More

    ಮಳೆಹಾನಿ ಪರಿಹಾರಕ್ಕೆ ಹಣಕಾಸಿನ ಕೊರತೆ ಇಲ್ಲ

    ಶಿರಸಿ: ಪ್ರವಾಹ ಪೀಡಿತ ಪ್ರದೇಶದಲ್ಲಿ ಸೂಕ್ತ ಪುನರ್ವಸತಿ ಕಲ್ಪಿಸಬೇಕು. ಮುಂದಿನ ವರ್ಷ ಕಾಳಜಿ ಕೇಂದ್ರ ಆರಂಭಿಸುವ ಪರಿಸ್ಥಿತಿ ಯಾವುದೇ ಕಾರಣಕ್ಕೂ ಬರಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
    ನಗರದ ಮಿನಿ ವಿಧಾನಸೌಧದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪ್ರತಿ ತಾಲೂಕಿನ ತಹಸೀಲ್ದಾರ್ ಖಾತೆಗೆ 25 ಲಕ್ಷ ರೂ. ಜಮಾ ಮಾಡಿದ್ದೇವೆ. ಜಿಲ್ಲೆಯಲ್ಲಿ ಮಳೆಹಾನಿ ಪರಿಹಾರ ನೀಡಲು ಹಣಕಾಸಿನ ಕೊರತೆ ಇಲ್ಲ. ಪ್ರತಿ ತಾಲೂಕಿನಲ್ಲಿಯೂ ಪ್ರವಾಹ ಪರಿಹಾರ ವ್ಯವಸ್ಥೆ ಸಿದ್ಧವಾಗಿಟ್ಟುಕೊಂಡಿದ್ದೇವೆ ಎಂದರು.
    ಸಾಮಾನ್ಯ ಜನರು, ಬಡವರಿಗೆ ತೊಂದರೆ ಆಗಬಾರದು, ಅಧಿಕಾರಿಗಳಿಂದ ಸೂಕ್ತ ಸಹಾಯ ಆಗಬೇಕು. ಯಾವುದೇ ರೀತಿಯ ದೂರು ಸಾರ್ವಜನಿಕರಿಂದ ಬರಬಾರದು. ಸಾಮಾನ್ಯ ಜನರ ಸಮಸ್ಯೆಗೆ ಸ್ಪಂದಿಸಲು ಅಧಿಕಾರಿಗಳು ಸಿದ್ಧರಿರಬೇಕು. ಯಾರಿಗೆ ಪ್ರತಿ ವರ್ಷ ಪ್ರವಾಹದ ಸಮಸ್ಯೆ ಆಗುತ್ತದೆ ಎಂಬುದನ್ನು ಅಧಿಕಾರಿಗಳು ಮೊದಲು ಗಮನಿಸಬೇಕು ಎಂದು ಹೇಳಿದರು.
    ಅರಣ್ಯ ಪ್ರದೇಶದಲ್ಲಿ ಜಿಪಿಎಸ್ ಆಗಿದ್ರೆ ಅಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡುತ್ತೇವೆ. ಮನೆ ನಿರ್ಮಾಣಕ್ಕೆ 1.5 ಲಕ್ಷ ರೂ. ನೀಡಲು ಸರ್ಕಾರ ಸಿದ್ಧವಿದೆ. ಒಂದೊಮ್ಮೆ ಜಿಪಿಎಸ್ ಆದ ಜಾಗ ಇರದಿದ್ದರೆ ರೆವಿನ್ಯೂ ಭೂಮಿಯನ್ನಾದರೂ ಖರೀದಿಸಲು ಅವಕಾಶ ಮಾಡಿಕೊಡುತ್ತೇವೆ. ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಬರಬೇಕು. ಓಡಾಟ ಮಾಡಿ, ಸಮಸ್ಯೆಗಳು ಉಂಟಾಗುವ ಸ್ಥಳಗಳ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು.
    ಅಂಗನವಾಡಿಗಳ ದುರಸ್ತಿಗಿಂತ ಹೊಸ ಕಟ್ಟಡ ನಿರ್ಮಾಣದ ಕುರಿತು ಗಮನ ಹರಿಸಬೇಕು. ಶಾಲೆ, ಆಸ್ಪತ್ರೆ, ದೇವಸ್ಥಾನಗಳು ಎಂದಿಗೂ ಶಿಥಿಲಾವಸ್ಥೆಯಲ್ಲಿ ಇರಬಾರದು. ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲ ಎಂದು ಜನ ಎಂದುಕೊಳ್ಳುವುದು ಬೇಡ. ಯಾವ ಅಧಿಕಾರಿಗೂ ವೇತನ ಕಡಿತಗೊಳಿಸಿಲ್ಲ, ತುರ್ತು ಸ್ಥಿತಿಗೆ ಹಣ ಇಲ್ಲ ಎನ್ನುವುದಿಲ್ಲ. ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ತುಂಬಿಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದರು.
    ರಸ್ತೆ ಪಕ್ಕದ ಮತ್ತು ಬೀಳುವ ಹಂತದಲ್ಲಿರುವ ಮರಗಳನ್ನು ತಕ್ಷಣ ಗುರುತಿಸಿ ತೆರವುಗೊಳಿಸಬೇಕು ಎಂದರು. ಶಿರಸಿ-ಕುಮಟಾ ರಸ್ತೆ ನಿರ್ಮಿಸುತ್ತಿರುವ ಇಂಜಿನಿಯರ್‌ಗಳು ಸಭೆಗೆ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸೇತುವೆ, ರಸ್ತೆ ಸಮಸ್ಯೆ ಇದ್ದರೂ ಇಂಜಿನಿಯರ್ ಸಭೆಗೆ ಬರಲ್ಲ ಅಂದ್ರೆ ಹೇಗೆ ಎಂದು ಅಸಮಾಧಾನ ಹೊರಹಾಕಿದರು.
    ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗೆ ಔಷಧಿ ಪಡೆಯುವಂತೆ ಹೇಳಬಾರದು. ಸರ್ಕಾರಿ ಆಸ್ಪತ್ರಗೆ ಬರುವವರು ಬಡವರೇ ಆಗಿದ್ದಾರೆ. ಆಸ್ಪತ್ರೆಗಳಲ್ಲಿ ಚೀಟಿ ಬರೆದುಕೊಡುವುದು ಸ್ಥಗಿತಗೊಳ್ಳಬೇಕು. ಅಗತ್ಯ ಔಷಧಗಳನ್ನು ಆಸ್ಪತ್ರೆಯಲ್ಲೇ ನೀಡಬೇಕು ಎಂದು ಸೂಚಿಸಿದರು.
    ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ಸಹಾಯಕ ಆಯುಕ್ತ ದೇವರಾಜ ಆರ್., ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts