More

    ಮಹಾಯುದ್ಧದ ಕಾಲದಲ್ಲೇ ಲಾಕ್​ಡೌನ್​ ಇರಲಿಲ್ಲ…ಅಂಥದ್ದರಲ್ಲಿ ಈಗ್ಯಾಕೆ? ಕೇಂದ್ರಕ್ಕೆ ರಾಗಾ ಪ್ರಶ್ನೆ

    ನವದೆಹಲಿ: ಕರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಲಾಕ್​ಡೌನ್​ನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಮತ್ತೊಮ್ಮೆ ಅದನ್ನೇ ಹೇಳಿದ್ದಾರೆ.
    ಲಾಕ್​ಡೌನ್​ನಿಂದಾಗಿ ದೇಶದ ಆರ್ಥಿಕತೆ ಕುಸಿತ ಆಗಿರುವ ಬಗ್ಗೆ ವಿವಿಧ ಉದ್ಯಮಿಗಳೊಂದಿಗೆ, ಆರ್ಥಿಕ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿರುವ ರಾಹುಲ್ ಗಾಂಧಿ, ಇಂದು ಉದ್ಯಮಿ ರಾಜೀವ್​ ಬಜಾಜ್​ ಅವರೊಂದಿಗೆ ಚರ್ಚೆ ನಡೆಸಿದರು.

    ಈ ವೇಳೆ ಮಾತನಾಡಿದ ರಾಹುಲ್​ ಗಾಂಧಿ, ದೇಶಕ್ಕೆ ಲಾಕ್​ಡೌನ್​ ಅಗತ್ಯವಿಲ್ಲ. ವಿಶ್ವ ಯುದ್ಧದ ಸಂದರ್ಭದಲ್ಲೂ ಲಾಕ್​ಡೌನ್​ ಎಂಬುದು ಇರಲಿಲ್ಲ. ಅಂಥದ್ದರಲ್ಲಿ ಕರೊನಾ ವೈರಸ್​ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ನಮ್ಮ ದೇಶದಲ್ಲಿ ಲಾಕ್​ಡೌನ್ ಜಾರಿ ಮಾಡಿರುವುದು ಎಷ್ಟು ಸರಿ ಎಂದು ಹೇಳಿದರು.

    ವಿಶ್ವ ಯುದ್ಧಗಳ ಸಮಯದಲ್ಲೂ ಇಡೀ ಜಗತ್ತಿನಲ್ಲಿ ಲಾಕ್​ಡೌನ್​ ಇರಲಿಲ್ಲ. ಎಲ್ಲ ರೀತಿಯ ಚಟುವಟಿಕೆಗಳೂ ನಡೆಯುತ್ತಿದ್ದವು ಎಂದು ನಾನು ಭಾವಿಸುತ್ತೇನೆ. ಮಹಾಯುದ್ಧ ಅತಿಯಾದ ಹಾನಿಯನ್ನುಂಟು ಮಾಡಿದ, ವಿನಾಶವನ್ನುಂಟು ಮಾಡಿದ ವಿದ್ಯಮಾನ. ಆ ಕಾಲದಲ್ಲಿಯೇ ಲಾಕ್​ಡೌನ್​ ಮಾಡಿರಲಿಲ್ಲ.

    ಕೊವಿಡ್​-19 ವೈರಸ್​ ಬರುವುದಕ್ಕೂ ಮೊದಲೇ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ನಿರುದ್ಯೋಗ ಸಮಸ್ಯೆ ತಲೆ ಎತ್ತಿತ್ತು. ಈಗಂತೂ ಕೊವಿಡ್​-19 ಆ ಸಮಸ್ಯೆಗಳನ್ನು ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡುಹೋಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ರಾಹುಲ್​ ಗಾಂಧಿಯವರ ಮಾತಿಗೆ ಪ್ರತಿಕ್ರಿಯೆ ನೀಡಿದ ಉದ್ಯಮಿ ರಾಜೀವ್​ ಬಜಾಜ್​ ಅವರೂ ಕೂಡ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
    ಭಾರತದಲ್ಲಿ ಮಾತ್ರ ಕಠಿಣವಾಗಿ ಲಾಕ್​ಡೌನ್ ವಿಧಿಸಲಾಗಿದೆ. ಇಷ್ಟು ಬಿಗಿಯಾದ ಲಾಕ್​ಡೌನ್​ ಉಳಿದೆಲ್ಲೂ ಇಲ್ಲ. ವಿದೇಶಗಳಲ್ಲಿ ನನ್ನ ಕೆಲವು ಸ್ನೇಹಿತರು, ಕುಟುಂಬದವರು ಇದ್ದಾರೆ. ಅವರಿಗೆಲ್ಲ ಹೊರಗೆ ಓಡಾಡಲು ಅವಕಾಶ ಇದೆ. ಆದರೆ ಭಾರತದಲ್ಲಿ ಜನರಿಗೆ ಮನೆಯಿಂದ ಹೊರಬೀಳಲು ಕೊಡುತ್ತಿಲ್ಲ. ಇಂಥ ಕಠಿಣತೆ ಅಗತ್ಯ ಇರಲಿಲ್ಲ ಎಂದು ರಾಜೀವ್​ ಹೇಳಿದ್ದಾರೆ.

    ಹಾಗೇ, ಸಂಕಷ್ಟಕ್ಕೀಡಾಗಿರುವ ಆರ್ಥಿಕತೆಯನ್ನು ಮತ್ತೆ ಉತ್ತೇಜನ ಮಾಡಲು ಭಾರತ ಸರ್ಕಾರ ಕೆಲವು ಪ್ರಾವೀಣ್ಯತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಮತ್ತೆ ಮುಂದುವರಿದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​ ಗಾಂಧಿ, ಭಾರತದಲ್ಲಿ ಲಾಕ್​ಡೌನ್​ನ್ನು ಏಕಾಏಕಿ ಹೇರಲಾಯಿತು. ಶ್ರೀಮಂತರಿಗೆ ಮನೆ ಇದೆ, ಬೇಕಾಗಿದ್ದೆಲ್ಲ ಇದೆ ಹಾಗಾಗಿ ಅವರಿಗೆ ಲಾಕ್​ಡೌನ್​ ಕಷ್ಟವಾಗೋದಿಲ್ಲ. ಆದರೆ ಬಡವರು, ವಲಸೆ ಕಾರ್ಮಿಕರ ಬದುಕು ಸಂಪೂರ್ಣ ನಾಶವಾಗುತ್ತಿದೆ ಎಂದು ಹೇಳಿದರು.
    ಲಾಕ್​ಡೌನ್​ನಿಂದಾಗಿ ನಾವು ನಮ್ಮ ಆತ್ಮವಿಶ್ವಾಸ ಕಳೆದುಕೊಂಡಿದ್ದೇವೆ ಎಂದು ಹಲವರು ನನ್ನ ಬಳಿಯೇ ಹೇಳಿಕೊಂಡಿದ್ದಾರೆ. ಇದು ದುಃಖಕರ ಸಂಗತಿ ಮತ್ತು ದೇಶಕ್ಕೆ ಮಾರಕವಾದ ಬೆಳವಣಿಗೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts