More

    ಪ್ರತಿ ದಿನ ಸಾವಿರ ಆರ್​ಟಿಪಿಸಿಆರ್ ಟೆಸ್ಟ್

    ಹಾನಗಲ್ಲ: ಪ್ರತಿ ದಿನ ಸಾವಿರ ಆರ್​ಟಿಪಿಸಿಆರ್ ಟೆಸ್ಟ್ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸೋಂಕಿನ ಲಕ್ಷಣ ಉಳ್ಳವರ ಸ್ವ್ಯಾಬ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ಲ್ಯಾಬ್ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದೆ. 24 ಗಂಟೆಯಲ್ಲಿ ಫಲಿತಾಂಶ ನೀಡಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಮಹಮ್ಮದ್ ರೋಶನ್ ತಿಳಿಸಿದರು.

    ತಾಲೂಕಾಸ್ಪತ್ರೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವೈದ್ಯರು, ಸಿಬ್ಬಂದಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 1900 ಜನರ ಆರ್​ಟಿಪಿಸಿಆರ್ ಪರೀಕ್ಷೆ ಕೈಗೊಳ್ಳಲಾಗಿದೆ. ಇದನ್ನು ಪ್ರತಿದಿನ 2500ಕ್ಕೆ ಹೆಚ್ಚಿಸಲು ಸಿದ್ಧತೆ ಕೈಗೊಳ್ಳುತ್ತಿದ್ದೇವೆ. ಇದರೊಂದಿಗೆ 500 ರ್ಯಾಪಿಡ್ ಟೆಸ್ಟ್​ಗಳನ್ನೂ ಕೈಗೊಳ್ಳಲಾಗುವುದು. ಅಕ್ಕಿಆಲೂರು ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಆಸ್ಪತ್ರೆಯಲ್ಲಿ 10 ಬೆಡ್​ಗಳಿಗೆ 5 ಆಕ್ಸಿಜನ್ ಕಾನ್ಸನ್​ಟ್ರೇಟರ್ ಅಳವಡಿಸಲಾಗಿದೆ. ಇನ್ನೂ 10 ಯಂತ್ರಗಳನ್ನು ನೀಡಲು ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದೆ. ಅಕ್ಕಿಆಲೂರಿನ ಕೋವಿಡ್ ಕೇರ್ ಸೆಂಟರ್​ನಲ್ಲಿಯೂ 5 ಕಾನ್ಸನ್​ಟ್ರೇಟರ್​ಗಳನ್ನು ವ್ಯವಸ್ಥೆಗೊಳಿಸಲು ಸೂಚನೆ ನೀಡಲಾಗಿದೆ. ತಾಲೂಕಿನಲ್ಲಿರುವ ಔಷಧ, ಸಿಬ್ಬಂದಿ ಮತ್ತಿತರ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲಾಗಿದ್ದು, ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರ್ಯಾಪಿಡ್ ರೂರಲ್ ಸರ್ವೆ ನಡೆಸಲು ತೀರ್ವನಿಸಲಾಗಿದೆ. ಅಲ್ಲದೆ, ಈಗಾಗಲೇ ಸರ್ವೆಯನ್ನೂ ನಡೆಸಲಾಗಿದೆ. ಅಂದಾಜು 350 ಸೋಂಕಿತರು ಪತ್ತೆಯಾಗಿದ್ದಾರೆ. ಇದನ್ನು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಸಹಯೋಗದಲ್ಲಿ ಕೈಗೊಳ್ಳಲಾಗುತ್ತಿದೆ. ಪ್ರತಿ ಮೂರು ದಿನಗಳಿಗೊಮ್ಮ ಈ ಸರ್ವೆ ಕಾರ್ಯ ಮುಂದುವರಿಯಲಿದೆ. ಎಲ್ಲ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಿಗೆ ರ್ಯಾಪಿಡ್ ಚೆಕಪ್ ಕಿಟ್​ಗಳನ್ನು ನೀಡಲಾಗಿದೆ ಎಂದು ವಿವರಿಸಿದರು. ಸಭೆಯಲ್ಲಿ ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರ ಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ. ಕೆ.ಜೆ. ಲಿಂಗರಾಜ, ಆಡಳಿತ ವೈದ್ಯಾಧಿಕಾರಿ ಡಾ. ಮಾರುತಿ ಚಿಕ್ಕಣ್ಣನವರ ಇದ್ದರು. ನಂತರ ಜಿಪಂ ಸಿಇಒ ಅಕ್ಕಿಆಲೂರಿನ ರಾಣಿ ಚನ್ನಮ್ಮ ವಸತಿ ಶಾಲೆ, ಕಲಕೇರಿಯ ವಸತಿ ಶಾಲೆ ಕೋವಿಡ್ ಕೇರ್ ಸೆಂಟರ್​ಗೆ ಭೇಟಿ ನೀಡಿ, ಊಟ, ಚಿಕಿತ್ಸೆ, ಸ್ವಚ್ಛತೆಗೆ ಕೈಗೊಂಡ ವ್ಯವಸ್ಥೆಯನ್ನು ಪರಿಶೀಲಿಸಿದರು.

    ಜಿಲ್ಲೆಯಲ್ಲಿ 15 ಸಾವಿರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡನೇ ಹಂತದ ಲಸಿಕೆ ಲಭ್ಯವಿದೆ. ಇದು ಮುಗಿದ ನಂತರ ಮೊದಲ ಹಂತದ ಲಸಿಕೆ ಆರಂಭಿಸಲಾಗುವುದು. 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಕಾರ್ಯ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಇದಕ್ಕಾಗಿ ಹಾವೇರಿಯಲ್ಲಿ 30 ಹಾಸಿಗೆಗಳ ಪ್ರತ್ಯೇಕ ಕೊಠಡಿ ಸಿದ್ಧಗೊಳಿಸಲಾಗಿದೆ.

    | ಮಹಮ್ಮದ್ ರೋಶನ್, ಹಾವೇರಿ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts