More

    ಕರಾವಳಿಯಲ್ಲಿ ರಕ್ತಕ್ಕಿಲ್ಲ ಅಭಾವ

    ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ಲಾಕ್‌ಡೌನ್ ಸಂದರ್ಭ ರಕ್ತದ ತೀವ್ರ ಕೊರತೆ ಉಂಟಾಗಿತ್ತು. ಆದರೆ ಈ ಬಾರಿ ಲಾಕ್‌ಡೌನ್ ಇದ್ದರೂ, ಈವರೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ.

    ಪ್ರಮುಖವಾಗಿ 18ರಿಂದ 45 ವಯೋಮಿತಿಯವರಿಗೆ ಲಸಿಕೆ ವಿತರಣೆಯಲ್ಲಿ ಆಗಿರುವ ವಿಳಂಬವೇ ಇದಕ್ಕೆ ಕಾರಣ ಎನ್ನಬಹುದು. ಲಸಿಕೆ ಹಾಕಿಸಿಕೊಂಡವರು ಆರು ತಿಂಗಳವರೆಗೆ ರಕ್ತ ನೀಡುವಂತಿಲ್ಲ ಎನ್ನುವ ಸೂಚನೆಯಿದೆ. ಆದ್ದರಿಂದ ರಕ್ತದಾನ ಮಾಡಿಯೇ ಲಸಿಕೆ ಹಾಕಿಸಿಕೊಳ್ಳಿ ಎಂದು ಯುವಜನರಲ್ಲಿ ಮನವಿ ಮಾಡಲಾಗಿತ್ತು. ಅದರಂತೆ ಹಲವು ಸಂಘಟನೆಗಳು ರಕ್ತದಾನ ಶಿಬಿರವನ್ನೂ ಆಯೋಜಿಸಿದ್ದವು. ಪ್ರಸ್ತುತ ಯುವಜನರಿಗೆ ಲಸಿಕೆ ಹಾಕುವ ಪ್ರಕ್ರಿಯೆ ಮುಂದೂಡಿದ್ದರಿಂದ, ರಕ್ತದಾನ ಮಾಡುವವರಿಗೆ ಹೆಚ್ಚಿನ ಅವಕಾಶ ಲಭಿಸಿದೆ.

    ಮುಂದುವರಿದ ಶಿಬಿರ: ನಗರದ ವಿವಿಧ ಆಸ್ಪತ್ರೆಗಳ ಬ್ಲಡ್ ಬ್ಯಾಂಕ್, ರೆಡ್‌ಕ್ರಾಸ್ ರಕ್ತನಿಧಿ ಹಾಗೂ ವೆನ್ಲಾಕ್ ರಕ್ತ ನಿಧಿಗಳ ಸಹಯೋಗದಲ್ಲಿ ವಿವಿಧ ಸಂಘಟನೆಗಳು ರಕ್ತದಾನ ಶಿಬಿರ ಆಯೋಜಿಸುತ್ತಿದೆ. ಸ್ಥಳೀಯವಾಗಿರುವ ರಕ್ತದಾನಿಗಳನ್ನು ಇದರಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಮಯ ನೀಡಿ ರಕ್ತದಾನಕ್ಕೆ ಬರುವಂತೆ ಸೂಚಿಸುವ ಮೂಲಕ ಮುನ್ನೆಚ್ಚರಿಕೆಯನ್ನೂ ವಹಿಸಲಾಗುತ್ತಿದೆ. ಆದರೆ ಶಿಬಿರಗಳಲ್ಲಿ ಹಿಂದಿನಂತೆ 100ಕ್ಕೂ ಅಧಿಕ ಯುನಿಟ್‌ಗಳ ರಕ್ತ ಸಂಗ್ರಹವಾಗುತ್ತಿಲ್ಲ, ಗರಿಷ್ಠ 25-30 ಯುನಿಟ್‌ಗಳಷ್ಟು ಮಾತ್ರ ಲಭ್ಯ ವಾಗುತ್ತಿದೆ ಎನ್ನುತ್ತಾರೆ ಸಂಘಟಕರು.

    ವೆನ್ಲಾಕ್‌ನಲ್ಲಿ 279 ಯುನಿಟ್: ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್‌ನಲ್ಲಿ ಶುಕ್ರವಾರ 279 ಯುನಿಟ್ ರಕ್ತ ಸಂಗ್ರಹವಿತ್ತು. ಸದ್ಯ ರಕ್ತಕ್ಕೆ ಕೊರತೆಯಾಗಿಲ್ಲ. ಪ್ರತಿ ದಿನ ಶಿಬಿರಗಳು ಆಯೋಜಿಸಲ್ಪಡುತ್ತಿರುವುರಿಂದ ರಕ್ತಕ್ಕೆ ಈವರೆಗೆ ಕೊರತೆ ಕಂಡುಬಂದಿಲ್ಲ. ಇನ್ನೂ ಹಲವು ಕಡೆ ಶಿಬಿರಗಳು ನಡೆಯಲಿದ್ದು, ಕೊರತೆಯಾದರೆ ಇದು ಸರಿದೂಗಿಸಲಿದೆ ಎನ್ನುತ್ತಾರೆ ವೆನ್ಲಾಕ್ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ.ಶರತ್ ಕುಮಾರ್ ರಾವ್. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ ಜಿಲ್ಲಾ ರಕ್ತನಿಧಿಯಲ್ಲಿ ಶುಕ್ರವಾರದ ಮಾಹಿತಿಯಂತೆ 302 ಯುನಿಟ್ ಪ್ಯಾಕ್ ರೆಡ್ ಬ್ಲಡ್ ಸೆಲ್‌ಗಳಿದ್ದು, ಉಳಿದಂತೆ ಪ್ಲಾಸ್ಮಾ, ಪ್ಲೇಟ್ಲೆಟ್ ಮೊದಲಾದವುಗಳು ಬೇರೆ ಇವೆ. ವಿರಳ ಗುಂಪುಗಳ ರಕ್ತಗಳೂ ಒಂದೆರಡು ಯುನಿಟ್ ಲಭ್ಯವಿದೆ. ಲೇಡಿಗೋಷನ್ ರಕ್ತನಿಧಿ ಮೂಲಕ ಲೇಡಿಗೋಷನ್ ಆಸ್ಪತ್ರೆಗೆ ಈಗಾಗಲೆ 165 ಯುನಿಟ್ ರಕ್ತ ನೀಡಲಾಗಿದೆ.

    ನಮ್ಮಲ್ಲಿ ಸದ್ಯಕ್ಕೆ ರಕ್ತದ ಕೊರತೆ ಇಲ್ಲ. ವಿರಳ ಗ್ರೂಪ್‌ನ ರಕ್ತ ಸ್ವಲ್ಪ ಕಡಿಮೆಯಿದೆ. ಉಳಿದಂತೆ ಇತರ ಗುಂಪುಗಳ ರಕ್ತ ಸಂಗ್ರಹ ಅಭಾವವಿಲ್ಲ. ಕೆಲವು ಸಂಘಟನೆಗಳು ಶಿಬಿರ ಆಯೋಜಿಸುತ್ತಿದ್ದು, ದಾನಿಗಳು ಭಾಗವಹಿಸುತ್ತಿರುವುದರಿಂದ ಹಲವು ಯುನಿಟ್‌ಗಳಷ್ಟು ರಕ್ತ ಸಂಗ್ರಹವಾಗುತ್ತಿದೆ.

    ಸಿಎ ಶಾಂತಾರಾಮ ಶೆಟ್ಟಿ
    ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ ಜಿಲ್ಲಾ ಘಟಕ ಅಧ್ಯಕ್ಷ

    ಉಡುಪಿ ಜಿಲ್ಲೆಯಲ್ಲಿ ಈ ತಿಂಗಳು 12 ರಕ್ತದಾನ ಶಿಬಿರಗಳನ್ನು ಆಯೋಜಿಸಿ, 546 ಯುನಿಟ್ ರಕ್ತ ಸಂಗ್ರಹವಾಗಿದೆ. ಪ್ರಸಕ್ತ 490 ಯುನಿಟ್ ರಕ್ತ ಲಭ್ಯವಿದೆ. ಅಭಾವವಿಲ್ಲ. ಆದರೆ ಡೆಂೆ ಪ್ರಕರಣ ಹೆಚ್ಚುತ್ತಿರುವುದರಿಂದ ಪ್ಲೇಟ್ಲೆಟ್ ಕೊರತೆ ಉಂಟಾಗುತ್ತಿದ್ದು, ದಾನಿಗಳ ಮೂಲಕ ರಕ್ತ ಪಡೆದು ಬೇಡಿಕೆ ಅನುಗುಣವಾಗಿ ನೀಡಲಾಗುತ್ತಿದೆ.

    ಡಾ.ವೀಣಾ
    ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿ, ಅಜ್ಜರಕಾಡು ಜಿಲ್ಲಾಸ್ಪತ್ರೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts