More

    ಅಫ್ಘನ್‌ನಿಂದ ಮೂವರು ವಾಪಸ್, ಇಬ್ಬರು ಬಾಕಿ, ಹಲವು ಕನ್ನಡಿಗರು ಅತಂತ್ರ

    ಮಂಗಳೂರು/ಬಂಟ್ವಾಳ/ಉಳ್ಳಾಲ: ತಾಲಿಬಾನಿಗಳು ಇಡೀ ಅಫ್ಘಾನಿಸ್ತಾನ ವಶಪಡಿಸುವುದು ಖಚಿತ ಎಂಬುದು ಅರಿವಾಗುತ್ತಿದ್ದಂತೆ ಕೆಲವರು ತವರಿಗೆ ವಾಪಸ್ಸಾಗಿದ್ದು, ಇನ್ನು ಕೆಲವರು ಅಲ್ಲಿಯೇ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಇದುವರೆಗೆ ಲಭಿಸಿರುವ ಮಾಹಿತಿಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸುರಕ್ಷಿತವಾಗಿ ಬಂದಿದ್ದು, ಇಬ್ಬರು ಸಿಲುಕಿಕೊಂಡಿದ್ದಾರೆ.
    ಪಾರಾಗಿ ಬಂದವರು ನೀಡಿರುವ ಮಾಹಿತಿಯಂತೆ ಅಮೆರಿಕ ಸೇನೆಯ ಕ್ಯಾಂಪ್‌ಗಳಲ್ಲಿ ಕೆಲಸ ಮಾಡುತ್ತಿದ್ದ 20ಕ್ಕೂ ಅಧಿಕ ಕನ್ನಡಿಗರು ಅಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವರನ್ನು ಭಾರತ ಏರ್‌ಲಿಫ್ಟ್ ಮಾಡಿದ್ದು, ತವರು ತಲುಪುತ್ತಿದ್ದಾರೆ. ಇನ್ನು ಕೆಲವರನ್ನು ಬೇರೆ ಬೇರೆ ದೇಶಗಳಿಗೆ ತಲುಪಿಸಿ ಕ್ವಾರಂಟೈನ್ ಮಾಡಲಾಗಿದೆ. ಅಲ್ಲಿನ ವೈದ್ಯಕೀಯ ಮತ್ತು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಅವರು ಭಾರತಕ್ಕೆ ಬರಬಹುದು ಎಂಬ ನಿರೀಕ್ಷೆಗಳಿವೆ.
    ಅಲ್ಲೇ ಸಿಲುಕಿಕೊಂಡವರ ರಕ್ಷಣೆಗೆ ಭಾರತದ ಪ್ರಯತ್ನ ಮುಂದುವರಿದಿದ್ದು, ಏರ್‌ಲಿಫ್ಟ್ ಸಾಧ್ಯವಾದರೆ ಎಲ್ಲರ ರಕ್ಷಣೆ ನಡೆಯಲಿದೆ ಎಂದು ವಾಪಸ್ ಬಂದವರು ಮಾಹಿತಿ ನೀಡಿದ್ದಾರೆ.

    ಮೆಲ್ವಿನ್ ಮೊಂತೆರೊ: ಉಳ್ಳಾಲದ ಉಳಿಯ ನಿವಾಸಿ ಮೆಲ್ವಿನ್ ಅವ್ರಿನ್ ಮೊಂತೆರೊ ಬುಧವಾರ ರಾತ್ರಿ ಮನೆ ತಲುಪಿದ್ದಾರೆ. ಆ.16ರಂದು ಏರ್‌ಲಿಫ್ಟ್ ಮೂಲಕ ಗುಜರಾತ್‌ನ ಜಾಮ್‌ನಗರಕ್ಕೆ ಬಂದಿಳಿದ 160 ಭಾರತೀಯರ ಪೈಕಿ ಇದ್ದ ಏಕೈಕ ಕನ್ನಡಿಗ ಇವರು. 2011ರಿಂದ ಅಫ್ಘನ್‌ನಲ್ಲಿ ಕೆಲಸ ಮಾಡುತ್ತಿದ್ದು, ನ್ಯಾಟೋ ಪಡೆಯ ಕ್ಯಾಂಪ್ ಆಸ್ಪತ್ರೆಯಲ್ಲಿ ವಿದ್ಯುತ್ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಾಲಿಬಾನ್ ಆತಂಕ ಹೆಚ್ಚಿದಾಗ ವಿಮಾನ ನಿಲ್ದಾಣ ಸೇರಿದರೂ, ಎರಡು ದಿನ ಅನ್ನಾಹಾರವಿಲ್ಲದೆ ಅಲ್ಲೇ ಉಳಿಯಬೇಕಾಯಿತು. ಹಲವರು ಲಂಡನ್, ನಾರ್ವೆ, ದುಬೈ, ಕತಾರ್ ಮತ್ತಿತರ ಕಡೆ ವಿಮಾನಗಳಲ್ಲಿ ತೆರಳಿ ಅಲ್ಲೇ ಉಳಿದಿದ್ದು, ಭಾರತಕ್ಕೆ ಕೆಲವು ದಿನಗಳ ನಂತರ ಬರಬಹುದು. ನಮ್ಮ ಆಸ್ಪತ್ರೆಯ ಸಮೀಪದಲ್ಲೇ ಕಂಪನಿಯೊಂದರಲ್ಲಿ ಎ.ಸಿ. ಮೆಕಾನಿಕ್ ಆಗಿದ್ದ ನನ್ನ ಸಹೋದರ ಡೆನ್ಸಿಲ್ ಮೊಂತೆರೊ ಹಾಗೂ ಸ್ನೇಹಿತರು ಗುರುವಾರ ಏರ್‌ಲಿಫ್ಟ್ ಮೂಲಕ ಕತಾರ್ ತಲುಪಿದ್ದಾರೆ ಎಂದು ವಿವರಿಸಿದ್ದಾರೆ ಮೆಲ್ವಿನ್.

    ಜೆರೊಮ್ ಸಿಕ್ವೇರ: ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪದ ಕಲ್ಕುರಿ ಎಂಬಲ್ಲಿನ ಜೆರೊಮ್ ಸಿಕ್ವೇರ ಎಸ್.ಜೆ. ಎಂಬವರು ಕಾಬೂಲ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕಾಬೂಲ್‌ನ ಅಂತಾರಾಷ್ಟ್ರೀಯ ಎನ್‌ಜಿಒ ಜೆಸ್ಯೂಟ್ ರೆಪ್ಯೂಜಿ ಸರ್ವೀಸಸ್(ಜೆಆರ್‌ಎಸ್)ನ ಮುಖ್ಯಸ್ಥರಾಗಿ ಕಾರ‌್ಯನಿರ್ವಹಿಸುತ್ತಿದ್ದ ಅವರು ಸುರಕ್ಷಿತವಾಗಿರುವುದಾಗಿ ಅಣ್ಣ ಬೆರ್ನಾಡ್ ಸಿಕ್ವೇರ ಅವರಿಗೆ ಕರೆ ಮಾಡಿ ತಿಳಿಸಿದ್ದರೂ, ಕುಟುಂಬದಲ್ಲಿ ಆತಂಕ ಮುಂದುವರಿದಿದೆ. ಸ್ನೇಹಿತ ಶಿವಮೊಗ್ಗ ತೀರ್ಥಹಳ್ಳಿ ನಿವಾಸಿ ರಾಬರ್ಟ್ ರೊಡ್ರಿಗಸ್ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಾಗ ತಾಲಿಬಾನಿಗರು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಿದ್ದಾರೆ. ಈ ವೇಳೆ ಅಲ್ಲಿಂದ ತಮ್ಮ ವಸ್ತುಗಳೊಂದಿಗೆ ಪಾರಾಗಿದ್ದು, ಭಾರತಕ್ಕೆ ಮರಳುವುದು ಸಾಧ್ಯವಾಗಿಲ್ಲ. ಅವರು ಸುರಕ್ಷಿತವಾಗಿ ವಾಪಸ್ಸಾಗಲಿ ಎಂದು ಮನೆಯವರು ಪ್ರಾರ್ಥಿಸುತ್ತಿದ್ದಾರೆ.

    ಸಿಸ್ಟರ್ ತೆರೆಸಾ: ಅಫ್ಘಾನಿಸ್ತಾನದಲ್ಲಿ ಇಟಲಿ ಮೂಲದ ಎನ್‌ಜಿಒದಲ್ಲಿ ಕೆಲಸ ಮಾಡಲು ಮಂಗಳೂರಿನಿಂದ ತೆರಳಿದ್ದ ಸಿಸ್ಟರ್ ತೆರೆಸಾ(50) ಎಂಬವರು ಸಿಲುಕಿಕೊಂಡಿದ್ದಾರೆ. ಕಾಬೂಲಿನಲ್ಲಿರುವ ಸಂಸ್ಥೆಯಲ್ಲಿ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳಲು ಅವರು ಮೂರು ವರ್ಷ ಹಿಂದೆ ತೆರಳಿದ್ದರು. ಮೂಲತಃ ಕಾಸರಗೋಡು ಜಿಲ್ಲೆಯ ಬೇಳ ನಿವಾಸಿಯಾಗಿದ್ದು, ಮಂಗಳೂರಿನ ಜೆಪ್ಪಿನಮೊಗರು ಪ್ರಶಾಂತ ನಿವಾಸದಲ್ಲಿದ್ದರು.

    ಗೋಪಾಲಕೃಷ್ಣ ಗೌಡ: ಬೆಳ್ತಂಗಡಿಯ ಶಿಬರಾಜೆಗುತ್ತಿನ ಗೋಪಾಲಕೃಷ್ಣ ಗೌಡ ಐದಾರು ವರ್ಷಗಳಿಂದ ಅಮೆರಿಕ ಸೇನಾ ನೆಲೆಯಲ್ಲಿ ನೆಟ್‌ವರ್ಕ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಮೂರು ವಾರಗಳ ಹಿಂದೆ ಮರಳಿದ್ದಾರೆ. ನಾನು ಕೆಲಸ ಮಾಡುತ್ತಿದ್ದ ಬಾಗ್ರಂ ಪ್ರದೇಶ ಅಷ್ಟೇನೂ ಸುರಕ್ಷಿತವಾಗಿರಲಿಲ್ಲ. ಮಿಲಿಟರಿ ಬೇಸ್ ಬಿಟ್ಟು ಹೊರಗಡೆ ಕೂಡ ಕೆಲಸ ನಿರ್ವಹಿಸಬೇಕಿತ್ತು. ಸಾಮಾನ್ಯವಾಗಿ ಅಲ್ಲೆಲ್ಲ ಭಯದ ವಾತಾವರಣ ಇತ್ತು. ಆದರೆ ಅಮೆರಿಕ – ತಾಲಿಬಾನ್ ಒಪ್ಪಂದದಂತೆ ನಮ್ಮ ಮೇಲೆ ದಾಳಿ ನಡೆಸುವಂತಿರಲಿಲ್ಲ. ಆದರೂ ಕೆಲವೊಮ್ಮೆ ಬಳಿಯಲ್ಲೇ ಗುಂಡಿನ ದಾಳಿ, ರಾಕೆಟ್ ದಾಳಿ ನಡೆಯುತ್ತಿತ್ತು ಎಂದು ಗೌಡ ನೆನಪಿಸಿಕೊಳ್ಳುತ್ತಾರೆ.

    ಜಿನಿಲ್ ಜಾನ್: ಪ್ರಸಕ್ತ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಉಜಿರೆ ಎಸ್‌ಡಿಎಂ ಕಾಲೇಜಿನ ಹಳೇ ವಿದ್ಯಾರ್ಥಿ ಜಿನಿಲ್ ಜಾನ್ 2011ರಿಂದ 2021ರ ಜೂನ್ ವರೆಗೆ ಅಮೆರಿಕ ಸೇನಾ ನೆಲೆಯ ಐಟಿ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ನಮ್ಮ ರಾಜ್ಯದವರೊಬ್ಬರನ್ನು ಹಿಂದೆ ಭಾರತಕ್ಕೆ ಹಿಂದಿರುಗುವ ಹಿಂದಿನ ದಿನ ತಾಲಿಬಾನಿಗರು ಹತ್ಯೆ ಮಾಡಿದ್ದರು. ಅಫ್ಘನ್ ಪರ ಕೆಲಸ ನಿರ್ವಹಿಸುತ್ತಾರೆ ಎಂಬ ಉದ್ದೇಶಕ್ಕೆ ಗುಂಡಿನ ದಾಳಿ ನಡೆದಿತ್ತು. ತಾಲಿಬಾನಿಗರ ಅಟ್ಟಹಾಸ ಅನೇಕ ಬಾರಿ ನೋಡಿದ್ದೆ ಎನ್ನುತ್ತಾರೆ ಜಿನಿಲ್ ಜಾನ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts