More

    ಅಯೋಧ್ಯೆಯ ಈ ಬ್ಯಾಂಕ್​ನಿಂದ ಸಿಗುತ್ತೆ ನಂಬಿಕೆ-ನೆಮ್ಮದಿ

    ಅಯೋಧ್ಯೆ: ಖಾತೆದಾರರಿಗೆ ‘ಅಧ್ಯಾತ್ಮ, ಮನಃಶಾಂತಿ ಮತ್ತು ನಂಬಿಕೆ’ ನೀಡುವ ಒಂದು ವಿಶಿಷ್ಟ ಬ್ಯಾಂಕ್ ಶ್ರೀ ರಾಮಚಂದ್ರನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿದೆ. ಭವ್ಯ ರಾಮಮಂದಿರ ನಿರ್ವಣವಾಗಿರುವ ಹಿನ್ನೆಲೆಯಲ್ಲಿ ಅದೀಗ ಭಕ್ತರು ಹಾಗೂ ಪ್ರವಾಸಿಗರನ್ನು ವಿಶೇಷವಾಗಿ ತನ್ನತ್ತ ಸೆಳೆಯುತ್ತಿದೆ. ‘ಅಂತಾರಾಷ್ಟ್ರೀಯ ಶ್ರೀ ಸೀತಾರಾಮ ಬ್ಯಾಂಕ್’ ಎನ್ನುವುದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ಮಹಂತ ಮಹಂತ ನೃತ್ಯ ಗೋಪಾಲ ದಾಸ್ 1970ರ ನವೆಂಬರ್​ನಲ್ಲಿ ಸ್ಥಾಪಿಸಿರುವ ಈ ಬ್ಯಾಂಕ್ ಹೆಸರಾಗಿದೆ. ಎಲ್ಲ ಪುಟಗಳಲ್ಲಿ ‘ಸೀತಾರಾಮ’ ಎಂದು ಎಂದು ಬರೆದಿರುವ ಪುಸ್ತಿಕೆಗಳೇ ಈ ಬ್ಯಾಂಕ್​ನ ಠೇವಣಿಯಾಗಿದೆ.

    ಭಾರತ, ಅಮೆರಿಕ, ಬ್ರಿಟನ್, ಕೆನಡಾ, ನೇಪಾಳ, ಫಿಜಿ, ಯುಎಇ ಮತ್ತಿತರ ರಾಷ್ಟ್ರಗಳ ಸಹಿತ ಹಲವು ವಿದೇಶಗಳ 35,000ಕ್ಕೂ ಅಧಿಕ ಖಾತೆದಾರರನ್ನು ಈ ಬ್ಯಾಂಕ್ ಹೊಂದಿದೆ. ಶ್ರೀ ರಾಮನ ಭಕ್ತರು ನೀಡಿರುವ ಸುಮಾರು 20,000 ಕೋಟಿ ‘ಸೀತಾರಾಮ’ ಪುಸ್ತಿಕೆಗಳ ಸಂಗ್ರಹ ಇಲ್ಲಿದೆ. ನೂತನ ರಾಮ ಮಂದಿರದಲ್ಲಿ ಕಳೆದ ತಿಂಗಳು ಪ್ರಾಣ ಪ್ರತಿಷ್ಠಾಪನೆ ನಡೆದ ನಂತರ ಬ್ಯಾಂಕ್​ಗೆ ಪ್ರತಿ ದಿನ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ಪುನೀತ್ ರಾಮದಾಸ್ ಮಹಾರಾಜ್ ಹೇಳಿದ್ದಾರೆ.

    136 ಶಾಖೆಗಳು: ಭಕ್ತರಿಗೆ ಉಚಿತ ಪುಸ್ತಿಕೆಗಳು ಹಾಗೂ ಕೆಂಪು ಪೆನ್​ಗಳನ್ನು ಬ್ಯಾಂಕ್ ನೀಡುತ್ತದೆ. ಬ್ಯಾಂಕ್​ನಲ್ಲಿ ಖಾತೆ ತೆರೆಯಲು ಇಚ್ಛಿಸುವವರು ಕನಿಷ್ಠ 5 ಲಕ್ಷ ಬಾರಿ ‘ಸೀತಾರಾಮ’ ಎಂದು ಬರೆಯಬೇಕು. ಅಂಥವರ ಹೆಸರಿನಲ್ಲಿ ಖಾತೆ ತೆರೆದು ಪಾಸ್​ಬುಕ್ ನೀಡಲಾಗುತ್ತದೆ ಎಂದು ಮಹಾರಾಜ್ ವಿವರಿಸಿದ್ದಾರೆ. ಬ್ಯಾಂಕ್ ಭಾರತದಾದ್ಯಂತ ಹಾಗೂ ವಿದೇಶಗಳಲ್ಲಿ 136 ಶಾಖೆಗಳನ್ನು ಹೊಂದಿದೆ. ಖಾತೆದಾರರು ಕೂಡ ಅಂಚೆ ಮೂಲಕ ಪುಸ್ತಿಕೆಗಳನ್ನು ಕಳಿಸುತ್ತಾರೆ. ಮನಃಶಾಂತಿ, ವಿಶ್ವಾಸ ಮತ್ತು ಮೌಲ್ಯಗಳನ್ನು ಗಳಿಸಲು ದೇವ-ದೇವಿಯರ ದೇವಸ್ಥಾನಗಳಿಗೆ ಭೇಟಿ ನೀಡುವಂತೆ ‘ಸೀತಾರಾಮ’ ಎಂದು ಬರೆದು ಅದನ್ನು ಬ್ಯಾಂಕ್​ಗೆ ಜಮೆ ಮಾಡುವುದು ಕೂಡ ಪ್ರಾರ್ಥನೆಯ ಒಂದು ವಿಧಾನವಾಗಿದೆ ಎಂದು ಬ್ಯಾಂಕ್​ನ ಪ್ರಯೋಜನದ ಕುರಿತು ಪ್ರಶ್ನಿಸುವವರಿಗೆ ಹೇಳುತ್ತೇವೆ ಎಂದು ಮಹಾರಾಜ್ ವಿವರಿಸಿದ್ದಾರೆ.

    325 ಶಾಸಕರಿಂದ ಬಾಲರಾಮನ ದರ್ಶನ: ಉತ್ತರಪ್ರದೇಶದ ಉಭಯ ಸದನಗಳ ಸುಮಾರು 325 ಸದಸ್ಯರು ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಭಾನುವಾರ ರಾಮಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ವಿರೋಧ ಪಕ್ಷವಾದ ಸಮಾಜವಾದಿ ಪಕ್ಷ ಪ್ರವಾಸ ನಿರಾಕರಿಸಿತ್ತು. ಶಾಸಕರು ರಘುಪತಿ ರಾಘವ ರಾಜಾರಾಮ್ ಗೀತೆ ಹಾಡುತ್ತಿರುವ ಮತ್ತು ಕೆಲ ಶಾಸಕರು ಮೆಟ್ಟಿಲುಗಳ ಮೇಲೆ ಕುಳಿತು ಗ್ರೂಪ್ ಫೋಟೊಗೆ ಪೋಸ್ ನೀಡುತ್ತಿರುವ 14 ನಿಮಿಷಗಳ ವೀಡಿಯೊವನ್ನು ಸಿಎಂ ಯೋಗಿ ಹಂಚಿಕೊಂಡಿದ್ದಾರೆ.

    ಸಿಎಂದ್ವಯರ ಭೇಟಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ ಮಾನ್ ಸೋಮವಾರ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದ ಸಚಿವರೂ ಶೀಘ್ರ ದರ್ಶನ ಪಡೆಯಲಿದ್ದಾರೆ ಎಂದು ಡಿಸಿಎಂ ಫಡ್ನವಿಸ್ ತಿಳಿಸಿದ್ದಾರೆ.

    ಭಕ್ತಿ-ಶಕ್ತಿಯ ಸಂಗಮವು 500 ವರ್ಷಗಳ ಗುಲಾಮಗಿರಿಯನ್ನು ಮುರಿದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ವಣಕ್ಕೆ ಕಾರಣವಾಯಿತು.

    | ಯೋಗಿ ಆದಿತ್ಯನಾಥ್ ಸಿಎಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts