More

    ಡಿವೈಡರ್‌ನಿಂದ ಆಪತ್ತು, ಹೆದ್ದಾರಿ ವಿಸ್ತರಣೆಯಿಂದ ತ್ರಾಸಿ ಜಂಕ್ಷನ್‌ನಲ್ಲಿ ಸಮಸ್ಯೆ

    ಗಂಗೊಳ್ಳಿ: ತ್ರಾಸಿ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತುಂಬಾ ತೊಂದರೆಯಾಗಿದೆ. ಇಲ್ಲಿ ಅಗಲವಾದ ಡಿವೈಡರ್ ಮತ್ತು ಸರ್ಕಲ್ ನಿರ್ಮಿಸುವಂತೆ ತ್ರಾಸಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮವು ಸುತ್ತಮುತ್ತಲಿನ ಗಂಗೊಳ್ಳಿ, ಗುಜ್ಜಾಡಿ, ಹೊಸಾಡು, ತ್ರಾಸಿ, ನಾಡಗುಡ್ಡೆಯಂಗಡಿ, ಮರವಂತೆ, ಹೆಮ್ಮಾಡಿ ಗ್ರಾಮಗಳಿಗೆ ಪ್ರಮುಖ ಕೇಂದ್ರ ಸ್ಥಾನ. ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಹೋಗುವ ಲಾರಿ, ಟೆಂಪೋಗಳು, ಗಂಗೊಳ್ಳಿಗೆ ಸಂಪರ್ಕಿಸುವ ಬಸ್ಸುಗಳು, ಆಟೋ ಮತ್ತಿತರ ವಾಹನಗಳಿಗೆ ತ್ರಾಸಿ ಪ್ರಮುಖ ಕೇಂದ್ರ ಸ್ಥಾನ. ಇಂತಹ ಪ್ರಮುಖ ಸರ್ಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ವಾಹನಗಳು ಪಾಸಾಗಲು ಕಿರಿದಾದ ಅವೈಜ್ಞಾನಿಕ ಡಿವೈಡರ್ ನಿರ್ಮಿಸಿರುವುದು ಹಾಗೂ ಸರ್ವೀಸ್ ರಸ್ತೆಯಿಲ್ಲದ ಕಾರಣ ಅನೇಕ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗಿವೆ.

    ಗಂಗೊಳ್ಳಿಗೆ ಹೋಗುವ ಮಾರ್ಗಕ್ಕೆ ವ್ಯವಸ್ಥಿತವಾದ ಸರ್ಕಲ್ ನಿರ್ಮಿಸದಿರುವುದರಿಂದ ಹಾಗೂ ರಸ್ತೆ ವಿಸ್ತರಣೆಯಾಗದೆ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ತ್ರಾಸಿಯ ಪ್ರಮುಖ ಸರ್ಕಲ್‌ನಲ್ಲಿ ವ್ಯವಸ್ಥಿತವಾಗಿ ವಿಸ್ತಾರವಾದ ಡಿವೈಡರ್ ನಿರ್ಮಿಸಿ ಸರ್ಕಲ್‌ನಲ್ಲಿ ಹಾಗೂ ಬೀಚ್ ಪ್ರದೇಶದಲ್ಲಿ ಲೈಟ್ ವ್ಯವಸ್ಥೆ ಮಾಡಬೇಕು. ತ್ರಾಸಿ ಗ್ರಾಮದ ಅಣ್ಣಪ್ಪಯ್ಯ ಸಭಾಭವನದಿಂದ ತ್ರಾಸಿ ಬೀಚ್ ತನಕ ಸರ್ವೀಸ್ ರಸ್ತೆ ನಿರ್ಮಿಸಬೇಕು. ಗಂಗೊಳ್ಳಿಗೆ ಹೋಗುವ ವಾಹನಗಳಿಗೆ ಅನುಕೂಲ ಕಲ್ಪಿಸಲು ಸರ್ಕಲ್ ನಿರ್ಮಿಸಬೇಕು ಮತ್ತು ರಸ್ತೆ ವಿಸ್ತರಣೆಯಾಗಬೇಕು. ಆಟೋ ರಿಕ್ಷಾ, ಟ್ಯಾಕ್ಸಿ ನಿಲ್ದಾಣಗಳನ್ನು ನಿರ್ಮಿಸಿ, ಪಾದಚಾರಿಗಳಿಗೆ ಸಂಚರಿಸಲು ಫೂಟ್ ಬ್ರಿಡ್ಜ್ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ, ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಿ ಶೀಘ್ರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

    ತ್ರಾಸಿ ಜಂಕ್ಷನ್‌ನಲ್ಲಿ ಅವೈಜ್ಞಾನಿಕ ಡಿವೈಡರ್‌ನಿಂದ ಸಮಸ್ಯೆ ಹಾಗೂ ಸರ್ವೀಸ್ ರಸ್ತೆಯಿಲ್ಲದ ಕಾರಣ ಅನೇಕ ಅಪಘಾತಗಳು ಸಂಭವಿಸಿವೆ. ತ್ರಾಸಿ ಸರ್ಕಲ್ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಬಳಿಕ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿನ ತೊಂದರೆ ಹಾಗೂ ಸಮಸ್ಯೆಗಳ ಬಗ್ಗೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಶೀಘ್ರ ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು.
    -ರವೀಂದ್ರ ಖಾರ್ವಿ , ಗ್ರಾಪಂ ಮಾಜಿ ಸದಸ್ಯ ಹೊಸಪೇಟೆ, ತ್ರಾಸಿ

    ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ತ್ರಾಸಿ ಸುತ್ತಮುತ್ತಲಿನ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ತ್ರಾಸಿ ಜಂಕ್ಷನ್‌ನಲ್ಲಿರುವ ಎಲ್ಲ ಅಡೆತಡೆಗಳನ್ನು ನಿವಾರಿಸಿ ಸುಂದರವಾದ ಸರ್ಕಲ್ ನಿರ್ಮಾಣ ಮಾಡಲಾಗುವುದು. ಇದರಿಂದ ಈ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ.
    -ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts