More

    ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಇವತ್ತಿನವರೆಗೂ ಬಂದಿಲ್ಲ!

    ಬೆಂಗಳೂರು: ಭಾರತದ ಇತಿಹಾಸದಲ್ಲಿ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಇವತ್ತಿನವರೆಗೂ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
    ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜನೆಗೊಂಡ ಯುವ ನಿಧಿ ಯೋಜನೆಗೆ ಚಾಲನೆ ಕೊಡುವ ಕಾರ್ಯಕ್ರಮದಲ್ಲಿ ಪದೇಪದೆ ಪ್ರಧಾನಿ ಮೋದಿಯವರ ಹೆಸರು ಪ್ರಸ್ತಾಪಿಸಿ ಟೀಕಿಸಿದ ಸಿಎಂ, ಟೀಕಾಪ್ರಹಾರ ನಡೆಸಿದರು.
    ನಾವು ರಾಜ್ಯದ ಜನರಿಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳು ಮುಟ್ಟಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ ಮೋದಿಯವರೇ ನೀವು ಉದ್ಯೋಗ ಸೃಷ್ಟಿಸಿದರೇ ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಅಂದ್ರೆ ಇಷ್ಟೊತ್ತಿಗೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿ ಸೃಷ್ಟಿಯಾಯ್ತು ಮೋದಿಯವರೇ ? ನೀವು ಮಾತಿಗೆ ತಪ್ಪಿದ್ದೀರಿ ಮೋದಿ ಎಂದು ಟೀಕಿಸಿದರು.
    ಗ್ಯಾರಂಟಿ ಜಾರಿಯಾಗಲ್ಲ ಎಂದು ಮೋದಿ ಹೇಳಿದ್ದರು. ಪ್ರಧಾನಿ ಮೋದಿಯವರೇ, ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ನಿಮ್ಮ ಮಾತು ಸುಳ್ಳಾಗಿದೆ ಎಂದು ವ್ಯಂಗ್ಯವಾಡಿದರು.
    ಹನ್ನೆರೆಡು ವರ್ಷ ಸಿಎಂ, ಹತ್ತು ವರ್ಷ ಪ್ರಧಾನಿಯಾಗಿರುವ ಮೋದಿ ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ರಾಜ್ಯ ದಿವಾಳಿ ಆಗುತ್ತದೆಎಂದು ಭಾಷಣ ಮಾಡಿದ್ದರು. ಈಗ ಐದೂ ಯೋಜನೆ ಜಾರಿಯಾಗಿ ರಾಜ್ಯ ಆರ್ಥಿಕವಾಗಿ ಸದೃಡವಾಗಿದೆ ಎಂದ ಅವರು ಮೋದಿಯೇನು ಆರ್ಥಿಕ ತಜ್ಞರೇ ಎಂದು ಕುಟುಕಿದರು.
    ವಿವೇಕಾನಂದ ಜಯಂತಿಯಂದು ಲಕ್ಷಾಂತರ ಯುವಕ ಯುವತಿಯರ ಸಮ್ಮುಖದಲ್ಲಿ ಯುವನಿಧಿಯನ್ನು ನೇರವಾಗಿ ಅರ್ಹರ ಖಾತೆಗೆ ಜಮೆ ಮಾಡುವ ಕಾರ್ಯಕ್ರಮ ನಡೆಸುತ್ತೇವೆ. ಮಾತು ತಪ್ಪಿದ ಮೋದಿಯವರೇ ನಿಮ್ಮ ಮಾತು ಏನಾಯ್ತು? ರಾಜ್ಯದ ಯುವ ಸಮೂಹ ನಿಮ್ಮನ್ನು ಪ್ರಶ್ನಿಸುತ್ತಿದೆ ಎಂದರು.
    ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ಈ ಕಾಲದ ಯುವಕರು ಅದೃಷ್ಟವಂತರು. ನಾವು ಯುವಕರಾಗಿದ್ದ ಸಂದರ್ಭದಲ್ಲಿ ನಮಗೆ ಇಂತಹ ಯೋಜನೆಗಳು ಹಾಗೂ ಅವಕಾಶಗಳು ಸಿಕ್ಕಿರಲಿಲ್ಲ. ಈ ದಿನ ನನಗೆ ಬಹಳ ಸಂತೋಷ ತಂದಿದೆ. ಕಾರಣ, ನಾವು ಕೊಟ್ಟ ಮಾತಿನಂತೆ ನಡೆಯುತ್ತಿರುವ ದಿನ ಎಂದರು.
    ಬಿಜೆಪಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ನಿಮ್ಮ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಆದರೆ ಅವರು ಅದನ್ನು ಮಾಡಲಿಲ್ಲ. ಹೀಗಾಗಿ ನಿಮ್ಮ ಕುಟುಂಬ ಹಾಗೂ ಬದುಕಿನಲ್ಲಿ ಬದಲಾವಣೆ ತರಲು, ನಿಮಗೆ ಶಕ್ತಿ ತುಂಬಲು ಈ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.
    ನೀವು 2023ರ ಚುನಾವಣೆಯಲ್ಲಿ ನಮ್ಮನ್ನು ವಿಧಾನಸೌಧದ 3ನೇ ಮಹಡಿಗೆ ಕೂರಿಸಿದ್ದೀರಿ. ಈ ಅಧಿಕಾರದ ಋಣವನ್ನು ತೀರಿಸಿ ನಿಮ್ಮ ಬದುಕಿನಲ್ಲಿ ಶಕ್ತಿ ಹಾಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ವರದಿ ನೋಡಿದೆ. ಕೆಲವು ಯುವಕರು ಉದ್ಯೋಗವಿಲ್ಲದೆ ತಮಗೆ ಮದುವೆಯಾಗುತ್ತಿಲ್ಲ ಎಂದು ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದಾರೆ. ಇಂತಹ ಯುವಕರಲ್ಲಿ ಆತ್ಮಸ್ಥೈರ್ಯ ತುಂಬಲು ನಾವು ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನಿಮಗೆ ಅರ್ಪಿಸಿದ್ದೇವೆ. ನಿಮ್ಮ ಸರ್ಕಾರದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಕೋರಿದರು.
    ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ್ ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಕ್ರೀಡಾ ಸಚಿವ ನಾಗೇಂದ್ರ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರಾಜೀವ್ ಗೌಡ , ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ ಉಪಸ್ಥಿತರಿದ್ದರು. ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts