More

    ಸುಳ್ಳು ಕೇಸು ದಾಖಲಿಸಿ ನನ್ನನ್ನು ಕಟ್ಟಿಹಾಕುವ ಯತ್ನ

    ಆನವಟ್ಟಿ: ಪ್ರಧಾನಿ ನರೇಂದ್ರ ಮೋದಿ ಸಾಧನೆಗಳನ್ನು ದೇಶದ ಪ್ರತಿಯೊಬ್ಬ ನಾಗರಿಕರಿಗೂ ತಲುಪಿಸಬೇಕೆಂಬ ಮಹದಾಸೆಯಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿರುವ ನನ್ನ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುಳ್ಳು ಕೇಸು ದಾಖಲಿಸುವ ಮೂಲಕ ನನ್ನನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಮೋ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.

    ಶಿವಾಜಿ ಜಯಂತಿ ಪ್ರಯುಕ್ತ ಪಟ್ಟಣದ ಕೋಟೆ ಆವರಣದಲ್ಲಿ ನಮೋ ಬ್ರಿಗೇಡ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ವಾರಪೂರ್ತಿ ಬೆಳಗ್ಗೆ 10.15ಕ್ಕೆ ಆರಂಭವಾಗಲಿದೆ. ಆದರೆ ಶುಕ್ರವಾರ ಮಾತ್ರ ಪರೀಕ್ಷೆಯನ್ನು ಮಧ್ಯಾಹ್ನ ನಿಗದಿಪಡಿಸಿದ್ದನ್ನು ಟ್ವೀಟರ್ ಮೂಲಕ ಪ್ರಶ್ನಿಸಿದ್ದೆ. ಇದಕ್ಕೆ ಸಮಜಾಯಿಷಿ ನೀಡುವ ಬದಲು ಸಚಿವರು ಶಿವಮೊಗ್ಗದಲ್ಲಿ ನನ್ನನ್ನು ನಿಂದಿಸಿದ್ದಾರೆ. ಜತೆಗೆ ಟ್ವೀಟ್ ಆಧಾರದ ಮೇಲೆ ಕೋಮುದ್ವೇಷ ಹೆಸರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.
    ಪ್ರತಿ ಶಾಲೆಯಲ್ಲೂ ಬರೆಯಲಾಗಿದ್ದ, ಪರಂಪರಾಗತವಾಗಿ ಬಂದ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ಶೀರ್ಷಿಕೆಯನ್ನು ತೆಗೆದುಹಾಕಲಾಗಿದೆ. ಬದಲಿಗೆ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಸಲು ಆದೇಶಿಸಿದ್ದಾರೆ. ಸಚಿವರ ಈ ಕ್ರಮವನ್ನು ಧೈರ್ಯವಾಗಿ ಪ್ರಶ್ನಿಸಿದ ನನ್ನ ವಿರುದ್ಧ ಅವಹೇಳನಕಾರಿ ಹಾಗೂ ತುಚ್ಛವಾಗಿ ತಮ್ಮ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಇಂತಹ ಶಾಸಕರನ್ನು ಆಯ್ಕೆ ಮಾಡಿದ ನೀವೇ ಪುಣ್ಯವಂತರು ಎಂದು ಅಪಹಾಸ್ಯ ಮಾಡಿದರು.
    ತಮ್ಮನ್ನು ಆಯ್ಕೆ ಮಾಡಿದ ಜನತೆಯ ಸೇವೆ ಮಾಡಿ ಋಣ ತೀರಿಸುವ ಬದಲು ಶಿಕ್ಷಣ ಸಚಿವರಾಗಿ ಶಿಕ್ಷಣ ವ್ಯವಸ್ಥೆಯನ್ನೇ ಹದಗೆಡಿಸುತ್ತಿರುವ ಇಂತಹ ಸಚಿವರು ಬೇಕೇ ಎಂದು ಪ್ರಶ್ನಿಸಿದರು.
    ನರೇಂದ್ರ ಮೋದಿ ಆಡಳಿತದಲ್ಲಿ ಭಾರತವು ಆರ್ಥಿಕವಾಗಿ ಸದೃಢಗೊಂಡಿದೆ. ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿ ಇಂದು ವಿಕಸಿತ ಭಾರತವಾಗಿ ಬೆಳೆದು ನಿಂತಿದೆ. ಆಯುಷ್ಮಾನ್, ಉಜ್ವಲ, ಕಿಸಾನ್ ಸಮ್ಮಾನ್, ಫಸಲ್ ಬಿಮಾ, ಭಾರತ್‌ಮಾಲಾ ಯೋಜನೆ, ವಂದೇ ಭಾರತ್ ರೈಲು, ದೇಶಾದ್ಯಂತ ವಿಮಾನ ನಿಲ್ದಾಣಗಳು ಹಾಗೂ ಎಕ್ಸ್‌ಪ್ರೆಸ್ ರೈಲುಗಳನ್ನು ತರುವಲ್ಲಿ ಸಫಲರಾಗಿದ್ದಾರೆ. ಕರೊನಾದಂತಹ ಹೆಮ್ಮಾರಿ ಪ್ರಪಂಚವನ್ನೇ ಹಿಂಡುತ್ತಿರುವಾಗ ಭಾರತ ತನ್ನ ಸ್ವಂತ ಬಲದಿಂದ ದೇಶದ ಜನತೆಗೆ ಲಸಿಕೆ ನೀಡಿತು. ಜತೆಗೆ ಪ್ರಪಂಚದ 150ಕ್ಕೂ ಹೆಚ್ಚಿನ ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಸಿ ಭಾರತ ಕೀರ್ತಿ ಪತಾಕೆ ಹಾರಿಸಿತು ಎಂದು ಶ್ಲಾಘಿಸಿದರು.
    ಹತ್ತು ವರ್ಷಗಳಿಂದೀಚೆಗೆ ಭಾರತದ ಜನರ ಜೀವನಶೈಲಿ ಬದಲಾಗಿದೆ. ಒಂದೇ ಕುಟುಂಬದ ನಾಲ್ಕು ಪೀಳಿಗೆಯವರು ನಡೆಸಿದ ಆಡಳಿತದಲ್ಲಿ ಮಾಡಲು ಸಾಧ್ಯವಾಗದ ಕಾರ್ಯಗಳನ್ನು ಮೋದಿ ಕೇವಲ ಎಂಟೇ ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ಇದು ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ನೆರವಾಗಿದೆ ಎಂದು ತಿಳಿಸಿದರು.
    ನಮೋ ಬ್ರಿಗೇಡ್ ಪ್ರಮುಖರಾದ ಶ್ರೀಧರ್ ಆಚಾರ್, ಓಂಕಾರ್ ನಾಡಿಗ್, ಕೊಟ್ರೇಶಯ್ಯ, ಹೊನ್ನಪ್ಪ ಕಮನವಳ್ಳಿ, ಪ್ರಕಾಶ್ ಅಗಸನಹಳ್ಳಿ, ಸತೀಶ್ ಹೊಸಳ್ಳಿ, ಸಂಜಯ್ ಡೋಂಗ್ರೆ ಇತರರಿದ್ದರು.

    ನರೇಂದ್ರ ಮೋದಿ ಸರ್ಕಾರದಿಂದಾಗಲಿ, ಬಿಜೆಪಿಯಿಂದಾಗಲಿ ನನಗೆ ಯಾವುದೇ ಅನುದಾನ ಬರುವುದಿಲ್ಲ. ರಾಷ್ಟ್ರ ಹಾಗೂ ದೇಶದ ಮೇಲಿನ ಭಕ್ತಿ ಮತ್ತು ಮೋದಿ ಮೇಲಿನ ಅಭಿಮಾನದಿಂದ ಈ ಅಭಿಯಾನ ಹಮ್ಮಿಕೊಂಡಿದ್ದೇನೆ. ದೇಶದ ಭದ್ರತೆ ಹಾಗೂ ಅಭಿವೃದ್ಧಿಗಾಗಿ ಮೋದಿಯನ್ನು ಮತ್ತೊಮ್ಮೆ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ.
    ಚಕ್ರವರ್ತಿ ಸೂಲಿಬೆಲೆ, ನಮೋ ಬ್ರಿಗೇಡ್ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts