More

    ಕರೊನಾಗಿಂತಲೂ ಕರಾಳ ಚೀನೀ ಕಮ್ಯೂನಿಸ್ಟ್ ಸತ್ತೆ

    ಕರೊನಾಗಿಂತಲೂ ಕರಾಳ ಚೀನೀ ಕಮ್ಯೂನಿಸ್ಟ್ ಸತ್ತೆನಾವೆಲ್ ಕರೊನಾ ವೈರಸ್ ಭಾರತಕ್ಕೆ ಕಾಲಿಟ್ಟು ಇದೇ ಜನವರಿ 23ಕ್ಕೆ ಒಂದು ವರ್ಷವಾಗಿದೆ. ವೈರಸ್​ನ ತವರು ವೂಹಾನ್​ನಿಂದ ಜನವರಿ 23ರಂದು ಸ್ವದೇಶಕ್ಕೆ ಮರಳಿದ ಕೇರಳದ ತ್ರಿಸ್ಸೂರ್ ನಗರದ ವಿದ್ಯಾರ್ಥಿನಿ ವೈರಸ್ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿ ದೇಶದ ಮೊದಲ ಕೇಸ್ ಘೊಷಣೆಯಾದ ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದು ಕೋಟಿ ಎಂಟುಲಕ್ಷವನ್ನು ಸಮೀಪಿಸಿದೆ ಮತ್ತು ಮೃತಪಟ್ಟವರ ಸಂಖ್ಯೆ ಒಂದೂವರೆ ಲಕ್ಷವನ್ನು ದಾಟಿದೆ. ಹೀಗೆ ಭಾರತ ಸೇರಿ ಜಗತ್ತನ್ನು ಕರೊನಾ ಮಹಾಮಾರಿಗೆ ತುತ್ತಾಗಿಸಿದ ಚೀನಾ ಸುತ್ತಲ ದೇಶಗಳ ಸಂಕಟವನ್ನು ತನ್ನ ಅನುಕೂಲಕ್ಕಾಗಿ ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದನ್ನು ನೋಡುತ್ತಿದ್ದೇವೆ. ಅದರ ಒಂದು ಕಿರುಪರಿಚಯ ಈ ಲೇಖನದ ವಸ್ತುವಿಷಯ.

    ವೈರಸ್​ನ ಉಗಮದ ಬಗ್ಗೆ ಯಾವುದೇ ವಿವರ ಹೊರಜಗತ್ತಿಗೆ ತಿಳಿಯದಂತೆ ಚೀನೀ ಕಮ್ಯೂನಿಸ್ಟ್ ಆಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಸಾಂರ್ದಭಿಕ ಸಾಕ್ಷ್ಯಗಳ ಹಾಗೂ ಸರ್ಕಾರದ ಕಣ್ಣುತಪ್ಪಿಸಿ ಹೊರಬಂದ ತುಣುಕು ಮಾಹಿತಿಗಳ ಮೂಲಕ ವಾಸ್ತವಕ್ಕೆ ಹತ್ತಿರವೆನಿಸಬಹುದಾದ ಚಿತ್ರಣವನ್ನು ಕಟ್ಟಿಕೊಳ್ಳಲು ನಮಗೆ ಸಾಧ್ಯವಾಗಿದೆ. ಅದರ ಪ್ರಕಾರ, ಕರೊನಾ ವೈರಸ್ ವೂಹಾನ್ ಇನ್​ಸ್ಟಿಟ್ಯೂಟ್ ಅಫ್ ವೈರಾಲಜಿಯ ಪಿ 4 ಲ್ಯಾಬ್​ನಲ್ಲಿ ಚೀನೀ ಸಂಶೋಧಕರಿಂದಲೇ ಕೃತಕವಾಗಿ ಸೃಷ್ಟಿಸಲ್ಪಟ್ಟದ್ದು. ಅದು ಸಂಶೋಧಕರದೇ ಅಜಾಗರೂಕತೆಯಿಂದಾಗಿ ಲ್ಯಾಬ್​ನಿಂದ ಹೊರಬಿದ್ದದ್ದು 2019ರ ಅಕ್ಟೋಬರ್ 6ರಂದು. ವೂಹಾನ್ ನಗರದ ಜನರಲ್ ಹಾಸ್ಪಿಟಲ್​ನಲ್ಲಿ ಮೊದಲ ಕೇಸ್ ದಾಖಲಾದದ್ದು ನವೆಂಬರ್ 17ರಂದು. ಅದೇ ಆಸ್ಪತ್ರೆಯ ತುರ್ತವಿಭಾಗದ ನಿರ್ದೇಶಕಿ ಡಾ. ಆಯ್ ಫೆನ್ ಮೊದಲು ಗುರುತಿಸಿದ ಈ ಹೊಸ ವೈರಸ್ ಪ್ರಕರಣ ನಂತರ ಆಕೆಯ ಸಹೋದ್ಯೋಗಿ ನೇತ್ರತಜ್ಞ ಡಾ. ಲಿ ವೆನ್​ಲಿಯಾಂಗ್​ರಿಂದ ಚೀನೀ ಸಾಮಾಜಿಕ ಸಂಪರ್ಕತಾಣ ವಿಚಾಟ್ ಮೂಲಕ ಅವರ ಸಹೋದ್ಯೋಗಿಗಳಿಗೆ ತಲುಪಿದ್ದು ಡಿಸೆಂಬರ್ 30ರ ಸುಮಾರಿಗೆ.

    ಮಾಹಿತಿಗಳ ಪ್ರಕಾರ, ಕರೊನಾ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎಂಬ ಮಾಹಿತಿ ಅಧಿಕೃತವಾಗಿ ಚೀನೀ ಅಧ್ಯಕ್ಷ ಷಿ ಜಿನ್​ಪಿಂಗ್​ರಿಗೆ ತಲುಪಿದ್ದು 2020 ಜನವರಿ 7ರಂದು. ಮುಂದಿನ ಎರಡುವಾರಗಳಲ್ಲಿ ಚೀನಾ ತರಾತುರಿಯ ಆಮದೂ ಸೇರಿದಂತೆ 200 ಕೋಟಿ ಮಾಸ್ಕ್​ಗಳನ್ನೂ, ನಲವತ್ತು ಲಕ್ಷ ‘ಪಿಪಿಇ’ಗಳನ್ನು ಸಂಗ್ರಹಿಸಿಟ್ಟುಕೊಂಡಿತು. ಅದಾಗ್ಯೂ ಈ ಹೊಸ ರೋಗ ಸಾಂಕ್ರಾಮಿಕವಲ್ಲ ಎಂದು ಚೀನೀ ಸರ್ಕಾರ ಜನವರಿ 21ರವರೆಗೂ ಹೊರಜಗತ್ತಿಗೆ ಹೇಳುತ್ತಿತ್ತು. ಅದಾದ ಎರಡು ದಿನಕ್ಕೆ ವೂಹಾನ್ ನಗರ, ಮುಂದಿನ ಒಂದುವಾರದಲ್ಲಿ ಇಡೀ ಹುಬೈ ಪ್ರಾಂತ್ಯ ಲಾಕ್​ಡೌನ್​ಗೊಳಗಾಯಿತು. ಬಹುಶಃ ಲಾಕ್​ಡೌನ್ ಕ್ರಮವನ್ನು ಜಗತ್ತಿನಿಂದ ಮುಚ್ಚಿಡ ಲಾಗದ್ದರಿಂದ ಚೀನೀ ಸರ್ಕಾರ ಅದಕ್ಕೆ ಪೂರ್ವತಯಾರಿಯಾಗಿ ಎರಡು ದಿನ ಮೊದಲು ವೈರಸ್ ಸಾಂಕ್ರಾಮಿಕ ಎಂದು ಘೊಷಿಸಿದೆ ಎಂದು ಊಹಿಸಬಹುದು.

    ಇತರ ಚೀನೀ ನಗರಗಳ ಜತೆ ವೂಹಾನ್ ನಗರದ ರಸ್ತೆ, ರೈಲು, ವಿಮಾನ ಸಂಪರ್ಕಗಳನ್ನು ಪೂರ್ಣವಾಗಿ ಮುಚ್ಚಿದ ಚೀನೀ ಸರ್ಕಾರ ಅದೇ ವೂಹಾನ್ ನಗರ ಜಗತ್ತಿನ ಇತರ ನಗರಗಳ ಜತೆ ವಿಮಾನಸಂಪರ್ಕ ಇಟ್ಟುಕೊಂಡಿರುವಂತೆ ನೋಡಿಕೊಂಡಿತು. ಪರಿಣಾಮವಾಗಿ ಮುಂದಿನ ಒಂದು ತಿಂಗಳಲ್ಲಿ ಕರೊನಾ ವೈರಸ್ ಜಗತ್ತಿನೆಲ್ಲೆಡೆ ಹರಡಿಹೋಯಿತು. ವಿಪರ್ಯಾಸವೆಂದರೆ, ಚೀನಾದಿಂದ ಕರೊನಾ ವೈರಸ್ ಪಡೆದ ಹೊರಜಗತ್ತು ಮುಖ್ಯವಾಗಿ ಪಶ್ಚಿಮ ಯುರೋಪಿನ ದೇಶಗಳು ಮಾಸ್ಕ್​ಗಳು ಮತ್ತು ಪಿಪಿಇಗಳಿಗಾಗಿ, ಅದೇ ಚೀನಾದ ಮುಂದೆಯೇ ಅಂಗಲಾಚಿದವು ಮತ್ತು ಅವುಗಳಿಗೆ ಚೀನಾ ಪೂರೈಸಿದ ಆ ಸಾಮಗ್ರಿಗಳು ಸೋಂಕುಪೂರಿತವಾಗಿದ್ದವು! ಹೀಗೆ ಜಗತ್ತನ್ನು ಕರೊನಾ ವೈರಸ್ ಸೋಂಕಿನಲ್ಲಿ ಸಿಲುಕಿಸಲು ಚೀನಾ ಎಲ್ಲ ‘ಕ್ರಮ’ಗಳನ್ನೂ ಕೈಗೊಂಡು ಅದರಲ್ಲಿ ಯಶಸ್ವಿಯಾಯಿತು. ಇದಕ್ಕೆ ಹಲವಾರು ಜಾಗತಿಕ ನಾಯಕರೂ, ಜನರೂ ತಮ್ಮ ಬೇಜವಾಬ್ದಾರಿ ನಡವಳಿಕೆಗಳಿಂದ ಸಹಕರಿಸಿದರು. ಅಮೆರಿಕದಲ್ಲಿ ಲಾಕ್​ಡೌನ್ ಜಾರಿಗೆ ಬಂದದ್ದು ಸಾಮಾಜಿಕ ಪ್ರಸರಣದ ವರದಿಗಳು ಬಂದ ಹತ್ತುದಿನಗಳ ನಂತರ, ಊರೆಲ್ಲ ಸೂರೆಹೋದ ಮೇಲೆ ದಿಡ್ಡಿಬಾಗಿಲು ಮುಚ್ಚಿದಂತೆ.

    1949ರಲ್ಲಿ ಚೀನಾದಲ್ಲಿ ಅಧಿಕಾರವನ್ನು ಹಸ್ತಗತ ಮಾಡಿಕೊಂಡ ಹುಮ್ಮಸ್ಸಿನಲ್ಲಿ ಚೀನೀ ಕಮ್ಯೂನಿಸ್ಟ್ ಪಕ್ಷದ ನೇತಾರ ಮಾವೋ ಜೆಡಾಂಗ್ ಮುಂದಿನ ನೂರು ವರ್ಷಗಳಲ್ಲಿ ತನ್ನ ದೇಶವನ್ನು ಜಗನ್ನಾಯಕನನ್ನಾಗಿಸುವ ಯೋಜನೆ ರೂಪಿಸಿದರು. ಸೋವಿಯೆತ್ ಯೂನಿಯನ್​ನ ಕುಸಿತ, ಕ್ರಿಶ್ಚಿಯನ್ ಪಶ್ಚಿಮ ಯುರೋಪಿಯನ್ ದೇಶಗಳ ಆರ್ಥವ್ಯವಸ್ಥೆಗಳ ಮೇಲೆ ಚೀನೀ ಹತೋಟಿ, ಮತ್ತು ಅಂತಿಮವಾಗಿ ಅಮೆರಿಕದೊಂದಿಗೆ ನೇರ ಮುಖಾಮುಖಿಯನ್ನೊಳಗೊಂಡ ಮೂರು ಹಂತಗಳ ಈ ಯೋಜನೆಯಲ್ಲಿ ಒಂದು ಅಸ್ತ್ರವಾಗಿ ಬಳಸಲೆಂದೇ ಚೀನಾ ಕರೊನಾ ವೈರಸ್ ಅನ್ನು ಸೃಷ್ಟಿಸಿದ ಸಾಧ್ಯತೆಯಿದೆ. ಮುಂದೆಂದೋ ಬಳಸಲೆಣಿಸಿದ್ದ ಈ ಜೈವಿಕ ಸಮೂಹನಾಶಕ ಮಾರಕಾಸ್ತ್ರ ಲ್ಯಾಬ್​ನಿಂದ ಹೊರಬಿದ್ದಾಗ ಅದನ್ನು ಜಗತ್ತಿಗೆ ಹರಡಿ, ಕಂಗೆಟ್ಟ ದೇಶಗಳನ್ನು ಒಂದೊಂದಾಗಿ ಮಣಿಸುವ ತರಾತುರಿಯ ಯೋಜನೆಯನ್ನು ಮಾನವತಾ-ವಿರೋಧಿ ಕಮ್ಯೂನಿಸ್ಟ್ ಸರ್ಕಾರ ರೂಪಿಸಿತು. ಇದಕ್ಕೆ ಅದು ಆಯ್ದುಕೊಂಡ ಮೊದಲ ದೇಶ ಇಂಡೋನೇಷ್ಯಾ. ಅತ್ತ ವೂಹಾನ್​ನಲ್ಲಿ ಲಾಕ್​ಡೌನ್ ವಿಧಿಸುತ್ತ ಇತ್ತ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಹತೋಟಿಯನ್ನು ಮತ್ತಷ್ಟು ವಿಸ್ತರಿಸುವ ಕ್ರಮಕ್ಕೆ ಚೀನಾ ಮುಂದಾಯಿತು. ಕಳೆದ ಎರಡು ದಶಕಗಳಿಂದಲೂ ವಿಯೆಟ್ನಾಂ ಅನ್ನು ಬೆದರಿಸಿ; ಫಿಲಿಪೀನ್ಸ್, ಮಲೇಷ್ಯಾ, ಕಾಂಬೋಡಿಯಾಗಳ ನಾಯಕರನ್ನು ತನ್ನ ಲಂಚಾವತಾರದ ಸುಳಿಯಲ್ಲಿ ಸಿಲುಕಿಸಿಕೊಂಡು ದಕ್ಷಿಣ ಚೀನಾ ಸಮುದ್ರದ ಶೇಕಡ 90 ಭಾಗದ ಮೇಲೆ ಹತೋಟಿ ಸ್ಥಾಪಿಸಿಕೊಂಡಿರುವ ಚೀನಾಗೆ ಸೆಡ್ಡುಹೊಡೆದು ನಿಂತಿದ್ದದ್ದು ಆ ದ್ವೀಪರಾಷ್ಟ್ರ. ಅದಕ್ಕೆ ಸೇರಿದ ದ್ವೀಪಗಳ ಹತ್ತಿರ, ಎದುರಾಳಿಯ ನೀರೆಷ್ಟೆಂದು ಅಳೆಯುವ ಒಂದು ಕ್ರಮವಾಗಿ ಚೀನೀ ನೌಕೆಗಳು ಸುಳಿದಾಡಲು ಆರಂಭಿಸಿದಂತೇ ಜಕಾರ್ತ ಸರ್ಕಾರ ಅದೆಷ್ಟು ಉಗ್ರವಾಗಿ ಪ್ರತಿಕ್ರಿಯಿಸಿತೆಂದರೆ ಚೀನೀಯರು ಸದ್ದಿಲ್ಲದೇ ಹಿಂದೆ ತಿರುಗಬೇಕಾಯಿತು. ಸಹಸ್ರಾರು ಕಿಲೋಮೀಟರ್​ಗಳ ದೂರದ ಸಾಗರಪ್ರದೇಶದಲ್ಲಿನ ಸೆಣಸಾಟ ತರಬಹುದಾದ ಅಪಾಯವನ್ನು ಅರಿತ ಚೀನಾ ನಂತರ ಆಯ್ದುಕೊಂಡದ್ದು ತನಗೆ ಹತ್ತಿರದ ದೇಶಗಳನ್ನು ಅಂದರೆ ತನ್ನ ಸೇನೆ ಮತ್ತು ನೌಕಾದಳಕ್ಕೆ ಆಹಾರಪದಾರ್ಥಗಳು ಮತ್ತು ಶಸ್ತ್ರಾಸ್ತ್ರಗಳನ್ನು ನಿರಂತರವಾಗಿ ಪೂರೈಸಲು ಅವಕಾಶವಿರುವಂತಹ ರಣಾಂಗಣಗಳನ್ನು. ದಕ್ಷಿಣ ಕೊರಿಯಾ, ಜಪಾನ್ ಮತ್ತು ತೈವಾನ್​ಗಳ ಜಲಪ್ರದೇಶಗಳನ್ನು ಉಲ್ಲಂಘಿಸಿ ಅವುಗಳನ್ನು ಪ್ರಚೋದಿಸುವ ಚೀನೀ ತಂತ್ರ ಆರಂಭವಾಯಿತು. ಆದರೆ ಈ ರಾಷ್ಟ್ರಗಳು ಪರಿಸ್ಥಿತಿ ಕೈಮೀರದಂತೆ ಜಾಣತನ ತೋರಿದವು. ಆದರೆ ಪ್ರತಿಕ್ರಿಯಿಸದೇ ಇರಲಾಗದ ಸ್ಥಿತಿಯನ್ನು ಭಾರತದ ಮುಂದೆ ಚೀನಾ ತಂದಿಟ್ಟಿತು.

    1962ರ ‘ಯಶಸ್ಸಿನ’ ಗುಂಗಿನಲ್ಲೇ ಇದ್ದಿರಬಹುದಾದ ಚೀನೀ ಸೇನೆ ಮೇ ತಿಂಗಳ ಪ್ರಾರಂಭದಲ್ಲಿ ಉತ್ತರ ಸಿಕ್ಕಿಂನ ನಕೂ ಲಾ ಗಡಿಯಲ್ಲಿ ಅತಿಕ್ರಮಣಕ್ಕೆ ಮುಂದಾಯಿತು. ಇದೊಂದು ತರ್ಕಕ್ಕೆ ನಿಲುಕದ ನಡೆ. ವಿವಾದಾಸ್ಪದ ಲಡಾಖ್ ಮತ್ತು ಅರುಣಾಚಲ ಗಡಿಗಳಿಗೆ ವಿರುದ್ಧವಾಗಿ ಸಿಕ್ಕಿಂ-ಟಿಬೆಟ್ ಗಡಿ ನಿರ್ದಿಷ್ಟವಾಗಿ ಗುರುತಿಸಲ್ಪಟ್ಟಿದ್ದು ಯಾವುದೇ ವಿವಾದಕ್ಕೆ ಒಳಗಾಗಿಲ್ಲ. ಭಾರತೀಯ ಸೇನೆಯ ಕಟು ಪ್ರತಿಕ್ರಿಯೆಯಿಂದಾಗಿ ಅಲ್ಲಿಂದ ಕಾಲು ತೆಗೆದ ಚೀನೀ ಸೇನೆ ತನ್ನ ಮುಂದಿನ ಕಾರ್ಯಯೋಜನೆಗೆ ಆಯ್ದುಕೊಂಡದ್ದು ಲಾಗಾಯ್ತಿನ ರಣರಂಗ ಲಡಾಖ್ ಅನ್ನು. ಆದರೆ ಅಲ್ಲೂ ಚೀನೀಯರಿಗೆ ನಿರಾಶೆ ಕಾದಿತ್ತು. ಜೂನ್ 15ರ ರಾತ್ರಿಯ ಘರ್ಷಣೆಗಳಲ್ಲಿ ಭಾರತೀಯ ಸೇನೆಗಿಂತಲೂ ಹಲವು ಪಟ್ಟು ಹೆಚ್ಚು ಹಾನಿಯನ್ನು ಚೀನೀ ಸೇನೆ ಅನುಭವಿಸಿತು.

    ಚೀನೀ ಸೇನೆ ತನ್ನ ಲಡಾಖ್ ದುಸ್ಸಾಹಸದಲ್ಲಿ ಎದುರಿಸಿದ್ದು ಕೇವಲ ಧೀರ ಭಾರತೀಯ ಸೇನೆ ಮತ್ತು ದೃಢಸಂಕಲ್ಪದ ಭಾರತೀಯ ಸರ್ಕಾರವನ್ನಷ್ಟೇ ಅಲ್ಲ, ಅಮೆರಿಕ ಮತ್ತು ಜಪಾನ್​ಗಳನ್ನೂ ಸಹ. ಆ ಎರಡು ದೇಶಗಳು ಭಾರತದ ಪರ ನಿಂತದ್ದು ಅಭೂತಪೂರ್ವ, ಖಚಿತ ಹಾಗೂ ನಿರ್ಣಾಯಕ. ಚೀನೀಯರನ್ನು ಧೃತಿಗೆಡಿಸಿದ್ದು ಈ ಎಲ್ಲ ಬೆಳವಣಿಗೆಗಳು. ಅಂದಿನ ಜಪಾನೀ ಪ್ರಧಾನಿ ಶಿಂಜೊ ಅಬೇ ಅವರ ಈ ಸ್ಪಂದನೆಯನ್ನು ಗುರುತಿಸಿ ಭಾರತ ‘ಪದ್ಮ ವಿಭೂಷಣ’ದಿಂದ ಗೌರವಿಸಿದೆ. ನಿಜ ಹೇಳಬೇಕೆಂದರೆ ಈ ಗೌರವಕ್ಕೆ ಅಬೇಯವರಷ್ಟೇ ಅರ್ಹರಾದವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ. ಆದರೆ ಅವರನ್ನು ಭಾರತ ಅಧಿಕೃತವಾಗಿ ಸನ್ಮಾನಿಸುವುದು ಇಂದು ಅಮೆರಿಕದಲ್ಲಿರುವ ಡೆಮೋಕ್ರಾಟಿಕ್ ಆಡಳಿತಕ್ಕೆ ಸಹ್ಯವಾಗಲಾರದು ಮತ್ತು ಆ ಕಾರಣದಿಂದಲೇ ಡೆಮೋಕ್ರಾಟಿಕ್ ಪಕ್ಷ ಮತ್ತು ಭಾರತದ ನಡುವೆ ಈಗಾಗಲೇ ಇರುವ ಅಪನಂಬಿಕೆ ಮತ್ತಷ್ಟು ಉಗ್ರವಾಗುವ ಸಾಧ್ಯತೆಯ ಅರಿವು ಭಾರತ ಸರ್ಕಾರಕ್ಕಿದೆ.

    ಇಲ್ಲಿ ತರ್ಕಕ್ಕೆ ನಿಲುಕದ ವಿಷಯವೆಂದರೆ ಚೀನಾ ಈ ಬಗೆಯ ಸೇನಾ ದುಸ್ಸಾಹಸಗಳಿಗೆ ಮುಂದಾಗಿದ್ದೇಕೆ ಎನ್ನುವುದು. ಗುಪ್ತ ಮೂಲಗಳ ಮೂಲಕ ಹೊರಕ್ಕೆ ಜಿನುಗಿ ಬರುತ್ತಿರುವ ಮಾಹಿತಿಗಳು ಬಿಂಬಿಸಿರುವ ಚಿತ್ರಣ ಭಯಾನಕವಾಗಿದೆ. ಕರೊನಾ ವೈರಸ್​ನಿಂದ ಅತೀವವಾಗಿ ಘಾಸಿಗೊಂಡಿರುವ ದೇಶ ಚೀನಾ. ಅಧ್ಯಕ್ಷ ಷಿ ಜಿನ್​ಪಿಂಗ್ ಸೇರಿದಂತೆ ಚೀನೀ ಕಮ್ಯೂನಿಸ್ಟ್ ಪಕ್ಷದ ಏಳು ಪಾಲಿಟ್​ಬ್ಯೂರೋ ಸದಸ್ಯರು ಜೂನ್ ತಿಂಗಳಲ್ಲೇ ಮೂರುವಾರಗಳ ಕಾಲ ಸಾರ್ವಜನಿಕ ಕಣ್ಣಿನಿಂದ ನಾಪತ್ತೆಯಾಗಿದ್ದರು. ಅದೇ ಸಮಯದಲ್ಲಿ ಕಮ್ಯೂನಿಸ್ಟ್ ನಾಯಕವರ್ಗಕ್ಕೇ ಮೀಸಲಾದ ಬೀಜಿಂಗ್​ನ ‘ಮಿಲಿಟರಿ ಹಾಸ್ಪಿಟಲ್ 301’ನ ಸುತ್ತಲೂ ಕಂಡುಬಂದ ಬಿಗಿ ಭದ್ರತಾ ದೃಶ್ಯಗಳು ಚೀನೀ ನಾಯಕರೆಲ್ಲರೂ ಕರೊನಾ ಸೋಂಕಿಗೊಳಗಾಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರಬಹುದಾದ ಸೂಚನೆ ನೀಡಿದ್ದವು.

    ಕರೊನಾ ಸೋಂಕಿನ ಜತೆಗೆ ಕಳೆದ ಎಂಬತ್ತು ವರ್ಷಗಳಲ್ಲೇ ಅತ್ಯಧಿಕವಾಗಿ ಎರಡು ತಿಂಗಳಿಗೂ ಅಧಿಕ ಕಾಲ ಅವ್ಯಾಹತವಾಗಿ ಸುರಿದ ಮಳೆ ದೇಶದ ಮೂರನೆಯ ಎರಡು ಭಾಗಗಳಲ್ಲಿ ಆಹಾರ ಉತ್ಪಾದನೆಯನ್ನು ಸಂಪೂರ್ಣ ಅಥವಾ ಭಾಗಶಃ ಹಾಳುಗೆಡವಿದೆ ಮತ್ತು ಪೂರೈಕೆಯನ್ನು ತೀವ್ರವಾಗಿ ಬಾಧಿಸಿದೆ. ಹೀಗಾಗಿಯೇ, ಆಹಾರಪದಾರ್ಥಗಳನ್ನು ಮಿತವಾಗಿ ಬಳಸಬೇಕೆಂದು ಅಧಿಕೃತ ಸರ್ಕಾರೀ ಆದೇಶವೂ ಜೂನ್ ತಿಂಗಳ ಆರಂಭದಲ್ಲೇ ಹೊರಟಿತ್ತು. ಜತೆಗೆ ಈ ವರ್ಷದ ಚಳಿಗಾಲವೂ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಆಸ್ಟ್ರೇಲಿಯಾ ಜತೆ ಚೀನೀ ಸರ್ಕಾರ ಕಳೆದ ಹತ್ತು ತಿಂಗಳಿನಿಂದಲೂ ಸಾಗಿಸಿಕೊಂಡು ಬಂದಿರುವ ಆರ್ಥಿಕ ಸಂಘರ್ಷದಿಂದಾಗಿ ಆ ದೇಶದಿಂದ ಕಲ್ಲಿದ್ದಲು ಪೂರೈಕೆ ನಿಂತುಹೋಗಿದೆ. ಸರಿಸುಮಾರು ಮೂರು ದಶಕಗಳಿಂದಲೂ ಆಸ್ಟ್ರೇಲಿಯನ್ ಕಲ್ಲಿದ್ದಲಿನ ಮೇಲೇ ಅವಲಂಬಿತವಾಗಿದ್ದ ಚೀನೀ ಉಷ್ಣ ವಿದ್ಯುತ್ ಕೇಂದ್ರಗಳು ಮುಚ್ಚಲ್ಪಟ್ಟಿವೆ. ರಷ್ಯಾದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳತೊಡಗಿದರೂ, ಗುಣಮಟ್ಟದಲ್ಲಿ ಬೇರೆಯೇ ಆಗಿರುವ ರಶಿಯನ್ ಕಲ್ಲಿದ್ದಲನ್ನು ಬಳಸಲು ವಿದ್ಯುತ್ ಸಂಯಂತ್ರಗಳಲ್ಲಿ ಮಾಡಬೇಕಾದ ತಾಂತ್ರಿಕ ಬದಲಾವಣೆಗಳು ನಿಧಾನವಾಗುತ್ತಿರುವುದರಿಂದ ವಿದ್ಯುತ್ ಉತ್ಪಾದನೆ ಬಹುವಾಗಿ ತಗ್ಗಿದೆ. ಜತೆಗೆ ದೇಶಾದ್ಯಂತದ ಮಳೆ ಹಾಗೂ ವ್ಯಾಪಕ ಪ್ರವಾಹಗಳಿಂದಾಗಿ ಜಲವಿದ್ಯುತ್ ಕೇಂದ್ರಗಳೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಈ ಕಾರಣಗಳಿಂದಾಗಿ ಸಾಮಾನ್ಯ ಜನತೆಗೆ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಚಳಿಯಿಂದ ಪಾರಾಗಲು ಸೌದೆ ಉರಿಸುವುದನ್ನೂ ಸರ್ಕಾರ ಪ್ರತಿಬಂಧಿಸಿದೆ, ಜನ ಸಂಗ್ರಹಿಸಿರುವ ಸೌದೆಗಳನ್ನೂ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಸರ್ಕಾರೀ ಅಧಿಕಾರಿಗಳು ಮತ್ತು ಕಮ್ಯೂನಿಸ್ಟ್ ಪಕ್ಷದ ಸದಸ್ಯರಿಗಷ್ಟೇ ನೀಡುತ್ತಿದೆಯೆಂಬ ಸುದ್ದಿಗಳು ಬರುತ್ತಿವೆ.

    ಇಂತಹ ವಿಷಮ ಸನ್ನಿವೇಶದಲ್ಲಿ ಚೀನೀ ಸರ್ಕಾರ ಈಗ ಏಕಾಏಕಿ ತೈವಾನ್ ಮತ್ತು ಭಾರತದ ವಿರುದ್ಧ ಆಕ್ರಮಣಕಾರಿ ನಡೆಗಳನ್ನು ಪ್ರದರ್ಶಿಸತೊಡಗಿದೆ. ಅಮೆರಿಕದಲ್ಲಿ ಜೋ ಬೈಡೆನ್ ಶ್ವೇತಭವನ ಪ್ರವೇಶಿಸುತ್ತಿದ್ದಂತೇ ಇತ್ತ ಸಿಕ್ಕಿಂನ ನಕೂ ಲಾ ಗಡಿಯಲ್ಲಿ ಚೀನೀ ಸೇನೆ ತಂಟೆ ತೆಗೆಯುವುದರ ಜತೆಗೇ ತೈವಾನ್​ನ ವಾಯುಪ್ರದೇಶವನ್ನು ಚೀನೀ ವಾಯುಸೇನೆ ಉಲ್ಲಂಘಿಸತೊಡಗಿದೆ. ಚೀನಾದ ಈ ಎರಡು ನಡೆಗಳು ನೇರವಾಗಿ ಭಾರತ ಮತ್ತು ತೈವಾನ್ ವಿರುದ್ಧ ಅಲ್ಲ, ಬದಲಾಗಿ ಬೈಡೆನ್ ಆಡಳಿತದ ಪ್ರತಿಕ್ರಿಯೆಯ ಪ್ರಮಾಣವನ್ನು ಅಳೆಯುವ ಕ್ರಮ ಎಂಬುದು ನಿಜವೆೆನಿಸಿದರೂ ಇಡೀ ವಲಯದ ದೇಶಗಳು ಎಚ್ಚೆತ್ತುಕೊಳ್ಳಬೇಕಾದ ಸಮಯ ಇದಾಗಿದೆ. ಕರೊನಾ ಸಂಕ್ರಮಣ ಅಥವಾ ಇನ್ನಾವುದೇ ಜಗತ್​ಕಂಟಕ ಬೆಳವಣಿಗೆಯೂ, ತನ್ನದೇ ಜನತೆಯ ಸಂಕಷ್ಟಗಳೂ ಚೀನೀ ಕಮ್ಯೂನಿಸ್ಟ್ ಸತ್ತೆಯನ್ನು ಶಾಂತಿಪ್ರಿಯ, ಮಾನವತಾಪ್ರಿಯಗೊಳಿಸಲಾರವು ಎನ್ನುವುದನ್ನು ಜಗತ್ತು ಗುರುತಿಸಬೇಕು.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts