More

    ಶೆಟ್ಟರ ಪಕ್ಷಾಂತರದಿಂದ ಕೈಗೆ ಲಾಭ-ನಷ್ಟವಾಗಿಲ್ಲ

    ಬಾಗಲಕೋಟೆ: ಮಾಜಿ ಸಿಎಂ ಜಗದೀಶ ಶೆಟ್ಟರ ಕಾಂಗ್ರೆಸ್ಸಿಗೆ ಬಂದಿದ್ದರಿಂದ ಪಕ್ಷಕ್ಕೆ ಯಾವ ಪ್ರಯೋಜನವಾಗಿಲ್ಲ. ಅವರು ಬಿಟ್ಟಿದ್ದರಿಂದಲೂ ಯಾವುದೇ ನಷ್ಟವಾಗುವುದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖಂಡರ ಪಕ್ಷಾಂತರ ಒಳ್ಳೆಯ ಬೆಳವಣಿಗೆಯಲ್ಲ. ಯಾವ ಪಕ್ಷದವರೂ ಮಾಡಬಾರದು. ಅವಕಾಶಗಳ ಬೆನ್ನು ಹತ್ತಿ ಹೋಗುವುದು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಧೋರಣೆ ಇದ್ದಂತೆ ಎಂದು ಕುಟುಕಿದರು.

    ಜಗದೀಶ ಶೆಟ್ಟರ ಅವರ ತಂದೆಯ ಕಾಲದಿಂದಲೂ ಆರ್‌ಎಸ್‌ಎಸ್ ಹಾಗೂ ಜನ ಸಂಘದಲ್ಲಿ ಗುರುತಿಸಿಕೊಂಡವರು. ಬಿಜೆಪಿಯಿಂದ 6 ಬಾರಿ ಗೆದ್ದಿದ್ದಾರೆ. ಇಲ್ಲಿಯವರೆಗೆ ಪಕ್ಷ ಅವರನ್ನು ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ ಮಾಡಿದೆ. ಇಂತಹ ಪಕ್ಷ ಕೇವಲ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಬಿಟ್ಟು ಬಂದಿರುವ ನಡೆ ಸರಿಯಲ್ಲ. ಪಕ್ಷಾಂತರದಿಂದ ಅವರಿಗೇ ನಷ್ಟವಾಗಿದೆ ಹೊರತು ನಮಗಲ್ಲ ಎಂದರು.

    ಶೆಟ್ಟರ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟ್ ಗೆಲ್ಲಲು ಸಾಧ್ಯವಾಗಿಲ್ಲ. ಬಿಜೆಪಿ ಸರ್ಕಾರದ ಶೇ.40 ಕಮಿಷನ್, ಭ್ರಷ್ಟಾಚಾರ ಸೇರಿ ಅನೇಕ ಕಾರಣಗಳಿವೆ. ಜತೆಗೆ 5 ಗ್ಯಾರಂಟಿಗಳಿಗಾಗಿ ರಾಜ್ಯದ ಜನರು ಕಾಂಗ್ರೆಸಿಗೆ ಹೆಚ್ಚಿನ ಸ್ಥಾನ ಗೆಲ್ಲಿಸಿದ್ದಾರೆ. ಶೆಟ್ಟರ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲು ನಮ್ಮ ಪಕ್ಷದ ಮುಖಂಡರೂ ಅವಸರ ಮಾಡಿದರು ಎಂದು ಬೇಸರ ವ್ಯಕ್ತ ಪಡಿಸಿದರು.

    ನಮ್ಮಲ್ಲೂ ಲಿಂಗಾಯತ ನಾಯಕರಿದ್ದಾರೆ

    ಕಾಂಗ್ರೆಸ್ಸಿನಲ್ಲೂ ಈಶ್ವರ ಖಂಡ್ರೆ ಹಾಗೂ ಎಂ.ಬಿ. ಪಾಟೀಲ ಅವರಂತಹ ಅನೇಕ ಲಿಂಗಾಯತ ನಾಯಕರಿದ್ದಾರೆ. ಲಿಂಗಾಯತ ನಾಯಕರು ಎಂಬ ಕಾರಣಕ್ಕೆ ಪೂರ್ವಾಪರ ಯೋಚನೆ ಮಾಡಬೇಕಿತ್ತು. ರಾಜಕಾರಣಿಗಳ ಬಗ್ಗೆ ಅಸಡ್ಡೆ ಧೋರಣೆ ತೋರಿಸುವಂತಹ ಕೆಲಸವನ್ನು ಶೆಟ್ಟರ ಮಾಡಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಸಾಮಾನ್ಯ ಕಾರ್ಯಕರ್ತ ಮಹೇಶ ತೆಂಗಿನಕಾಯಿ ವಿರುದ್ಧ ಜಗದೀಶ ಶೆಟ್ಟರ 34 ಸಾವಿರಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಸೋತಿದ್ದಾರೆ ಎಂದು ತಿಳಿಸಿದರು.

    ಸರ್ಕಾರ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದು ಯಾವುದೇ ಕಾರ್ಯಕರ್ತರಲ್ಲಿ ಅಸಮಾಧಾನವಿಲ್ಲ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದು ಯಾರಿಗೂ ವಾಗ್ದಾನ ಮಾಡಿಲ್ಲ. ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದೇವು. ಐಎನ್‌ಸಿ ಬಾಗಲಕೋಟೆ ಎ್ಬಿ ಪುಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ಬಗ್ಗೆ ಹಾಕಿದ ಪೋಸ್ಟ್ ಬಗ್ಗೆ ಕ್ರಮ ಕೈಗೊಳ್ಳುವಂತೆ ಎಸ್ಪಿ ಅವರಿಗೆ ಮನವಿ ಮಾಡಲಾಗಿದೆ ಎಂದರು. ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಮುಖಂಡರಾದ ರಾಜು ಮನ್ನಿಕೇರಿ, ಶ್ರೀನಿವಾಸ ಬಳ್ಳಾರಿ, ಎನ್.ಬಿ. ಗಸ್ತಿ, ಕುತುಬುದ್ದೀನ್ ಖಾಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts