More

    ಮುಜಾಫರ್​ಪುರ ಶೆಲ್ಟರ್​ಹೋಂ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​: ಸತ್ತಿದ್ದಾರೆ ಎಂದುಕೊಂಡಿದ್ದ ಯುವತಿಯರೆಲ್ಲ ಬದುಕಿದ್ದಾರೆ ಎಂದು ಸುಪ್ರೀಂಕೋರ್ಟ್​ಗೆ ವರದಿ ನೀಡಿದ ಸಿಬಿಐ

    ನವದೆಹಲಿ: ಬಿಹಾರದ ಮುಜಾಫರ್​​ಪುರ ಆಶ್ರಯತಾಣದಲ್ಲಿ 35 ಯುವತಿಯರು ಮೃತಪಟ್ಟ ಪ್ರಕರಣ ವಿಚಿತ್ರ ಟ್ವಿಸ್ಟ್​ ಪಡೆದುಕೊಂಡಿದ್ದು ಆ 35 ಮಂದಿ ಸತ್ತಿಲ್ಲ, ಬದುಕಿದ್ದಾರೆ ಎಂದು ಸಿಬಿಐ ಇಂದು ಸುಪ್ರೀಂಕೋರ್ಟ್​ಗೆ ವರದಿ ಸಲ್ಲಿಸಿದೆ.

    ಇದು ಎರಡು ವರ್ಷಗಳ ಹಿಂದಿನ ಘಟನೆಯಾಗಿದ್ದು ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಇದೆ.

    ಮುಜಾಫರ್​​ಪುರದಲ್ಲಿರುವ ​ ಈ ಬಾಲಕಿಯರ ಆಶ್ರಯ ತಾಣದ ಪಕ್ಕದ ಸ್ಮಶಾನದಲ್ಲಿ ಹಲವು ಮೂಳೆಗಳು, ಎಲುಬುಗಳೆಲ್ಲ ಸಿಕ್ಕಿವೆ. ಶೆಲ್ಟರ್​ ಹೋಂ ನಡೆಸುತ್ತಿರುವ ಬ್ರಜೇಶ್​ ಠಾಕೂರ್ ಹಾಗೂ ಅವರ ಸಹಚರರು ಸೇರಿ ಹತ್ಯೆ ಮಾಡಿರಬಹುದು. ಇದೊಂದು ಲೈಂಗಿಕ ದೌರ್ಜನ್ಯದ ಪ್ರಕರಣ. ಹತ್ಯೆಗೀಡಾದ ಹುಡುಗಿಯರ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ 11 ಜನರ ಹೆಸರು ಕೇಳಿಬಂದಿದೆ ಎಂದು ಕಳೆದ ವರ್ಷ ಸಿಬಿಐ ಸುಪ್ರೀಂಕೋರ್ಟ್​ಗೆ ವರದಿ ಸಲ್ಲಿಸಿತ್ತು.

    ಆದರೆ ಇಂದು ಸಿಬಿಐ ಬೇರೆಯದ್ದೇ ತೆರನಾದ ವರದಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸಿದೆ. ನಮ್ಮ ತನಿಖೆಯ ವೇಳೆ ಎರಡು ಅಸ್ಥಿಪಂಜರಗಳು ಸಿಕ್ಕಿವೆ. ಅದರಲ್ಲಿ ಒಂದು ಪುರುಷನದ್ದು, ಮತ್ತೊಂದು ಮಹಿಳೆಯದ್ದು ಎಂದು ತಿಳಿದುಬಂದಿದೆ. ಬೇರೆ ಯಾವುದೇ ಬಾಲಕಿಯರು ಮೃತಪಟ್ಟ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ.

    ಬಾಲಕಿಯರ ಆಶ್ರಯತಾಣದಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ ಬಾಲಕಿಯರು ಬದುಕಿದ್ದಾರೆ. ಅವರನ್ನೆಲ್ಲ ಪತ್ತೆ ಹಚ್ಚಲಾಗಿದೆ. ಹಾಗಾಗಿ ಯಾವುದೇ ಹತ್ಯೆಗಳೂ ನಡೆದಿಲ್ಲ ಎಂದು ಸಿಬಿಐ ಅಟರ್ನಿ ಜನರಲ್​ ಕೆ.ಕೆ.ವೇಣುಗೋಪಾಲ್​ ಸುಪ್ರೀಂಕೋರ್ಟ್​ಗೆ ತಿಳಿಸಿದ್ದಾರೆ.

    ಬಿಹಾರದ ಒಟ್ಟು 17 ಶೆಲ್ಟರ್​ ಹೋಂಗಳಲ್ಲಿ ನಡೆದ ಸಾವಿನ ಬಗ್ಗೆ ತನಿಖೆ ನಡೆಸಿ ಅದರಲ್ಲಿ 13 ಶೆಲ್ಟರ್​ ಹೋಂಗಳ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿತ್ತು. ಅದರಲ್ಲಿ ನಾಲ್ಕು ಯಾವುದೇ ಪುರಾವೆಗಳಿಲ್ಲದೆ ಪ್ರಕರಣ ಕೊನೆಗೊಂಡಿದೆ. ಇಂದು ಸಿಬಿಐ ನೀಡಿದ ವರದಿಯನ್ನು ಸುಪ್ರೀಂಕೋರ್ಟ್​ನ ಸಿಜೆಐ ಎಸ್​.ಎ.ಬೊಬ್ಡೆ ನೇತೃತ್ವ ಪೀಠ ಅಂಗೀಕರಿಸಿದೆ.

    ಮುಜಾಫರ್​ಪುರದ ಆಶ್ರಯತಾಣಗಳಲ್ಲಿ ಬಾಲಕಿಯರು, ಯುವತಿಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂದು ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ ವರದಿ ನೀಡಿತ್ತು. ಈ ವರದಿಯ ಅನ್ವಯ ಪತ್ರಕರ್ತೆ ನಿವೇದಿತಾ ಝಾ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ ತನಿಖೆಗೆ ಒತ್ತಾಯಿಸಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts