More

    ಮುತ್ತುರಾಜ ರಾಜಕುಮಾರ್ ಆಗಿದ್ದು ಹೀಗೆ…

    ಡಾ. ರಾಜಕುಮಾರ್ ನಟಿಸಿದ ಮೊದಲ ಚಿತ್ರ ಯಾವುದು? ಇತಿಹಾಸದ ಪುಟಗಳು ಹೇಳುವಂತೆ, 1942ರಲ್ಲಿ ಬಿಡುಗಡೆಯಾದ ‘ಪ್ರಹ್ಲಾದ’ ಎಂಬ ಚಿತ್ರದಲ್ಲಿ ಬಾಲನಟರಾಗಿ, 1952ರಲ್ಲಿ ಬಿಡುಗಡೆಯಾದ ‘ಶ್ರೀನಿವಾಸ ಕಲ್ಯಾಣ’ ಚಿತ್ರದಲ್ಲಿ ಸಹನಟರಾಗಿ ರಾಜಕುಮಾರ್ ಅದಾಗಲೇ ನಟಿಸಿದ್ದರು. ಆದರೆ, ಅವರು ನಾಯಕನಾಗಿ ನಟಿಸಿದ ಮೊದಲ ಚಿತ್ರ ಎಂದರೆ, 1954ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’. ಈ ಚಿತ್ರಕ್ಕೆ ಅವರು ಆಯ್ಕೆಯಾಗಿದ್ದರ ಹಿಂದೆ ಒಂದು ಸ್ವಾರಸ್ಯಕರ ಘಟನೆ ಇದೆ. ಆ ಘಟನೆಯನ್ನು ಚಿತ್ರದ ನಿರ್ದೇಶಕ ಎಚ್.ಎಲ್.ಎನ್. ಸಿಂಹ ಅವರೇ ಬಹಳ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

    ಅಷ್ಟರಲ್ಲಾಗಲೇ, ಗುಬ್ಬಿ ಕರ್ನಾಟಕ ಸಂಸ್ಥೆಯಡಿ ‘ನಾಟಕರತ್ನ’ ಗುಬ್ಬಿ ವೀರಣ್ಣ, ಸಿ.ಆರ್. ಬಸವರಾಜ್ ಮತ್ತು ಪಾಲುದಾರರಾದ ಎ.ವಿ. ಮೇಯಪ್ಪ ಚೆಟ್ಟಿಯಾರ್, ‘ಗುಣಸಾಗರಿ’ ಎಂಬ ಚಿತ್ರ ಮಾಡಿದ್ದರು. ಈ ಚಿತ್ರವನ್ನು ಸಿಂಹ ಅವರೇ ನಿರ್ದೇಶಿಸಿದ್ದು, 1953ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ನಂತರ ‘ಬೇಡರ ಕಣ್ಣಪ್ಪ’ ಎಂಬ ಜನಪ್ರಿಯ ನಾಟಕವನ್ನು ಚಿತ್ರ ಮಾಡಬೇಕೆಂದು ತೀರ್ವನವಾಯಿತಂತೆ. ‘ಬೇಡರ ಕಣ್ಣಪ್ಪ’ ನಾಟಕದಲ್ಲಿ ಕಾಶಿ ಮತ್ತು ಶಾಸ್ತ್ರಿ ಪಾತ್ರಗಳಲ್ಲಿ ಮಿಂಚಿದ್ದ ನರಸಿಂಹರಾಜು ಮತ್ತು ಜಿ.ವಿ. ಅಯ್ಯರ್ ಅವರೇ ಚಿತ್ರದಲ್ಲೂ ಆ ಪಾತ್ರಗಳನ್ನು ಮುಂದುವರಿಸಬೇಕು ಎಂದು ಹಿರಿಯರೆಲ್ಲರೂ ನಿರ್ಧರಿಸಿದ್ದಾರೆ. ‘ಗುಣಸಾಗರಿ’ ಚಿತ್ರದಲ್ಲಿ ನಟಿಸಿದ್ದ ಪಂಢರಿಬಾಯಿ, ಈ ಚಿತ್ರಕ್ಕೂ ನಾಯಕಿಯಾಗಿ ಗೊತ್ತಾಗಿದ್ದಾರೆ. ಆದರೆ, ಕಣ್ಣಪ್ಪನ ಪಾತ್ರಕ್ಕೆ ಮಾತ್ರ ಸರಿಯಾದ ವ್ಯಕ್ತಿ ಸಿಕ್ಕಿರಲಿಲ್ಲವಂತೆ.

    ನಾಯಕನ ಹುಡುಕಾಟ ನಡೆದಿರುವಾಗಲೇ, ಅದೊಂದು ದಿನ ಸಿಂಹ ಅವರು ಮದರಾಸಿನಿಂದ ತಮ್ಮ ಸ್ವಂತ ಊರಾದ ನಂಜನಗೂಡಿಗೆ ಹೋಗಿದ್ದರಂತೆ. ಬಸ್ ನಿಲ್ದಾಣದಲ್ಲಿಳಿದು ನಾಲ್ಕಾರು ಹೆಜ್ಜೆ ಮುಂದಿಡುತ್ತಿದ್ದಂತೆಯೇ, ಮೈಸೂರು ಕಡೆಗೆ ಪ್ರಯಾಣ ಬೆಳೆಸುತ್ತಿದ್ದ ಮುತ್ತುರಾಜು ಅವರನ್ನು ಕಂಡರಂತೆ. ಮುತ್ತುರಾಜು ಕೆಲವೇ ದಿನಗಳ ಹಿಂದಷ್ಟೇ ಮದುವೆಯಾಗಿದ್ದು, ಜತೆಗೆ ಅವರ ಪತ್ನಿ ಮತ್ತು ತಾಯಿಯೂ ಇದ್ದರಂತೆ. ಸಿಂಹ ಅವರಿಗೆ ಮುತ್ತುರಾಜು ಹಳೆಯ ಪರಿಚಯ. ಆದರೆ, ನೋಡಿ ಬಹಳ ದಿನಗಳಾಗಿದ್ದವು. ಹಿಂದಿನ ಬಾರಿ ನೋಡಿದ್ದಕ್ಕಿಂತ ಇನ್ನಷ್ಟು ಬೆಳೆದಿದ್ದರಂತೆ ಮುತ್ತುರಾಜು. ಅವರು ವಿನಮ್ರರಾಗಿ ಸಿಂಹ ಅವರಿಗೆ ಕೈಮುಗಿದರಂತೆ. ತಕ್ಷಣ ಸಿಂಹ ಅವರ ಮನಸ್ಸಿನಲ್ಲಿ, ‘ಇವನೇ ನನ್ನ ಕಣ್ಣಪ್ಪನಾದರೆ?’ ಎಂಬ ಪ್ರಶ್ನೆ ಹಾದು ಹೋಗಿದೆ. ಉಭಯಕುಶಲೋಪರಿಗಳನ್ನು ವಿಚಾರಿಸುತ್ತಲೇ, ಮುತ್ತುರಾಜು ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದರಂತೆ. ಬಾಯಲ್ಲೇನೋ ಮಾತಾಡುತ್ತಿದ್ದರೂ, ಮನಸ್ಸಿನಲ್ಲಿ ಮಾತ್ರ ‘ಇವನೇ ನನ್ನ ಕಣ್ಣಪ್ಪನಾದರೆ ಎಷ್ಟು ಚೆನ್ನಾಗಿರುತ್ತದೆ’ ಎಂದನಿಸುತ್ತಿತ್ತಂತೆ. ಆದರೆ, ಇದಕ್ಕೆ ನಿರ್ವಪಕರು ಒಪ್ಪದಿದ್ದರೆ? ಹಾಗಾಗಿ ಮೊದಲಿಗೆ ಅವರನ್ನು ಕೇಳಿ ಮುಂದುವರಿಯಬೇಕು ಎಂದು ತೀರ್ವನಿಸಿದ ಸಿಂಹ ಅವರು, ಮುತ್ತುರಾಜು ಸದ್ಯಕ್ಕೆ ಏನು ಮಾಡುತ್ತಿದ್ದಾರೆ ಎಂಬುದನ್ನೆಲ್ಲ ಕೇಳಿ ತಿಳಿದುಕೊಂಡಿದ್ದಾರೆ. ಸುಬ್ಬಯ್ಯ ನಾಯ್ಡು ಕಂಪನಿಯು ಹುಬ್ಬಳ್ಳಿಯಲ್ಲಿ ಮೊಕ್ಕಾಂ ಹೂಡಿದ್ದು, ಆ ಕಂಪನಿಯ ಹಲವು ನಾಟಕಗಳಲ್ಲಿ ಪಾತ್ರ ಮಾಡುತ್ತಿರುವುದಾಗಿ ಹೇಳಿ, ಬಸ್ ಹತ್ತಿದರಂತೆ ಮುತ್ತುರಾಜು. ನಂಜುಂಡೇಶ್ವರ ದಯೆಯಿಂದ ಸರಿಯಾದ ಕಣ್ಣಪ್ಪ ಸಿಕ್ಕಿದ ಎಂದು ಸಿಂಹ ಸಹ ಮನೆ ಕಡೆ ಹೊರಟರಂತೆ.

    ಮದರಾಸಿಗೆ ಹಿಂದಿರುಗಿದೊಡನೆಯೇ ಗುಬ್ಬಿ ವೀರಣ್ಣ ಮತ್ತು ಬಸವರಾಜ್ ಅವರ ಬಳಿ ಮುತ್ತುರಾಜುವಿನ ವಿಷಯ ಹೇಳಿದ್ದಾರೆ ಸಿಂಹ. ಕಣ್ಣಪ್ಪನ ಪಾತ್ರಕ್ಕೆ ಮುತ್ತುರಾಜು ಹೇಳಿ ಮಾಡಿಸಿದಂತಿದ್ದಾರೆ ಎಂದು ಅರ್ಥ ಮಾಡಿಸಿದ ನಿರ್ದೇಶಕರು, ಒಪ್ಪಿಗೆಯಾದರೆ ಕೂಡಲೇ ಕಾಗದ ಬರೆದು ಕರೆಸುವಂತೆ ಕೇಳಿಕೊಂಡರಂತೆ. ಅದರಂತೆ ವೀರಣ್ಣನವರು ಹುಬ್ಬಳ್ಳಿಗೆ ಕಾಗದ ಬರೆದು ಮುತ್ತುರಾಜು ಅವರನ್ನು ಮದರಾಸಿಗೆ ಕರೆಸಿಕೊಂಡಿದ್ದಾರೆ. ಎ.ವಿ. ಮೇಯಪ್ಪ ಚೆಟ್ಟಿಯಾರರು, ಆಡಿಷನ್ ಮಾಡದೆ ಯಾರನ್ನೂ ತೆಗೆದುಕೊಳ್ಳುತ್ತಿರಲಿಲ್ಲವಂತೆ. ಅದರಂತೆ ಆಡಿಷನ್​ನಲ್ಲಿ ಪಾಸಾದ ಮುತ್ತುರಾಜು, ‘ಬೇಡರ ಕಣ್ಣಪ್ಪ’ ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಎಲ್ಲ ಓಕೆ. ಆದರೆ, ನಾಯಕನ ಹೆಸರು ಬದಲಾಯಿಸಬೇಕು ಎಂದರಂತೆ ಚೆಟ್ಟಿಯಾರ್. ಮುತ್ತುರಾಜುಗೆ ತಂದೆ-ತಾಯಿ ಇಟ್ಟ ಹೆಸರು ಬದಲಾಯಿಸಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲವಂತೆ. ಕೊನೆಗೆ ಸಿಂಹ ಅವರು ಸಮಾಧಾನ ಹೇಳಿ, ಮುತ್ತುರಾಜು ಒಬ್ಬ ರಾಜಕುಮಾರನ ಠೀವಿಯಲ್ಲಿ ಬಾಳಲಿ ಎಂದು ಹಾರೈಸಿ ರಾಜಕುಮಾರ್ ಎಂಬ ಹೆಸರನ್ನು ಸೂಚಿಸಿದರಂತೆ. ಈ ಹೆಸರಿಗೆ ಎಲ್ಲರ ಒಪ್ಪಿಗೆಯ ಮುದ್ರೆ ಬಿದ್ದಿದೆ. ಅಂದಿನಿಂದ ಪುಟ್ಟಸ್ವಾಮಯ್ಯನವರ ಮಗ ರಾಜಕುಮಾರ್ ಎಂದೇ ಕರ್ನಾಟಕದಲ್ಲಿ ಪ್ರಸಿದ್ಧರಾಗಿದ್ದಾರೆ.

    ಪುಣ್ಯಭೂಮಿಯಲ್ಲಿ ಸರಳ ಪೂಜೆ

    ಡಾ. ರಾಜಕುಮಾರ್ ಅವರ 15ನೇ ಪುಣ್ಯಸ್ಮರಣೆ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಪುಣ್ಯಭೂಮಿಯಲ್ಲಿ ಕುಟುಂಬವರ್ಗ ಮತ್ತು ಅಭಿಮಾನಿಗಳು ಸರಳವಾಗಿ ಪೂಜೆ ಸಲ್ಲಿಸಿದರು. ಕಡಿಮೆ ಜನರ ಸಮ್ಮುಖದಲ್ಲಿ ಸರಳವಾಗಿ ನಡೆದ ಈ ಪೂಜೆಯಲ್ಲಿ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಮುಂತಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪುನೀತ್, ‘ಅಪ್ಪಾಜಿ ಇಲ್ಲದೆ 15 ವರ್ಷಗಳಾಯಿತು ಎಂದನಿಸುತ್ತಿಲ್ಲ. ಆ ನೆನಪು, ಪ್ರೀತಿ-ವಿಶ್ವಾಸ ನಮ್ಮಲ್ಲಿಟ್ಟು ಹೋಗಿದ್ದಾರೆ. ಅಂಥವರ ಮಗ ಆಗಿ ಹುಟ್ಟಿರುವುದಕ್ಕೆ ಹೆಮ್ಮಪಡುತ್ತೇನೆ’ ಎಂದರು.

    ಮುತ್ತುರಾಜ ರಾಜಕುಮಾರ್ ಆಗಿದ್ದು ಹೀಗೆ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts