More

    ಹಸಗೂಲಿಯಲ್ಲಿ ಮೂರು ದಿನಗಳು ಜಾತ್ರೆ


    ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಕಸಕಲಪುರ ಶ್ರೀ ಪಾರ್ವತಾಂಬಾ ಅಮ್ಮನವರ ಜಾತ್ರಾ ಮಹೋತ್ಸವ ಸೋಮವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ನಡೆಯಲಿದೆ.


    ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಎಲ್ಲ ಮನೆಗಳಿಗೂ ಸುಣ್ಣಬಣ್ಣ ಬಳಿಯಲಾಗುತ್ತಿದೆ. ಸೋಮವಾರದಂದು ಗ್ರಾಮಸ್ಥರು ಗ್ರಾಮದಲ್ಲಿರುವ ದೇವಿಯ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ವಿಗ್ರಹವನ್ನು ಬುಟ್ಟಿಯಲ್ಲಿರಿಸಿಕೊಂಡು 15 ಕಿಲೋ ಮೀಟರ್ ದೂರದ ಬಂಡೀಪುರ ಅರಣ್ಯದೊಳಗಿರುವ ಕಸಗಲಪುರದ ಪಾರ್ವತಾಂಬೆ ದೇವಿಯ ಮೂಲ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಕೊಂಡೊಯ್ಯುತ್ತಾರೆ. ಸಂಜೆ ವೇಳೆಗೆ ದೇವಾಲಯ ತಲುಪುವ ಗ್ರಾಮಸ್ಥರು ಅಮ್ಮನವರಿಗೆ ಅಭಿಷೇಕ ಪೂಜೆ ನೆರವೇರಿಸಿ ರಾತ್ರಿ ಅಲ್ಲಿಯೇ ಉಳಿಯುತ್ತಾರೆ.


    ಮಂಗಳವಾರ ಬೆಳಗ್ಗೆ ಅಲ್ಲಿಂದ ಹೊರಟು ಆಲತ್ತೂರು ಹಾಗೂ ಶೆಟ್ಟಹಳ್ಳಿ ಮಾರ್ಗವಾಗಿ ಬರುವಾಗ ಅಲ್ಲಿನ ಗ್ರಾಮಸ್ಥರು ದೇವತೆಗೆ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ದೇವಿಯನ್ನು ಗ್ರಾಮಕ್ಕೆ ತರಲಾಗುತ್ತದೆ. ಗ್ರಾಮದಲ್ಲಿ ಸೇವಂತಿಗೆ ಹೂವಿನಿಂದ ಅಲಂಕರಿಸಿದ ರಥದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿದ ನಂತರ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಸಾಗುತ್ತದೆ. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ತಮ್ಮ ಹರಕೆಗಳನ್ನು ತೀರಿಸುತ್ತಾರೆ.


    ಬಾಯಿ ಬೀಗ ಹಾಕಿಸಿಕೊಳ್ಳುವುದು, ಚಿನ್ನದ ತಾಳಿ ಮತ್ತು ಕಜ್ಜಾಯ, ಹಣ್ಣು ಜವನ, ಸೇವಂತಿಗೆ ಹೂವನ್ನು ದೇವಿಗೆ ಅರ್ಪಿಸಿ ತಮ್ಮ ಹರಕೆ ತೀರಿಸುತ್ತಾರೆ. ರೈತರು ತಮ್ಮ ಜಾನುವಾರುಗಳಿಗೆ ಹುಷಾರು ತಪ್ಪಿದರೆ ಹರಕೆ ಹೊತ್ತುಕೊಂಡು ಇಲ್ಲಿಗೆ ಕರೆತಂದು ಹರಕೆ ತೀರಿಸುತ್ತಾರೆ. ಇದನ್ನು ದನಗಳ ಜಾತ್ರೆ ಎಂದೂ ಕರೆಯಲಾಗುತ್ತದೆ. ಸೋಮವಾರ ರಾತ್ರಿಯೇ ತಮ್ಮ ಜಾನುವಾರುಗಳ ಸಹಿತ ಗ್ರಾಮಕ್ಕೆ ಬರುವ ರೈತರು ಅವುಗಳನ್ನು ದೇವಾಲಯದ ಸುತ್ತಲೂ ಸುತ್ತಿಸಿ ತೀರ್ಥಪ್ರದಕ್ಷಿಣೆ ಮಾಡಿಸಿ ಕೊಂಬುಗಳಿಗೆ ಪಂಜು ಕಟ್ಟಿ ಮೆರವಣಿಗೆ ಮಾಡುತ್ತಾರೆ.

    ಉತ್ಸವ ನಡೆದ ನಂತರ ಚಾವಡಿಯ ಬಳಿ ರಥವನ್ನು ನಿಲ್ಲಿಸಲಾಗುತ್ತದೆ.
    ಬುಧವಾರ ಬೆಳಗ್ಗೆ ಮತ್ತೊಮ್ಮೆ ಗ್ರಾಮಸ್ಥರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವರು. ನಂತರ ರಥ ಸಾಗಿದ ದಾರಿಯಲ್ಲೇ ವಾಪಸಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಮದ ಪ್ರತಿಯೊಂದು ಮನೆಯವರೂ ಪೂಜೆ ಸಲ್ಲಿಸಿ ತಮ್ಮ ಭಕ್ತಿಭಾವ ಮೆರೆಯುತ್ತಾರೆ.


    ಸ್ವರ್ಣ ಕಲ್ಲಿನ ದೇವಸ್ಥಾನ ನಿರ್ಮಾಣ : ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಸ್ವರ್ಣ ಕಲ್ಲು ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮದ ಮುಖಂಡರು ಪ್ರತಿ ಮನೆಗೂ ಚಂದ ಎತ್ತುವ ಮೂಲಕ ಹಾಗೂ ಭಕ್ತರು ನೀಡುವ ದಾನದ ಹಣದಿಂದ ಈ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ತಮಿಳುನಾಡಿನ ಹೊಸೂರಿನ ಶಿಲ್ಪಿಗಳು ಈ ದೇವಸ್ಥಾನ ಶಿಲೆಗಳು, ಚಿತ್ರಗಳನ್ನು ಕೆತ್ತನೆ ಮಾಡುತ್ತಿದ್ದಾರೆ. ಇದು ಮುಂದಿನ ವರ್ಷದ ಜಾತ್ರೆಯ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.


    ಇನ್ನು 2009ರಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ರಥ ನಿರ್ಮಿಸಿದ ಗ್ರಾಮಸ್ಥರು 2010ರಲ್ಲಿ ತಾಯಿಗೆ ಅರ್ಪಿಸಿದ್ದರು. ಜಾತ್ರಾ ಸಂದರ್ಭದಲ್ಲಿ ಸೇವಂತಿಗೆ ಹೂವುಗಳಿಂದ ಅಲಂಕರಿಸಿದ ರಥ ಮೆರವಣಿಗೆಯಲ್ಲಿ ಸಾಗುವುದೇ ಒಂದು ಸೊಗಸು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts