More

    ಮರೆಯಬಾರದ ಆ ಮೂರು ಮೌಲ್ಯಗಳು!

    ಮರೆಯಬಾರದ ಆ ಮೂರು ಮೌಲ್ಯಗಳು!

    | ಡಾ.ಕೆ.ಪಿ.ಪುತ್ತೂರಾಯ
    ನಾವೆಲ್ಲರೂ ನಮ್ಮ ಒಪ್ಪಿಗೆ ಇಲ್ಲದೇ ಜನಿಸಿದವರು ಹಾಗೂ ನಮ್ಮ ಅಪ್ಪಣೆ ಇಲ್ಲದೇ ಸಾಯುವವರು. ಹುಟ್ಟುವ ಮುನ್ನ ನಮ್ಮನ್ನು ಹೆರುವವರು ಯಾರೋ, ಸತ್ತಮೇಲೆ ಹೊರುವವರು ಯಾರೋ- ಅವರು ಯಾರೇ ಆಗಿರಲಿ ಒಮ್ಮೆ ಅರಳಿದ ಹೂ ಇನ್ನೊಮ್ಮೆ ಅರಳದು, ಒಮ್ಮೆ ಉರುಳಿದ ಮರ ಮತ್ತೊಮ್ಮೆ ಏಳದು, ಒಮ್ಮೆ ತೆರಳಿದ ಜೀವ ಮತ್ತೊಮ್ಮೆ ಮರಳಿಬಾರದು ಎಂಬ ಮಾತು ದಿಟವಾಗಿರುವಾಗ ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಸಾರ್ಥಕತೆ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ. ಜೀವನ ಸಾರ್ಥಕಗೊಳ್ಳುವುದು ಈ ಜಗತ್ತನ್ನು ಬಿಟ್ಟು ಹೋಗುವುದಕ್ಕೆ ಮುನ್ನ ಏನನ್ನಾದರೂ ಕೊಟ್ಟು ಹೋಗಬೇಕು ಎಂಬ ಸಂಕಲ್ಪ ಬಂದು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದಾಗ ಮಾತ್ರ. ಇದು ಮೌಲ್ಯಾಧಾರಿತ ಜೀವನವನ್ನು ನಡೆಸುವುದರಿಂದ ಮಾತ್ರ ಸಾಧ್ಯ. ಹೇಗೆ ಚಿಲ್ಲರೆ ಕಾಸುಗಳನ್ನು ತುಂಬಿಕೊಂಡಷ್ಟು ಪರ್ಸ್ ಭಾರವಾಗಿತ್ತದೋ, ಅಂತೆಯೇ ಚಿಲ್ಲರೆ ಕ್ಷುಲಕ್ಷ ವಿಷಯಗಳನ್ನು ತುಂಬಿಕೊಂಡಷ್ಟೂ ಮನಸ್ಸು ಭಾರವಾಗುತ್ತದೆ. ಈ ಕಾರಣ ನಮ್ಮ ಚಿಂತನೆಗಳು ಸದಾ ಉದಾತ್ತವಾಗಿರಲಿ. ಈ ನಿಟ್ಟಿನಲ್ಲಿ ನಾವೆಲ್ಲರೂ ಅನುಸರಿಸಬೇಕಾದ ಮೂರು ಮೌಲ್ಯಗಳೆಂದರೆ

    1. ವೈಯುಕ್ತಿಕ ಮೌಲ್ಯ: ಓರ್ವ ಒಳ್ಳೆಯ ವ್ಯಕ್ತಿಯಾಗಿ ಬಾಳುವ ಪ್ರಯತ್ನ. ಸರಳತೆ, ಸಹಾನುಭೂತಿ, ಪ್ರಾಮಾಣಿಕತೆ, ಪಾರದರ್ಶಕತೆ, ಸತ್ಯಸಂಧತೆ-ಸಜ್ಜನಿಕೆ, ಸೌಜನ್ಯ, ಇತರರ ಬಗ್ಗೆಯೂ ಕೊಂಚ ಕಾಳಜಿ, ಕನಿಕರ, ಸಹಾಯಹಸ್ತ, ಸಮಚಿತ್ತ ಮುಂದಾದ ಸದ್ಗುಣಗಳೇ ಮೌಲ್ಯಗಳು. ಇವನ್ನೇ ಬಸವಣ್ಣನವರು ಸರಳ ಸುಂದರ ಶಬ್ದಗಳಲ್ಲಿ ಕಳಬೇಡ, ಕೊಲಬೇಡ… ವಚನದಲ್ಲಿ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯನ್ನು ವಿವರಿಸಿದರು. ಅಂತೆಯೇ ದುಡಿಮೆ ಇಲ್ಲದ ದುಡ್ಡೇ ಬೇಡ. ಸಿದ್ಧಿ ಇಲ್ಲದ ಪ್ರಸಿದ್ಧಿಯೇ ಬೇಡ, ಯೋಗ್ಯತೆ ಇಲ್ಲದ ಯೋಗವೇ ಬೇಡ ಎಂಬ ಸಿದ್ಧಾಂತ ಕೂಡ ವೈಯಕ್ತಿಕ ಮೌಲ್ಯ. ಒಳ್ಳೆಯ ಆರೋಗ್ಯ ಎಲ್ಲರ ಬದುಕಿನ ಆಸ್ತಿ; ಒಳ್ಳೆಯ ಗುಣನಡತೆ ಮನುಷ್ಯನ ಆಸ್ತಿ; ಒಳ್ಳೆಯ ಮಕ್ಕಳು ಹೆತ್ತವರ ಆಸ್ತಿ; ಅಂತೆಯೇ ಒಳ್ಳೆಯ ಪ್ರಜೆಗಳು ದೇಶದ ಆಸ್ತಿ. ಒಟ್ಟಿನಲ್ಲಿ ಒಳ್ಳೆಯ ವ್ಯಕ್ತಿಯಾಗಿರುವ ಪ್ರವೃತ್ತಿ ನಮ್ಮದಾಗಲಿ. ಇದೇ ವೈಯಕ್ತಿಕ ಮೌಲ್ಯ.

    2. ಸಾಮಾಜಿಕ ಮೌಲ್ಯ: ನಾವು ಎಷ್ಟು ಜನರಿಂದ ಉಪಕೃತರಾಗಿದ್ದೇವೆ ಅನ್ನುವುದಕ್ಕಿಂತ, ನಾವು ಎಷ್ಟು ಜನರಿಗೆ ಉಪಕಾರಿಗಳಾಗಿದ್ದೇವೆ ಅನ್ನುವುದು ನಮ್ಮ ಜೀವನದ ಸಾರ್ಥಕತೆಯ ಅಳತೆಗೋಲು. ಇದು ಮೌಲ್ಯಾಧಾರಿತ ಸಾಮಾಜಿಕ ಜೀವನವನ್ನು ನಡೆಸುವುದರಿಂದ ಮಾತ್ರ ಸಾಧ್ಯ. ಜಾತ್ಯತೀತ ಮನೋಭಾವ, ಪರಧರ್ಮ ಸಹಿಷ್ಣುತೆ, ಎಲ್ಲರ ಮೇಲೆ ಪ್ರೀತಿ, ಸಮದೃಷ್ಟಿ, ಪ್ರೇಮದೃಷ್ಟಿ, ವಿಶಾಲದೃಷ್ಟಿ, ಮುಂತಾದ ಸಾಮಾಜಿಕ ಕಳಕಳಿಯೇ ನಾವು ಅನುಸರಿಸಬೇಕಾದ ಸಾಮಾಜಿಕ ಮೌಲ್ಯಗಳು. ನಮಗೆ ಕೇಡು ಬಯಸುವವರ ಮೇಲೂ ಸೇಡು ತೀರಿಸಿಕೊಳ್ಳಬಾರದು. ಸಮಾಜದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ-ಗೌರವದಿಂದ, ಸಹಕಾರ ಸಹಾಯಹಸ್ತದಿಂದ ನಡೆದುಕೊಳ್ಳುವುದೇ ನಮ್ಮ ಸಾಮಾಜಿಕ ಜೀವನವಾಗಿರಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಸಾಮಾಜಿಕ ಮೌಲ್ಯ ಬಲವಾಗಿರಲಿ, ಭದ್ರವಾಗಿರಲಿ. ನಾವು ಗೈದ ಕೆಲಸಗಳಿಗೆ ಸಮಾಜದಿಂದ ಮೆಚ್ಚುಗೆ ಸಿಕ್ಕಿದರೆ ಅದು ಮಾನ್ಯತೆ. ಅದರಿಂದ ನಮಗೆ ಆತ್ಮಾನಂದವಾದರೆ ಅದು ಧನ್ಯತೆ.

    3. ರಾಷ್ಟ್ರೀಯ ಮೌಲ್ಯ: ಯಾವ ಮಣ್ಣಿನಲ್ಲಿ ಜನನಕ್ಕೆ ಬಂದು, ಯಾವ ಮಣ್ಣಿನ ನೀರಿನಲ್ಲಿ ಮಿಂದು, ಯಾವ ಮಣ್ಣಿನ ಕೂಳನ್ನು ತಿಂದು, ಯಾವ ಮಣ್ಣಿನ ಕೃಪೆಯಿಂದ ಬಾಳಿ ಬೆಳೆದು ಬಂದು ಮತ್ತೆ ಯಾವ ಮಣ್ಣಲ್ಲೇ ಮಣ್ಣಾಗಲಿದ್ದೇವೋ ಒಂದು ದಿನದಂದು, ಅಂತಹ ಮಾತೃಭೂಮಿಯ ಋಣ ನಮ್ಮೆಲ್ಲರ ತಲೆಯ ಮೇಲಿದೆ. ಆದ್ದರಿಂದ ಪ್ರಶ್ನಾತೀತವಾದ ದೇಶಭಕ್ತಿ ನಮ್ಮದಾಗಲಿ- ದೇಶ ನಮಗೆ ಏನು ಕೊಟ್ಟಿದೆ ಎನ್ನುವ ಬದಲು ದೇಶಕ್ಕೆ ನಾವು ಏನು ಕೊಡಬಲ್ಲೆವು ಎನ್ನುವ ಚಿಂತನೆ ನಮ್ಮದಾಗಲಿ. ‘ಕಾರಣ ದೇಶವೊಂದಳಿಯೆ ಉಳಿದವರು ಯಾರು? ದೇಶವೊಂದುಳಿಯೆ ಅಳಿದವರು ಯಾರು?’ ‘ಮೂರು ಸಾಗರ, ನೂರು ಮಂದಿರ, ದೈವ ಸಾಸಿರವಿದ್ದರೂ ಗಂಗೆ ಗಿರಿ ಹಿಮಾಲಯ ವೇದ ಘನ ಪರಂಪರೆ ಎಲ್ಲ ಇದ್ದರೂ ಏನು ಪ್ರಯೋಜನ ಮನೆಯ ಮಕ್ಕಳೇ ನಿದ್ರಿಸುತ್ತಿದ್ದರೆ?’ ಎಂಬ ಕವಿಯ ಮಾತಲ್ಲೂ ರಾಷ್ಟ್ರದ ಬಗ್ಗೆ ಕಳಕಳಿ ಇದೆ. ಭಾರತವ ಉಳಿದೆನಗೆ ಅನ್ಯ ಜೀವನವಿಲ್ಲ…ಭಾರತವೇ ಎನಗಾಯ್ತು ಕಣ್ಣು ಕಿವಿ ಬಾಯಿ ಎಂಬ ರಾಷ್ಟ್ರಪ್ರೇಮ ನಮ್ಮದಾಗಲಿ, ಇದುವೇ ಭಾರತೀಯರೆಲ್ಲರಿಗೂ ಇರಬೇಕಾದ ರಾಷ್ಟ್ರೀಯಮೌಲ್ಯ. ಒಟ್ಟಿನಲ್ಲಿ ನಮ್ಮ ಸೌಕರ್ಯ ಸೌಲಭ್ಯಗಳು ಆಧುನಿಕವಾಗಿರಲಿ; ನವೀನವಾಗಿರಲಿ ಆದರೆ ನಮ್ಮ ಮೌಲ್ಯಗಳು ಮಾತ್ರ ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿರಲಿ.

    ‘ಹ್ಯಾಪಿ ದಿವಾಳಿ..’ ಎಂದ ಅಭಿಮಾನಿಗೆ ಶಿವಣ್ಣ ಕೊಟ್ಟ ರಿಪ್ಲೈ ವೈರಲ್; ಅಂಥದ್ದೇನಂದ್ರು?

    ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts