More

    ಇಂಡಿಯಾ ಹಗರಣ ಪುರಾಣ! ವಿಶ್ವದ ಕಣ್ಣಲ್ಲಿ ದೇಶದ ಮಾನ ಹರಾಜು ಹಾಕಿದ್ದಲ್ಲದೇ ಆರ್ಥಿಕ ಪರಿಸ್ಥಿತಿ ಮಗ್ಗುಲು ಮುರಿದಿದ್ದೂ ಈ ಹಗರಣಗಳೇ

    ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಆಳುವವರು ಕಾಲಕಾಲಕ್ಕೆ ನಡೆಸಿದ ಹಗರಣಗಳು ಬಟಾಬಯಲಾಗುತ್ತಲೇ ಬಂದಿವೆ. ಹಗರಣಗಳಿಗೇನೂ ಕೊರತೆಯಿಲ್ಲ, ಹಗರಣದ ಮೊತ್ತವಂತೂ ಲೆಕ್ಕಕ್ಕೇ ಇಲ್ಲ. ಸಾಮಾನ್ಯನೊಬ್ಬ ಹಗರಣದ ಮೊತ್ತಕ್ಕೆ ಎಷ್ಟು ಸೊನ್ನೆ ಎಂದು ಲೆಕ್ಕ ಹಾಕಲು ಸಾಧ್ಯವಿಲ್ಲದಂತಹ ಭ್ರಷ್ಟಾಚಾರಗಳು ಕೂಡ ನಡೆದುಹೋಗಿವೆ. ಇತಿಹಾಸದ ಪುಟಗಳನ್ನು ತಿರುಗಿಸುತ್ತಾ ಹೋದಂತೆ ಭ್ರಷ್ಟಾಚಾರದ ಬ್ರಹ್ಮರಾಕ್ಷಸನ ಅವತಾರಗಳು ಒಂದೊಂದಾಗಿ ತೆರೆದುಕೊಳ್ಳುತ್ತ ಹೋಗುತ್ತವೆ. ವಿಶ್ವದ ಕಣ್ಣಲ್ಲಿ ಭಾರತದ ಮಾನ ಹರಾಜು ಹಾಕಿದ್ದಲ್ಲದೇ ದೇಶದ ಆರ್ಥಿಕ ಪರಿಸ್ಥಿತಿಯ ಮಗ್ಗುಲು ಮುರಿದಿದ್ದೂ ಈ ಹಗರಣಗಳೇ. ಇವು ಕೆಲವೊಮ್ಮೆ ಇಡೀ ಪ್ರಪಂಚಕ್ಕೆ ಆಘಾತದ ತರಂಗಗಳನ್ನೂ ಸಹ ಕಳಿಸಿದ್ದಿದೆ!

    Srikant 1
    | ಶ್ರೀಕಾಂತ್ ಶೇಷಾದ್ರಿ

    ಕಾಪ್ಟರ್ ಖರೀದಿಯಲ್ಲೂ ಕನ್ನ
    ಆಗಸ್ಟಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಸುದೀರ್ಘ ಕಾಲ ಸದ್ದು ಮಾಡಿದ ಪ್ರಕರಣ. ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಇತರ ಪ್ರಮುಖ ವ್ಯಕ್ತಿಗಳ ಓಡಾಟಕ್ಕೆ ಮಾತ್ರ ಬಳಸುವಂಥದ್ದು. 3600 ಕೋಟಿ ರೂ. ವೆಚ್ಚದಲ್ಲಿ ಈ ಹೆಲಿಕಾಪ್ಟರ್​ಗಳನ್ನು ಇಟಲಿಯ ರಕ್ಷಣಾ ಉತ್ಪನ್ನಗಳ ಕಂಪನಿ ಫಿನ್ ಮೆಕಾನಿಕಾದಿಂದ ಖರೀದಿಸಲು ಒಪ್ಪಂದವಾಗಿತ್ತು. 2010ರ ಫೆಬ್ರವರಿಯಲ್ಲಿ ಖರೀದಿ ಪ್ರಕ್ರಿಯೆ ಆರಂಭವಾದ ಬಳಿಕ ಇದರಲ್ಲಿ ಮಧ್ಯವರ್ತಿಗಳು ಮತ್ತು ರಾಜಕಾರಣಿಗಳು ‘ಕೈಚಳಕ’ ತೋರಿಸಿದ್ದಾರೆಂಬ ಗುರುತರ ಆಪಾದನೆ ಕೇಳಿಬಂತು. ಹೆಲಿಕಾಪ್ಟರ್​ನ ಕ್ಯಾಬಿನ್​ನ ಎತ್ತರ, ಹೆಲಿಕಾಪ್ಟರ್ ಹಾರಬಲ್ಲ ಗರಿಷ್ಠ ಎತ್ತರವನ್ನು ತಗ್ಗಿಸಿದ್ದ್ದೂ ಸೇರಿ ವಿವಿಧ ವಿಚಾರಗಳಲ್ಲಿ ಮೂಲ ಒಪ್ಪಂದವನ್ನು ತಿರುಚಲು ಲಂಚ ಸ್ವೀಕರಿಸಲಾಗಿತ್ತು ಎಂಬುದು ಈ ಹಗರಣದ ಹೂರಣ. ವಿಶೇಷವೆಂದರೆ ಈ ಹಗರಣ ಮೊದಲು ಬಹಿರಂಗವಾಯಿತು ಇಟಲಿಯಲ್ಲಿ! ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾದಾಗ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡು, ತೆರೆಮರೆಯ ‘ಕೈಚಳಕ’ವನ್ನು ಬಹಿರಂಗಪಡಿಸಲು ಮುಂದಾಯಿತು. ಅತ್ತ ಇಟಲಿಯ ತನಿಖಾ ತಂಡ ಕೂಡ ತನಿಖೆ ಆರಂಭಿಸಿತು.

    2013ರ ಫೆಬ್ರವರಿಯಲ್ಲಿ ಆಗಸ್ಟಾ ವೆಸ್ಟ್​ಲ್ಯಾಂಡ್​ನ ಸಿಇಒ ಬ್ರೂನೋ ಸ್ಪಾಗ್ನೋಲಿನಿ ಅವರನ್ನು ಇಟಲಿ ಅಧಿಕಾರಿಗಳು ಬಂಧಿಸಿದರು. 2014ರಲ್ಲಿ ಒಪ್ಪಂದವನ್ನು ಹಿಂದಕ್ಕೆ ಪಡೆಯಲಾಯಿತು. ಆದರೆ, ತನಿಖೆ ಮುಂದುವರಿಯಿತು. ಒಪ್ಪಂದ ಆಗುವ ಸಂದರ್ಭದಲ್ಲಿ ಏರ್​ವಾರ್ಷಲ್ ಆಗಿದ್ದ ಎಸ್.ಪಿ. ತ್ಯಾಗಿ ಅವರನ್ನು ಸಿಬಿಐನವರು 2016ರ ಡಿ. 9ರಂದು ವಶಕ್ಕೆ ಪಡೆದರು.

    ಇನ್ನು ಆಗಸ್ಟಾ ವೆಸ್ಟ್​ಲ್ಯಾಂಡ್​ನಿಂದ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಮೂಲಕ ಒಪ್ಪಂದವನ್ನು ತಿರುಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೂವರ ಪೈಕಿ ಕ್ರಿಶ್ಚಿಯನ್ ಮೈಕೆಲ್ ಎಂಬಾತನೂ ಇದ್ದ. ಈತ ಈ ‘ಕೈಚಳಕ’ಕ್ಕಾಗಿ 42.27 ಮಿಲಿಯನ್ ಯುರೋ ಪಡೆದುಕೊಂಡಿದ್ದನೆಂಬುದು ತನಿಖಾ ಸಂಸ್ಥೆಯ ವಿವರಣೆಯಾಗಿತ್ತು. ಬಳಿಕ ವ್ಯವಹಾರ ಮರೆಮಾಚಲು ವಿವಿಧ ಕಂಪನಿಗಳಿಗೆ ವರ್ಗಾಯಿಸಿದ್ದ. 2018ರಲ್ಲಿ ಯುಎಇಯಿಂದ ಭಾರತಕ್ಕೆ ಹಸ್ತಾಂತರಿಸಲ್ಪಟ್ಟ ಮೈಕೆಲ್​ನನ್ನು ಸಿಬಿಐ ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿತು. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಶಾಮೀಲಾಗಿದ್ದಾರೆಂದು ಬಿಜೆಪಿ ನಿರಂತರವಾಗಿ ದನಿ ಎತ್ತಿಕೊಂಡೇ ಬಂದಿತ್ತು.

    ಬೊಫೋರ್ಸ್ ಕಳಂಕ
    ಭಾರತೀಯ ಸೈನಿಕರಿಗೆ ಅತ್ಯಾಧುನಿಕ ಯುದ್ಧೋಪಕರಣ ನೀಡಬೇಕೆಂದು ಸ್ವೀಡನ್​ನ ಕಂಪನಿಯೊಂದಿಗೆ ಭಾರತ ಸರ್ಕಾರ 1984ರಲ್ಲಿ ಮಾಡಿಕೊಂಡ ಒಪ್ಪಂದದಲ್ಲಿ ಅಕ್ರಮ ನಡೆದಿದ್ದು ಈ ಹಗರಣದ ತಿರುಳು. ಬೊಫೋರ್ಸ್ ಫಿರಂಗಿಯಲ್ಲಿ, ಒಪ್ಪಂದಕ್ಕೆ ಮುನ್ನ ಹೇಳಿದಷ್ಟು ಸಾಮರ್ಥ್ಯ ಇಲ್ಲದ್ದು ಕ್ಷೇತ್ರ ಪರಿಶೀಲನೆ ವೇಳೆ ಕಂಡು ಬಂತು. ಆದರೂ, ಒಪ್ಪಂದವನ್ನು ಮುಂದುವರಿಸಲಾಗಿತ್ತು. ಈ ಹಗರಣ ಹಲವು ವರ್ಷಗಳವರೆಗೂ ಕಾಂಗ್ರೆಸ್​ನ ಪ್ರಮುಖ ನಾಯಕರ ನಿದ್ರೆಗೆಡಿಸಿತು, ಚುನಾವಣಾ ವಿಷಯವೂ ಆಗಿತ್ತು.

    ಭಾರತೀಯ ಸೇನೆಗೆ ಬೊಫೋರ್ಸ್ ಶಸ್ತ್ರಾಸ್ತ್ರ ಪೂರೈಸಲು 1986ರಲ್ಲಿ ಸ್ವೀಡಿಷ್​ನ ಯುದ್ಧೋಪಕರಣ ತಯಾರಕ ಎಬಿ ಬೊಫೋರ್ಸ್ ಜತೆೆ 285 ಮಿಲಿಯನ್ ಡಾಲರ್ (ಸುಮಾರು 2300 ಕೋಟಿ ರೂ.) ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಒಪ್ಪಂದ ಖಾತ್ರಿಪಡಿಸಿಕೊಳ್ಳಲು ಬೊಫೋರ್ಸ್ ಕಡೆಯಿಂದ ಭಾರತದ ಪ್ರಮುಖ ರಾಜಕಾರಣಿಗಳಿಗೆ ಲಂಚ ನೀಡಲಾಗಿದೆ ಎಂದು ಸ್ವೀಡಿಷ್ ಪತ್ರಿಕೆಗಳಲ್ಲಿ ವರದಿಗಳು ಬಂದಿದ್ದವು. ಬಳಿಕ ಅದು ಗಂಭೀರ ಸ್ವರೂಪ ತಾಳಿತು. ಈ ಪ್ರಕರಣದಲ್ಲಿ ಪ್ರಧಾನವಾಗಿ ಕೇಳಿಬಂದಿದ್ದು, ಇಟಲಿಯ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕ್ಕಿ ಹೆಸರು. ಆತ ಭಾರತದ ರಾಜಕೀಯದಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿ ಹೊರಹೊಮ್ಮಿದರು. ಅವರು ಹಾಗೂ ರಾಜೀವ್ ಗಾಂಧಿ ಮಕ್ಕಳ ನಡುವಿನ ಒಡನಾಟ ಗಮನಾರ್ಹ ಸಂಗತಿಯಾಗಿತ್ತು.

    ಇನ್ನು ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ, ಹಿಂದೂಜಾ ಸಹೋದರರನ್ನು ಹೆಸರಿಸಿ ಎಫ್​ಐಆರ್ ದಾಖಲಿಸಿತು. ಮಧ್ಯವರ್ತಿ ವಿನ್ ಚಡ್ಡಾ, ರಕ್ಷಣಾ ಖಾತೆ ಮಾಜಿ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್ ವಿರುದ್ಧ ಸಿಬಿಐ ಹಾಕಿದ ಚಾರ್ಜ್​ಶೀಟ್ ಭಾರತದ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿತು. ಕಾಂಗ್ರೆಸ್ ತಲೆ ತಗ್ಗಿಸುವಂತೆ ಮಾಡಿತು.

    1989ರ ಚುನಾವಣೆಯಲ್ಲಿ ರಾಜೀವ್ ಗಾಂಧಿ ಸರ್ಕಾರವು ಅಧಿಕಾರ ಕಳೆದುಕೊಂಡಿದ್ದಕ್ಕೆ ಬೋಫೋರ್ಸ್ ಹಗರಣ ಕೂಡ ಪ್ರಮುಖ ಕಾರಣವಾಯಿತು. ಕ್ವಟ್ರೋಕ್ಕಿಯನ್ನು ಹಲವಾರು ವರ್ಷಗಳ ಕಾಲ ಭಾರತೀಯ ಅಧಿಕಾರಿಗಳು ಹುಡುಕಿದ್ದರು. ಕೊನೆಗೆ ಅರ್ಜೆಂಟೀನಾದಲ್ಲಿ ಪತ್ತೆ ಹಚ್ಚಲಾಯಿತು. ಆದರೆ ಭಾರತ ಸರ್ಕಾರವು ಹಸ್ತಾಂತರ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಕೊನೆಗೆ ಆತನನ್ನು ಬಂಧಿಸಿದರೂ 2011ರಲ್ಲಿ ಸಿಬಿಐ ನ್ಯಾಯಾಲಯ ಕ್ವಟ್ರೋಕ್ಕಿಯನ್ನು ಬಿಡುಗಡೆ ಮಾಡಿತು. 2013ರಲ್ಲಿ ಆತ ನಿಧನರಾದರು. ಇದಕ್ಕೂ ಮುನ್ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿತ್ತು.

    ವಿಶೇಷವೆಂದರೆ 1999ರ ಕಾರ್ಗಿಲ್ ಸಂಘರ್ಷದ ಸಮಯದಲ್ಲಿ ಬೊಫೋರ್ಸ್ ಬಂದೂಕುಗಳನ್ನು ವ್ಯಾಪಕವಾಗಿ ಬಳಸುವ ಅನಿವಾರ್ಯತೆ ಸೇನೆಗೆ ಎದುರಾಗಿತ್ತು.

    ಕಾಮನ್​ವೆಲ್ತ್ ಹಗರಣ…
    ಕಾಮನ್​ವೆಲ್ತ್ ಗೇಮ್್ಸ ಆಯೋಜನೆಯಲ್ಲಿ ನಡೆದ ಹಗರಣ ದೇಶದ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿತು. 2010ರ ಕಾಮನ್​ವೆಲ್ತ್ ಗೇಮ್ಸ್​ಗೆ ಮೊದಲು ಈ ಹಗರಣ ಸದ್ದು ಮಾಡಿತು. ಕಾಮನ್​ವೆಲ್ತ್ ಗೇಮ್್ಸ ಗ್ರಾಮ ನಿರ್ವಣ, ಬೀದಿ ದೀಪ ಅಳವಡಿಕೆ, ಪ್ರಸಾರದ ಹಕ್ಕು, ಸಲಹೆಗಾರರ ನೇಮಕ, ಉಪಕರಣ ಖರೀದಿ ಸೇರಿದಂತೆ ವಿವಿಧ ಪೂರ್ವ ತಯಾರಿ ವೇಳೆ ಅಕ್ರಮ ನಡೆದಿದ್ದು ತನಿಖೆ ಬಳಿಕ ಸಾಬೀತಾಯಿತು. ಅಸ್ತಿತ್ವದಲ್ಲಿ ಇಲ್ಲದೆ ಇರುವ ಸಂಸ್ಥೆಗಳಿಗೆ ಹಣ ಸಂದಾಯ ಮಾಡಲಾಗಿತ್ತು. ಹಾಗಾಗಿ ಕೆಲವರ ತಲೆದಂಡವೂ ಆಯಿತು. ಮುಖ್ಯವಾಗಿ ಇದರಿಂದ ಕಾಂಗ್ರೆಸ್​ಗೆ ಮುಜುಗರ ಉಂಟಾಯಿತು. ಪ್ರಮುಖವಾಗಿ ಕೇಳಿಬಂದಿದ್ದು ಕಾಂಗ್ರೆಸ್ ನಾಯಕ ಸುರೇಶ್ ಕಲ್ಮಾಡಿ ಹೆಸರು. ಅಂದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಮೆಗಾ ಕ್ರೀಡಾಕೂಟದ ನಿರ್ವಹಣೆಯಲ್ಲಿನ ಭ್ರಷ್ಟಾಚಾರ ಮತ್ತು ನಿರ್ವಾಹಕರ ಲೋಪಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ನೇಮಿಸಿದ್ದರು. ಆ ಸಮಿತಿ ಸಾಕ್ಷ್ಯಾಧಾರಗಳೊಂದಿಗೆ ವರದಿ ನೀಡಿತ್ತು. ಈ ಹಗರಣದ ಮೊತ್ತ 70 ಸಾವಿರ ಕೋಟಿ ರೂ. ಎಂಬ ಅಂದಾಜಿದೆ.

    ‘ಕೋಲ್’ಗೇಟ್ ಹಗರಣ
    ಕಲ್ಲಿದ್ದಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 1.85 ಲಕ್ಷ ಕೋಟಿ ರೂ. ನಷ್ಟವಾಗುವ ತೀರ್ಮಾನ ಕೈಗೊಂಡಿದ್ದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದವು. 2004ರಿಂದ 2009ರವರೆಗಿನ ಅವಧಿಯಲ್ಲಿ ಕಲ್ಲಿದ್ದಲು ಬ್ಲಾಕ್​ಗಳನ್ನು ದೊಡ್ಡ ಪ್ರಮಾಣದಲ್ಲಿ ಹಂಚಿಕೆ ಮಾಡಲಾಯಿತು. ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಆದಾಯವನ್ನೂ ನಿರೀಕ್ಷಿಸಲಾಗಿತ್ತು. ಆದರೆ, ಭಾರತದ ಲೆಕ್ಕ ಪರಿಶೋಧನಾ ಸಂಸ್ಥೆಯಾದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ), 2004ರಿಂದ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿನ ಲೋಪಗಳ ವಿಷಯದ ಬಗ್ಗೆ ತನಿಖೆ ನಡೆಸಿತು. ಆರಂಭದಲ್ಲಿ ಸರ್ಕಾರದ ಬೊಕ್ಕಸಕ್ಕೆ 10 ಲಕ್ಷ ಕೋಟಿ ರೂ. ನಷ್ಟ ಎಂದು ಅಂದಾಜಿಸಲಾಗಿತ್ತು. ಹೀಗಾಗಿ ರಾಜಕೀಯ ಕೋಲಾಹಲ ಸೃಷ್ಟಿಯಾಯಿತು. ಕೊನೆಗೆ ಅಂತಿಮ ವರದಿಯಲ್ಲಿ 1.85 ಲಕ್ಷ ಕೋಟಿ ರೂ. ನಷ್ಟ ಎಂದು ವರದಿ ಹೇಳಿತು. 155 ಎಕರೆ ಗಣಿಯನ್ನು ತನಗೆ ಬೇಕಾದ ಕಂಪನಿಗಳಿಗೆ ಹಂಚಿಕೆ ಮಾಡಿದ ಆರೋಪ ಹಾಗೂ ಕಡಿಮೆ ಬೆಲೆಗೆ ಬಿಡ್ಡಿಂಗ್​ಗೆ ನೀಡಿದ ಆರೋಪ ಸರ್ಕಾರದ ಮೇಲಿತ್ತು. ಸುಮಾರು 1,85,591 ಕೋಟಿ ರೂ. ಮೌಲ್ಯದ ಕಲ್ಲಿದ್ದಲು ಅವ್ಯವಹಾರ ಯುಪಿಎ ಸರ್ಕಾರಕ್ಕೆ ಕಪ್ಪುಚುಕ್ಕೆಯಾಗಿ ಉಳಿಯಿತು. ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಗೆ ಕೇಂದ್ರ ವಿಚಕ್ಷಣಾ ದಳ (ಸಿವಿಸಿ) ಆದೇಶಿಸಿತು. ನಂತರ ಎಫ್​ಐಆರ್​ನಲ್ಲಿ ಹನ್ನೆರಡು ಕಂಪನಿಗಳ ಹೆಸರಿದ್ದು, ಕ್ರಿಮಿನಲ್ ತನಿಖೆ ಕೂಡ ನಡೆಯಿತು. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಹೆಸರುಗಳು ಕೂಡ ಎಫ್​ಐಆರ್​ಗಳಲ್ಲಿ ಕಾಣಿಸಿದವು. ಎಲ್ಲಾ ಪ್ರಕರಣಗಳನ್ನು ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ವಿಶೇಷ ನ್ಯಾಯಾಲಯ ರಚಿಸಿತು.

    ಶಾರದಾ ಚಿಟ್ ಫಂಡ್ ಗುಳುಂ
    ಪಶ್ಚಿಮ ಬಂಗಾಳದ ಸುದೀಪ್ತಾ ಸೇನ್ ಮಾಲೀಕತ್ವದ ಶಾರದಾ ಗ್ರೂಪ್​ನ ಚಿಟ್ ಫಂಡ್​ನಲ್ಲಿ ನಡೆದ ಅವ್ಯವಹಾರ ಇಡೀ ರಾಷ್ಟ್ರದಲ್ಲಿ ಸದ್ದು ಮಾಡಿತು. ಅತಿ ಹೆಚ್ಚಿನ ಬಡ್ಡಿ ಆಮಿಷ ನೀಡಿ ಶಾರದಾ ಗ್ರೂಪ್ ಮೋಸ ಮಾಡುತ್ತಿತ್ತು ಎಂಬುದು ಗುರುತರ ಆರೋಪ. 2013ರ ವೇಳೆಗೆ, 17 ಲಕ್ಷ ಠೇವಣಿದಾರರಿಂದ ಸಂಸ್ಥೆಯು 300 ಶತಕೋಟಿ ರೂಪಾಯಿಯಷ್ಟು ಹಣವನ್ನು ಸಂಗ್ರಹಿಸಿತ್ತು. ಇದರಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ರಾಜಕಾರಣಿಗಳು ಶಾಮೀಲಾಗಿದ್ದರು.

    ಹಗರಣ ಬೆಳಕಿಗೆ ಬರುತ್ತಿದ್ದಂತೆ ಪಶ್ಚಿಮ ಬಂಗಾಳ ಸರ್ಕಾರ ತನಿಖಾ ಆಯೋಗವನ್ನು ರಚಿಸಿತು. ಠೇವಣಿ ಹಿಂಪಡೆಯಲು ಜನರ ಒತ್ತಡ ಹೆಚ್ಚಾಗುತ್ತಿದ್ದಂತೆ ಕಡಿಮೆ ಮೊತ್ತದ ಹೂಡಿಕೆದಾರರಿಗೆ ಹಣ ಮರಳಿಸಲು 500 ಕೋಟಿ ರೂ. ನಿಧಿ ಸ್ಥಾಪಿಸಲಾಯಿತು.

    ಇದೇ ವೇಳೆ ಕೇಂದ್ರ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಪ್ರತ್ಯೇಕವಾಗಿ ತನಿಖೆ ನಡೆಸಿದವು. ಈ ಹಗರಣದಲ್ಲಿ ಮುಖ್ಯವಾಗಿ ಅಕ್ರಮ ಹಣ ವರ್ಗಾವಣೆ ಪತ್ತೆಯಾಯಿತಲ್ಲದೆ, ರಾಜಕಾರಣಿಗಳ ಪಾತ್ರ, ನಿಯಂತ್ರಣ ಪ್ರಾಧಿಕಾರಗಳ ವೈಫಲ್ಯ ಕಂಡುಬಂತು. ಬಳಿಕ ಸುಪ್ರೀಂ ಕೋರ್ಟ್ 2014ರಲ್ಲಿ ಎಲ್ಲ ತನಿಖೆಯನ್ನು ಸಿಬಿಐಗೆ ವಹಿಸಿತು.

    ಈ ಪ್ರಕರಣ ಕೋಲ್ಕತಾ ಪೊಲೀಸ್ ಆಯುಕ್ತರಾದ ರಾಜೀವ್​ಕುಮಾರ್ ಬುಡಕ್ಕೇ ಬಂತು. ತನಿಖೆ ಚುರುಕಾಗುತ್ತಿದ್ದಂತೆ ಅನೇಕ ಪ್ರಭಾವಿ ರಾಜಕಾರಣಿಗಳು ಬಂಧನಕ್ಕೊಳಗಾದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಕಡತಗಳು ಹಾಗೂ ದಾಖಲೆಗಳ ಬಗ್ಗೆ ವಿವರ ಪಡೆಯಲು ಸಿಬಿಐ ರಾಜೀವ್ ಕುಮಾರ್ ಅವರನ್ನು ವಿಚಾರಣೆ ನಡೆಸಲು ಬಯಸಿತು. ಹಲವು ಬಾರಿ ಸಮನ್ಸ್ ನೀಡಿದ್ದರೂ ರಾಜೀವ್ ಪ್ರತಿಕ್ರಿಯಿಸಿರಲಿಲ್ಲ. ಶಾರದಾ ಸಮೂಹದ ಚಿಟ್ ಫಂಡ್ ಅವ್ಯವಹಾರ ಸುಮಾರು 20 ಸಾವಿರ ಕೋಟಿ ರೂಪಾಯಿಯದ್ದಾಗಿದ್ದು, ಸದ್ಯ ಪಶ್ಚಿಮ ಬಂಗಾಳದ ಈ ಬ್ಲೇಡ್ ಕಂಪನಿಯ ಸ್ಥಾಪಕರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

    2ಜಿ ಸ್ಪ್ರೆಕ್ಟ್ರಂ ಹಗರಣ
    ಇದು ಹಗರಣಗಳ ದೊಡ್ಡಪ್ಪ ಎಂದೇ ವ್ಯಾಖ್ಯಾನಿಸಬಹುದಾದ ಪ್ರಕರಣ. 2ಜಿ ತರಂಗ ಗುಚ್ಛಗಳನ್ನು ಹಂಚಿಕೆ ಮಾಡುವಲ್ಲಿ ನಡೆದ ಅವ್ಯವಹಾರವು ಯುಪಿಎ ಸರ್ಕಾರವನ್ನು ಹಿಂಡಿ ಹಿಪ್ಪೆ ಮಾಡಿತು. ಸುಮಾರು 1,76,000 ಕೋಟಿ ರೂ. ಅವ್ಯವಹಾರ ಎಂಬ ಆರೋಪ ಕೇಳಿಬಂದಿತ್ತು. ಸಿಬಿಐ ತನಿಖೆಯಿಂದ ಅವ್ಯವಹಾರದ ಮೊತ್ತ 30,984 ಕೋಟಿ ರೂ. ಎಂದು ಸ್ಪಷ್ಟತೆ ಸಿಕ್ಕಿತು. ಈ ಪ್ರಕರಣದಲ್ಲಿ ಡಿಎಂಕೆ ಮುಖಂಡರಾದ ಎ. ರಾಜಾ, ಎಂ.ಕೆ. ಕನಿಮೋಳಿ, ರಾಜಕೀಯ ಮಧ್ಯವರ್ತಿ ನೀರಾ ರಾಡಿಯಾ ಹೆಸರುಗಳು ಆರೋಪ ಪಟ್ಟಿಯಲ್ಲಿದ್ದವು. ಕೇಂದ್ರ ಸಚಿವ ಸ್ಥಾನದಿಂದ ರಾಜಾ ತಲೆದಂಡ ಕೂಡ ಆಯಿತು. ಆದರೆ, ಕೊನೆಯಲ್ಲಿ ಸಾಕ್ಷ್ಯದ ಕೊರತೆ ಕಾರಣ ಎಲ್ಲ ಆರೋಪಿಗಳನ್ನು ಪ್ರಕರಣದಿಂದ ಮುಕ್ತಗೊಳಿಸಲಾಯಿತು.

    2008ರಲ್ಲಿ ಖಾಸಗಿ ಟೆಲಿಕಾಂ ಪ್ಲೇಯರ್​ಗಳಿಗೆ 2ಜಿ ತರಂಗಾಂತರ ಪರವಾನಗಿಗಳನ್ನು ನೀಡಲಾಯಿತು. ಪರವಾನಗಿಗಳನ್ನು ನೀಡುವಾಗ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿತ್ತು. ಒಟ್ಟಾರೆ ಸ್ಪೆಕ್ಟ್ರಂ ಹಗರಣದಿಂದ ಕೇಂದ್ರ ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂಬುದು ವರದಿಯ ಸಾರಾಂಶವಾಗಿತ್ತು. 2008ರಲ್ಲಿ ಸ್ಪೆಕ್ಟ್ರಂ ಪರವಾನಗಿಗಳಿಗೆ ಪ್ರವೇಶ ಶುಲ್ಕವನ್ನು 2001ರ ಬೆಲೆಗಳಲ್ಲಿ ನಿಗದಿಪಡಿಸಲಾಗಿತ್ತು ಎಂಬುದು ಹಗರಣದ ಮೂಲ ಎಳೆಯಾಗಿತ್ತು. ಅರ್ಜಿಗಳಿಗೆ ಕಟ್​ಆಫ್ ದಿನಾಂಕವನ್ನು ಒಂದು ವಾರ ಮುಂದೂಡಿದ್ದು, ‘ಮೊದಲು ಬಂದವರಿಗೆ ಮೊದಲು ಸೇವೆ’ ಆಧಾರದ ಮೇಲೆ ಪರವಾನಗಿ, ಸರಿಯಾದ ಹರಾಜು ಪ್ರಕ್ರಿಯೆ ಅನುಸರಿಸದೆ ಇರುವುದು, ಯಾವುದೇ ಬಿಡ್​ಗಳನ್ನು ಆಹ್ವಾನಿಸದೆ ಪ್ರಕ್ರಿಯೆ ನಡೆಸಿದ್ದು ತನಿಖೆ ವೇಳೆ ಕಂಡುಬಂತು.

    ಕಾನೂನು ಸಚಿವಾಲಯ, ಹಣಕಾಸು ಸಚಿವಾಲಯದ ಸಲಹೆಯನ್ನು ನಿರ್ಲಕ್ಷಿಸಿದ್ದು, ಟ್ರಾಯ್ ಮಾರುಕಟ್ಟೆ ದರದಲ್ಲಿ ತರಂಗಾಂತರವನ್ನು ಹರಾಜಿಗೆ ಶಿಫಾರಸು ಮಾಡಿದ್ದರೂ ಅದನ್ನು ಬದಿಗಿಟ್ಟಿದ್ದು ಕಂಡುಬಂತು. ಇನ್ನೂ ಮುಖ್ಯವಾಗಿ, ಟೆಲಿಕಾಂ ಕ್ಷೇತ್ರದ ಅನುಭವವಿಲ್ಲದ ಕಂಪನಿಗಳೂ ಪರವಾನಗಿಗಳನ್ನು ಪಡೆದುಕೊಂಡಿದ್ದವು. ಅರ್ಹತಾ ಮಾನದಂಡಗಳನ್ನು ಪೂರೈಸದಿದ್ದರೂ ಸ್ವಾನ್ ಟೆಲಿಕಾಂಗೆ ಪರವಾನಗಿ ನೀಡಲಾಗಿತ್ತು. ಅಷ್ಟೇ ಅಲ್ಲದೇ, 1537 ಕೋಟಿ ರೂ.ಗೆ ಪರವಾನಗಿ ಪಡೆದು, ಶೇ. 45ರಷ್ಟು ಪಾಲನ್ನು ಎಟಿಸಲಾಟ್​ಗೆ 4200 ಕೋಟಿ ರೂ.ಗೆ ಮಾರಾಟ ಮಾಡಲಾಗಿತ್ತು. ಯುನಿಟೆಕ್ ವೈರ್​ಲೆಸ್ 1661 ಕೋಟಿ ರೂ.ಗೆ ಪರವಾನಗಿ ಪಡೆದು, ಶೇ. 60 ಪಾಲನ್ನು 6200 ಕೋಟಿ ರೂ.ಗೆ ಮಾರಾಟ ಮಾಡಿತ್ತು. ಎಲ್ಲಾ ಒಂಬತ್ತು ಕಂಪನಿಗಳು 2ಜಿ ಪರವಾನಗಿಗಾಗಿ ಕೇವಲ 10,772 ಕೋಟಿ ರೂ. ಪಾವತಿಸಿದ್ದವು. ಅಂದಿನ ಕೇಂದ್ರ ಸಚಿವರು ಕಿಕ್ ಬ್ಯಾಕ್ ಪಡೆದ ಮತ್ತು ತಮ್ಮದೇ ಮಾಲೀಕತ್ವದ ಕಂಪನಿಗೆ ಅನುಕೂಲ ಮಾಡಿಕೊಂಡ ಬಗ್ಗೆಯೂ ಆರೋಪ ಕೇಳಿಬಂತು, ತನಿಖೆಯೂ ನಡೆಯಿತು. ಅನೇಕರು ಜೈಲುಪಾಲಾದರು.

    2017ರಲ್ಲಿ ಪ್ರಕರಣದ ಎಲ್ಲ 17 ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸನಾತ್ಮಕವಾಗಿ ಒಪ್ಪಬಹುದಾದ ಯಾವುದೇ ಸಾಕ್ಷ್ಯ ಇಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿತ್ತು. ಆರೋಪಿಗಳ ವಿರುದ್ಧ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಆರೋಪ ಸಾಬೀತುಪಡಿಸುವ ಯಾವುದೇ ಅಂಶಗಳಿಲ್ಲ, ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದರು. ರಾಷ್ಟ್ರ ರಾಜಕಾರಣದಲ್ಲಿ ಈ ಹಗರಣ ಹಲವು ಏಳುಬೀಳುಗಳಿಗೂ ಕಾರಣವಾಗಿತ್ತು ಗಮನಾರ್ಹ ಸಂಗತಿ. ಕೊನೆಗೆ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ದೆಹಲಿ ಹೈಕೋರ್ಟ್​ನಲ್ಲಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತು, ವಿಚಾರಣೆಯೂ ನಡೆಯಿತು.

    ಲಾಲು ಮೇವು ಹಗರಣ
    ರಾಜಕಾರಣದಲ್ಲಿ ವರ್ಣರಂಜಿತ ವ್ಯಕ್ತಿತ್ವದ ಲಾಲು ಪ್ರಸಾದ್ ಯಾದವ್ ಅವರ ರಾಜಕೀಯ ಹಾದಿಯನ್ನೇ ಮಸುಕಾಗಿ ಮಾಡಿದ್ದು ಮೇವು ಹಗರಣ. 1996ರಲ್ಲಿ ಬಿಹಾರದ ಪಶುಸಂಗೋಪನಾ ಇಲಾಖೆಯು ಜಾನುವಾರುಗಳ ಮೇವು, ಔಷಧಗಳು ಮತ್ತು ಪಶು ಸಾಕಣೆ ಉಪಕರಣಗಳನ್ನು ಖರೀದಿಸಲು ಉದ್ದೇಶಿಸಿರುವ ಹಣದಲ್ಲಿ ಭ್ರಷ್ಟಾಚಾರ ನಡೆಸಿತ್ತು. ತನಿಖೆ ನಡೆದು 900 ಕೋಟಿ ರೂ. ವಂಚನೆ ನಡೆಸಿದ್ದು ಕಂಡುಬಂತು. 2013ರ ವೇಳೆಗೆ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಯಿತು.

    ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಜಾರ್ಖಂಡ್​ನ ಡೊರಾಂಡಾ ಖಜಾನೆಯಿಂದ 139 ಕೋಟಿ ರೂ. ಲೂಟಿ ಹೊಡೆದರೆಂದು ಸಾಬೀತಾಯಿತು. ಡೊರಾಂಡಾ ಖಜಾನೆ ಹಗರಣವು ಒಂದು ವಿಲಕ್ಷಣ ಪ್ರಕರಣವಾಗಿದ್ದು, 1990-92ರ ಅವಧಿಯಲ್ಲಿ ಹರಿಯಾಣ ಮತ್ತು ಪಂಜಾಬ್​ನಿಂದ ಬಿಹಾರಕ್ಕೆ ಸ್ಕೂಟರ್​ಗಳಲ್ಲಿ ಜಾನುವಾರುಗಳನ್ನು ಸಾಗಿಸಲಾಗಿದೆ ಎಂದು ದಾಖಲೆಗಳಲ್ಲಿದೆ.

    ಮೂಲದಲ್ಲಿ 1985ರಿಂದ 1995ರ ನಡುವೆ ಬಿಹಾರದ ಪಶುಸಂಗೋಪನಾ ಇಲಾಖೆಯಲ್ಲಿ ಸುಮಾರು 930 ಕೋಟಿ ರೂಪಾಯಿಗಳಷ್ಟು ಆರ್ಥಿಕ ಅಕ್ರಮಗಳ ಹತ್ತಾರು ಪ್ರಕರಣಗಳು ನಡೆದಿದ್ದವು. ಬಿಹಾರದ ಖಜಾನೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯ ಬಗ್ಗೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಎಚ್ಚರಿಕೆ ನೀಡಿದ್ದರು. ಬಳಿಕ ವೆಚ್ಚದ ವಿವರಗಳನ್ನು ಸಕಾಲದಲ್ಲಿ ಒದಗಿಸಲಿಲ್ಲ. ಆಗ ಅಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು ಮತ್ತು ಜಗನ್ನಾಥ ಮಿಶ್ರಾ ಮುಖ್ಯಮಂತ್ರಿಯಾಗಿದ್ದರು.

    1996ರಲ್ಲಿ ತನಿಖೆ ನಡೆಸಿದಾಗ ದಾಖಲೆಗಳಲ್ಲಿ ಮೇವು ಪೂರೈಕೆ ಮಾಡುವ ನೆಪದಲ್ಲಿ ಹಣ ವಂಚನೆ ಮಾಡಿರುವುದು ಕಂಡುಬಂತು. ಆರಂಭದಲ್ಲಿ ಇದು ಕೆಳ ಹಂತದ ವಂಚನೆ ಎನಿಸಿತ್ತು, ಬಳಿಕ ರಾಜಕಾರಣಿಗಳೊಂದಿಗೆ ಬೆಸೆದುಕೊಂಡಿರುವುದು ಖಾತ್ರಿಯಾಯಿತು.

    ನಂತರ ರಾಜ್ಯ ಸರ್ಕಾರ ಎರಡು ತನಿಖಾ ಆಯೋಗಗಳನ್ನು ಸ್ಥಾಪಿಸಿತು. ಅವುಗಳಲ್ಲಿ ಒಂದಕ್ಕೆ ರಾಜ್ಯ ಅಭಿವೃದ್ಧಿ ಆಯುಕ್ತ ಫೂಲ್​ಚಂದ್ ಸಿಂಗ್ ನೇತೃತ್ವ ವಹಿಸಿದ್ದರು. ನಂತರ ಹಗರಣದಲ್ಲಿ ಅವರೂ ಶಾಮೀಲಾಗಿರುವುದು ಬೆಳಕಿಗೆ ಬಂತು.

    ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಪಟನಾ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇವುಗಳಲ್ಲಿ ಒಂದನ್ನು ಬಿಜೆಪಿ ನಾಯಕ ಸುಶೀಲ್ ಮೋದಿ, ಸರಯು ರಾಯ್ ಮತ್ತು ಶಿವಾನಂದ್ ತಿವಾರಿ ಸಲ್ಲಿಸಿದ್ದರು.

    ಅರ್ಜಿಗಳನ್ನು ಆಲಿಸಿದ ಹೈಕೋರ್ಟ್ 1996ರ ಮಾರ್ಚ್ 11ರಂದು ಸಿಬಿಐಗೆ ವಹಿಸಿತು. ಸಿಬಿಐ ತನಿಖೆ ಆರಂಭಿಸುತ್ತಿದ್ದಂತೆ ಲಾಲು, ಜಗನ್ನಾಥ್ ಮಿಶ್ರಾ ಮತ್ತು ಉನ್ನತ ಅಧಿಕಾರಿಗಳು ತನಿಖಾ ವ್ಯಾಪ್ತಿಗೆ ಬಂದರು.

    ರಾಜ್ಯ ಪೊಲೀಸರು ಅದಾಗಲೇ ದಾಖಲಿಸಿದ್ದ 41 ಪ್ರಕರಣಗಳ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡು, ಗುಪ್ತಚರ ವರದಿಗಳು ಮತ್ತು ದೂರುಗಳ ಆಧಾರದ ಮೇಲೆ 23 ಪ್ರಕರಣಗಳನ್ನು ದಾಖಲಿಸಲಾಯಿತು. ಒಟ್ಟಾರೆ 64 ಮೇವು ಹಗರಣ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಳಪಡಿಸಿತ್ತು.

    ಸಿಬಿಐ ಚಾರ್ಜ್​ಶೀಟ್​ನಲ್ಲಿ ಲಾಲು ಹೆಸರನ್ನು ನಮೂದಿಸಿದ ನಂತರ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಬದಲಿಗೆ ಅವರ ಪತ್ನಿ ರಾಬ್ರಿ ದೇವಿ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿ, ವಿಶ್ವಾಸಮತ ಗೆದ್ದರು.

    2013ರ ಸೆ. 30ರಂದು ಒಂದು ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು ಲಾಲು ಸೇರಿ 45 ಮಂದಿಯನ್ನು ದೋಷಿಗಳೆಂದು ಘೊಷಿಸಿ ಐದು ವರ್ಷ ಜೈಲು ಶಿಕ್ಷೆ ವಿಧಿಸಿತು. ಆಗ ಸಂಸದರಾಗಿದ್ದ ಲಾಲು ಅವರು 11 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾದರು. ಡಿಸೆಂಬರ್ 2017ರಲ್ಲಿ, ಅವರನ್ನು ಮತ್ತೊಂದು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೊಷಿಸಲಾಯಿತು. ಅದರಲ್ಲಿ ಅವರಿಗೆ ದೇವಗಢ ಖಜಾನೆಯಿಂದ ಅಕ್ರಮವಾಗಿ ಹಣ ಪಡೆದಿದ್ದಕ್ಕಾಗಿ ಮೂರೂವರೆ ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಜನವರಿ 2018ರಲ್ಲಿ ಮತ್ತೊಂದು ಪ್ರಕರಣದಲ್ಲಿ 33.67 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಖಜಾನೆಯಿಂದ ಪಡೆದಿದ್ದಕ್ಕೆ ಲಾಲು ತಪ್ಪಿತಸ್ಥ ಎಂದು ಘೊಷಿಸಿ, ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಲಾಲು ಯಾದವ್ ಮತ್ತು ಜಗನ್ನಾಥ್ ಮಿಶ್ರಾ ಹೊರತುಪಡಿಸಿ ನೂರಾರು ಮಂದಿ ಹಗರಣದಲ್ಲಿ ಶಿಕ್ಷೆಗೊಳಗಾದರು.

    ಇಲ್ಲಿಯವರೆಗೆ, ಒಂದೇ ಪ್ರಕರಣದಲ್ಲಿ 295 ದೋಷಿಗಳು ಮತ್ತು ವಿವಿಧ ಪ್ರಕರಣಗಳಲ್ಲಿ ಸೇರಿ 821 ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಲಾಲು ಅವರನ್ನು ಡಿಸೆಂಬರ್ 2017ರಲ್ಲಿ ಜೈಲಿಗೆ ಅಟ್ಟಲಾಯಿತು. 2018ರ ಮಾರ್ಚ್​ನಲ್ಲಿ ಬಿರ್ಸಾ ಮುಂಡಾ ಜೈಲಿನಲ್ಲಿ ಲಾಲು ಆರೋಗ್ಯ ಹದಗೆಟ್ಟ ನಂತರ ಅವರನ್ನು ರಿಮ್ಸ್​ಗೆ ಸ್ಥಳಾಂತರಿಸಲಾಯಿತು. ನಂತರ ದೆಹಲಿಯ ಏಮ್ಸ್​ಗೆ ದಾಖಲಿಸಲಾಗಿತ್ತು. ದುಮ್ಕಾ ಖಜಾನೆ ಹಗರಣದಲ್ಲಿ ಜಾರ್ಖಂಡ್ ಹೈಕೋರ್ಟ್, ಲಾಲು ಉಳಿದ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದ ನಂತರ ಬಿಡುಗಡೆ ಮಾಡಲಾಯಿತು.

    ಇತರ ಪ್ರಕರಣಗಳು

    * 1996ರ ಯೂರಿಯಾ ಹಗರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತು. ರಾಸಾಯನಿಕ ಗೊಬ್ಬರಗಳ ಅಭಾವವನ್ನೇ ಬಂಡವಾಳ ಮಾಡಿಕೊಂಡು 133 ಕೋಟಿ ರೂ. ವೆಚ್ಚದಲ್ಲಿ ಯೂರಿಯಾ ಆಮದು ಮಾಡಿಕೊಂಡಿದ್ದು, ಅದು ಯಾರಿಗೂ ತಲುಪದೆ ಹಾಳಾಗಿ ಹೋಯಿತು.

    * 10 ಸಾವಿರ ಕೋಟಿ ರೂ.ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣವು ಬ್ಯಾಂಕಿಂಗ್ ಕ್ಷೇತ್ರವನ್ನೇ ನಡುಗಿಸಿತು. ಪ್ರಕರಣದ ಪ್ರಮುಖ ಆರೋಪಿಗಳು ಆಭರಣ ವ್ಯಾಪಾರಿ ಮತ್ತು ವಿನ್ಯಾಸಕ ನೀರವ್ ಮೋದಿ, ಆತನ ಸಂಬಂಧಿ ಮೆಹುಲ್ ಚೋಕ್ಸಿ. ಈ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇದುವರೆಗೆ 2362 ಕೋಟಿ ರೂ. ಚರ, ಸ್ಥಿರ ಆಸ್ತಿ ವಶಪಡಿಸಿಕೊಂಡಿದೆ.

    * 2012ರಲ್ಲಿ ಉತ್ತರ ಪ್ರದೇಶದಲ್ಲಿ ಮಾಯಾವತಿ ಸರ್ಕಾರವಿದ್ದ ವೇಳೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು, ಅಂದಾಜು 10 ಸಾವಿರ ಕೋಟಿ ರೂ.ಹಗರಣ ನಡೆದಿದೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಹಿರಿಯ ವೈದ್ಯಾಧಿಕಾರಿಗಳ ನಿಗೂಢ ಕೊಲೆ ಕೂಡ ಆಯಿತು. ಸಿಬಿಐ ತನಿಖೆ ಕೂಡ ನಡೆಯಿತು.

    ಷೇರು ಮಾರುಕಟ್ಟೆ ಹಗರಣ
    1992ರಲ್ಲಿ ಇಡೀ ದೇಶದ ಷೇರು ಮಾರುಕಟ್ಟೆಯನ್ನೇ ಕಂಪಿಸುವಂತೆ ಮಾಡಿದ ಹಗರಣವೊಂದು ಬೆಳಕಿಗೆ ಬಂತು. ಹರ್ಷದ್ ಮೆಹ್ತಾ ಈ ಹಗರಣ ಪ್ರಮುಖ ಸಂಚುಕೋರ. ಸುಮಾರು 4000 ಕೋಟಿ ರೂಪಾಯಿ ವಂಚನೆ ಇದಾಗಿದ್ದು, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಲ್ಲಿಯವರೆಗೆ ನಡೆಸಲಾದ ಅತಿ ದೊಡ್ಡ ವಂಚನೆಗಳಲ್ಲಿ ಇದು ಮುಂಚೂಣಿಯಲ್ಲಿದೆ.

    ಬ್ಯಾಂಕ್ ರಸೀದಿಗಳು ಮತ್ತು ಸ್ಟಾಂಪ್ ಪೇಪರ್​ಗಳನ್ನು ಒಳಗೊಂಡಿರುವ ವ್ಯವಸ್ಥಿತ ವಂಚನೆಯ ಜಾಲವಾಗಿ ಕಾರ್ಯ ನಿರ್ವಹಿಸಿದ್ದು, ಅಂತಿಮವಾಗಿ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು.

    ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲೋಪದೋಷಗಳ ಲಾಭವನ್ನು ಪಡೆದುಕೊಂಡಿದ್ದ ನೋಂದಾಯಿತ ಬ್ರೋಕರ್ ಹರ್ಷದ್ ಮೆಹ್ತಾ, ತನ್ನ ಪಾಲುದಾರರೊಂದಿಗೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಬಲು ಬುದ್ಧಿವಂತಿಕೆಯಿಂದ ಚಟುವಟಿಕೆ ನಡೆಸಿದ್ದ.

    ಬ್ಯಾಂಕ್ ಉದ್ಯೋಗಿಗಳನ್ನೂ ತನ್ನ ವ್ಯವಹಾರದಲ್ಲಿ ಶಾಮೀಲು ಮಾಡಿಕೊಂಡು, ಬ್ಯಾಂಕ್​ನಿಂದ ನಕಲಿ ರಸೀದಿ ಲಭ್ಯವಾಗುವಂತೆ ಮಾಡಿಕೊಂಡಿದ್ದ. ಕೆಲವು ಬ್ಯಾಂಕ್​ಗಳಲ್ಲಿ ಅಕ್ರಮವಾಗಿ ಸಾಲ ಪಡೆದು ಅದನ್ನು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿದ್ದ. ಒಟ್ಟಾರೆ, ಬ್ಯಾಂಕ್​ಗಳಿಗೆ ಮೆಹ್ತಾ ಸುಮಾರು 4 ಸಾವಿರ ಕೋಟಿ ರೂಪಾಯಿ ವಂಚಿಸಿದ್ದ. ನಂತರ, ಷೇರು ಮಾರುಕಟ್ಟೆಯಲ್ಲಿ ಆತನ ಕಾರ್ಯಾಚರಣೆಯ ವಿಧಾನವನ್ನು ಪತ್ತೆ ಹಚ್ಚಿದಾಗ ಬ್ಯಾಂಕ್​ಗಳು ಯಾವುದೇ ಮೌಲ್ಯ ಹೊಂದಿರದ ನಕಲಿ ರಸೀದಿ ಹೊಂದಿದ್ದವು ಎಂಬುದು ಅರಿವಿಗೆ ಬಂತು.

    ಹಗರಣ ಬೆಳಕಿಗೆ ಬಂದ ನಂತರ ಆದಾಯ ತೆರಿಗೆ ಇಲಾಖೆಯು 1992ರ ಫೆ. 28ರಂದು ಮೆಹ್ತಾ ಒಡೆತನದ ಕಂಪನಿಗಳ ಮೇಲೆ ದಾಳಿ ನಡೆಸಿತು. ಹಲವಾರು ದಾಖಲೆಗಳು ಮತ್ತು ಷೇರು ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡಿತು. ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡು ಆತನನ್ನು ಬಂಧಿಸಿ ಜೈಲಿಗಟ್ಟಿತು.

    ಪ್ರಕರಣದ ಅಗಾಧತೆಯನ್ನು ಗಮನಿಸಿ ರಿಸರ್ವ್ ಬ್ಯಾಂಕ್ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದರೆ, ಬ್ಯಾಂಕಿಂಗ್ ವಹಿವಾಟುಗಳಲ್ಲಿನ ಅಕ್ರಮಗಳ ತನಿಖೆಗಾಗಿ 1993ರಲ್ಲಿ ಜಂಟಿ ಸಂಸದೀಯ ಸಮಿತಿಯನ್ನು ಸಹ (ಜೆಪಿಸಿ) ರಚಿಸಲಾಯಿತು.

    ಮುಂದೆ ಮೆಹ್ತಾನನ್ನು ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅಪರಾಧಿ ಎಂದು ಘೊಷಿಸಿದವು. ಹಾಗೆಯೇ ಆತನ ಮೇಲೆ 74 ಕ್ರಿಮಿನಲ್ ಅಪರಾಧಗಳ ಆರೋಪ ಹೊರಿಸಲಾಯಿತು. ಆತ ಹೃದಯಾಘಾತದಿಂದ ಜೈಲಿನಲ್ಲಿಯೇ ಮೃತಪಟ್ಟ. ಈ ಹಗರಣದ ಬಳಿಕ ಎಚ್ಚೆತ್ತ ಸರ್ಕಾರ ಠೇವಣಿದಾರರ ಹಿತಾಸಕ್ತಿಗೆ ಕಾನೂನನ್ನು ಬಿಗಿಗೊಳಿಸಿತು. ಹಾಗೆಯೇ ಆತನ ಆಸ್ತಿಯನ್ನು ಮಾರಾಟ ಮಾಡಿ ಸಾಲ ಮರುಪಾವತಿ ಮಾಡಲಾಯಿತು.

    ಸತ್ಯಂ ಕಂಪ್ಯೂಟರ್ ಹಗರಣ
    ಕಾರ್ಪೆರೇಟ್ ವಲಯದಲ್ಲಿ ದೊಡ್ಡ ಹಗರಣ ಎಂದರೆ ಸತ್ಯಂ ಕಂಪ್ಯೂಟರ್ ಹಗರಣ. 2009ರಲ್ಲಿ ಸತ್ಯಂ ಕಂಪ್ಯೂಟರ್ ಸರ್ವಿಸಸ್​ನ ಸಂಸ್ಥಾಪಕ ಮತ್ತು ಅಧ್ಯಕ್ಷ ರಾಮಲಿಂಗರಾಜು ಮಾಡಿದ ಅತಿ ದೊಡ್ಡ ಕಾರ್ಪೆರೇಟ್ ವಂಚನೆ ಇದಾಗಿತ್ತು.

    ಕಂಪನಿಯ ದಾಖಲೆಗಳಲ್ಲಿ ಮಾರಾಟ, ಗಳಿಕೆ, ನಗದು ಬಾಕಿ ಮತ್ತು ಸಿಬ್ಬಂದಿ ಸಂಖ್ಯೆಯನ್ನು ತಿರುಚಿ ಹೆಚ್ಚಿಸಿರುವುದನ್ನು ಅವರೇ ಒಪ್ಪಿಕೊಂಡರು. ತಮ್ಮ ವೈಯಕ್ತಿಕ ಬಳಕೆಗಾಗಿ ಸಂಸ್ಥೆಯಿಂದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದು, ಇದು ಒಟ್ಟಾರೆ 7800 ಕೋಟಿ ರೂ. ಅವ್ಯವಹಾರವಾಗಿತ್ತು.

    ಇಡೀ ಪ್ರಕರಣ ಭಾರತೀಯ ಐಟಿ ವಲಯದ ಹೂಡಿಕೆದಾರರು, ಗ್ರಾಹಕರು, ನೌಕರರು ಮತ್ತು ಮಧ್ಯಸ್ಥಗಾರರ ಮೇಲಿನ ನಂಬಿಕೆ ಮತ್ತು ವಿಶ್ವಾಸಕ್ಕೆ ಘಾಸಿಯುಂಟುಮಾಡಿತು. ಅಷ್ಟೇ ಅಲ್ಲದೆ, ಆ ಕಂಪನಿಯ ಲೆಕ್ಕಪರಿಶೋಧಕರು, ಅದರ ನಿರ್ದೇಶಕರ ಮಂಡಳಿ ಮತ್ತು ಅದರ ಷೇರುದಾರರ ಮೇಲೆಯೂ ಗಂಭೀರ ಪರಿಣಾಮ ಉಂಟುಮಾಡಿತು. ಆರ್ಥಿಕ ಸಾಧನೆಗೆ ತಪ್ಪು ಅರ್ಥ ಪ್ರಸ್ತುತಪಡಿಸಿದ್ದು, ಇದಕ್ಕಾಗಿ ನಕಲಿ ಬ್ಯಾಂಕ್ ಸ್ಟೇಟ್​ವೆುಂಟ್​ಗಳು, ನಕಲಿ ಇನ್​ವಾಯ್್ಸಳು ಮತ್ತು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವುದು ಇವೆಲ್ಲವೂ ಮೋಸದ ಕಾರ್ಯಾಚರಣೆಯ ಭಾಗವಾಗಿತ್ತು.

    ಪ್ರಕರಣ ಹೊರಬರುತ್ತಿದ್ದಂತೆ ಷೇರು ಬೆಲೆಗಳು ತೀವ್ರವಾಗಿ ಕುಸಿದವು, ಹೂಡಿಕೆದಾರರಿಗೆ ಗಣನೀಯ ನಷ್ಟ ಉಂಟಾಯಿತು. ಒಂದೆಡೆ ಅಸ್ತಿತ್ವಕ್ಕಾಗಿ ಕಂಪನಿ ಹೋರಾಡುತ್ತಿದ್ದರೆ ಸಾವಿರಾರು ನೌಕರರು ಅನಿಶ್ಚಿತತೆ ಎದುರಿಸಿದರು.

    ಸತ್ಯಂನ ಕುಸಿತ ತಪ್ಪಿಸಲು ಮತ್ತು ಹೂಡಿಕೆದಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿತು. ಅಂತಿಮವಾಗಿ ಸತ್ಯಂ ಕಂಪನಿಯನ್ನು ಟೆಕ್ ಮಹೀಂದ್ರಾ ಖರೀದಿಸಿತು. 2003ರಲ್ಲಿ ರಾಜು ಸತ್ಯಂನ ಆರ್ಥಿಕ ದಾಖಲೆಗಳನ್ನು ತಿರುಚಲು ಪ್ರಾರಂಭಿಸಿದರು, ಸಂಸ್ಥೆಯು ನಿಜವಾಗಿ ಸಾಧಿಸಿದ್ದಕ್ಕಿಂತ ಹೆಚ್ಚಿನ ಬೆಳವಣಿಗೆ ಮತ್ತು ಲಾಭವನ್ನು ತೋರಿಸಲು ಪ್ರಾರಂಭಿಸಿದರು. ರಾಜು ತನ್ನ ಸಹೋದರ ರಾಮರಾಜು ಮತ್ತು ಕಂಪನಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ಆಡಿಟ್ ವರದಿಗಳು ಮತ್ತು ನಕಲಿ ಇನ್ವಾಯ್್ಸಳು, ಗ್ರಾಹಕರು, ಬ್ಯಾಂಕ್ ಖಾತೆಗಳು ಮತ್ತು ಉದ್ಯೋಗಿಗಳನ್ನು ಸೃಷ್ಟಿಸಿದರು. ಅದಲ್ಲದೇ ರಾಜು ಸತ್ಯಂನ ಹಣವನ್ನು ರಿಯಲ್ ಎಸ್ಟೇಟ್ ಮತ್ತು ಇತರ ಯೋಜನೆಗಳಲ್ಲಿ ವೈಯಕ್ತಿಕ ಲಾಭಕ್ಕಾಗಿ ತನ್ನ ಕುಟುಂಬದ ಉದ್ಯಮಗಳಲ್ಲಿ ಹೂಡಿಕೆ ಮಾಡಿದರು. ಸುಮ್ಮಸುಮ್ಮನೇ ಸಾಧನೆ ಮಾಡಿರುವುದಾಗಿ ಚಿತ್ರಿಸಿ ಪ್ರಶಸ್ತಿಗಳನ್ನೂ ಪಡೆದುಕೊಂಡರು.

    2008ರಲ್ಲಿ ಸತ್ಯಂನ ಷೇರು ಬೆಲೆ 10 ರೂ.ನಿಂದ 544 ರೂ.ಗೆ ಏರಿತು. ಇದು ಭಾರತದ ಮುಂಚೂಣಿ ಐಟಿ ಕಂಪನಿಗಳಲ್ಲಿ ಒಂದೆನಿಸಿಕೊಂಡಿತು.

    ಈ ನಡುವೆ ಸತ್ಯಂನ ಲಾಭ ಕಡಿಮೆಯಾದ ಕಾರಣ ರಾಜು ಸಾಲಗಾರರಿಂದ ಹೆಚ್ಚಿನ ಒತ್ತಡ ಎದುರಿಸಬೇಕಾಗಿ ಬಂತು. ಇದಲ್ಲದೆ, ವಿಶ್ವ ಬ್ಯಾಂಕ್ ಇವರ ನಡವಳಿಕೆಯನ್ನು ಪರಿಶೀಲಿಸಿತಲ್ಲದೆ, 8 ವರ್ಷ ತನ್ನ ಯೋಜನೆಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಿತು. ತನ್ನ ಶಿಥಿಲಗೊಳ್ಳುತ್ತಿರುವ ಉದ್ಯಮವನ್ನು ಉಳಿಸುವ ಹತಾಶ ಪ್ರಯತ್ನದಲ್ಲಿದ್ದ ರಾಜುಗೆ ಷೇರುದಾರರು ಶಾಕ್ ನೀಡಿದರು. ಬೇರೆ ದಾರಿಯಿಲ್ಲದೆ ರಾಜು ತನ್ನ ಮೋಸವನ್ನು ಅಂತಿಮವಾಗಿ ಒಪ್ಪಿಕೊಳ್ಳಲೇಬೇಕಾಯಿತು.

    ಪ್ರಕರಣ ಸಿಬಿಐ ಸೇರಿ ವಿವಿಧ ಕೇಂದ್ರೀಯ ತನಿಖಾ ಸಂಸ್ಥೆಗಳಲ್ಲಿ ತನಿಖೆಗೊಳಪಡಲು ಆರಂಭವಾಯಿತು. ರಾಜು ಮತ್ತು ಸಹಚರರ ವಿರುದ್ಧ ಹಣ ವರ್ಗಾವಣೆ, ಒಳ ವ್ಯವಹಾರ, ನಕಲಿ, ಕ್ರಿಮಿನಲ್ ಸಂಚು, ನಂಬಿಕೆ ದ್ರೋಹ, ಸುಳ್ಳು ಖಾತೆ, ನಕಲಿ ಸೇರಿದಂತೆ ವಿವಿಧ ಅಪರಾಧಗಳ ಆರೋಪಗಳನ್ನು ಹೊರಿಸಲಾಯಿತು.

    ನಟ ದರ್ಶನ್​ ಎಚ್ಚರಿಕೆ ವಹಿಸದಿದ್ರೆ ಕಾದಿದೆ ಅಪಾಯ! ಸುತ್ತಲೂ ನಡೆಯುತ್ತಿರುವ ಘಟನೆಗಳೇ ಇದರ ಸುಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts