More

    ಪಿಕಪ್ ಪಲ್ಟಿಯಾಗಿ ಮೂವರು ಸಾವು

    ಹೊಳೆಹೊನ್ನೂರು: ಹಸಿ ಅಡಕೆ ಕಾಯಿ ತುಂಬಿದ ಬೊಲೆರೋ ಪಿಕಪ್ ಪಲ್ಟಿಯಾಗಿ ಮೂವರು ಮೃತಪಟ್ಟಿದ್ದು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
    ಭದ್ರಾವತಿ ತಾಲೂಕಿನ ಚಂದನಕೆರೆಯ ಮಂಜುನಾಥ (40), ನಾಗರಾಜ್ (42), ಗೌತಮ್ (18) ಮೃತರು. ಚಂದನಕರೆಯಿಂದ ಶಿಕಾರಿಪುರ ತಾಲೂಕು ಅರಿಶಿಣಗೆರೆಯ ಅಡಕೆ ತೋಟದಲ್ಲಿ ಕೊಯ್ಲು ಮುಗಿಸಿಕೊಂಡು ವಾಪಸ್ ಬರುವಾಗ ಅಪಘಾತವಾಗಿದೆ. ಸವಳಂಗ ಮಾರ್ಗವಾಗಿ ಚಂದನಕೆರೆಗೆ ವಾಪಸಾಗುವಾಗ ಚಿನ್ನಿಕಟ್ಟೆ ಜೋಗದ ಬಳಿ ಶನಿವಾರ ಸಂಜೆ ಹಸಿ ಅಡಕೆ ಕಾಯಿ ತುಂಬಿದ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮಂಜುನಾಥ್, ನಾಗರಾಜ್ ಸ್ಥಳದಲ್ಲೇ ಮೃತಪಟ್ಟರು. ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಗೌತಮ್ ಕೊನೆಯುಸಿರೆಳೆದಿದ್ದಾನೆ.
    ಚಂದನಕೆರೆಯ ಅಡಕೆ ಖೇಣಿದಾರ ಬಸಪ್ಪ ಎಂಬುವರು ಗುತ್ತಿಗೆ ಪಡೆದಿದ್ದ ಅರಿಶಿಣಗೆರೆ ತೋಟದ ಅಡಕೆ ಕಾಯಿ ತರಲು ಹೋದಾಗ ಅಪಘಾತವಾಗಿದೆ. ಸುರೇಶ್, ಗಣೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕ ಪ್ರದೀಪ್ ಜತೆ ಒಳಗೆ ಕುಳಿತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಡಕೆ ಲೋಡ್ ಮೇಲೆ ಕುಳಿತಿದ್ದ ವಿಜಯಪ್ಪ ಎಂಬುವರ ಬಲಗಾಲು ತುಂಡಾಗಿದ್ದು ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಲ್ಟಿಯಾದ ರಭಸಕ್ಕೆ ಬೊಲೆರೋ ಪಿಕಪ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
    ಚಿಕ್ಕಪ್ಪ, ಮಗ ದುರ್ಮರಣ: ಮೃತ ನಾಗರಾಜ್, ಗೌತಮ್ ಸಂಬಂಧಿಗಳಾಗಿದ್ದು ವರಸೆಯಲ್ಲಿ ಚಿಕ್ಕಪ್ಪ-ಮಗ ಆಗಬೇಕು. ಒಂದೇ ಕುಟುಂಬದ ಇಬ್ಬರು ಅಪಘಾತದಲ್ಲಿ ಮೃತಪಟ್ಟಿರುವುದರಿಂದ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಕುಟುಂಬಕ್ಕೆ ಆಸರೆಯಾಗಬೇಕಿದ ಪುತ್ರ ಗೌತಮ್‌ನನ್ನು ಕಳೆದುಕೊಂಡ ರಂಗಪ್ಪ-ಪದ್ಮಾ ದಂಪತಿ ದಿಕ್ಕು ತೋಚದಂತಾಗಿದ್ದಾರೆ. ಗೌತಮ್‌ಗೆ ಒಬ್ಬಳು ತಂಗಿ ಇದ್ದಾಳೆ. ಭಾನುವಾರ ಮಧ್ಯಾಹ್ನದ ವೇಳೆಗೆ ಮೊದಲು ಮಂಜುನಾಥನ ಶವ ಸಂಸ್ಕಾರ ನೆರವೇರಿಸಲಾಯಿತು. ಮಂಗಳೂರಿನಿಂದ ಗೌತಮ್ ಶವ ತರುವವರೆಗೆ ಕಾದಿದ್ದು ರಾತ್ರಿ ಚಿಕ್ಕಪ್ಪ ನಾಗರಾಜ್ ಹಾಗೂ ಮಗ ಗೌತಮನ ಶವ ಸಂಸ್ಕಾರ ನೆರವೇರಿಸಲಾಯಿತು. ಚಂದನಕೆರೆಯಲ್ಲಿ ಅಕ್ಷರಶಃ ಸೂತಕದ ಛಾಯೆ ಆವರಿಸಿದ್ದು ಮೃತರ ಮನೆ ಮುಂಭಾಗ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಶವಗಳ ಅಂತಿಮ ದರ್ಶನಕ್ಕೆ ಹೋದ ಅಕ್ಕಪಕ್ಕದ ಗ್ರಾಮಸ್ಥರಿಂದ ಗ್ರಾಮ ತುಂಬಿ ಹೋಗಿತ್ತು. ಸಂಬಂಧಿಗಳ ಗೋಳಾಟ ನೆರೆದ ಜನರ ಕಣ್ಣುಗಳನ್ನು ಒದ್ದೆ ಮಾಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts