RRR ಆಕರ್ಷಣೆ: ನಾಲ್ವರು ಅಭಿಮಾನಿಗಳ ಸಾವು!

Published on
'RRR'... ಇದು ಕೇವಲ ಸಿನಿಮಾ ಅಲ್ಲಾ, ಬಹಳಷ್ಟು ಸಿನಿಪ್ರೇಕ್ಷಕರಿಗೆ ಇದು ಒಂದು ಏಮೋಷನ್ ಎಂದೇ ಹೇಳಬೇಕು. ಬರೋಬ್ಬರಿ ಐದು ವರ್ಷಗಳ ಬಳಿಕ 'ಬಾಹುಬಲಿ' ಚಿತ್ರದ ನಂತರ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಈ 'RRR' ಸಿನಿಮಾ ರಿಲೀಸ್ ಆಗಿದ್ದು, ಚಿತ್ರದ ನಟರಾದ ಜೂ ಎನ್‌ಟಿಆರ್, ರಾಮ್ ಚರಣ್ ತೇಜ್ ಅವರನ್ನು ಒಟ್ಟಿಗೆ ಪರದೆಯ ಮೇಲೆ ನೋಡಲು ಅಭಿಮಾನಿಗಳು ಮಾತ್ರವಲ್ಲದೇ, ಒಟ್ಟಾರೆ ಸಿನಿಮಾ ಪ್ರೇಮಿಗಳು ಎಲ್ಲರೂ ಮುಗಿಬಿಳುತ್ತಿದ್ದಾರೆ. ಹೌದು, ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ನಿರ್ದೇಶಿಸಿದ ಈ 500 ಕೋಟಿ ಬಜೆಟ್​ನ ಅದ್ಭುತವಾದ ಸಿನಿಮಾವನ್ನು ಕಣ್ ತುಂಬಿಕೊಳ್ಳುತ್ತಿರುವುದರ ಜತೆಗೆ ಈ ಸಿನಿಮಾವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ ವೀಕ್ಷಕರು. ಆದರೆ, ಸಿನಿಮಾವನ್ನು ಸೆಲೆಬ್ರೇಟ್ ಮಾಡುವ ಪ್ರೋಸೆಸ್‌ನಲ್ಲಿ ಬಹಳಷ್ಟು ಕಡೆ ಅವಘಡಗಳು ಘಟಿಸುತ್ತಿರುವುದು ಎಲ್ಲರಿಗೂ ಬೇಸರ ಮೂಡಿಸಿದೆ. ಅದರಲ್ಲಿಯೂ, ಸಿನಿಮಾದಿಂದಲೇ ಸಿನಿಮಾ ಪ್ರಿಯರು ಜೀವ ಕಳೆದುಕೊಳ್ಳುತ್ತಿರುವದು ತುಂಬಾ ನೋವಿನ ಸಂಗತಿ.
ಸದ್ಯ, ಈ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಮೂರು ಸಿನಿಪ್ರೇಮಿಗಳು ಜೀವ ಕಳೆದುಕೊಂಡಿರುವ ಮಾಹಿತಿ ಕೇಳಿಬಂದಿದೆ. ಮಾ. 25, ಶುಕ್ರವಾರ ದಂದು ಮುಂಜಾನೆಯ 'RRR' ಸಿನಿಮಾದ ಬೆನಿಫಿಟ್ ಶೋಗೆ ಟಿಕೆಟ್ ತರಲೆಂದು ಚಿತ್ತೂರು ಜಿಲ್ಲೆಯ ಹಳ್ಳಿಯೊಂದರ ಮೂವರು ಯುವಕರು ಬೈಕ್‌ನಲ್ಲಿ ಪಟ್ಟಣಕ್ಕೆ ತೆರಳಿದ್ದರು. ಸಿನಿಮಾ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನಿಸಿದರು ಅವರಿಗೆ ಟಿಕೆಟ್ ದೊರಕಿಲ್ಲ, ಜತೆಗೆ ಮೊದಲ ದಿನ ಸಿನಿಮಾ ನೋಡಲು ಸಾಧ್ಯವಾಗಿಲ್ಲ. ಇನ್ನು, ಇದೇ ಬೇಸರದಿಂದ ತಡರಾತ್ರಿ ಮನೆಗೆ ವಾಪಸ್ ಹೋಗುವಾಗ ಚಿತ್ತೂರು ಜಿಲ್ಲೆಯ ವಿ.ಕೊಟದ ಬಳಿ 2 ಬೈಕ್​ಗಳಿಗೆ ಆಕ್ಸಿಡೆಂಟ್ ಆಗಿ ಮೂವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಯುವಕರನ್ನು ದುರ್ಗಾ, ಯುಗುಂದರ್ ಮತ್ತು ಗಂಗಾಧರ್ ಎಂದು ಗುರುತಿಸಲಾಗಿದ್ದು, ಅವರು ವಿ ಕೋಟಾ ಮತ್ತು ರಾಮಕುಪ್ಪಂ ಮಂಡಲದ ನಿವಾಸಿಗಳು. ಈ ಘಟನೆಯಲ್ಲಿ ಮತ್ತೊಬ್ಬ ಯುವಕ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾಹಿತಿ ಇದೆ. ಘಟನೆ ನಡೆದ ಕೂಡಲೇ ಚಿತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರಂತೆ.
ಮೃತಪಟ್ಟ ಮೂವರು ಯುವಕರು ಚಿತ್ರಮಂದಿರದಲ್ಲಿ ಬ್ಲಾಕ್ ಟಿಕೆಟ್‌ಗಳು ದೊರಕುತ್ತಿವೆ ಎಂದು ಹಳ್ಳಿಯಿಂದ ಪಟ್ಟಣಕ್ಕೆ ಬೈಕ್‌ನಲ್ಲಿ ಬಂದಿದ್ದರಂತೆ. ಆದರೆ, ಅವರು ಬರುವ ವೇಳೆಗೆ ಬ್ಲಾಕ್ ಟಿಕೆಟ್‌ಗಳು ಕೂಡಾ ಖಾಲಿಯಾಗಿವೆ. ಅಂದಹಾಗೆ, ಸಿನಿಮಾ ಬಿಡುಗಡೆ ಆದ ದಿನವೇ ಆಂಧ್ರದ ಅನಂತಪುರದಲ್ಲಿ ಎಸ್‌.ವಿ.ಮ್ಯಾಕ್ಸ್ ಚಿತ್ರಮಂದಿರದಲ್ಲಿ 'RRR' ಸಿನಿಮಾ ನೋಡುತ್ತಿರುವಾಗಲೇ ಅಭಿಮಾನಿಯೊಬ್ಬ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಘಟನೆ ಇನ್ನು ಸ್ಮೃತಿಯಲ್ಲಿರುವಾಗಲೇ ಈಗ ಈ ಮೂವರು ಸಾವನ್ನಪ್ಪಿರುವ ಸುದ್ದಿ ಎಲ್ಲರನ್ನೂ ಬೇಜಾರು ಮಾಡಿದೆ. ಹಾಗೆಯೇ, ಆಂಧ್ರ ಮತ್ತು ತೆಲಂಗಾಣದಲ್ಲಿ ಕೆಲವೆಡೆ ಚಿತ್ರಮಂದಿರದ ಬಳಿ ಟಿಕೆಟ್​ಗಳಿಗೆಂದು ನಡೆದ ನೂಕಾಟ-ತಳ್ಳಾಟ, ಲಾಠಿ ಚಾರ್ಜ್‌ನಲ್ಲಿ ಕೆಲವು ಸಿನಿಪ್ರೇಕ್ಷಕರು ಗಾಯ ಮಾಡಿಕೊಂಡಿದ್ದಾರೆ. ಇನ್ನು, ಪ್ರದರ್ಶನಗಳು ರದ್ದಾದ ಕಾರಣ ಚಿತ್ರಮಂದಿರದ ಗಾಜುಗಳನ್ನು, ಸೀಟ್​ಗಳನ್ನು ಅಭಿಮಾನಿಗಳು ಒಡೆದು ಹಾಕಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net