More

    ಸಾಮಾಜಿಕ ಬಹಿಷ್ಕಾರಕ್ಕೆ ಅವಕಾಶವಿಲ್ಲ

    ಸೊರಬ: ಸಾಮಾಜಿಕ ಬಹಿಷ್ಕಾರ ಆರೋಪ ಕೇಳಿಬಂದಿರುವ ತಾಲೂಕಿನ ದೂಗೂರು ಗ್ರಾಮಕ್ಕೆ ತಹಸೀಲ್ದಾರ್, ಸಿಪಿಐ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿತು.
    ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಗ್ರಾಮಸ್ಥರ ಜತೆ ಸಭೆ ನಡೆಸಿದ ತಹಸೀಲ್ದಾರ್ ನೇತೃತ್ವದ ತಂಡ, ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ಧತಿಗೆ ಅವಕಾಶವಿಲ್ಲ. ಗ್ರಾಮದಲ್ಲಿ ಇಂತಹ ಘಟನೆಗಳು ನಡೆಯದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಎಲ್ಲರೂ ಸಹೋದರರಂತೆ ಬದುಕಬೇಕು ಎಂದು ಎಚ್ಚರಿಸಿದರು.
    ತಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ದೂಗೂರು ಪರಮೇಶ್ವರ ದೂರು ನೀಡಿದ್ದರು. ದೂರುದಾರರು ಗ್ರಾಮದಲ್ಲಿ ಇಲ್ಲದ ಕಾರಣ ಬುಧವಾರ ಪೊಲೀಸ್ ಠಾಣೆಗೆ ಬರುವಂತೆ ಗ್ರಾಮಸ್ಥರು ಹಾಗೂ ದೂರುದಾರರಿಗೆ ತಿಳಿಸಲಾಗಿದೆ ಎಂದು ತಹಸೀಲ್ದಾರ್ ಹುಸೇನ್ ಸರಕಾವಸ್ ತಿಳಿಸಿದರು.
    ಗ್ರಾಮದ ದೇವಸ್ಥಾನಗಳ ಸ್ವಚ್ಛತೆ, ಸುಣ್ಣ-ಬಣ್ಣ ಮಾಡಲು ಗ್ರಾಮದ ಪ್ರತಿಯೊಂದು ಮನೆಯ ನೆರವು ಕೇಳುವುದೂ ವಾಡಿಕೆ. ದೂರು ಕೊಟ್ಟವರೇ ಗ್ರಾಮದ ಯಾವ ಕೆಲಸಕ್ಕೂ ಬರುವುದಿಲ್ಲ. ನಮ್ಮ ಪಾಡಿಗೆ ನಾವು ಇರುತ್ತೇವೆಂದು ಗ್ರಾಮ ಸಲಹಾ ಸಮಿತಿಗೆ ತಿಳಿಸಿದ್ದಾರೆ. ಗ್ರಾಮದಿಂದ ಯಾರಿಗೂ ಬಹಿಷ್ಕಾರ ಹಾಕಿಲ್ಲ. ಸಂಘಟನೆ ಹೆಸರಿನಲ್ಲಿ ಗ್ರಾಮದಲ್ಲಿ ಸಾಮರಸ್ಯ ಹಾಳುಮಾಡಲಾಗುತ್ತಿದೆ. ಸಣ್ಣ ವಿಷಯಗಳಿಗೂ ಜಾತಿ ನಿಂದನೆ ಬಗ್ಗೆ ಹೆದರಿಸಲಾಗುತ್ತಿದೆ ಎಂದು ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಉಮೇಶ್ ತಿಳಿಸಿದರು. ಸಿಪಿಐ ರಮೇಶ ರಾವ್, ಸಮಾಜ ಕಲ್ಯಾಣಾಧಿಕಾರಿ ಇಕ್ಬಾಲ್ ಜಾತಿಗೇರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts