More

    ಕಾಫಿ ನಾಡಲ್ಲಿ ಕೆಎಫ್‌ಡಿಗೆ ಮೂರನೇ ಬಲಿ

    ಬಾಳೆಹೊನ್ನೂರು: ಬಿಸಿಲ ತಾಪ ಹೆಚ್ಚಾದಂತೆ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ತೀವ್ರತೆ ನಿಧಾನವಾಗಿ ಏರುತ್ತಿದ್ದು, ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸೋಂಕಿಗೆ ತುತ್ತಾಗಿದ್ದ ವೃದ್ಧರೊಬ್ಬರು ಚಿಕಿತ್ಸೆ ಫಲಿಸದೆ ಭಾನುವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಎಫ್‌ಡಿಯಿಂದ ಈ ವರ್ಷ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.

    ಮೇಲ್ಪಾಲ್ ಗ್ರಾಮದ ಬಸವ ಪೂಜಾರಿ(71) ಮಂಗನ ಕಾಯಿಲೆಗೆ ಬಲಿಯಾದವರು. ಇವರಿಗೆ ಕಳೆದ ಹನ್ನೆರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ ಬಂದಿದ್ದರು. ಒಂದೆರಡು ದಿನ ಕಳೆದರೂ ಜ್ವರ ಕಡಿಮೆಯಾಗದ ಕಾರಣ ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯೂ ಜ್ವರ ಇಳಿಮುಖವಾಗದ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
    ಕೆಎಂಸಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕೆಎಫ್‌ಡಿ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಭಾನುವಾರ ರಾತ್ರಿ ಚಿಕಿತ್ಸೆ ಫಲಿಸದೆ ಬಸವ ಪೂಜಾರಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಬಾಳೆಹೊನ್ನೂರು ಭಾಗದಲ್ಲಿ ಮಂಗನ ಕಾಯಿಲೆಗೆ ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
    ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ: ಬಸವ ಪೂಜಾರಿಗೆ ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರಿದ್ದಾರೆ. ಮೃತರು ಮೇಲ್ಪಾಲ್‌ನ ಶ್ರೀ ಚೌಡೇಶ್ವರಿ, ಶ್ರೀ ಜಟಿಗೇಶ್ವರ ದೇವಸ್ಥಾನದ ಉಪಾಧ್ಯಕ್ಷರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಮೃತರ ಅಂತ್ಯಕ್ರಿಯೆ ಸೋಮವಾರ ಮೇಲ್ಪಾಲ್‌ನಲ್ಲಿ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts