More

    ಉದ್ಯೋಗಕ್ಕಾಗಿ ಕಾದು ಕೂರುವ ಕಾಲವಲ್ಲ

    ಚಿತ್ರದುರ್ಗ: ಉದ್ಯೋಗಕ್ಕಾಗಿ ಕಾಯುತ್ತ ಕೂರುವ ಕಾಲ ಇದಲ್ಲ. ಸಮಯ ವ್ಯರ್ಥದಿಂದ ಯಾವ ಪ್ರಯೋಜನವಿಲ್ಲ. ಆದ್ದರಿಂದ ಸ್ವಂತ ಉದ್ದಿಮೆ ಆರಂಭಿಸಿ ಉದ್ಯೋಗ ಸೃಷ್ಟಿಸಿಕೊಳ್ಳಲು ಯುವಸಮೂಹ ಮುಂದಾಗಬೇಕು ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಲಹೆ ನೀಡಿದರು.

    ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಶನ್, ಜಿ.ಎಸ್.ಅನಿತ್‌ಕುಮಾರ್ ಅಭಿಮಾನಿ ಬಳಗದಿಂದ ಕೆ.ಕೆ.ನ್ಯಾಷನಲ್ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಉದ್ಯೋಗ ಮೇಳ’ ನೇತೃತ್ವ ವಹಿಸಿ ಮಾತನಾಡಿದರು.

    ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದು ಅಸಾಧ್ಯ. ಅಲ್ಲದೆ, ಖಾಸಗೀಕರಣ ಹಲವು ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತಿದ್ದು, ಉದ್ಯೋಗ ಪಡೆಯುವುದು ಕಷ್ಟವಾಗಿದೆ. ಆದ್ದರಿಂದ ಹೆಚ್ಚು ಅಂಕದ ಜತೆಗೆ ಕೌಶಲಾಭಿವೃದ್ಧಿ ಹೊಂದಿರಬೇಕು. ಇದರಿಂದ ಅವಕಾಶ ಹುಡುಕಿಕೊಂಡು ಬರಲಿದೆ ಎಂದರು.

    ಪ್ರಸ್ತುತ ಶೇ.60ರಷ್ಟು ಯುವಸಮೂಹ ಹೊಂದಿರುವ ದೇಶಕ್ಕೆ ಬೆನ್ನೆಲುಬು ಎಂದರೆ ಯುವಶಕ್ತಿ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಯೋಜನೆ ರೂಪಿಸಿ, ಸ್ವಂತ ಉದ್ಯೋಗ ಸೃಷ್ಟಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದರ ಪ್ರಯೋಜನ ಪಡೆದು ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ಬರದನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಉದ್ಯೋಗ ಮೇಳಗಳು ಆಗಿಂದಾಗ್ಗೆ ನಡೆಯುತ್ತಿದ್ದು, ಇಂತಹ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಇದು ನಿರಂತರವಾಗಿ ನಡೆದರೆ ನಿರುದ್ಯೋಗಿಗಳಿಗೆ ಸಹಕಾರಿಯಾಗಲಿದೆ ಎಂದರು.

    ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್‌ಕುಮಾರ್, ಉದ್ಯಮಿಗಳಾದ ನಿವೇದನ್ ನೆಂಪೆ, ನಗರಸಭೆ ಸದಸ್ಯ ಶಶಿಕುಮಾರ್, ಡಾ.ಎಸ್.ಆರ್.ಲೇಪಾಕ್ಷ, ಡಾ.ಎಚ್.ಆರ್.ಮಂಜುನಾಥ್, ಸತೀಶ್, ಬಿಜೆಪಿ ಮುಖಂಡರಾದ ಜಿ.ಎಂ.ಸುರೇಶ್, ನರೇಂದ್ರನಾಥ್, ನಂದಿ ನಾಗರಾಜ್, ಶೈಲಾಜ ರೆಡ್ಡಿ, ಚಂದ್ರಿಕಾ, ವಿಜಯಕುಮಾರ್ ಇತರರಿದ್ದರು.

    *ಪ್ರತಿಭಾವಂತರನ್ನು ಗುರುತಿಸಿ
    ಪ್ರಸ್ತುತ ದಿನಗಳಲ್ಲಿ ಉದ್ಯೋಗ ಅರಸಿ ಯುವಸಮೂಹ ಹೊರ ರಾಜ್ಯ, ವಿದೇಶಗಳಿಗೆ ವಲಸೆ ಹೋಗುವ ಸ್ಥಿತಿ ಎದುರಾಗಿದೆ. ಹೀಗಾಗಿ ವಿವಿಧ ಕಂಪನಿಗಳ ಮೂಲಕ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದೊಂದಿಗೆ ಫೌಂಡೇಶನ್, ಅಭಿಮಾನಿ ಬಳಗ ಕೆಲಸ ಮಾಡುತ್ತಿದೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

    ಮೇಳದಲ್ಲಿ ಭಾಗವಹಿಸಿರುವ ಕಂಪನಿ ಮುಖ್ಯಸ್ಥರು ಯಾವುದೇ ತಾರತಮ್ಯ ಇಲ್ಲದೆ ಪ್ರತಿಭಾವಂತರನ್ನು ಗುರುತಿಸಿ, ಅರ್ಹರಿಗೆ ಉದ್ಯೋಗ ನೀಡಬೇಕು. ಪಡೆದವರು ಕೇವಲ ವೇತನಕ್ಕಾಗಿ ಕೆಲಸ ಮಾಡದೆ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts