More

    ಹೆಚ್ಚುತ್ತಿದೆ ಜ್ಞಾನ-ಜ್ಞಾನಿಗಳನ್ನು ದ್ವೇಷಿಸುವ ಸಿಂಡ್ರೋಮ್: ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಕಳವಳ

    ಬೆಂಗಳೂರು: ದೇಶದಲ್ಲಿ ಇತ್ತೀಚೆಗೆ ಜ್ಞಾನ ಮತ್ತು ಜ್ಞಾನಿಗಳನ್ನು ದ್ವೇಷಿಸುವ ಸಿಂಡ್ರೋಮ್ ಬೆಳೆಯುತ್ತಿದೆ. ಇಂತಹ ರಾಷ್ಟ್ರ ಮೇಲೆ ಬರುವುದು ಹೇಗೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅಭಿಪ್ರಾಯಪಟ್ಟರು.

    ‘ವಿಶ್ವವಾಣಿ ಪುಸ್ತಕ’ದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಎಡ-ಬಲ ಯಾವುದೇ ಪಂಥವಿರಲಿ, ಒಳ್ಳೆಯ ಚಿಂತನೆ ಎಲ್ಲಿಂದಲೇ ಬರಲಿ, ಆ ಕಡೆ ನಮ್ಮ ಮನಸು ಹೋಗಬೇಕು. ಅಂತಹ ದೇಶಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತವೆ ಎಂದರು.

    ಈ ಪುಸ್ತಕ ಬರೆದಿರುವ ಲೇಖಕ ಯಾವ ಜಾತಿ, ಕಾರ್ಯಕ್ರಮದ ಉದ್ಘಾಟಕರು ಯಾವ ಜಾತಿ, ವೇದಿಕೆಯ ಮೇಲೆ ಇರುವವರು ಯಾವ ಜಾತಿ ಎಂದು ನೋಡುವ ಮನಸ್ಥಿತಿ ಬೆಳೆಯುತ್ತಿದೆ. ಇವೆಲ್ಲವೂ ಒಳ್ಳೆಯ ಲಕ್ಷಣಗಳಲ್ಲ. ನಮಗೆ ಪುಸ್ತಕಗಳನ್ನು ಓದುವ, ಜ್ಞಾನವನ್ನು ಸಂಪಾದಿಸುವ ತುಡಿತ ಇರಬೇಕು. ಪುಸ್ತಕಗಳನ್ನು ಉಡುಗೊರೆ ರೂಪದಲ್ಲಿ ಕೊಡುವ ಪ್ರವೃತ್ತಿ ಬೆಳೆಯಬೇಕು. ಜ್ಞಾನಿಗಳೆಲ್ಲ ಜಾತಿಯಿಂದಾದವರಲ್ಲ, ಅವರ ಜ್ಞಾನಕ್ಕೆ ಸಮವಿಲ್ಲ. ಅಂಬೇಡ್ಕರ್ ಅವರನ್ನು ಪುಸ್ತಕ ಇಲ್ಲದಂತೆ ಯಾರಾದರೂ ನೋಡಿದ್ದೇವಾ? ಅವರ ಬಳಿ ಅವೆಷ್ಟು ಸಾವಿರ ಪುಸ್ತಕಗಳಿದ್ದವೋ? ಕುವೆಂಪು ಕೂಡ ಅದೇ ರೀತಿಯಲ್ಲಿ ಜ್ಞಾನ ಸಂಪಾದನೆ ಮಾಡಿದವರು. ‘ಓದಿ ಬ್ರಾಹ್ಮಣನಾಗು, ಕಾದು ಕ್ಷತ್ರಿಯನಾಗು’ ಎನ್ನುತ್ತಲೇ ‘ಏನಾದರೂ ಆಗು ಮೊದಲು ಮಾನವನಾಗು’ ಎಂಬ ಸಿದ್ದಯ್ಯ ಪುರಾಣಿಕರ ಮಾತನ್ನು ನೆನಪು ಮಾಡಿಕೊಂಡರು.

    ಹಿಂದಿನ ಬರಹಗಾರರಿಗೆ ರಾಜಾಶ್ರಯವಿತ್ತು. ಆದರೆ, ಈಗಿನ ರಾಜರು ಅದನ್ನು ಬಿಟ್ಟು ಬೇರೆ ಏನೇನೋ ಮಾಡುತ್ತಿದ್ದಾರೆ. ಈಗಿನವರ ಚಿತ್ತ ಯಾವ ಕಡೆ ಇದೆ ಎಂಬುದನ್ನು ಸೂಚ್ಯವಾಗಿ ಗಮನಿಸಬಹುದು. ಹಾಗಂತ ಪ್ರಜೆಗಳು ಸುಮ್ಮನಿರಲು ಸಾಧ್ಯವಿಲ್ಲ. ಪ್ರಜೆಗಳು ಪುಸ್ತಕಗಳನ್ನು ಕೊಂಡು ಓದಿ, ಅದನ್ನು ಅರ್ಥೈಸಿಕೊಂಡು ಜ್ಞಾನಿಗಳಾಗುವ ಜತೆಗೆ ಪುಸ್ತಕ ಬರೆದವರ ಬೆನ್ನೆಲುಬಾಗಿ ನಿಲ್ಲಬೇಕು. ಆಗ ಪುಸ್ತಕ ಬರೆಯುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

    ಬೆಂಗಳೂರು ಉತ್ತರ ವಿವಿ ಉಪಕುಲಪತಿ ನಿರಂಜನ್ ವಾನಳ್ಳಿ ಮಾತಾಡುತ್ತ, ಪತ್ರಿಕೋದ್ಯಮದ ಕಾಲೇಜುಗಳಲ್ಲಿ ಹೇಳಿಕೊಡುತ್ತಿರುವುದು ಪತ್ರಿಕೋದ್ಯಮವೇ ಅಲ್ಲ ಎಂದು ಈಗ ನನಗನಿಸಿದೆ. ಪಾಠ ಹೇಳಿಕೊಡುವವರಿಗೂ, ಪಾಠ ಕೇಳಿಕೊಂಡು ಬಂದವರಿಗೂ ನಿಜವಾದ ಪತ್ರಿಕೋದ್ಯಮ ಸರಿಯಾಗಿ ಅರ್ಥವಾಗಿಲ್ಲ. ಪತ್ರಿಕೋದ್ಯಮ ಕಲಿಯದೆ ಬಂದವರೇ ಇಂದು ಅತ್ಯುತ್ತಮ ಪತ್ರಕರ್ತರಾಗಿ ರೂಪುಗೊಂಡಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಅನುಪಮ್ ಖೇರ್ ಅವರ, ವಿಶ್ವೇಶ್ವರ ಭಟ್ ಅವರು ಅನುವಾದ ಮಾಡಿರುವ ‘ಇಂದಿನ ದಿನವೇ ಶುಭದಿನವೂ’ ವಿಶ್ವವಾಣಿ ಅಂಕಣಕಾರ ಕಿರಣ್ ಉಪಾಧ್ಯಾಯ ಅವರ ‘ಪರದೇಶವಾಸಿ’ ಹಾಗೂ ವಿಶ್ವವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರಾಧಾಕೃಷ್ಣ ಭಡ್ತಿ ಅವರ ‘ಸುಪ್ತ ಸಾಗರ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ರಾಷ್ಟ್ರವಾದಿ ಚಿಂತಕರಾದ ರೋಹಿತ್ ಚಕ್ರತೀರ್ಥ, ಜಿ.ಬಿ.ಹರೀಶ್, ಬಿಡುಗಡೆಯಾದ ಪುಸ್ತಕಗಳ ಲೇಖಕರಾದ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಪತ್ರಕರ್ತ ರಾಧಾಕೃಷ್ಣ ಭಡ್ತಿ ಮತ್ತು ಅಂಕಣಕಾರ ಕಿರಣ್ ಉಪಾಧ್ಯಾಯ ಮಾತಾಡಿದರು.

    ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts