More

    ಗುಜರಾತ್ ಅಖಾಡದಲ್ಲಿ ಕಂಡಿದ್ದು, ಕೇಳಿದ್ದು…

    ಗುಜರಾತ್ ಕರಾಳ ಅಧ್ಯಾಯಕ್ಕೆ ಕಾರಣವಾದ 2002ರ ಗೋಧ್ರಾ ಕೋಮುಗಲಭೆ ಬಗ್ಗೆ ರಾಜ್ಯದ ಜನರು ಮಾತನಾಡಲು ಬಯಸುವುದಿಲ್ಲ. ಆದರೆ, ಈ ಘಟನೆಯ ನಂತರ ರಾಜ್ಯದಲ್ಲಿ ಒಂದೂ ಕೋಮು ಸಂಘರ್ಷ ನಡೆದಿಲ್ಲ. ಇದಕ್ಕೆ ಬಿಗಿಯಾದ ಕಾನೂನು ಸುವ್ಯವಸ್ಥೆ ಇರುವುದು ಕಾರಣ. 2002ಕ್ಕೂ ಮುನ್ನ ರಾಜ್ಯದಲ್ಲಿ ನಿರಂತರವಾಗಿ ಕೋಮು ಗಲಭೆ ವರದಿಯಾಗುತ್ತಿತ್ತು. ಈಗ ಹಿಂದು-ಮುಸ್ಲಿಮರು ಸಹಕಾರದಿಂದ ಇದ್ದಾರೆ, ಜಂಟಿ ಉದ್ಯಮಗಳನ್ನೂ ನಡೆಸುತ್ತಿದ್ದಾರೆ. ಹಿಂದು-ಮುಸ್ಲಿಮರು ನಡೆಸುತ್ತಿರುವ ಹತ್ತಾರೂ ಹೋಟಲ್ ಕೂಡ ಇಲ್ಲಿವೆ.

    | ರಾಘವ ಶರ್ಮ ನಿಡ್ಲೆ

    2002ರ ಗೋಧ್ರಾ ರೈಲು ಬೋಗಿ ದಹನ ಹಾಗೂ ಗೋಧ್ರೋತ್ತರ ಗಲಭೆಗಳು ಹಿಂದು-ಮುಸ್ಲಿಂ ಧರ್ಮದ ಸಾವಿರಾರು ಮಂದಿಯ ಬದುಕನ್ನೇ ಬುಡಮೇಲು ಮಾಡಿಬಿಟ್ಟಿದೆ. ಹಾರ್ದಿಕ್ ಪಟೇಲ್ ಸ್ಪರ್ಧಿಸುತ್ತಿರುವ ವೀರಮ್ಾಮ್ ಭರ್ವಾಡ್ ಹಳ್ಳಿಯ ನಿವಾಸಿ ರಾಧಾಳದ್ದೂ ಇಂಥದ್ದೇ ಕಥೆ. ಗೋಧ್ರಾದಲ್ಲಿ ಹಿಂದುಗಳನ್ನು ರೈಲಿನಲ್ಲಿ ಸುಟ್ಟುಹಾಕಿದ್ದರಿಂದ ಕೆಂಡಾಮಂಡಲಗೊಂಡಿದ್ದ ಹಿಂದುಗಳಲ್ಲಿ ಭರ್ವಾಡ್ ಹಳ್ಳಿಯವರೂ ಇದ್ದರು. ಭರ್ವಾಡ್​ನಲ್ಲಿ ಯುವಕರೊಂದಿಗೆ ಸೇರಿ ಮುಸ್ಲಿಮರನ್ನು ಹತ್ಯೆ ಮಾಡಿದ್ದಾರೆ ಎಂದು ರಾಧಾ ತಂದೆ ಭೋಪಾ ಭಾಯ್ ಮೇಲೆ ಪ್ರಕರಣವಾಗಿ 10 ವರ್ಷಗಳ ಶಿಕ್ಷೆ ಪ್ರಕಟವಾಯ್ತು. ಪತಿ ಜೈಲಿನಲ್ಲಿದ್ದರಿಂದ ಲಕ್ಷ್ಮಿ(ರಾಧಾಳ ತಾಯಿ) ಜಮೀನಲ್ಲಿ ಕೆಲಸ ಮಾಡುತ್ತಾ ಮಕ್ಕಳನ್ನು ಸಾಕಿದರು. ರಾಧಾಳನ್ನು 8ನೇ ತರಗತಿಗಿಂತ ಮೇಲೆ ಕಳುಹಿಸಲು ಲಕ್ಷ್ಮಿಗೆ ಸಾಧ್ಯವಾಗಲಿಲ್ಲ. ಭೋಪಾ ಭಾಯ್ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿ ಮನೆಯಲ್ಲಿದ್ದಾರೆ. ತಾಯಿ ಜತೆ ಜಮೀನಲ್ಲಿ ಗೋಧಿ ಒಕ್ಕಣಿಕೆ ಮಾಡುತ್ತಿದ್ದ ರಾಧಾಗೆ ಮದುವೆಯಾಗಿ ಈಗ ಇಬ್ಬರು ಮಕ್ಕಳಿದ್ದಾರೆ. ಮೊದಲಿಗೆ ಎಷ್ಟೇ ಪ್ರಯತ್ನಪಟ್ಟರೂ ರಾಧಾ ನಮ್ಮೊಂದಿಗೆ ಮಾತನಾಡಲಿಲ್ಲ. ಆದರೆ, ಶಾಲೆ ಯಾಕೆ ಮುಂದುವರಿಸಲಿಲ್ಲ ಎಂದು ಕೇಳಿದಾಗ ಹಿಂದಿನ ಕಥೆಗಳನ್ನು ಬೇಸರದಿಂದ ಹಂಚಿಕೊಂಡಳು. ‘ನನ್ನಂತೆ ನನ್ನ ಮಕ್ಕಳಾಗುವುದು ಬೇಡ, ಅವರನ್ನು ಶಾಲೆಗೆ ಕಳುಹಿಸುತ್ತಿದ್ದೇವೆ’ ಎಂದು ಮಾತು ಮುಗಿಸಿದಳು.

    2002ರ ನಂತರ ಕರ್ಫ್ಯೂ ಇಲ್ಲ: 2002ರ ಭಯಾನಕ ಕೋಮು ಸಂಘರ್ಷದ ಬಗ್ಗೆ ಗುಜರಾತಿಗರು ಮಾತನಾಡಲೇ ಬಯಸುವುದಿಲ್ಲ. ಅದು ಮುಗಿದ ಹೋದ ಅಧ್ಯಾಯ, ಬಿಟ್ಟುಬಿಡಿ ಎನ್ನುತ್ತಾರೆ. 2002ರ ನಂತರ ರಾಜ್ಯದಲ್ಲಿ ಒಂದೇ ಒಂದು ಕೋಮು ಗಲಭೆ ಸಂಭವಿಸಿಲ್ಲ ಎನ್ನುವುದು ಗಮನಾರ್ಹ. ಅಷ್ಟರಮಟ್ಟಿಗೆ ಕಾನೂನು ಸುವ್ಯವಸ್ಥೆ ಇಲ್ಲಿ ಬಿಗಿಯಾಗಿದೆ. ಕಳೆದ 35 ವರ್ಷಗಳಿಂದ ಅಹ್ಮದಾಬಾದ್​ನಲ್ಲಿ ನೆಲೆಸಿರುವ ಉಡುಪಿ ಹೋಟೆಲ್ ಮ್ಯಾನೇಜರ್ ಕಿರಣ್ ಶೆಟ್ಟಿ, ‘2002ರ ಸಂಘರ್ಷದ ಸಂದರ್ಭದಲ್ಲಿ ತಿಂಗಳುಗಳ ಕಾಲ ಕರ್ಫ್ಯೂ ಜಾರಿಯಲ್ಲಿತ್ತು. ಆದರೆ, ಬಳಿಕ ಇಲ್ಲಿ ದೀರ್ಘಾವಧಿಗೆ ಕರ್ಫ್ಯೂ ಜಾರಿಯಾದ ಉದಾಹರಣೆಗಳೇ ಇಲ್ಲ. 2002ಕ್ಕೆ ಮುನ್ನ ತಿಂಗಳಿಗೊಮ್ಮೆ ಕರ್ಫ್ಯೂ ಹಾಕುವುದು ಅನಿವಾರ್ಯ ಆಗಿತ್ತು. ಹಿಂದು-ಮುಸ್ಲಿಂ ಜಗಳ ತಡೆಯುವುದೇ ಹರಸಾಹಸ ವಾಗುತ್ತಿತ್ತು. ಈಗ ಹಾಗಿಲ್ಲ. ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ’ ಎಂದರು.

    ಗುಜರಾತ್ ಅಖಾಡದಲ್ಲಿ ಕಂಡಿದ್ದು, ಕೇಳಿದ್ದು...ಜಂಟಿ ಉದ್ಯಮ: 2002ರ ಗಲಭೆ ಬಳಿಕ ರಾಜ್ಯದಲ್ಲಿ ಹಿಂದು-ಮುಸ್ಲಿಂ ವೈಷಮ್ಯ ಹೆಚ್ಚು ಎಂಬ ಭಾವನೆ ಹೊರರಾಜ್ಯದವರಲ್ಲಿ ಬೇರೂರಿದೆ. ವಾಸ್ತವದಲ್ಲಿ, ಹಿಂದು-ಮುಸ್ಲಿಂ ಪರಸ್ಪರ ಸಹಕಾರವಿಲ್ಲದೆ ಇಲ್ಲಿ ಉದ್ಯಮ, ವ್ಯಾಪಾರ ನಡೆಸಲು ಸಾಧ್ಯವೇ ಇಲ್ಲ. ಬರೋಡಾ ನಗರಕ್ಕೆ ಮುನ್ನ ಸಿಗುವ ಸಿಲ್ವರ್ ಪ್ಲೇಟ್ ಎಂಬ ಹೋಟೆಲ್​ನಲ್ಲಿ ಚುನಾವಣೆ ಚರ್ಚೆಗಿಳಿದಾಗ, ಮ್ಯಾನೇಜರ್ ಹೈದರ್ ಅಲಿ ‘ಉಭಯ ಧರ್ಮೀಯರು ಇಲ್ಲಿ ಚೆನ್ನಾಗಿ ಬದುಕುತ್ತಿದ್ದಾರೆ. ಚುನಾವಣೆ ಬಂದಾಗ ಧರ್ಮ ರಾಜಕಾರಣ ಶುರುಮಾಡುತ್ತಾರೆ. ನಮ್ಮ ಹೊಟೇಲ್ ಪಾಲುದಾರಿಕೆಯಲ್ಲಿ ನಡೆಯುತ್ತಿದೆ. ಹಿಂದು ಪಟೇಲ್ ಮತ್ತು ಮುಸ್ಲಿಂ ಮಾಲೀಕರು ಒಟ್ಟಾಗಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಹತ್ತಾರು ಹೊಟೇಲ್​ಗಳಿವೆ’ ಎಂದರು. 2002ರ ಗಲಭೆ ಹಿಂದು-ಮುಸ್ಲಿಮರಲ್ಲಿ ಆಳವಾದ ಕಂದಕ ಸೃಷ್ಟಿಸಿದ್ದೇನೋ ನಿಜ. ಹಾಗಾಗಿಯೇ ಎಷ್ಟೋ ಮುಸ್ಲಿಂ ಮಾಲೀಕರು ತಮ್ಮ ಹೋಟೆಲ್​ಗಳಿಗೆ ಹಿಂದು ಹೆಸರಿಟ್ಟಿದ್ದಾರೆ.

    ಚಾಣಾಕ್ಷ ವ್ಯಾಪಾರಿಗಳು: ಉದ್ಯಮಿಗಳು, ವ್ಯಾಪಾರಿಗಳ ನೆಲೆಯಾಗಿರುವ ಗುಜರಾತಿನಲ್ಲಿ ಉತ್ತರ ಪ್ರದೇಶ ಅಥವಾ ಬಿಹಾರದಂತೆ ರಾಜಕಾರಣದ ಬಗ್ಗೆ ಖುಲ್ಲಂಖುಲ್ಲ ಮಾತನಾಡುವುದಿಲ್ಲ. ಎಲ್ಲವನ್ನೂ ಅಳೆದುತೂಗಿ, ಲೆಕ್ಕಾಚಾರ ಹಾಕುವ ವ್ಯಾಪಾರಿಗಳು, ಕ್ಯಾಮರಾ ಮುಂದೆ ಮಾತನಾಡುವುದಿಲ್ಲ ಎಂದು ಮೊದಲೇ ಹೇಳುತ್ತಾರೆ. ಅಹ್ಮದಾಬಾದ್, ಬರೋಡಾ, ಸೂರತ್, ಆನಂದ್, ಖೇಡಾ, ಭಾವನಗರ, ಜಾಮನಗರ ಯಾವುದೇ ನಗರ ಅಥವಾ ಪಟ್ಟಣ ಇರಲಿ, ‘ನಾವು ಯಾವುದೇ ಪಾರ್ಟಿ ವಿರುದ್ಧ ಮಾತನಾಡುವುದಿಲ್ಲ. ನಮಗೆ ಕಾಂಗ್ರೆಸ್​ನವರೂ ಬೇಕು, ಬಿಜೆಪಿಯವರೂ ಬೇಕು. ನಾವ್ಯಾಕೆ ವೈರತ್ವ ಕಟ್ಟಿಕೊಂಡು ನಷ್ಟ ಅನುಭವಿಸಬೇಕು’ ಎಂದು ನಗುತ್ತಾರೆ. ಕೇಂದ್ರ ಸರ್ಕಾರದ ಹಣಕಾಸು ನೀತಿ ಸರಿ ಇಲ್ಲ ಎನ್ನುವ ಆನಂದ್ ಜಿಲ್ಲೆಯ ಜವಳಿ ಉದ್ಯಮಿ ಕೃಷ್ಣಭಾಯ್ ಪಟೇಲ್, ‘ಕ್ಯಾಮರಾ ಸಹವಾಸ ಬೇಡ. ನನ್ನ ಕೆಲಸ ನಡೆಯಲು ಎರಡೂ ಪಕ್ಷದವರ ಸ್ನೇಹ ಬೇಕು’ ಎಂದು ನಮಸ್ಕಾರ ಮಾಡಿದರು.

    ನೆರವಿಗೆ ಬಂದ ನರ್ಮದೆ: ಗುಜರಾತಿನ 58 ವಿಧಾನಸಭೆ ಕ್ಷೇತ್ರಗಳುಳ್ಳ ಸೌರಾಷ್ಟ್ರ, ಕಛ್ ಪ್ರದೇಶಗಳಲ್ಲಿ ಅತಿಯಾದ ಬರ ಜನರ ಜೀವನವನ್ನೇ ಕಿತ್ತು ತಿನ್ನುತ್ತಿತ್ತು. ಕಛ್​ನ ಹಳ್ಳಿಗಳಲ್ಲಿ ಕುಡಿಯಲು ನೀರು ಕೊಡಲು ಸಹ ಜನ ಹಿಂದೆಮುಂದೆ ನೋಡುತ್ತಿದ್ದರಂತೆ. ಇನ್ನು ಕೃಷಿ ಮಾಡುವುದಾದರೂ ಹೇಗೆ? ಇಂಥಾ ಹೀನಾಯ ಸ್ಥಿತಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಸುಮಾರು 750 ಕಿಮೀ ಉದ್ದದ ಕಾಲುವೆ (ಉಪ ಕಾಲುವೆಗಳ ಮೂಲಕ) ಮೂಲಕ ನರ್ಮದಾ ನದಿಯಿಂದ ಸೌರಾಷ್ಟ್ರ, ಕಛ್ ಪ್ರದೇಶಗಳಿಗೆ ನೀರು ಹರಿಸಲಾಗಿದೆ. ಕೇವಡಿಯಾದಲ್ಲಿರುವ ಸರ್ದಾರ್ ಸರೋವರ ಡ್ಯಾಮ್ಂದ, ಬರೋಡಾ, ಖೇಡಾ, ಸುರೇಂದ್ರ ನಗರ, ಬುಜ್, ಜಾಮ್ ನಗರ, ಪೋರ್ ಬಂದರ್, ಕಛ್ ಹೀಗೆ ಬಹುತೇಕ ಕಡೆ ಬೃಹದಾಕಾರದ ಕಾಲುವೆ ನಿರ್ವಣಗೊಂಡಿದೆ. ‘ಕಛ್​ನಲ್ಲಿ 2-3 ದಿನಕ್ಕೊಮ್ಮೆ ಜನ ಸ್ನಾನ ಮಾಡುತ್ತಿದ್ದರು. ಈಗ ನೋಡಿ ನೀರು ಬಂದು ಉತ್ತಮ ಬೆಳೆ ತೆಗೆಯುತ್ತಿದ್ದಾರೆ’ ಎಂದರು ಚಾಲಕ ದಿನೇಶ್ ಪಟೇಲ್.

    ಸ್ಲ್ಯಾಬ್​ಗಳಲ್ಲಿ ಪಾತ್ರೆಗಳ ಶೋಕೇಸ್: ಗುಜರಾತಿನ ಹಳ್ಳಿಗರ ಕೆಲ ಸಂಪ್ರದಾಯಗಳು ವಿಶಿಷ್ಟವಾಗಿವೆ. ಮನೆಯ ಸ್ಲಾ್ಯಬ್​ಗಳಲ್ಲಿ ಪಾತ್ರೆ-ಪಗಡೆ, ಗ್ಲಾಸು, ಪ್ಲೇಟು, ಕೊಡಪಾನ, ಚೊಂಬುಗಳನ್ನು ಒಪ್ಪ-ಓರಣವಾಗಿ ಇಟ್ಟಿರುವುದನ್ನು ಕಾಣಬಹುದು. ಖೇಡಾ ಜಿಲ್ಲೆಯ ಢಟಾಲ್, ಗೋವಿಂದಪುರ, ಬೇರೈ ಸೇರಿ ಹಲವು ಗ್ರಾಮಸ್ಥರ ಮನೆಗಳಲ್ಲಿ ಇಂಥದ್ದೇ ದೃಶ್ಯ ಕಂಡುಬಂತು. ‘ಹೀಗೆ ಜೋಡಿಸಿಡುವ ಪಾತ್ರೆಗಳನ್ನು ನಾವು ಅಡುಗೆಗೆ ಬಳಸುವುದಿಲ್ಲ. ದೀಪಾವಳಿ, ಮದುವೆ ಅಥವಾ ಹಬ್ಬಗಳ ಸಂದರ್ಭದಲ್ಲಿ ತೆಗೆದು, ನೀಟಾಗಿ ತೊಳೆಯುತ್ತೇವೆ. ನಂತರ, ಸ್ಲಾ್ಯಬ್​ನಲ್ಲಿ ಜೋಡಿಸಿಡಲಾಗುತ್ತದೆ. ಒಂದುವೇಳೆ ಈ ರೀತಿ ಪಾತ್ರೆಗಳು ಇಲ್ಲವಾದಲ್ಲಿ, ವ್ಯಕ್ತಿ ಜೀವನದಲ್ಲಿ ಸೋತಿದ್ದಾನೆ, ಕಂಗಾಲಾಗಿದ್ದಾನೆ ಎಂದರ್ಥ’ ಎನ್ನುತ್ತಾರೆ ಢಟಾಲ್ ಗ್ರಾಮದ ನಿವಾಸಿ ರಮೇಶ್ ಭಾಯ್. ಅಂದಹಾಗೆ, ಇವುಗಳು ಖರೀದಿಸಿ ತಂದಿರುವ ಪಾತ್ರೆಗಳಲ್ಲ. ಪತ್ನಿ ಮೊದಲ ಹೆರಿಗೆ ನಂತರ ಪತ್ನಿ ಮನೆಯವರು ಈ ಪಾತ್ರೆಗಳನ್ನು ಅಳಿಯನ ಮನೆಗೆ ಉಡುಗೊರೆಯಾಗಿ ನೀಡುತ್ತಾರಂತೆ!

    ಕಬರಿಸ್ತಾನದಲ್ಲಿ ಟೀ ಸ್ಟಾಲ್!: ಸಮಾಧಿಗಳ ಮಧ್ಯೆಯೇ ಕುಳಿತು ರಾಜಕಾರಣ ರ್ಚಚಿಸುತ್ತಾ ಚಹಾ ಹೀರುವುದು, ಬನ್ ಮಸ್ಕಾ ತಿಂದರೆ ಹೇಗೆ? ಅಹ್ಮದಾಬಾದ್​ನ ಲಾಲ್ ದರ್ವಾಜಾ ಪ್ರದೇಶ ಇಂಥದ್ದೊಂದು ವಿಚಿತ್ರಕ್ಕೆ ಸಾಕ್ಷಿಯಾಗಿದೆ. 1950ರ ತನಕ ಕಬರಿಸ್ತಾನವಾಗಿದ್ದ ಈ ಸ್ಥಳ ಸ್ಟೈಲಿಷ್ ಟೀ ಸ್ಟಾಲ್ ಆಗಿ ಪರಿವರ್ತನೆಯಾಗಿದೆ. 300-400 ವರ್ಷಗಳ ಒಟ್ಟು 26 ಕಬರ್​ಗಳು (ಸಮಾಧಿ) ಇಲ್ಲಿದ್ದು, ಅವುಗಳನ್ನು ಸುರಕ್ಷಿತವಾಗಿಡಲಾಗಿದೆ. ಸಮಾಧಿಗಳ ಮಧ್ಯೆ ಹಾಕಿರುವ ಟೇಬಲ್ ಮೇಲೆ ಕುಳಿತು ತಿಂಡಿ ತಿನ್ನಬೇಕು. ಮುಸ್ಲಿಂ ಜನಸಂಖ್ಯೆ ಈ ಪ್ರದೇಶದಲ್ಲಿ ಹೆಚ್ಚಿದ್ದರೂ, ಹಿಂದುಗಳು ಕೂಡ ಬಂದು ಸೆಲ್ಪಿ, ಫೋಟೋಗಳನ್ನು ತೆಗೆಯುತ್ತಾರೆ. ಅಂದಹಾಗೆ, ಟೀ ಅಂಗಡಿಯನ್ನು ಮುಸ್ಲಿಂ-ಹಿಂದು ಧರ್ಮದವರಿಬ್ಬರೂ ಸೇರಿ ನೋಡಿಕೊಳ್ಳುತ್ತಿದ್ದಾರೆ!

    ಇವಿಎಂ ಬೇಡವಂತೆ!: ಗುಜರಾತಿನ ವೀರಮ್ ಗಾಮ್ ವಿಧಾನಸಭೆಯ ತೌರಿ ಮುಬಾರಕ್ ಹಳ್ಳಿಯ ಅನೇಕರಿಗೆ ಇವಿಎಂ ಬಗ್ಗೆ ಭಾರಿ ಅನುಮಾನವಿದೆ. ಆಪ್, ಕಾಂಗ್ರೆಸ್​ಗೆ ವೋಟು ಹಾಕಿದರೂ ಅದು ಬಿಜೆಪಿಗೆ ಹೋಗುತ್ತದೆಯಂತೆ ಹೌದಾ ಎಂದು ಕೇಳುತ್ತಾರೆ. ಈ ರೀತಿ ಕೆಲ ವಿಪಕ್ಷಗಳು ದೂರುತ್ತಿವೆ, ಕೋರ್ಟಿನಲ್ಲೂ ವಿಚಾರಣೆಗಳು ನಡೆದಿವೆ ಎನ್ನುವ ಉತ್ತರ ಅವರಿಗೆ ಸಮಾಧಾನ ತರಲಿಲ್ಲ. ಇವಿಎಂ ಬದಲಿಗೆ ಬ್ಯಾಲಟ್ ವೋಟಿಂಗ್ ಬಂದರೆ ತನ್ನಿಂತಾನೆ ಪರಿವರ್ತನೆಯಾಗುತ್ತದೆ ಎಂದು ಯುವಕನೊಬ್ಬ ವಾದಿಸಿದ. ಅಕ್ಕಪಕ್ಕದವರೂ ಹೌದೌದು ಎಂದು ತಲೆಯಾಡಿಸಿದರು.

    ಖ್ಯಾತ ಗಾಯಕನ ಆಸ್ತಿಯೇ ಒತ್ತುವರಿ; ಭೂಮಾಫಿಯಾಗೆ ಕೈಜೋಡಿಸಿದ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ!?

    ರಾಜ್ಯಾದ್ಯಂತ ಗುಡುಗು-ಮಿಂಚುಸಹಿತ ಭಾರಿ ಮಳೆ; ಯಾವ್ಯಾವಾಗ ಎಲ್ಲೆಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts