More

    ಸಾವಿರ ಹೆಕ್ಟೇರ್ ಬೆಳೆ ಹಾನಿ

    ರಟ್ಟಿಹಳ್ಳಿ: ತಾಲೂಕಿನಲ್ಲಿ ಜೂನ್ ಮತ್ತು ಜುಲೈ ಆರಂಭದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ 1000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ, ಹತ್ತಿ, ಸೋಯಾಬೀನ್, ಶೇಂಗಾ ಹಾಗೂ ವಿವಿಧ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ರೈತರು ಸಂಕಷ್ಟದಲ್ಲಿದ್ದು, ಕೃಷಿ ಇಲಾಖೆ ಹಾನಿ ಸಮೀಕ್ಷೆ ಪೂರ್ಣಗೊಳಿಸಿ ಸೂಕ್ತ ಪರಿಹಾರ ವಿತರಿಸಬೇಕಿದೆ.

    ಮುಂಗಾರು ಪ್ರಾರಂಭದಲ್ಲಿ ಬಿತ್ತನೆ ಬೀಜ, ಗೊಬ್ಬರಗಳಿಗೆ ಅಪಾರ ಹಣ ವ್ಯಯ ಮಾಡಿರುವ ರೈತರು, ಇದೀಗ ಬೆಳೆ ಹಾನಿಯಿಂದ ಕಂಗಾಲಾಗಿದ್ದಾರೆ. ಬೆಳೆ ಪರಿಹಾರಕ್ಕಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ.

    ತಾಲೂಕಿನಲ್ಲಿ 79,062 ಹೆಕ್ಟೇರ್ ಸಾಗುವಳಿ ಭೂಮಿ ಇದ್ದು, ಶೇ. 70ರಷ್ಟು ಮೆಕ್ಕೆಜೋಳ, ಶೇ. 5ರಷ್ಟು ಹತ್ತಿ, ಶೇ. 5ರಷ್ಟು ಸೋಯಾಬೀನ್ ಮತ್ತು ಶೇಂಗಾ ಬೆಳೆದಿದ್ದಾರೆ. ಶೇ. 20ರಷ್ಟು ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ಮುಂಗಾರು ಅವಧಿಯ ಬೆಳೆಗಾಗಿ ರೈತರು ಹೆಚ್ಚಾಗಿ ಮೆಕ್ಕೆಜೋಳವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

    ಕೆಂಪು ಬಣ್ಣಕ್ಕೆ ತಿರುಗಿದ ಬೆಳೆ: ಅತೀವ ಮಳೆಯಿಂದಾಗಿ ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳು ಕೆಂಪು ಬಣ್ಣಕ್ಕೆ ತಿರುಗಿವೆ. ಕೆಂಪು ಬಣ್ಣದಿಂದ ಒಣಗಿ ಸಂಪೂರ್ಣವಾಗಿ ಹಾನಿ ಯಾಗಿದೆ. ಕೆಲವು ರೈತರು ಈಗಾಗಲೇ ಮೆಕ್ಕೆಜೋಳದ ಬೆಳೆಗೆ ಅಪಾರವಾಗಿ ಹಣ ವ್ಯಯ ಮಾಡಿ ಕೈ ಸುಟ್ಟುಕೊಂಡಿದ್ದು, ಈಗ ಈ ಬೆಳೆಯನ್ನು ನಾಶ ಮಾಡಿ, ಸೋಯಾಬೀನ್ ಮತ್ತು ಶೇಂಗಾ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ. ಹತ್ತಿ ಬೆಳೆಯ ಎಲೆಗಳು ಸಹ ಕೆಂಪು ಬಣ್ಣಕ್ಕೆ ತಿರುಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

    1 ಎಕರೆಗೆ ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗೆ ಬೀಜ, ಗೊಬ್ಬರ, ಕೂಲಿ ಸೇರಿ ಸುಮಾರು 15 ಸಾವಿರಕ್ಕೂ ಹೆಚ್ಚು ಹಣವನ್ನು ವ್ಯಯ ಮಾಡಲಾಗಿದೆ. ತಾಲೂಕಿನಲ್ಲಿ ಕೃಷಿ ಇಲಾಖೆಯು ಕಳೆದ ನಾಲ್ಕು ದಿನಗಳಲ್ಲಿ ಬೆಳೆ ಹಾನಿಯ ಸಮೀಕ್ಷೆ ಕಾರ್ಯ ಕೈಗೊಂಡಿದೆ. ಈಗಾಗಲೇ ಸುಮಾರು 700 ಹೆಕ್ಟೇರ್ ಗೋವಿನಜೋಳ, 200 ಹೆಕ್ಟೇರ್ ಹತ್ತಿ, ಸೋಯಾಬೀನ್ ಮತ್ತು ಶೇಂಗಾ ಬೆಳೆಗಳು ಹಾನಿಯಾದ ಅಂದಾಜಿದೆ. ಸಮೀಕ್ಷಾ ಕಾರ್ಯ ಮುಂದುವರಿದಿದ್ದು, ಇನ್ನೂ ಹೆಚ್ಚಿನ ಹಾನಿ ಪ್ರಮಾಣದ ವರದಿ ಲಭ್ಯವಾಗುವ ನಿರೀಕ್ಷೆ ಇದೆ.

    ತೋಟಗಾರಿಕೆ ಬೆಳೆಗಳು ಹಾನಿ: ತಾಲೂಕಿನಲ್ಲಿ ಒಟ್ಟು 2000 ಹೆಕ್ಟೇರ್ ತೋಟಗಾರಿಕೆ ಪ್ರದೇಶವಿದೆ. ಟೊಮ್ಯಾಟೊ, ಕೋಸು, ಹಸಿಮೆಣಸಿನಕಾಯಿ, ಹಿರೇಕಾಯಿ, ಎಲೆ ಬಳ್ಳಿ, ಬಾಳೆ, ಅಡಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಅತೀವೃಷ್ಟಿ್ಟುಂದಾಗಿ ಕಳೆದ ವಾರದ ಸಮೀಕ್ಷೆಯ ಪ್ರಕಾರ 115 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಅತಿಯಾದ ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಂತು ತರಕಾರಿ ಬೆಳೆಗಳು ಹಾನಿಯಾಗಿವೆ. ಎಲೆ ಬಳ್ಳಿಗಳು ಕೊಳೆತು ಹೋಗಿವೆ. ಈಗಾಗಲೇ ಕೃಷಿ ಇಲಾಖೆಗೆ ಪರಿಹಾರಕ್ಕಾಗಿ 3000ಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದ್ದಾರೆ. ತೋಟಗಾರಿಕೆ ಇಲಾಖೆಗೆ 160 ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts