಳ ಹರಿವು ಕಡಿಮೆಯಾಗಿರುವುದು ಸ್ಪಷ್ಟವಾಗಿದೆ.
    ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ಉಂಟಾದ ಜಲಸ್ಫೋಟದ ಪರಿಣಾಮ ಘಟ್ಟ ಪ್ರದೇಶದಲ್ಲಿ ನೇತ್ರಾವತಿ ಹಾಗೂ ಅದರ ಉಪನದಿಗಳಲ್ಲಿ ಹೂಳು ತುಂಬಿ ಒಳ ಹರಿವು ಕಡಿಮೆಯಾಗಿದೆ. ಮೇಲಾಗಿ ಬಿಸಿಲಿನ ತಾಪವೂ ಪರಿಣಾಮ ಬೀರುತ್ತಿದೆ. ಇದರ ನೇರ ಹೊಡೆತ ಬಂಟ್ವಾಳ ತಾಲೂಕು ಹಾಗೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರ ಮೇಲೂ ತಟ್ಟಲಿದೆ. ಕುಡಿಯಲು ಹಾಗೂ ಕೃಷಿಗೆ ನೇತ್ರಾವತಿ ನದಿ ನೀರನ್ನೇ ನಂಬಿ ಬದುಕುತ್ತಿರುವ ಈ ಭಾಗದ ಜನರಿಗೆ ಮುಂದಿನ ದಿನಗಳಲ್ಲಿ ಜಲಕ್ಷಾಮದ ಭೀತಿಯೂ ಕಾಡಲಿದೆ.
    ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ನೀರಿನ ಒಳ ಹರಿವು ಕಡಿಮೆಯಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ. ಕಳೆದ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಅನುಭವಿಸಿದ ನೆನಪು ಇನ್ನೂ ಹಸಿಯಾಗಿದ್ದು ಮುನ್ನೆಚ್ಚರಿಕೆಯಾಗಿ ಈಗಿಂದಲೇ ಜಿಲ್ಲಾಡಳಿತ ಜಾಗೃತೆ ವಹಿಸುವ ಅಗತ್ಯತೆ ಇದೆ.

    ಎಂಎಂಆರ್ ವಿದ್ಯುತ್ ಉತ್ಪಾದನೆ ಸ್ಥಗಿತ: ತುಂಬೆ ಡ್ಯಾಂನ ಮೇಲ್ಭಾಗದಲ್ಲಿರುವ ಶಂಭೂರಿನ ಎಎಂಆರ್ ಡ್ಯಾಂನಲ್ಲಿ ಈಗಾಗಲೇ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದ್ದು ನೀರಿನ ಸಂಗ್ರಹಣೆಯನ್ನಷ್ಟೇ ಮಾಡಲಾಗುತ್ತಿದೆ. ಪ್ರಸ್ತುತ ಈ ಡ್ಯಾಂನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಶೇಖರಿಸಲಾಗಿದೆ.

    ಪರಿಹಾರ ಕೊಟ್ಟರಷ್ಟೇ 7 ಮೀ. ಸಂಗ್ರಹ: 2004ರಿಂದ ತುಂಬೆ ವೆಂಟೆಡ್ ಡ್ಯಾಂ ಸಮಸ್ಯೆ ಬಂಟ್ವಾಳ ತಾಲೂಕಿನ ನದಿ ತೀರದ ಜನರನ್ನು ಕಾಡುತ್ತಲೇ ಇದೆ. ಪರಿಹಾರ ನೀಡುವ ವಿಚಾರದಲ್ಲಿ ಪ್ರತಿ ಬಾರಿಯೂ ರೈತರಲ್ಲಿ ಗೊಂದಲ ಮೂಡಿಸುವ ಸರ್ಕಾರ ನ್ಯಾಯೋಚಿತ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಎರಡು ವರ್ಷಗಳಿಂದ ಪರಿಹಾರ ಮೊತ್ತ, ನೆಲಬಾಡಿಗೆ ನೀಡುತ್ತಿದ್ದರೂ ಇನ್ನೂ ಎಲ್ಲ ಸಂತ್ರಸ್ತರನ್ನು ಮುಟ್ಟಿಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಯುಲ್ಲಿ ನಡೆದ ರೈತರ ಕುಂದು ಕೊರತೆ ನಿವಾರಣಾ ಸಭೆಯಲ್ಲಿ ಫೆ.25ರ ಒಳಗಾಗಿ 7 ಮೀಟರ್ ಮುಳುಗಡೆ ಜಮೀನಿನ ರೈತರಿಗೂ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿರುವುದರಿಂದ ಸಂತ್ರಸ್ತ ರೈತರಲ್ಲಿ ನೆಮ್ಮದಿ ಮೂಡಿದೆ. ಇನ್ನು 7 ಮೀ. ಮುಳುಗಡೆ ಜಮೀನಿನ ಸರ್ವೇಗೆ ಬಂದ ಸಿಬ್ಬಂದಿಯನ್ನು ಪರಿಹಾರ ನೀಡದೆ ಸರ್ವೇ ನಡೆಸಬಾರದೆಂದು ರೈತರು ವಾಪಸ್ ಕಳುಸಿದ್ದು, ನಂತರ ಸರ್ವೇ ನಡೆದಿಲ್ಲ. ಹಾಗಾಗಿ ಈ ಬಾರಿ 7 ಮೀಟರ್ ನೀರು ಸಂಗ್ರಹ ತುಸು ಕಷ್ಟ.

    ತುಂಬೆ ಅಣೆಕಟ್ಟಿಗೆ ಒಳಹರಿವು ಕ್ಷೀಣವಾಗಿದ್ದು, ಪ್ರಸ್ತುತ 6 ಮೀ. ಮಾತ್ರ ನೀರು ನಿಲ್ಲಿಸಲಾಗುತ್ತಿದೆ. ಸಣ್ಣ ಪ್ರಮಾಣದಲ್ಲಿ ಹೆಚ್ಚುವರಿ ನೀರು ಹೊರಗೆ ಹೋಗುತ್ತಿದೆ. 7 ಮೀ. ನೀರು ನಿಲ್ಲಿಸುವ ಕುರಿತಂತೆ ಸರ್ವೇ ಕಾರ್ಯ ಸಂಪೂರ್ಣವಾಗಿಲ್ಲ. ಶಂಭೂರಿನ ಎಎಂಆರ್ ಡ್ಯಾಂನಲ್ಲಿಯೂ ನೀರು ಸಂಗ್ರಹವಿದೆ. ಬೇಸಿಗೆ ನೀರು ಸರಬರಾಜು ಕುರಿತು ಈಗಾಗಲೇ ಎರಡು ಸಭೆಗಳು ನಡೆದಿವೆ. ಈ ತಿಂಗಳ ಅಂತ್ಯದಲ್ಲಿ ಇನ್ನೊಂದು ಸಭೆ ನಡೆಯುವ ಸಾಧ್ಯತೆಯಿದ್ದು, ಈ ಬಾರಿ ರೇಷನಿಂಗ್ ಅಗತ್ಯವಿದೆಯೇ, ಇದ್ದರೆ ಯಾವ ರೀತಿ ಮಾಡಬೇಕು ಎನ್ನುವ ಕುರಿತು ಆ ಸಭೆಯಲ್ಲಿ ಚರ್ಚೆಯಗಬಹುದು.
    – ನರೇಶ್ ಶೆಣೈ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಮಂಗಳೂರು ಮಹಾನಗರ ಪಾಲಿಕೆ ನೀರು ಸರಬರಾಜು ವಿಭಾಗ

    ದಾಖಲೆ ಸರಿ ಇರುವಂತಹ ಸಂತ್ರಸ್ತ ರೈತರಿಗೆ ಫೆ.25ರೊಳಗೆ ಪರಿಹಾರ ನೀಡುವುದಾಗಿ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ಹಲವು ವರ್ಷಗಳಿಂದಲೂ ರೈತರನ್ನು ಪರಿಹಾರ ನೀಡದೆ ವಂಚಿಸುತ್ತಿದ್ದುದರಿಂದ ಪರಿಹಾರ ನೀಡಿದ ಬಳಿಕವೇ 7 ಮೀಟರ್ ಮುಳುಗಡೆಗೆ ಸರ್ವೇ ನಡೆಸುವಂತೆ ವಿನಂತಿಸಿ ವಾಪಸ್ ಕಳುಹಿಸಲಾಗಿತ್ತು.
    – ಎಂ.ಸುಬ್ರಹ್ಮಣ್ಯ ಭಟ್, ಅಧ್ಯಕ್ಷ, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts