More

    ಕೇರ್ಗಳ್ಳಿ ಕುಂಬಾರಕಟ್ಟೆ ಅಭಿವೃದ್ಧಿಗೆ ಕ್ರಮ: ಮುಡಾ ಅಧ್ಯಕ್ಷ ಕೆ. ಮರೀಗೌಡ

    ಮೈಸೂರು: ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಕೇರ್ಗಳ್ಳಿಯ ಕುಂಬಾರಕಟ್ಟೆ ತುಂಬಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗಿರುವುದರಿಂದ ಮುಡಾ ಹಾಗೂ ಬೋಗಾದಿ ಪಟ್ಟಣ ಪಂಚಾಯಿತಿಯಿಂದ ಮುಂಜಾಗ್ರತಾ ಕ್ರಮ ಕೈಗೊಂಡು ಕೆರೆ ಅಭಿವೃದ್ಧಿಪಡಿಸಲಾಗುವುದು ಎಂದು ಮುಡಾ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.
    ಚಾಮುಂಡೇಶ್ವರಿ ಕ್ಷೇತ್ರದ ಕೇರ್ಗಳ್ಳಿಯಲ್ಲಿರುವ ಕುಂಬಾರಕಟ್ಟೆಗೆ ಮಳೆಯಿಂದಾಗಿ ನೀರು ತುಂಬಿ ಅಕ್ಕಪಕ್ಕದ ಜಮೀನು ಹಾಗೂ ಕಟ್ಟಡಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷ ಕೆ.ಮರೀಗೌಡ ಅವರು ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಬೋಗಾದಿ ಎಸ್‌ಬಿಎಂ ಕಾಲನಿಯಿಂದ ದೀಪಾನಗರ ಮೂಲಕ ಪೂರ್ಣಯ್ಯ ನಾಲೆ ಮುಖಾಂತರ ನಿಂಗರಾಜನಕಟ್ಟೆ, ನ್ಯಾಯಾಂಗ ಬಡಾವಣೆ ತಲುಪಿ ಕುಂಬಾರಕಟ್ಟೆಗೆ ನೀರು ಬರುತ್ತಿತ್ತು. ಆದರೆ ಈಗ ಪೂರ್ಣಯ್ಯ ನಾಲೆ ಒತ್ತುವರಿಯಾಗಿ ಮುಚ್ಚಿ ಹೋಗಿರುವುದರಿಂದ ಎಲ್ಲ ನೀರು ಎಲ್ಲೆಂದರಲ್ಲಿ ಹಳ್ಳ ಇರುವ ಕಡೆ ಹರಿದು ಹೋಗುತ್ತಿದೆ ಎಂದರು.
    ಕೆರೆ ಏರಿಯ ಮಣ್ಣನ್ನು ತೆಗೆದ ಮೇಲೆ ತೂಬು ಮುಚ್ಚಿ ಹೋಗಿದೆ. ಈಗ ಕೆರೆ ಏರಿ ಅಭಿವೃದ್ಧಿಪಡಿಸಿ ತೂಬು ನಿರ್ಮಿಸಿ ಹೆಚ್ಚುವರಿ ನೀರು ಹರಿದು ಹೋಗಲು ಕಾಲುವೆ ನಿರ್ಮಿಸುವುದಲ್ಲದೆ, ಕೆರೆ ಏರಿ ಮೇಲೆ ಸುರಕ್ಷಿತ ಸ್ಟೀಲ್ ಗಾರ್ಡ್ ನಿರ್ಮಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಕೇರ್ಗಳ್ಳಿಯಿಂದ ಆರ್.ಆರ್. ನಗರ, ಸೋಮನಾಥನಗರದ ಮೂಲಕ 24 ಕೋಟಿ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
    ಮುಡಾ ಎಇ ನಾಗೇಶ್, ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಕೋಸ್, ಕೇರ್ಗಳ್ಳಿ ಬಸವೇಗೌಡ, ಹುಚ್ಚಪ್ಪ, ನಾಗಣ್ಣ, ಬಡಗಲಹುಂಡಿ ರವಿ, ಪ್ರಕಾಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts