More

    ಸಂವಿಧಾನ ಬದಲಾವಣೆಗೆ ಬಿಜೆಪಿ ನಿರಂತರ ಯತ್ನ

    ದಾವಣಗೆರೆ: ಪ್ರಸಕ್ತ ಲೋಕಸಭಾ ಚುನಾವಣೆ ನಿರ್ಣಾಯಕ ಯುದ್ಧವಾಗಿದ್ದು, ಬಿಜೆಪಿ ವಿರೋಧಿ ಶಕ್ತಿಗಳು ಒಂದಾಗುವ ಮೂಲಕ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಬಹುತ್ವ ಉಳಿಸಬೇಕಿದೆ ಎಂದು ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
     ಭಾರತ್ ಕಮ್ಯುನಿಸ್ಟ್ ಪಕ್ಷ ನಗರದ ಶಿವಯೋಗಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಸೋಲಿಸಿ, ದೇಶ ಉಳಿಸಿ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
     ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾಗಿ ಅಂಗೀಕರಿಸಿದ ಸಂವಿಧಾನವನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಒಪ್ಪಿರಲಿಲ್ಲ. ಮನುಧರ್ಮ ಶಾಸ್ತ್ರದ ಸಂವಿಧಾನ ಜಾರಿಯಾಗಬೇಕು ಎಂದು ಬಯಸಿದ್ದವು. ಸಂವಿಧಾನ ಬದಲಾವಣೆ ಹಾಗೂ ಶ್ರೇಣಿಕೃತ ವ್ಯವಸ್ಥೆ ಜಾರಿಗೊಳಿಸಲು ನಿರಂತರ ಪ್ರಯತ್ನ ನಡೆಸಿವೆ ಎಂದು ದೂರಿದರು.
     ಬಿಜೆಪಿ ಸಂಸದ ಅನಂತ್‌ಕುಮಾರ್ ಹೆಗಡೆ ಬಿಜೆಪಿ ಅಧಿಕಾರಕ್ಕೆ ಬರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದರೆ, ಸಚಿವ ನಿತಿನ್ ಗಡ್ಕರಿ ಆರ್‌ಎಸ್‌ಎಸ್‌ನ ಎಲ್ಲ ಆಶಯ ಜಾರಿ ಮಾಡುವುದು ಬಿಜೆಪಿಯ ಉದ್ದೇಶ ಎಂದು ಹೇಳಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರು, ಕಾರ್ಮಿಕರು, ಬಡವರ ಉದ್ಯೋಗದ ಹಕ್ಕು ಕಸಿದುಕೊಳ್ಳಲಿದ್ದಾರೆ ಎಂದರು.
     ಭಾರತ ಬಹುಧರ್ಮ, ಬಹುಜಾತಿ ಹಾಗೂ ಬಹು ಆಚರಣೆಯ ದೇಶವಾಗಿದೆ. ಬಿಜೆಪಿಯವರು ಒಂದು ದೇಶ, ಒಂದು ಚುನಾವಣೆ ಹಾಗೂ ಒಬ್ಬನೇ ನಾಯಕ ಎಂಬ ದೃಷ್ಟಿಕೋನದಿಂದ ದೇಶದ ಬಹುತ್ವ ನಾಶ ಮಾಡಲು ಹೊರಟಿದ್ದಾರೆ. ದೇಶದ ಜನಪ್ರತಿನಿಧಿಗಳನ್ನು ನಿರಂತರ ಬಂಧಿಸುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಖಂಡಿಸಿದರು.
     ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಆಡಳಿತದಲ್ಲಿ ಬೆಲೆಗಳೆಲ್ಲ ಗಗನಕ್ಕೇರಿವೆ. ದೇಶದಲ್ಲಿ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರೂ ಶೇ.80 ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. 2022ಕ್ಕೆ ಎಲ್ಲರಿಗೂ ಸ್ವಂತ ಮನೆ ನೀಡುವ  ಆಶ್ವಾಸನೆ ಈಡೇರಿಲ್ಲ. ಸಬ್ ಕಾ ವಿಕಾಸ್ ಎಂದು ಬಡವರ ವಿನಾಶ ಮಾಡಲು ಹೊರಟಿದ್ದಾರೆ. ಚುನಾವಣಾ ಬಾಂಡ್ ಹೆಸರಿನಲ್ಲಿ ಕೋಟ್ಯಂತರ ರೂ. ಸುಲಿಗೆ ಮಾಡಿದ್ದಾರೆ ಎಂದು ಟೀಕಿಸಿದರು.
     ಚುನಾವಣೆಯಲ್ಲಿ ಏತಕ್ಕಾಗಿ ಬಿಜೆಪಿ ಸೋಲಿಸಬೇಕು ಎಂಬ ಬಗ್ಗೆ ಹಲವು ವಿಚಾರಗಳ ಕಿರುಹೊತ್ತಗೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬಿಡುಗಡೆ ಮಾಡಲಾಗುತ್ತಿದೆ. ಇದೊಂದು ಗೇಮ್ ಚೇಂಜರ್ ಆಗಿದ್ದು, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರ ಸುಳ್ಳುಗಳಿಗೆ ಕಾರ್ಯಕರ್ತರು ಧೈರ್ಯದಿಂದ ಉತ್ತರಿಸಬಹುದಾಗಿದೆ ಎಂದರಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿಸಲು ಸಿಪಿಐ ತೀರ್ಮಾನಿಸಿದೆ ಎಂದರು.
     ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನ ಗಳಿಸಿದರೆ ಆಡಳಿತ ನೀತಿಯನ್ನು ಪ್ರಶ್ನೆ ಮಾಡುವವರೆಲ್ಲ ಜೈಲು ಸೇರಬೇಕಾಗುತ್ತದೆ. ಹಿಟ್ಲರ್ ಸಂಸ್ಕೃತಿಯನ್ನು ದೇಶದಿಂದ ಮೊದಲು ತೊಲಗಿಸಬೇಕು. ಮಹಿಳೆಯರು ಹಾಗೂ ಯುವಜನರು ಎಚ್ಚೆತ್ತುಕೊಂಡು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ತಿಳಿಸಿದರು.
     ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ ಮಾತನಾಡಿ, ದೇಶದಲ್ಲಿಂದು ಯಾರೂ ನೆಮ್ಮದಿಯಾಗಿ ಬದುಕುವ ವಾತಾವರಣ ಇಲ್ಲ. ಸಬ್ ಕಾ ವಿನಾಶ್ ಬಿಜೆಪಿಯ ಉದ್ದೇಶವಾಗಿದೆ ಎಂದು ಟೀಕಿಸಿದರು.
     ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಸ್.ಬಕ್ಕೇಶ್, ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಸಹ ಕಾರ್ಯದರ್ಶಿ ಆವರಗೆರೆ ವಾಸು, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಶಿವಕುಮಾರಪ್ಪ, ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ಕಾಂಗ್ರೆಸ್ ಮುಖಂಡರಾದ ಕೆ.ಜಿ.ಶಿವಕುಮಾರ್, ಎಸ್. ಮಲ್ಲಿಕಾರ್ಜುನ್, ಎ. ನಾಗರಾಜ್, ಅನಿತಾಬಾಯಿ ಮಾಲತೇಶ್‌ರಾವ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಸಿಪಿಐ ಹರಪನಹಳ್ಳಿ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಎನ್‌ಎಫ್‌ಐಡಬ್ಲೂೃ ಜಿಲ್ಲಾಧ್ಯಕ್ಷೆ ಎಂ.ಬಿ. ಶಾರದಮ್ಮ ಇತರರಿದ್ದರು.
     ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಜಿ.ಉಮೇಶ್ ಆವರಗೆರೆ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts